Tuesday, 9th August 2022

ಗ್ರಾಮದಲ್ಲಿ ಸ್ವಚ್ಛತೆ, ಶುದ್ಧಕುಡಿವ ನೀರಿಗೆ ಆದ್ಯತೆ ನೀಡಿ: ಜಿಪಂ ಸಿಇಒ ಹರ್ಷಲ್ ನಾರಾಯಣ್ ರಾವ್

ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿ ವೆಂಕಟಾಪುರ ಗ್ರಾಮಕ್ಕೆ ಭೇಟಿ-ಪರಿಶೀಲನೆ

ಗ್ರಾಮದಲ್ಲಿ ನೀರಿನ ಟ್ಯಾಂಕ್ ಗಳ‌ ಸ್ವಚ್ಛತೆಗೆ ಸೂಚನೆ

ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ವಾಂತಿ ಭೇದಿಯಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಸಿಇಒ ಬೋಯರ್ ಹರ್ಷಲ್ ನಾರಾಯಣ್ ರಾವ್ ಶುಕ್ರವಾರ ಭೇಟಿ ನೀಡಿ ಪರಿಶೀಲಿ ಸಿದರು.

ವೆಂಕಟಾಪುರ ಗ್ರಾಮದ ವಿವಿಧ ಪದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಗಳಲ್ಲಿ ಸದಾ ಜಾಗೃತಿ ವಹಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ಸ್ವಚ್ಛತೆಗೆ ಒತ್ತು ನೀಡದಿದ್ದಲ್ಲಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತಾಕೀತು ಮಾಡಿದರು.

ಶುದ್ಧ ಕುಡಿಯುವ ನೀರಿನ ಪೂರೈಕೆ ಸಂಪರ್ಕವಾಗಿರಬೇಕು. ಶುದ್ಧೀಕರಣ ಘಟಕಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಖಡಕ್ಕಾಗಿ ಸೂಚಿಸಿ ದರು. ಗ್ರಾಮಗಳಲ್ಲಿ ಅಧಿಕಾರಿಗಳು ಸದಾ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು ಕೊಂಡು ಗ್ರಾಮಗಳಲ್ಲಿನ ಕುಂದುಕೊರತೆಗಳನ್ನು ಪರಿಹರಿಸ ಬೇಕೆಂದರು. ಅಧಿಕಾರಿಗಳು ಗ್ರಾಮಗಳ ಕುರಿತು ನಿರ್ಲಕ್ಷ್ಯವಹಿಸಿದರೆ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ. ಗ್ರಾಮಗಳಲ್ಲಿ ನಿರಂತರವಾಗಿ ಫಾಗಿಂಗ್ , ಬ್ಲೀಚಿಂಗ್ ಪೌಡರ್ ಸಿಂಪಡಣೆ, ಚರಂಡಿ ಸ್ವಚ್ಚತೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.

ಗ್ರಾಮದಲ್ಲಿ ಸ್ವಚ್ಚತೆ, ಕುಡಿಯುವ ನೀರಿನ ಸರಬರಾಜಿನ ಟ್ಯಾಂಕ್, ಚರಂಡಿಗಳನ್ನು ಪರಿಶೀಲಿಸಿದರು. ಬಳಿಕ ವಾಂತಿ-ಭೇದಿಯಿಂದ ಮೃತರಾದ ಹುಚ್ಚವ್ವರವರ ಮನೆಗೆ ಭೇಟಿ ನೀಡಿದರು. ಅಲ್ಲದೇ ಗ್ರಾಮದಲ್ಲಿ ತಾತ್ಕಾಲಿಕವಾಗಿ ತೆರೆದ ಆಸ್ಪತ್ರೆಗೆ ಭೇಟಿ ನೀಡಿ, ಸೂಕ್ತ ಚಿಕಿತ್ಸೆ, ಪರಿಹಾರೋಪಚಾರ ನಡೆಸಲು ವೈದ್ಯಕೀಯ ತಂಡಕ್ಕೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಒ ವಿಶ್ವನಾಥ್, ಡಣಾಪುರ ಗ್ರಾಪಂ.ಅಧ್ಯಕ್ಷೆ ಉಮಾ ಸಿ.ಡಿ.ಯಲ್ಲಪ್ಪ, ಉಪಾಧ್ಯಕ್ಷೆ ಜ್ಯೋತಿ ಯಮನೂರ, ತಾಲ್ಲೂಕು ಆರೋಗ್ಯಾಧಿಕಾರಿ ಭಾಸ್ಕರ್, ಕುಡಿಯುವ ನೀರಿನ ಕಾರ್ಯಪಾಲಕಾಧಿಕಾರಿ ಪಂಪಾಪತಿ, ಪಟ್ಟಣದ ವೈದ್ಯಾಧಿಕಾರಿ ಡಾ.ಮಂಜುಳಾ ಸೇರಿದಂತೆ ಇತರರಿದ್ದರು.