Friday, 3rd February 2023

ಸಂಪುಟ ವಿಸ್ತರಣೆ ಎನ್ನುವ ಮ್ಯಾರಥಾನ ಸಂಕಟ ?

ವಿಶ್ಲೇಷಣೆ

ರಮಾನಂದ ಶರ್ಮಾ

ರಾಮನಿಗೆ ಶಬರಿ ಕಾಯ್ದಂತೆ ಕಾದು ಕಾದು ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆಯ ಇನ್ನೊಂದು ಹಂತ ಮುಗಿದಿದೆ.

ಒಂದೂವರೆ ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಸಚಿವ ಸಂಪುಟದ ವಿಸ್ತರಣೆ ಬಹುತೇಕ ತಾರ್ಕಿಕ ಅಂತ್ಯ ಕಂಡಿದ್ದು, ಎಂದಿನಂತೆ ಮಳೆ ನಿಂತರೂ ಹನಿ ಬಿಟ್ಟಿಲ್ಲ ಎನ್ನುವಂತೆ ಅತೃಪ್ತಿಯ ಗೊಣಗು ಕೂಡಾ ಜೋರಾಗಿ ಕೇಳುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯುತ್ತದೆ ಎನ್ನುವುದು ಬೇರೆ ಮಾತು.

ಬೇಡಿಕೆ – ಪೂರೈಕೆ ಮಿಸ್ ಮ್ಯಾಚ್‌ನಲ್ಲಿ ಅಕಾಂಕ್ಷಿಗಳನ್ನೆಲ್ಲ ತೃಪ್ತಿಪಡಿಸಲು ಸಾಧ್ಯವಾಗದಿರುವುದರಿಂದ ಈ ಬೆಳವಣಿಗೆ ಅನಿವಾರ್ಯ. ಈ ಪ್ರಕ್ರಿಯೆ ಚುನಾವಣೆ ಗೆಲ್ಲುವುದಕ್ಕಿಂತ, ಸಚಿವ ಸಂಪುಟ ರಚನೆ, ವಿಸ್ತರಣೆ, ಪುನರ್ ರಚನೆ ಮತ್ತು ನಿಗಮ ಮಂಡಳಿಗಳಿಗೆ ನೇಮಕಾತಿಯೇ ಪ್ರಯಾಸಕರ ಎನ್ನುತ್ತಿದ್ದ, ಮೂರು ಬಾರಿ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆ ಯವರ ಅನಿಸಿಕೆ ಇನ್ನೊಮ್ಮೆ ಮೇಲ್ಮೆಗೆ ಬಂದಿದೆ.

ಹೆರಿಗೆ ನೋವನ್ನಾದರೂ ಸಹಿಸಿಕೊಳ್ಳ ಬಹುದು, ಅದರೆ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ನೋವನ್ನು ತಡೆಯಲಾಗದು ಎನ್ನುವ ಜೋಕ್‌ನಲ್ಲಿ ಅರ್ಥವಿಲ್ಲದಿಲ್ಲ. ಈ ಸಂಕಷ್ಟ ನನ್ನ ವೈರಿಗೂ ಬರಬಾರದು ಎನ್ನುವ ಕೆಲವು ಮುಖ್ಯಮಂತ್ರಿಗಳ ಹತಾಶೆ ಮತ್ತು ನೋವಿನಲ್ಲಿ ಅರ್ಥವಿಲ್ಲದಿಲ್ಲ. ದೇಶದಲ್ಲಿ ಬಹುಷಃ ಪ್ರತಿಯೊಬ್ಬ ಮುಖ್ಯಮಂತ್ರಿಯೂ ಈ ಸಂಕಷ್ಟವನ್ನು ಮತ್ತು ಯಾತನೆಯನ್ನು ಅನುಭವಿಸುತ್ತಾರೆ ಎನ್ನುವುದಕ್ಕೆ ಸುದೀರ್ಘ ಇತಿಹಾಸ ಇದೆ.

