Wednesday, 1st February 2023

ಡಾ.ಬಿಆರ್ ಅಂಬೇಡ್ಕರ್‌ರವರ ೬೬ನೇ ಮಾಹಾ ಪರಿನಿರ್ವಾಣ ದಿನಾಚಾರಣೆ

ತಿಪಟೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಪುಷ್ಪಾರ್ಚನೆ ಸಲ್ಲಿಸಿ ಮೌನಾಚರಣೆಯ ಮೂಲಕ ೬೬ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಎಸ್ ತಾ.ಅಧ್ಯಕ್ಷ ನಾಗತಿಹಳ್ಳಿ ಕೃಷ್ಣಮೂರ್ತಿ, ಅಂಬೇಡ್ಕರ್ ಎಲ್ಲರಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಿರುವಂತಹ ಪ್ರಜಾ ಪ್ರಭುತ್ವದ ಮಹಾಗ್ರಂಥವನ್ನು ಬರೆದು ಎಲ್ಲರೂ ಸಮಾನರು ಹಾಗೂ ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಕಾನೂನಿನಲ್ಲಿ ಒದಗಿಸಿ ಎಲ್ಲರೂ ಗೌರವಯುತವಾದ ಜೀವನ ವನ್ನು ನಡೆಸಲು ಅನುವು ಮಾಡಿ ಕೊಟ್ಟಿದ್ದಾರೆಂದು ತಿಳಿಸಿದರು.

ವಕೀಲ ವೆಂಕಟೇಶ್ ಮಾತನಾಡಿ, ಹಿಂದುವಾಗಿ ಹುಟ್ಟಿ ಹಿಂದುವಾಗಿ ಸಾಯಲಾರೆ ಎನ್ನುವ ಅವರ ಮನದಾಳದ ಮಾತುಗಳು ಹಿಂದು ಸಮಾಜ ಅವರಿಗೆ ಮಾಡಿರುವ ಅಪಮಾನ ಎಂತದ್ದು ಎನ್ನುವುದು ಸ್ಪಷ್ಟ. ಆದರೂ ಸಂವಿಧಾನವನ್ನು ರಚಿಸಬೇಕಾದರೆ ಯಾವು ದನ್ನೂ ಗಮನಿಸಿದೆ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿರುವ ಧೀಮಂತ ನಾಯಕರೆಂದು ತಿಳಿಸಿದರು.

ಕೊರಚ ಮಹಾಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಕೆಲವರು ಸಂವಿಧಾನವನ್ನು ತೆಗೆಯುವ ಬಗ್ಗೆ ಪದೇಪದೇ ಮಾತು ಗಳನ್ನಾಡುತ್ತಿರುತ್ತಾರೆ. ಸಂವಿಧಾನವನ್ನು ಬದಲಾಯಿಸುವ ಅವಕಾಶವನ್ನು ಮೂಲ ದ್ರಾವಿಡರು ಇರುವವರೆವಿಗೂ ಸಾಧ್ಯವಿಲ್ಲ. ಅಂತಹ ಯಾವುದಾದರೂ ಆಸೆಗಳಿದ್ದರೆ ಅದು ತಿರುಕನ ಕನಸಾಗುತ್ತದೆಂದು ತಿಳಿಸಿದರು.

ವಕೀಲ ಮಂಜುನಾಥ್, ಮುಖಂಡರಾದ ಬಿಳಿಗೆರೆ ಮಹಾದೇವ್, ಬಿ.ಟಿ.ಕುಮಾರ್, ಹರೀಶ್, ರಘು, ಎಪಿಎಂಸಿ ಮಾಜಿ ಸದಸ್ಯ ಶಿವಣ್ಣ, ರಂಗಸ್ವಾಮಿ, ಗಿರೀಶ್, ಕೃಷ್ಣ ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

error: Content is protected !!