Sunday, 14th August 2022

ಸಸ್ಯಶಾಸ್ತ್ರಜ್ಞ ಡಾ.ಕೆ.ಗೋಪಾಲ ಕೃಷ್ಣ ಭಟ್‌ ಇನ್ನಿಲ್ಲ

ಉಡುಪಿ: ಪಶ್ಚಿಮ ಘಟ್ಟದ ಅಪರೂಪದ ಸಸ್ಯಪ್ರಬೇಧಗಳ ಜಾತಕವನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಸಸ್ಯಶಾಸ್ತ್ರಜ್ಞರ ಒಬ್ಬರಾದ ಉಡುಪಿಯ ಡಾ.ಕೆ.ಗೋಪಾಲ ಕೃಷ್ಣ ಭಟ್‌ ಇನ್ನಿಲ್ಲ.

ಸಸ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನೆಗೆ ಜೀವನವನ್ನೇ ಮುಡಿಪಿಟ್ಟಿದ್ದ ಅಪರೂ ಪದ ಸಸ್ಯ ವಿಜ್ಞಾನಿಯಾಗಿದ್ದವರು ಡಾ.ಕೆ.ಜಿ.ಭಟ್‌. ಸತತ 12 ವರ್ಷಗಳ ಕಾಲ ಪಶ್ಚಿಮ ಘಟ್ಟ ಹಾಗೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಸಸ್ಯ ಸಂಕುಲದ ಅಧ್ಯಯನ ನಡೆಸಿದ್ದ ಡಾ.ಕೆ.ಜಿ.ಭಟ್ಟರು ‘ಫ್ಲೋರಾ ಆಫ್‌ ಉಡುಪಿ’ ಹಾಗೂ ‘ಫ್ಲೋರಾ ಆಫ್‌ ಸೌಥ್ ಕೆನರಾ’ ಎಂಬ ಅತ್ಯಮೂಲ್ಯ ಸಸ್ಯಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದರು.

‘ಫ್ಲೋರಾ ಆಫ್‌ ಉಡುಪಿ’ ಕೃತಿಯು 913 ಪುಟಗಳ ಬೃಹತ್ ಸಂಪುಟವಾಗಿದ್ದು ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಅಪರೂಪದ ಸಸ್ಯ ಪ್ರಬೇಧಗಳ ಸಮಗ್ರ ಮಾಹಿತಿ ಒಳ ಗೊಂಡಿದೆ.

‘ದ ಫ್ಲೋರಾ ಆಫ್‌ ಸೌತ್ ಕೆನರಾ’ ಕೃತಿಯು 928 ಪುಟಗಳನ್ನು ಹೊಂದಿದ್ದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಸಸ್ಯಪ್ರಬೇಧಗಳ ಮಾಹಿತಿ ಒಳಗೊಂಡಿದೆ. 1,888 ಹೂವಿನ ಗಿಡಗಳ ಪ್ರಬೇಧಗಳ ಚಿತ್ರಸಹಿತ ವಿವರಗಳನ್ನು ಹೊಂದಿರುವ ಈ ಪುಸ್ತಕವು ಅವಿಭಜಿತ ದಕ್ಷಿಣ ಕನ್ನಡದ ಜೀವವೈವಿಧ್ಯವನ್ನು ಪರಿಚಯಿಸುತ್ತದೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಅಲೆದಾಡಿ, ಕಾಡುವಾಸಿಗಳನ್ನು ಭೇಟಿಯಾಗಿ ಅಪರೂಪದ ಸಸ್ಯ ಪ್ರಬೇಧಗಳ ಕುರಿತು ಅತ್ಯಂತ ನಿಖರ ಮಾಹಿತಿ ಕಲೆಹಾಕಿ ‘ದ ಫ್ಲೋರಾ ಆಫ್‌ ಸೌತ್ ಕೆನರಾ’ ಕೃತಿ ರಚಿಸಿದ್ದಾರೆ ಡಾ.ಜಿ.ಜಿ.ಭಟ್‌. ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಗಳಿಗೆ, ಪ್ರಾಧ್ಯಾಪಕರಿಗೆ ಹಾಗೂ ಸಂಶೋಧಕರಿಗೆ ಈ ಪುಸ್ತಕ ಮಹತ್ವದ ಕೈಪಿಡಿ ಎಂದೇ ಕರೆಯಲಾಗುತ್ತದೆ.

ಡಾ.ಕೆ.ಜಿ.ಭಟ್ಟರು ಮಣಿಪಾಲದ ಬಳಿ ಪತ್ತೆ ಹಚ್ಚಿದ್ದ ಒಂದು ಸಸ್ಯಕ್ಕೆ ಲಂಡನ್‌ನ ಬಯಾಲಜಿಕಲ್ ಸೊಸೈಟಿಯು ಭಟ್ಟರ ಹೆಸರನ್ನೇ ಸಸ್ಯಕ್ಕೆ ನಾಮಕಾರಣ ಮಾಡುವ ಮೂಲಕ ಅವರ ಪಾಂಡಿತ್ಯಕ್ಕೆ ಗೌರವ ಸಲ್ಲಿಸಿತ್ತು. ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು, ಅರಣ್ಯ ಇಲಾಖೆಯ ಸಿಬ್ಬಂದಿ ಚೀಲದಲ್ಲಿ ಸಸ್ಯಗಳನ್ನು ತಂದು ಗುರುತಿಸುವಂತೆ ಡಾ.ಕೆ.ಜಿ. ಭಟ್ಟರ ಮನೆಗೆ ಸುರಿದು ಹೋಗುತ್ತಿದ್ದರು.

ಡಾ.ಕೆ.ಗೋಪಾಲಕೃಷ್ಣ ಭಟ್ ಮೂಲತಃ ಕಾಸರಗೋಡು ಜಿಲ್ಲೆಯ ಪೆರಡಾಲ ಗ್ರಾಮದ ಕಾಕುಂಜೆಯವರಾದರೂ ಜೀವಿತದ ಬಹುಪಾಲು ಅವಧಿಯನ್ನು ಉಡುಪಿಯಲ್ಲಿ ಕಳೆದಿದ್ದಾರೆ. ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಸಸ್ಯಶಾಸ್ತ್ರ ಉನ್ನತ ಸಂಶೋ ಧನೆಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ 38 ವರ್ಷ ಸೇವೆ ಸಲ್ಲಿಸಿದ್ದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಸ್ಯ ಶಾಸ್ತ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ, ಉಪನ್ಯಾಸ ನೀಡಿದ್ದಾರೆ. ಜೀವರ್ಗೀಕರಣ ಶಾಸ್ತ್ರದ ವಿಶೇಷ ಸಂಶೋಧನೆಗೆ ಪ್ರತಿಷ್ಠಿತ ಡಾ.ಶಿವರಂಜನ್ ಸ್ಮಾರಕ ಶ್ರೇಷ್ಠ ವಿಜ್ಞಾನಿ ರಾಷ್ಟ್ರೀಯ ಪ್ರಶಸ್ತಿ, ಪುತ್ತಿಗೆ ಮಠದಿಂದ ಜೈ ವಿಜ್ಞಾನ್ ಪ್ರಶಸ್ತಿ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಪ್ರಾಧ್ಯಾಪಕರ ಸಂಘ ಹಾಗೂ ಹಲವು ಸಂಘಗಳಿಂದ ಸನ್ಮಾನಿಸಲಾಗಿದೆ.