Tuesday, 26th October 2021

ಡ್ರಗ್ಸ್, ಸೆಕ್ಸ್ ಮತ್ತು ಅನಿಯಂತ್ರಿತ ಮೋಜಿನ ಕತ್ತಲ ಲೋಕ!

ಪ್ರಚಲಿತ

ವಿಜಯ್ ದರ್‌ಡಾ

ಹಿರಿಯ ಪತ್ರಕರ್ತ, ಅಧ್ಯಕ್ಷರು, ಲೋಕಮತ್ ಮೀಡಿಯಾ

ಹಣದ ಲಾಲಸೆಯು ಸಾವಿನ ವ್ಯಾಪಾರಿಗಳನ್ನು ಎಷ್ಟು ಅಧಃಪತನಗೊಳಿಸಿದೆ ಅಂದರೆ ಅವರು ಡ್ರಗ್ಸ್ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಮೂಲಕ ದೇಶದ ಯುವ ಜನರನ್ನೇ ನಾಶಪಡಿಸುತ್ತಿದ್ದಾರೆ. ಡ್ರಗ್ಸ್‌ನ ಹಣದಿಂದ ಬೆಳೆಯುತ್ತಿರುವ ಭಯೋತ್ಪಾದನೆಯ ಸಂಪರ್ಕ ಜಾಲವನ್ನು ಬಲಪಡಿಸಿ ದೇಶವನ್ನೂ ನಾಶ ಪಡಿಸು ತ್ತಿದ್ದಾರೆ. ಒಟ್ಟಿನಲ್ಲಿ ಮಾನವ ಕುಲವನ್ನೇ ಅವರು ಸಾವಿನ ಕೂಪಕ್ಕೆ ತಳ್ಳುತ್ತಿದ್ದಾರೆ. ನಾವು ಮೂಕಪ್ರೇಕ್ಷಕರಾಗಿದ್ದೇವೆ. ಇಂತಹ ವಿಷಣ್ಣ ಪರಿಸ್ಥಿತಿಯಲ್ಲೂ ಒಂದು ಭರವಸೆಯ ಆಶಾಕಿರಣ ಹುಟ್ಟಿದೆ…

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ನನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ)ದ ಅಧಿಕಾರಿಗಳು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ ವಿಷಯವೀಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕಾರ್ಡೇಲಿಯಾ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾಗ ಆತನನ್ನು ಎನ್‌ಸಿಬಿ ಬಂಧೀಸಿತ್ತು. ಅದರಲ್ಲೇನೂ ವಿಶೇಷವಿಲ್ಲ. ಆದರೆ, ಇದು ಕೇವಲ ರೇವ್ ಪಾರ್ಟಿ ಮತ್ತು ಹೈ ಪ್ರೊಫೈಲ್ ಯುವಕ ನೊಬ್ಬನ ಬಂಧನಕ್ಕೆ ಸಂಬಂಧಿಸಿದ ವಿಷಯವಷ್ಟೇ ಅಲ್ಲ. ಸೂಕ್ಷ್ಮವಾಗಿ ನೋಡಿದರೆ ಇದು ಪಾಶ್ಚಾತ್ಯರ ಜೀವನ ಶೈಲಿಯು ಹೇಗೆ ನಮ್ಮ ಯುವಕರನ್ನು ಡ್ರಗ್ಸ್, ಸೆಕ್ಸ್ ಮತ್ತು ವ್ಯಭಿಚಾರದ ಕತ್ತಲ ಲೋಕಕ್ಕೆ ಕರೆದೊ ಯ್ಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಈ ಡ್ರಗ್ಸ್‌ಗಳು ನಿಜಕ್ಕೂ ಹುಡುಗರನ್ನು ಕೆಡಿಸುತ್ತಿವೆ.

ಖಾಸಗಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಯಾವ್ಯಾವ ಸೆಲೆಬ್ರಿಟಿಗಳ ಮಕ್ಕಳಿದ್ದರು ಎಂಬುದು ಎನ್‌ಸಿಬಿ ಅಧಿಕಾರಿಗಳಿಗೆ ದಾಳಿಗೂ ಮುನ್ನ ಗೊತ್ತಿರ ಲಿಲ್ಲ. ಅವರಿಗೆ, ಕಾರ್ಡೇಲಿಯಾ ಹಡಗಿನಲ್ಲಿ ಹೀಗೊಂದು ರೇವ್ ಪಾರ್ಟಿ ನಡೆಯುತ್ತಿದೆ, ಅದನ್ನು ಫ್ಯಾಷನ್ ಟೀವಿಯ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿಫ್ ಖಾನ್ ಆಯೋಜಿಸಿದ್ದಾನೆ ಎಂಬ ಖಚಿತ ಮಾಹಿತಿಯಷ್ಟೇ ಬಂದಿತ್ತು. ಆದರೆ, ದಾಳಿ ನಡೆಸಿದಾಗ ಕಾಶಿಫ್ ಖಾನ್ ಸಿಗಲಿಲ್ಲ. ಬದಲಿಗೆ ಆರ್ಯನ್ ಖಾನ್ ಸಿಕ್ಕಿಬಿದ್ದ. ರೇವ್ ಪಾರ್ಟಿಗಳ ಬಗ್ಗೆ ಎನ್‌ಸಿಬಿ ಅಽಕಾರಿಗಳಿಂದ ನನಗೆ ಸಿಕ್ಕ ಮಾಹಿತಿಯನ್ನು ಕೇಳಿದರೆ ಮೈಮೇಲೆ ಗುಳ್ಳೆಗಳೇಳುತ್ತವೆ.

ಅಲ್ಲಿ ಗಾಂಜಾ, ಚರಸ್, ಅಫೀಮು, ಕೊಕೇನ್ ಹಾಗೂ ಇನ್ನಿತರ ಡ್ರಗ್ಸ್‌ಗಳು ಯದ್ವಾತದ್ವಾ ಬಳಕೆಯಾಗುತ್ತವೆ. ಲೈಂಗಿಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಲಾಗುವ ಎಂಡಿಎಂಎ ಕೂಡ ಬಳಕೆಯಾಗುತ್ತದೆ. ಅದರ ಶಕ್ತಿ ಎಷ್ಟಿರುತ್ತದೆಯೆಂದರೆ, ಎಂಡಿಎಂಎ ಸೇವಿಸುವ ವ್ಯಕ್ತಿ ಬೇರೆ ಬೇರೆ ಸಂಗಾತಿಗಳ ಜತೆ ಗಂಟೆಗಟ್ಟಲೆ ನಿರಂತರ ವಾಗಿ ಲೈಂಗಿಕ ಕ್ರಿಯೆ ನಡೆಸಬಹುದಂತೆ. ಅವನ ಜತೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಬೇಕಾದ ಹುಡುಗಿಯರ ಪಾಡನ್ನೊಮ್ಮೆ ಊಹಿಸಿ. ಅವರೂ ಕೂಡ ಯಾರದೋ ಮಕ್ಕಳಾಗಿರುತ್ತಾರೆ! ಮೋಜಿನ ಹೆಸರಿನಲ್ಲಿ ಡ್ರಗ್ಸ್‌ಗೆ ಬಲಿಯಾದ ಹೆಣ್ಣುಮಕ್ಕಳು ಇನ್ನಾವುದೋ ಲೈಂಗಿಕ ರಾಕ್ಷಸನಿಗೆ ಬೇಟೆಯಾಗುತ್ತಾರೆ. ಇಂತಹ ಘೋರ ಅಪರಾಧಕ್ಕೆ ಅವರೊಬ್ಬರನ್ನೇ ದೂಷಿಸಬೇಕಾ? ನನ್ನ ಪ್ರಕಾರ ಅವರ ಪೋಷಕರು ಹಾಗೂ ಕುಟುಂಬದವರನ್ನು ಹೆಚ್ಚು ದೂಷಿಸಬೇಕು.

ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂಬುದು ಅಪ್ಪ ಅಮ್ಮನಿಗೆ ಗೊತ್ತಿರಬೇಕು. ಬಣ್ಣದ ಜಗತ್ತಿಗೆ ಮರುಳಾಗುವ ಮಧ್ಯಮ ವರ್ಗದ ಹುಡುಗಿಯರು ಬಹಳ
ಸುಲಭವಾಗಿ ಇಂತಹದ್ದಕ್ಕೆ ಬಲಿಯಾಗುತ್ತಾರೆ. ಕೊಳಕು ಶ್ರೀಮಂತಿಕೆಯಿಂದ ಹಾಳಾದ ಮೋಜುಗಾರರು ಇಂಥವರ ಜತೆ ವ್ಯಭಿಚಾರ ಮಾಡುತ್ತಾರೆ. ನೆನಪಿಡಿ, ಸಂಪತ್ತಿದೆ ಎಂದಾಕ್ಷಣ ನಿಮ್ಮ ಮಕ್ಕಳನ್ನು ಕೆಡಿಸಬೇಕು ಎಂದೇನಿಲ್ಲ! ಈ ಲೋಕದಲ್ಲಿ ಒಂದೆಡೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಹಗಲು-ರಾತ್ರಿ ಮೈಮುರಿದು ದುಡಿಯುವ ಬಡವರಿದ್ದಾರೆ. ಎಲ್ಲೋ ಕೂಲಿ ಮಾಡಿ, ಇನ್ನೆಲ್ಲೋ ಮೂಟೆ ಹೊತ್ತು, ಯಾರದೋ ಮನೆಯಲ್ಲಿ ಪಾತ್ರೆ ತೊಳೆದು ಇವರು
ಮಕ್ಕಳನ್ನು ಓದಿಸುತ್ತಾರೆ. ಇಂತಹವರ ಮನೆಯಿಂದಲೇ ಒಬ್ಬ ಎಪಿಜೆ ಅಬ್ದುಲ್ ಕಲಾಂ ಹುಟ್ಟುತ್ತಾನೆ. ಇನ್ನೊಂದೆಡೆ ತಮ್ಮ ಮಕ್ಕಳಿಗೆ ಪ್ರತಿದಿನ ಸಾವಿರಾರು ರೂಪಾಯಿ ಪಾಕೆಟ್ ಮನಿ ನೀಡುವ ಶ್ರೀಮಂತರಿದ್ದಾರೆ. ಮಕ್ಕಳಿಗೆ ಅಷ್ಟೊಂದು ಹಣ ಏಕೆ ಬೇಕೆಂದು ಒಮ್ಮೆಯಾದರೂ ಅವರು ಕೇಳುತ್ತಾರಾ? ರಾತ್ರಿ ತಡವಾಗಿ ಮನೆಗೆ ಬಂದಾಗ ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರಾ? ಅದರ ಪರಿಣಾಮವೇ ಇಂದು ನಮ್ಮ ಮುಂದಿರುವುದು.

ಡ್ರಗ್ ಪೆಡ್ಲರ್‌ಗಳು ಇವತ್ತು ನಮ್ಮ ಸುತ್ತಮುತ್ತ ಎಲ್ಲೆಡೆ ಇದ್ದಾರೆ. ಶ್ರೀಮಂತರ ಮಕ್ಕಳಿಗೆ ಮೋಜಿನ ಲೋಕ ತೋರಿಸಲು ಇವರು ಕಾಯುತ್ತಿದ್ದಾರೆ. ಹಾಲಿವುಡ್ ಹಾಗೂ ಬಾಲಿವುಡ್ ಸ್ಟಾರ್‌ಗಳನ್ನು ಅಥವಾ ಅವರ ಮಕ್ಕಳನ್ನು ರೇವ್ ಪಾರ್ಟಿಗೆ ಕರೆಸುವುದೇ ಈ ಕಾರಣಕ್ಕೆ! ಕೆಲ ವರ್ಷಗಳ ಹಿಂದೆ ಚಿತ್ರರಂಗದ ಹಲವು ಖ್ಯಾತನಾಮ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ರೇವ್ ಪಾರ್ಟಿಯ ವಿಡಿಯೋ ವೈರಲ್ ಆಗಿತ್ತು. ನಂತರ ಯಾವುದೇ ಕ್ರಮ ಕೈಗೊಂಡ ಸುದ್ದಿ ಬರಲಿಲ್ಲ. ಯಾಕೆ?
ನಾನು ಮುಂಬೈನಲ್ಲಿ ಓದುತ್ತಿದ್ದಾಗ ಅಲ್ಲಿನ ಪಾನ್ ಶಾಪ್‌ಗಳಲ್ಲಿ ಗಾಂಜಾ ಮತ್ತು ಚರಸ್‌ಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದರು. ಶಾಲೆ ಹಾಗೂ
ಕಾಲೇಜುಗಳ ಸಮೀಪದಲ್ಲೇ ಈ ಅಂಗಡಿಗಳಿರುತ್ತಿದ್ದವು.

