Sunday, 17th October 2021

ಚಿತ್ರಕಲೆಗೆ ಕಾಲಿನ ಬಳಕೆ

ಸುರೇಶ ಗುದಗನವರ

ಕೈಗಳಿಲ್ಲದಿದ್ರೇನಂತೆ ಕಾಲ್ಬೆರಳಿನ ಮೂಲಕ ಚಿತ್ರಕಲೆಯ ಜಾದೂವನ್ನೇ ಸೃಷ್ಟಿಸಿದ್ದಾರೆ ಸ್ವಪ್ನ ಅಗಾಸ್ಟಿನ್ ಅವರು. ಬರೆಯುವುದು, ಚಿತ್ರ ಬಿಡಿಸುವುದು ಸೇರಿದಂತೆ ತಮ್ಮ ಕಾಲಿನ ಮೂಲಕ ಎಲ್ಲ ಕೆಲಸಗಳನ್ನು ಮಾಡಿ ಮಾದರಿಯಾಗಿದ್ದಾರೆ. ಅವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಪಾದ ಕಲಾವಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಪೋಥನಿಕಾಡ್‌ನ ಪೈಗೊಟ್ಟೂರ ಗ್ರಾಮದ ಕೃಷಿ ಕುಟುಂಬವೊಂದರಲ್ಲಿ ಸ್ವಪ್ನಾ ಅಗಸ್ಟಿನ್ ಜನವರಿ 21,1975 ರಂದು ಜನಿಸಿದರು.

ತಂದೆ ಅಗಸ್ಟಿನ್. ತಾಯಿ ಸೋಪಿ. ಅಗಸ್ಟಿನ್ ಕೃಷಿಕರು. ತಾಯಿ ಗೃಹಿಣಿ. ಸ್ವಪ್ನ ನಾಲ್ಕು ಮಕ್ಕಳಲ್ಲಿ ಹಿರಿಯ ವಳು. ಸ್ವಪ್ನಾಳಿಗೆ ಜನಿಸಿದಾಗಲೇ ಕೈಗಳು ಇರಲಿಲ್ಲ. ಹೆತ್ತವರು ಅವಳಿಗೆ ವಿಶೇಷವಾದ ಚಿಕಿತ್ಸೆ ನೀಡಲಿಲ್ಲ. ಸ್ವಪ್ನಾಳ ತಂದೆ ಅವಳಿಗೆ ಹಲ್ಲುಜ್ಜಲು, ಸ್ನಾನ ಮಾಡಲು, ಬರೆಯಲು ಮತ್ತು ದೈನಂದಿನ ಕೆಲಸಗಳನ್ನು ಪಾದಗಳಿಂದ ಮಾಡಲು 3ನೆಯ ವಯಸ್ಸಿನಿಂದಲೇ ಕಲಿಸಿದರು.

ಸ್ವಪ್ನಾ ಆರು ವರ್ಷದವಳಿದ್ದಾಗ ಸೆಂಟ್ ಥೆರೆಸಾ ಶಾಲೆಗೆ ಸೇರಿಕೊಂಡಳು. ಸ್ವಪ್ನಾಳಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಕಷ್ಟಕರವಾಯಿತು. ಸ್ವಪ್ನಾ ಅಂಗವೈಕಲ್ಯದ ಹೊರತಾಗಿಯೂ ಆತ್ಮವಿಶ್ವಾಸದಿಂದ ಕ್ರೈಸ್ತ ಮಿಷನರಿ ವಿಕಲಚೇತನರ ಮನೆಯಲ್ಲಿ ಆಶ್ರಯ ಪಡೆದಳು. ಅಲ್ಲಿ ಅವಳಿಗೆ ಕಾಲುಗಳಿಂದ ತಿನ್ನುವುದು