ಈ ನಿಟ್ಟಿನಲ್ಲಿ ಯಾರನ್ನೂ ಮತ್ತು ಯಾವ ಪಕ್ಷವನ್ನೂ ಬೊಟ್ಟು ಮಾಡಿ ದೂಷಿಸುವಂತಿಲ್ಲ ಮತ್ತು ಟೀಕಿಸುವಂತಿಲ್ಲ. ಇದು ರಾಷ್ಟ್ರೀಯ ಸಮಸ್ಯೆಯಾಗಿದ್ದು ರಾಷ್ಟ್ರೀಯ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚು ಎನ್ನಬಹುದು. ೧೯೬೬ರಲ್ಲಿ ಮೂರಾರ್ಜಿ ದೇಸಾಯಿ ಉಪಪ್ರಧಾನಿಯಾಗಿದ್ದಾಗ ನೇಮಕವಾಗಿದ್ದ ಕೆಂಗಲ್ ಹನುಮಂತಯ್ಯ ನೇತೃತ್ವದ ಆಡಳಿತ ಸುಧಾರಣಾ ಸಮಿತಿಯ, ಸಂಪುಟದ ಗಾತ್ರವು ಸದನದ ಒಟ್ಟೂ ಸಂಖ್ಯೆಯ ಶೇ.೧೫ನ್ನು ಮೀರಬಾರದು ಎನ್ನುವ ಶಿಫಾರಸ್ಸುಗಳು ಜಾರಿ ಯಾಗುವ ತನಕ, ಸಂಪುಟ ರಚನೆ ಅಷ್ಟು ಕ್ಲಿಷ್ಟವಾಗಿರಲಿಲ್ಲ ಮತ್ತು ಬಹುತೇಕ ಆಕಾಂಕ್ಷಿಗಳ ಬೇಡಿಕೆ ಈಡೇರುತ್ತಿದ್ದವು. ಆಕಾಂಕ್ಷಿ ಗಳ ಬೇಡಿಕೆಗೆ ಅನುಗುಣವಾಗಿ ಹೊಸ – ಹೊಸ ಇಲಾಖೆಗಳು ಸೃಷ್ಟಿಯಾಗುತ್ತಿದ್ದವು.

ಆಹಾರ ಮಂತ್ರಾಲಯವನ್ನು ಉದ್ದಿನ ಬೇಳೆಗೆ ಒಂದು, ತೊಗರಿ ಬೇಳೆಗೆ ಒಂದು, ರೈಲು ಮಂತ್ರಾಲಯವನ್ನು ಮೀಟರ್ ಗೇಜ್‌ಗೆ ಒಂದು, ಬ್ರಾಡ್ ಗೇಜ್‌ಗೆ ಒಂದು, ಆರೋಗ್ಯ ಇಲಾಖೆಯನ್ನು ಆಸ್ಪತ್ರೆಗಳಿಗೆ ಒಂದು ಮೆಡಿಕಲ್ ಕಾಲೇಜುಗಳಿಗೆ ಒಂದು ಹೀಗೆ ವಿಂಗಡಿಸಿ ಎಲ್ಲರನ್ನೂ ತೃಪ್ತಿಗೊಳಿಸುತ್ತಾರೆ ಎನ್ನುವ ಟೀಕೆ ಕೇಳಿಬರುತ್ತಿತ್ತು.