ಯಾವ ಅಂಗಡಿಯ ಮುಂದೆ ಈಶ್ವರನ ಫೋಟೋ ನೇತುಹಾಕಿದ್ದಾರೋ ಅಲ್ಲಿ ಡ್ರಗ್ಸ್ ಸಿಗುತ್ತದೆ ಎಂಬುದು ಮಾದಕ ವ್ಯಸನಿಗಳಿಗೆ ಗೊತ್ತಿರುತ್ತಿತ್ತು. ಇಂತಹ ಅಕ್ರಮ ದಂಧೆ ರಾಜಾರೋಷವಾಗಿ ಹಾಡಹಗಲಿನಲ್ಲೇ ನಡೆಯುತ್ತಿತ್ತು. ಯಾವ ಕಾನೂನಿಗೂ ಇವರು ಹೆದರುತ್ತಿರಲಿಲ್ಲ. ನಂತರ ಕುಡುಕ ಹಿಪ್ಪಿಗಳು ಅಮೆರಿಕ, ಯುರೋಪ್ ಹಾಗೂ ಇಂಗ್ಲೆಂಡ್‌ಗಳಿಂದ ಭಾರತಕ್ಕೆ ಬರತೊಡಗಿದರು. ಅವರು ಗೋವಾದ ಬೀಚುಗಳಲ್ಲಿ ಬಿದ್ದುಕೊಳ್ಳುತ್ತಿದ್ದರು. ಅಲ್ಲೊಂದು ಡ್ರಗ್ಸ್ ಸಂಸ್ಕೃತಿ ಬೆಳೆಯಿತು… ಡ್ರಗ್ಸ್ ವ್ಯಾಪಾರವೂ ಜೋರಾಯಿತು… ಅದರ ಜತೆಗೆ ಸೆಕ್ಸ್ ದಂಧೆ ಹಾಗೂ ಅದರಂತಹ ಇನ್ನಷ್ಟು ಅನೈತಿಕ ಚಟುವಟಿಗಳೂ ಬೆಳೆದವು.

ನಂತರ ಈ ದಂಧೆಯನ್ನೆಲ್ಲ ರಷ್ಯನ್ನರು ತಮ್ಮ ಕೈಗೆ ತೆಗೆದುಕೊಂಡರು. ಅದರೊಂದಿಗೆ ಡ್ರಗ್ಸ್ ವ್ಯಾಪಾರ ಇಡೀ ದೇಶಕ್ಕೆ ಹರಡತೊಡಗಿತು. ಭಾರತದಲ್ಲಿ ಮಾದಕ ವಸ್ತುಗಳ ಆರ್ಥಿಕತೆಯ ಗಾತ್ರವೆಷ್ಟು ಎಂಬುದು ಇವತ್ತಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಸ್ಥೂಲ ಅಂದಾಜಿನ ಪ್ರಕಾರ ವರ್ಷಕ್ಕೆ ಸುಮಾರು ೧ ಲಕ್ಷ ಕೋಟಿ ರು.ನಷ್ಟು ಡ್ರಗ್ಸ್
ವ್ಯಾಪಾರ ಇಲ್ಲಿ ನಡೆಯುತ್ತದೆ. ಆದರೆ ನನಗೆ ಈ ದಂಧೆಯ ಗಾತ್ರ ಇನ್ನೂ ಹೆಚ್ಚಿರಬಹುದು ಅನ್ನಿಸುತ್ತದೆ. ಜಗತ್ತಿನಲ್ಲಿ ಅತಿದೊಡ್ಡ ಮಾಫಿಯಾ ಅಂದರೆ ಡ್ರಗ್
ಮಾಫಿಯಾ. ಎರಡನೆಯದು ಶಸಾಸಗಳ ಮಾಫಿಯಾ. ಇವೆರಡಕ್ಕೂ ಪರಸ್ಪರ ಸಂಬಂಧವಿದೆ. ಮತ್ತು ಇವೆರಡೂ ಮಾಫಿಯಾಗಳು ಭಯೋತ್ಪಾದಕ ಸಂಘಟನೆ ಗಳ ಜತೆ ಶಾಮೀಲಾಗಿರುತ್ತವೆ.

ಮಾದಕ ವಸ್ತುಗಳ ವ್ಯಾಪಾರದಲ್ಲಿ ಭಾರತವು ಜಗತ್ತಿನ ಟಾಪ್ ೧೦ ದೇಶಗಳಲ್ಲೊಂದು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸುವವರಿದ್ದಾರೆ ಎಂಬುದು ಒಂದು ಸಂಗತಿಯಾದರೆ, ನಮ್ಮ ದೇಶ ಇರುವ ಸ್ಥಳವು ಭೌಗೋಳಿಕವಾಗಿ ಡ್ರಗ್ಸ್ ಹಂಚಿಕೆಗೆ ಹೇಳಿಮಾಡಿಸಿದಂತಿದೆ. ಇಲ್ಲಿಂದ ಬೇರೆ ಬೇರೆ ಕಡೆಗೆ ಡ್ರಗ್ಸ್ ಸರಬರಾಜಾ ಗುತ್ತದೆ. ಜಗತ್ತಿನಲ್ಲಿ ಪ್ರತಿವರ್ಷ ಉತ್ಪಾದನೆಯಾಗುವ ಒಟ್ಟು ಡ್ರಗ್ಸ್‌ನಲ್ಲಿ ಅಫ್ಗಾನಿಸ್ತಾನದ ಅಫೀಮಿನ ಪಾಲೇ ಶೇ.40ರಷ್ಟಿದೆ. ಅದು ಭಾರತಕ್ಕೆ ಕಳ್ಳಸಾಗಣೆ ಯಾಗಿ ಸಂಸ್ಕರಣೆಗೆ ಒಳಗಾಗುತ್ತದೆ. ನಂತರ ಇಲ್ಲಿಂದ ಸಂಸ್ಕರಿತ ಡ್ರಗ್ಸ್ ಜಗತ್ತಿನ ಬೇರೆ ಬೇರೆ ಭಾಗಗಳಿಗೆ ರಫ್ತಾಗುತ್ತದೆ.