ಮತ್ತು ಬರೆಯುವುದು, ರೇಖಾಚಿತ್ರ ಮತ್ತು ಚಿತ್ರಕಲೆ ಸೇರಿದಂತೆ ಎಲ್ಲವನ್ನೂ ಮಾಡಲು ಕಲಿಸಿದರು. ಮರ್ಸಿಹೋಮ್‌ನ ಸಹೋದರಿ ಮೆರಿಯಲ್ ಮತ್ತು ಸೀನಿಯರ್ ರೋಸ್ ಅವರು ಸ್ವಪ್ನಾಳಿಗೆ ಸ್ವತಂತ್ರವಾಗಿ ಬದುಕುವ ಮತ್ತು ಸ್ವಾವಲಂಬನೆಯ ಪಾಠಗಳನ್ನು ಕಲಿಸಿದರು. ನಂತರ ನಿರ್ಮಲಾ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕ ಡೆನಿ ಮ್ಯಾಥ್ಯೂ ಅವರು ಚಿತ್ರಕಲೆಯಲ್ಲಿ ವಿಶೇಷ ತರಬೇತಿ ನೀಡಿದರು.

ಪ್ರಕೃತಿ ದೃಶ್ಯಗಳು
ಸ್ವಪ್ನ ತನ್ನ ಹದಿಹರೆಯದ ವಯಸ್ಸಿಗೆ ತಲುಪಿದಾಗ ಪ್ರಕೃತಿಯ ಸುಂದರ ಚಿತ್ರಗಳನ್ನು ಚಿತ್ರಿಸಲು ಪ್ರಾರಂಭಿಸಿದಳು. ಎರ್ನಾಕುಲಂದ ಸೇಂಟ್ ಮೇರಿಸ್ ಕಾಲೇಜಿ ನಲ್ಲಿ ಇತಿಹಾಸ ವಿಷಯದೊಂದಿಗೆ ಸ್ವಪ್ನ ಪದವಿಯನ್ನು ಪಡೆದರು. ನಂತರ ಅವರು ಕಲಾ ಶಿಕ್ಷಕರ ಅಡಿಯಲ್ಲಿ ನಾಲ್ಕು ವರ್ಷಗಳ ಕಾಲ ಕಲೆಯ ಸಿದ್ಧಾಂತ ಮತ್ತು ಅಭ್ಯಾಸದ ಕುರಿತು ಕಠಿಣ ತರಬೇತಿಯನ್ನು ಪಡೆದರು. ಅಕ್ರೆಲಿಕ್‌ನೊಂದಿಗೆ ಚಿತ್ರಕಲೆಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಅವರು ವೃತ್ತಿಪರ ವಿಧಾನಗಳನ್ನು ಅಳವಡಿಸಿಕೊಂಡರು.

ಆ ಸಮಯದಲ್ಲಿ ಸ್ವಪ್ನಾ ಸ್ವಿಸ್ ಸೊಸೈಟಿ ಆಫ್ ಅರ್ತ್‌ಗೆ ಸೇರಲು ಅರ್ಜಿ ಸಲ್ಲಿಸಿದರು. ಈ ಸಂಸ್ಥೆ ಯು ಪ್ರತಿಭಾವಂತ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತದೆ. ಅಲ್ಲಿ ಸದಸ್ಯರಾಗಿ ಆಯ್ಕೆಗೊಂಡ ನಂತರ ಅವರು ಇಂಟರ್ನ್ಯಾಷನಲ್ ಮೌತ್ ಆಂಡ್ ಪುಟ್ ಪೇಂಟಿಂಗ್ ಆರ್ಟಿಸ್ಟ್ ನ ಸದಸ್ಯ ರಾದರು. ಈ ಸಂಸ್ಥೆಯು ಭಾರತ ದಿಂದ ಕೇವಲ 24 ಕಲಾವಿದರನ್ನು ಆಯ್ಕೆ ಮಾಡಿದೆ. ಪ್ರಪಂಚ ದಾದ್ಯಂತ 700 ಕಲಾವಿದರಿದ್ದಾರೆ. ಪ್ರಕೃತಿ ಮತ್ತು ದೇವರುಗಳ ಕುರಿತ ಸ್ವಪ್ನಾ ಅವರ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ.