ಆಡಳಿತ ಸುಧಾರಣಾ ಸಮಿತಿಯ ಈ ಶಿಫಾರಸು ಸಚಿವ ಸಂಪುಟದ ಗಾತ್ರದ ಮೇಲೆ ಮಿತಿ ಹೇರಿದ್ದು, ಇದು ಮಂತ್ರಿಗಳ ನೇಮಕದ
ವಿಷಯದಲ್ಲಿ ಮತ್ತು ಸಚಿವ ಸಂಪುಟದ ಗಾತ್ರದ ವಿಷಯದಲ್ಲಿ ಮುಖ್ಯಮಂತ್ರಿಗಳ ಕೈಯನ್ನು ಕಟ್ಟಿ ಹಾಕಿದೆ. ಹಾಗೆಯೇ
ಆಕಾಂಕ್ಷಿಗಳು ಈ ಪೂರೈಕೆ – ಬೇಡಿಕೆ ಸಮೀಕರಣದಲ್ಲಿ ಸುಸ್ತು ಹೊಡೆಯುತ್ತಾರೆ. ಮುಖ್ಯಮಂತ್ರಿಗಳು ಇರುವುದೊಂದು
ಹೃದಯ ಯಾರಿಗಂತ ಕೊಡಲಿ ಎನ್ನುವ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಮಂತ್ರಿಯಾಗಲು ಅರ್ಹತೆ, ಶೈಕ್ಷಣಿಕ ಮಟ್ಟ ಮತ್ತು ಅನುಭವಕ್ಕಿಂತ ಮುಖ್ಯವಾಗಿ ಆತ ಜನಪ್ರತಿನಿಧಿಯಾಗಿರಬೇಕು ಅಥವಾ ಮಂತ್ರಿಯಾಗಿ ಆರು ತಿಂಗಳೊಳಗಾಗಿ ಜನಪ್ರತಿನಿಽಯಾಗಬೇಕು ಎನ್ನುವುದು ಮುಖ್ಯ. ಜಾತಿ – ಧರ್ಮ – ಭಾಷೆ, ವಲಯ, ಹೊಸಬರು – ಹಳಬರು, ವಲಸಿಗರು, ನಿಷ್ಟಾವಂತರು, ಪಕ್ಷಕ್ಕಾಗಿ ಸೇವೆ ಸಲ್ಲಿಸಿದವರು, ಪಕ್ಷಕ್ಕೆ ಧನ ಸಹಾಯ ಮಾಡಿದವರು, ಕುಟುಂಬಸ್ಥರು, ಪಕ್ಷದ ಕಚೇರಿಯಲ್ಲಿ ಕಸಗುಡಿಸಿದವರು, ಹೈಕಮಾಂಡ್ ಕೃಪಾಂಕಿತರು, ಹೀಗೆ ಹತ್ತು ಹಲವು ಸಮೀಕರಣಗಳಲ್ಲಿ ತೇರ್ಗಡೆಯಾಗಬೇಕು.

ವಿಶೇಷವೆಂದರೆ, ಭಾರತದಲ್ಲಿ ಪ್ರತಿಯೊಬ್ಬ ರಾಜಕಾರಣಿಯ ಏಕಮೇವ ಗುರಿ ಮತ್ತು ಉದ್ದೇಶ ಮಂತ್ರಿಯಾಗುವುದು. ಮಂತ್ರಿ ಯಾದರಷ್ಟೇ, ಜನಸೇವೆ ಮಾಡಲು ಸಾಧ್ಯ ಎನ್ನುವುದು ರಾಜಕಾರಣಿಗಳ ದೃಢವಾದ ನಂಬಿಕೆ ಮತ್ತು ಅಲಿಖಿತ ನಿಯಮಾವಳಿ ಕೂಡಾ. ಅದನ್ನು ಪಡೆಯಲು ಅವರು ಯಾವುದೇ ರೀತಿ ಬಣ್ಣ ಬದಲಾಯಿಸಲು ಸದಾ ಸಿದ್ಧ. ಅವರು ಸದಾ ಉಲ್ಲೇಖಿಸುವ ಮತ್ತು ಅವರ ನಾಲಗೆಯ ತುದಿಯಲ್ಲಿರುವ ತತ್ತ್ವ, ಆದರ್ಶಗಳು ವೇದಿಕೆಗೆ ಮಾತ್ರ ಸೀಮಿತ.

