Wednesday, 1st February 2023

ನಕ್ಷಾಪ್ರವೀಣೆ ಮೇರಿ ಥಾರ್ಪ್’ಗೆ ಡೂಡಲ್​ ಗೌರವ

ಅಮೆರಿಕ: ಕಾಂಟಿನೆಂಟಲ್​ ಡ್ರಿಫ್ಟ್​ ಥಿಯರಿಗಳನ್ನು ಸಾಬೀತುಪಡಿಸುವಲ್ಲಿ ಭೂವಿಜ್ಞಾನಿ ಮತ್ತು ಸಮುದ್ರಶಾಸ್ತ್ರದ ಕಾರ್ಟೋ ಗ್ರಾಫರ್ ಮೇರಿ ಥಾರ್ಪ್​ ಪಾತ್ರ ಮಹತ್ವದ್ದು. ಈ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ ಇವರ ಜೀವಮಾನ ಸಾಧನೆಯನ್ನು ಗೂಗಲ್​ ಗೌರವಿಸಿ ಸಂಭ್ರಮಿಸುತ್ತಿದೆ.

1998ರ ನವೆಂಬರ್ 21ರಂದು ಲೈಬ್ರರಿ ಆಫ್​ ಕಾಂಗ್ರೆಸ್​ ಇವರನ್ನು 20ನೇ ಶತಮಾನದ ಶ್ರೇಷ್ಠ ಕಾರ್ಟೋಗ್ರಾಫರ್​ಗಳಲ್ಲಿ (ನಕ್ಷಾ ತಜ್ಞೆ) ಒಬ್ಬರೆಂದು ಗುರುತಿಸಿತು.

ಮೇರಿ ಥಾರ್ಪ್​ ಅವರ ಈ ಡೂಡಲ್​ ಅನ್ನು ಕೈಟ್ಲಿನ್ ಲಾರ್ಸೆನ್, ರೆಬೆಕಾ ನೆಸೆಲ್ ಮತ್ತು ಡಾ ಟಿಯಾರಾ ಮೂರ್ ನಿರೂಪಿಸಿದ್ದಾರೆ. ಸಾಗರ ವಿಜ್ಞಾನ ಮತ್ತು ಭೂವಿಜ್ಞಾನದ ಸಂಶೋಧನೆಗಳ ಪ್ರಾಬಲ್ಯ ಹೊಂದಿದ್ದು ಪುರುಷ ಜಗತ್ತೇ. ಆದರೆ ಇಂಥ ಚಕ್ರವ್ಯೂಹ ವನ್ನು ಹೊಕ್ಕು ಮಹಿಳೆಯರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದ ಕೀರ್ತಿ ಮೇರಿ ಥಾರ್ಪ್‌ ಅವರಿಗೆ ಸಲ್ಲುತ್ತದೆ.

ಅಮೆರಿಕದ ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರ ತಂದೆ ನಕ್ಷೆ ರೂಪಿ ಸುವ ಕುರಿತು ಬಾಲ್ಯದಲ್ಲಿಯೇ ಆಸಕ್ತಿ ಮೂಡಿಸಿ ಮಾರ್ಗದರ್ಶನ ಮಾಡಿದರು.

ನಂತರ ಮೇರಿ ಮಿಚಿಗನ್​ ವಿಶ್ವವಿದ್ಯಾನಿಲಯದಲ್ಲಿ ಪೆಟ್ರೋಲಿಯಂ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈ ಸಮಯದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಮಹಿಳೆಯರಿಗೆ ಸಂಶೋಧನೆ ನಡೆಸಲು ಅವಕಾಶ ದೊರೆಯಿತು. ನಂತರ ಮೇರಿ 1948 ರಲ್ಲಿ ನ್ಯೂಯಾರ್ಕ್​ನಲ್ಲಿ ಲ್ಯಾಮೊಂಟ್ ಜಿಯೋಲಾಜಿಕಲ್ ಅಬ್ಸರ್ವೇಟರಿಗೆ ಸೇರಿದರು.

1957 ರಲ್ಲಿ, ಮೇರಿ ಥಾರ್ಪ್ ಮತ್ತು ಹೀಜೆನ್ ಉತ್ತರ ಅಟ್ಲಾಂಟಿಕ್‌ ಸಾಗರದಾಳದ ನಕ್ಷೆಯನ್ನು ತಯಾರಿಸಿ ಆ ಬಗ್ಗೆ ಸಂಶೋಧನೆ ನಡೆಸಿದರು. ಈ ಕುರಿತ ವರದಿಯನ್ನು ವಿಶ್ವದ ಮೊದಲ ವಿಶ್ವ ನಕ್ಷೆ – ದಿ ವರ್ಲ್ಡ್ ಓಷನ್ ಫ್ಲೋರ್ ಎಂಬ ಶೀರ್ಷಿಕೆಯಲ್ಲಿ ನ್ಯಾಷನಲ್​ ಜಿಯಾಗ್ರಫಿಕ್​ನಲ್ಲಿ ಪ್ರಕಟಿಸಿತು. ನಂತರ ಆ ನಕ್ಷೆಯನ್ನು 1995ರಲ್ಲಿ ಲೈಬ್ರರಿ ಆಫ್​ ಕಾಂಗ್ರೆಸ್​ ಗೆ ಮೇರಿ ಒಪ್ಪಿಸಿದರು

error: Content is protected !!