ಸ್ಫೂರ್ತಿ ತುಂಬುವ ಭಾಷಣ
ಸ್ವಪ್ನಾ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸಗಳನ್ನು ಮತ್ತು ಲೈವ್ ಪೇಂಟಿಂಗ್ ಪ್ರದರ್ಶನಗಳನ್ನು ನಡೆಸುತ್ತಾರೆ. ಸ್ವಪ್ನಾ ಕಳೆದ 15 ವರ್ಷಗಳಲ್ಲಿ 4000ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅವರು ಸಿಂಗಾಪುರ, ಕತಾರ್, ದುಬೈ, ಟರ್ಕಿ ಮುಂತಾದ ಕಡೆಗೆ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಅವರ ತಾಯಿ ಸೋಫಿ ಸದಾಕಾಲ ಜೊತೆಗಿರುತ್ತಾರೆ. ಸ್ವಪ್ನಾಳ ತಂದೆ ಅಗಸ್ಟಿನ್ ಈಗಿಲ್ಲ.

ಕ್ಯಾನ್ವಾಸ್ ಮತ್ತು ಗ್ಲಾಸ್ ಪೇಂಟಿಂಗ್
ಸ್ವಪ್ನಾಳಿಗೆ ಚಿತ್ರಕಲೆ ಪೂರ್ಣಗೊಳಿಸಲು 5 ರಿಂದ 8 ದಿನಗಳು ಬೇಕಾಗುತ್ತವೆ. ಪೆನ್ಸಿಲ್ ಸ್ಕೆಚ್ ಎರಡು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಅವರು ಕ್ಯಾನ್ವಾಸ್ ನಲ್ಲಿ ಚಿತ್ರಿಸುವುದರ ಜೊತೆಗೆ ಗ್ಲಾಸ್ ಮತ್ತು ಮ್ಯೂರಲ್ ಪೇಂಟಿಂಗ್ ಕೂಡ ಮಾಡುತ್ತಾರೆ. ‘ಅಂಗವೈಕಲ್ಯಗಳ ಹೊರತಾಗಿಯೂ ದೇವರು ನನಗೆ ಕಲೆಯಲ್ಲಿ ಪ್ರತಿಭೆಯನ್ನು ನೀಡಿದ್ದಾನೆ. ಅದರ ಮೂಲಕ ನಾನು ಕಷ್ಟಗಳನ್ನು ಜಯಿಸಿದ್ದೇನೆ’ ಎಂದು ಸ್ವಪ್ನ ಹೇಳುತ್ತಾರೆ.

ಕೆಲವು ವರ್ಷಗಳ ಹಿಂದೆ ಸ್ವಪ್ನಾ ಅವರು ಅಂಗಗಳಿಲ್ಲದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ರೇರಕ ಭಾಷಣಕಾರರಾದ ನಿಕ್ ವುಜಿಚಿಕ್ ಅವರನ್ನು
ಭೇಟಿಯಾಗಿ, ಅವರ ಕುಟುಂಬದ ಭಾವಚಿತ್ರವನ್ನು ನೀಡಿದರು. ಅವರ ವಿಶ್ವ ಮಲಯಾಳಿ ಪ್ರತಿಷ್ಠಾನದಿಂದ 2018ರ ಐಕಾನ್ ಎಂಬ ಗೌರವವನ್ನು ಸ್ವೀಕರಿಸಿ ದ್ದಾರೆ. 46 ವರ್ಷದ ಸ್ವಪ್ನಾ ಅಗಸ್ಟಿನ್ ಅವರ ಕಲಾಕೃತಿಗಳು ಪ್ರಪಂಚದಾದ್ಯಂತ ಬೇಡಿಕೆಯಿರುವುದರಿಂದ, ಅವರು ಕಲಾಕೃತಿಗಳನ್ನು ಮಾರಾಟ ಮಾಡಿ ಸಾಕಷ್ಟು ಆದಾಯವನ್ನು ಗಳಿಸಿದ್ದಾರೆ. ಪ್ರತಿಭಾವಂತ ಪಾದ ಕಲಾವಿದೆ ಸ್ವಪ್ನ ಅಗಸ್ಟಿನ್ ಅನೇಕರಿಗೆ ಸ್ಫೂರ್ತಿ.

Leave a Reply

Your email address will not be published. Required fields are marked *