ನಿನ್ನೆಯವರೆಗೆ ವಿರೋಧಿಸುತ್ತಿದ್ದ ಪಕ್ಷವನ್ನು, ಮಂತ್ರಿ ಪದವಿಗಾಗಿ ಇಂದು ಆ ಪಕ್ಷವನ್ನು ಸೇರಿ ಮಂತ್ರಿಯಾದ ಉದಾಹರಣೆ ನಮ್ಮ ದೇಶದಲ್ಲಿ ಇದೆ. ಪ್ರೇಮ ಮತ್ತು ಯುದ್ಧದಲ್ಲಿ ಯಾವ ಮಾರ್ಗವಾದರೂ ಸರಿ (nothing is wrong in love and war) ಎನ್ನುವ ಹಳೆಯ ಗಾದೆ ಈಗ ಮಂತ್ರಿಗಿರಿಗಾಗಿ ಎನ್ನುವುದಕ್ಕೂ ಸೇರಿದೆ.

ಚುನಾವಣೆ ಮುಗಿದು ಅಧಿಕಾರದ ಗದ್ದುಗೆ ಹಿಡಿದ ತಕ್ಷಣ ಪರಿಪೂರ್ಣ ಸಚಿವ ಸಂಪುಟ ರಚಿಸಿದರೆ, ನಿಗಮ ಮಂಡಳಿ ಗಳಿಗೆ ನೇಮಕ ಮಾಡಿದರೆ, ಚುನಾವಣೆ ಗೆದ್ದ ಸಂಭ್ರಮ ಮತ್ತು ಅಮಲಿನಲ್ಲಿ, ತೊಂದರೆ, ಗೊಂದಲಗಳು ಮತ್ತು ಸಂಪುಟ ಸಂಕಷ್ಟಗಳು ಉಂಟಾಗುವುದಿಲ್ಲ ಎಂದು ರಾಜಕೀಯ ವೀಕ್ಷಕರು ಇತಿಹಾಸದ ಆಧಾರದ ಮೇಲೆ ಭಾಷ್ಯ ಬರೆಯುತ್ತಾರೆ. ಈ ಪ್ರಕ್ರಿಯೆಯನ್ನು ವಿಳಂಬ ಮಾಡಿದಷ್ಟು ಒತ್ತಡ – ಸಂಕಟಗಳು ಮತ್ತು ಯಾತನೆ ಹೆಚ್ಚಾಗುತ್ತಾ ಹೋಗುತ್ತವೆ.

ಒಮ್ಮೊಮ್ಮೆ ಅದು ಒತ್ತಡದಿಂದ ನಲುಗುತ್ತಿರುವ (fragile) ಆಪಲ್ ಕಾರ್ಟ್ (Apple Cart)ನ್ನು ಹಳಿ ತಪ್ಪಿಸುವ ಸಾಧ್ಯತೆ
ಕೂಡಾ ಇರುತ್ತದೆ. ಅಂತೆಯೇ ಮುಖ್ಯಮಂತ್ರಿಗಳು ಕುಂಟು ನೆವ ಮುಂದೆ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ವಿಧಾನ ಮಂಡಳ ಅಧಿವೇಶನ, ಆಷಾಢ ಮಾಸ, ಜಲಪ್ರಳಯ, ಶೂನ್ಯಮಾಸ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ, ಹಬ್ಬ ಹರಿದಿನಗಳು ಮುಂತಾದವುಗಳು ಅದೆಷ್ಟೋ ಮುಖ್ಯಮಂತ್ರಿಗಳನ್ನು ವಿಸ್ತರಣೆ ಅಪಾಯದಿಂದ ಪಾರುಮಾಡಿದ ಉದಾಹರಣೆಗಳಿವೆ.

ಇದರ ಹಿಂದಿನ ಸತ್ಯ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ, ಹೈಕಮಾಂಡ್ ಮತ್ತು ವರಿಷ್ಠರ ಅವಕೃಪೆಗೆ ಒಳಗಾಗಿ
ಅವಕಾಶವನ್ನು ಕಳೆದುಕೊಳ್ಳದಂತೆ ಮೌನವಹಿಸಿ ಜಾಗ್ರತೆ ವಹಿಸುತ್ತಾರೆ. ಯಾರೂ ಬಾಯಿ ಬಿಡುವುದಿಲ್ಲ. ಹಾಗೆಯೇ ಮಂತ್ರಿ ಸ್ಥಾನದ ಆಮಿಷದಿಂದಾಗಿ ಶಾಸಕರು ಹದ್ದು ಬಸ್ತಿನಲ್ಲಿರುತ್ತಾರೆ. ಪ್ರತಿಯೊಬ್ಬ ಮುಖ್ಯಮಂತ್ರಿಯೂ ಇಂಥ ರಕ್ಷಣಾತ್ಮಕ ಆಟವನ್ನು ಆಡುತ್ತಾರೆ. ಸಚಿವ ಸಂಪುಟವನ್ನು ವಿಸ್ತರಿಸಿ ತನ್ಮೂಲಕ ಗಂಡಾಂತರವನ್ನು ಮೈಮೇಲೆ ಎಳೆದುಕೊಳ್ಳುವಷ್ಟು ರಾಜಕೀಯ ಅಪ್ರಬುದ್ಧತೆಯನ್ನು ಯಾವ ಮುಖ್ಯಮಂತ್ರಿಯೂ ತೋರಿಸುವುದಿಲ್ಲ.

ರಾಜಕೀಯ ಗತ್ತುಗಾರಿಕೆ ಮತ್ತು ಚಾಣಾಕ್ಷತನವನ್ನು ಮೈಗೂಡಿಸಿಕೊಂಡ ಮತ್ತು ಕರಗತ ಮಾಡಿಕೊಂಡ ಅವರು ಎಲ್ಲರನ್ನೂ ಸಂತೈಸಿ, ಎಲ್ಲರಿಗೂ ಆಶೆ ತೋರಿಸಿ ಕತ್ತಿಯ ಅಲುಗಿನ ಮೇಲೆ ನಡೆಯುವ, ರಾಜಕೀಯ ಪ್ರಬುದ್ಧತೆ, ಚಾಣಾಕ್ಷತನ ಮತ್ತು
ಕುಟಿಲತೆ ತೋರಿಸುತ್ತಾರೆ. ತಮ್ಮ ಖುರ್ಚಿಯ ಸ್ಥಿರತೆಗೆ ಯಾರನ್ನು ಇಳಿಸಬೇಕು, ಯಾರನ್ನು ಏರಿಸಬೇಕು, ಯಾರನ್ನು, ಯಾವಾಗ ಎಲ್ಲಿ ಇಡಬೇಕು ಎನ್ನುವ ರಾಜಕೀಯ ಲೆಕ್ಕಾಚಾರ ಗಟ್ಟಿಯಾದಾಗ ಮತ್ತು ಇನ್ನು ಒತ್ತಡವನ್ನು ಸಹಿಸಲಾಗದು ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕೈ ಹಾಕುತ್ತಾರೆ.

ಜನಸಾಮಾನ್ಯರು ತಿಳಿದಂತೆ ಸಂಪುಟ ಸಂಕಷ್ಟವು ವಿಸ್ತರಣೆ ಅಥವಾ ಪುನಾರಚನೆಗೆ ಅಂತ್ಯ ಕಾಣುವುದಿಲ್ಲ. ಖಾತೆ ಹಂಚಿಕೆಯೂ ಇನ್ನೊಂದು ದೊಡ್ಡ ಸವಾಲು. ಪ್ರತಿಯೊಬ್ಬರೂ ಕೆಲವು ನಿರ್ದಿಷ್ಟ ಖಾತೆಗಳ ಮೇಲೆ ಕಣ್ಣಿಟ್ಟಿರುತ್ತಿದ್ದು, ಹೋರಾಟ ಮಾಡುತ್ತಾರೆ. ಯಾರಿಗೂ ನೀರಿಲ್ಲದ ಬಾವಿಬೇಡ. ತಮ್ಮ ಖಾತೆ ನೀರಿಲ್ಲದ ಬಾವಿ ಎಂದು ಹೇಳಿದವರೂ ಇzರಂತೆ. ಎಲ್ಲರಿಗೂ ಆಡಂಬರ, ವೈಭೋಗ, ಗತ್ತುಗಾರಿಕೆ ಮತ್ತು ಹೆಚ್ಚುಗಾರಿಕೆ ಇರುವ ಇಲಾಖೆಗಳೇ ಬೇಕು. ಮತ್ತು ಕೆಲವರಿಗೆ ಒಂದೇ ಖಾತೆಯಲ್ಲಿ ತೃಪ್ತಿ ಇರುವು ದಿಲ್ಲ.

ರಾಜ್ಯದ ಮುಖ್ಯಮಂತ್ರಿಪದವಿ ಎಲ್ಲರಿಗೂ ದೊರಕುವುದಿಲ್ಲ. ಅಂತೆಯೇ ಜಿ ಮುಖ್ಯಮಂತ್ರಿಗಳಂತಿರುವ ಉಸ್ತುವಾರಿ ಮಂತ್ರಿ ಪದವಿಗೂ ತೀವ್ರ ಸರ್ಧೆ ಇರುತ್ತದೆ. ಹಾಗೆಯೇ ಮಂತ್ರಿಗಳಿಗೆ ನೀಡುವ ಸರಕಾರಿ ಬಂಗಲೆಗಳ ಬಗೆಗೂ ತಿಕ್ಕಾಟ ಇರುತ್ತದೆಯಂತೆ. ಸುದೈವದಿಂದ ಮಂತ್ರಿಗಿರಿಗಿರುವ ಮೇಲಾಟ ಮಾಧ್ಯಮ ದಲ್ಲಿ ಬಿಂಬಿತವಾಗುವಷ್ಟು ಖಾತೆ ಮತ್ತು ಬಂಗಲೆಗಳ ಬಗೆಗಿನ ತಿಕ್ಕಾಟ ಮಾಧ್ಯಮದಲ್ಲಿ ಗೋಚರ ವಾಗುವುದಿಲ್ಲ.

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯು ಸಂವಿಧಾನದ ಪ್ರಕಾರ ಮುಖ್ಯಮಂತ್ರಿಗಳ
ವಿವೇಚನೆಗೆ ಮತ್ತು ಪರಮಾಧಿಕಾರಕ್ಕೆ ಒಳಪಟ್ಟಿದ್ದರೂ, ವಾಸ್ತವ ದಲ್ಲಿ ಪಕ್ಷಗಳ ಹೈಕಮಾಂಡ್ ಅನುಮತಿ ಇಲ್ಲದೆ ಎಲೆಯೂ
ಮಿಸುಕಾಡುವುದಿಲ್ಲ. ಸಂಪುಟ ವಿಸ್ತರಣೆ ಮತ್ತು ಪುನಾರಚನೆಗಳು ವಿಳಂಬ ವಾಗುತ್ತಿದ್ದು, ಇದು ಆಡಳಿತ ವ್ಯವಸ್ಥೆಯ ಮೇಲೆ
ದುಷ್ಪರಿಣಾಮ ಬೀರುತ್ತದೆ.

ಹೈಕಮಾಂಡ್, ವಿವೇಚನೆ ಮತ್ತು ಪರಮಾಧಿಕಾರ ಎನ್ನುವ ಪದಗಳನ್ನು ಚಾಣಾಕ್ಷತನದಿಂದ ಬಳಸಿ ಭಿನ್ನಮತೀಯರನ್ನು ನಿಯಂತ್ರಿಸ ಲಾಗುತ್ತದೆ. ರಾಜಕೀಯ ಅಶಾಂತಿ ಮತ್ತು ಅತೃಪ್ತಿಗಳು ಭುಗಿದೇಳದಂತೆ ಹೈಕಮಾಂಡಗಳು ಎಚ್ಚರಿಕೆವಹಿಸಬೇಕು. ವಿಳಂಬ ಒಂದು ಮಿತಿಯನ್ನು ಮೀರಿದರೆ, ಅದು ನೆಗೆಟಿವ್ ಪ್ರಾಡಕ್ಟ್ ಕೊಡುವ ಸಾಧ್ಯತೆ ಇರುತ್ತದೆ.

error: Content is protected !!