ದುರದೃಷ್ಟವಶಾತ್ ಸಿಂಗಾಪುರ ಮುಂತಾದ ಕಡೆ ಇರುವಂತೆ ನಮ್ಮಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕಾಯ್ದೆಯಿಲ್ಲ. ಅಲ್ಲಿ ಡ್ರಗ್ಸ್ ಹೊಂದಿದ್ದರೆ ಮರಣ ದಂಡನೆ ವಿಧಿಸ ಲಾಗುತ್ತದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕು. ನಾವು ಡ್ರಗ್ಸ್ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಆಡಳಿತಾತ್ಮಕವಾಗಿಯೂ, ಸಾಮಾಜಿಕ ಮಟ್ಟದಲ್ಲೂ ಹೋರಾಡಬೇಕು. ನಾವು ಎಚ್ಚೆತ್ತುಕೊಂಡರಷ್ಟೇ ನಮ್ಮ ಮಕ್ಕಳು ಮಾದಕ ವ್ಯಸನ ಮತ್ತು ಅದರ ಜತೆಗೆ ಸೇರಿಕೊಂಡಿರುವ ಕತ್ತಲ ಲೋಕಕ್ಕೆ ಜಾರುವು
ದನ್ನು ತಪ್ಪಿಸಲು ಸಾಧ್ಯ.

ಕೆಲ ದಿನಗಳ ಹಿಂದೆ ನಾನು ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೇಡೆ ಜತೆ ಮಾತನಾಡುತ್ತಿದ್ದೆ. ‘ನೀವೊಬ್ಬ ರೈತನ ಮಗ. ಸ್ವಾತಂತ್ರ್ಯ ಹೋರಾಟದ
ನೆಲವಾದ ವಿದರ್ಭದಿಂದ ಬಂದಿದ್ದೀರಿ. ಡ್ರಗ್ಸ್ ವಿರುದ್ಧ ಸಮರ ಸಾರಲು ನಿಮಗೊಂದು ಒಳ್ಳೆಯ ಅವಕಾಶ ಸಿಕ್ಕಿದೆ. ಅದಕ್ಕೆ ಬೆನ್ನೆಲುಬಾಗಿ ನಿಮ್ಮ ಅಪ್ಪ ಅಮ್ಮ ಬಿತ್ತಿದ ಮೌಲ್ಯಗಳು ನಿಮ್ಮಲ್ಲಿವೆ. ಯಾವುದೇ ಕಾರಣಕ್ಕೂ ಈ ಡ್ರಗ್ಸ್ ಡೀಲರ್‌ಗಳನ್ನು ಸುಮ್ಮನೆ ಬಿಡಬೇಡಿ ಎಂದು ಹೇಳಿದೆ. ಅವರು ಖಂಡಿತ ಡ್ರಗ್ಸ್ ದಂಧೆಯ
ನರಗಳನ್ನು ಕತ್ತರಿಸುವುದಾಗಿ ಭರವಸೆ ನೀಡಿದರು.

ಸಮೀರ್ ಅಕ್ಷರಶಃ ಆ ಕೆಲಸ ಮಾಡುತ್ತಿದ್ದಾರೆ ಎಂಬುದೇ ಖುಷಿಯ ಸಂಗತಿ. ಅವರಂತಹ ಅಧಿಕಾರಿಗಳಿಗೆ ರಾಜಕಾರಣಿಗಳು ಬೇಷರತ್ ಬೆಂಬಲ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಕುಟುಂಬಗಳ ಹಿನ್ನೆಲೆಯನ್ನು ಗಮನಿಸಿದರೆ ನಿಸ್ಸಂಶಯವಾಗಿ ಅವರು ಮಾದಕ ವಸ್ತು
ಜಾಲವನ್ನು ಹೊಸಕಿಹಾಕಲು ಕ್ರಮ ಕೈಗೊಳ್ಳುತ್ತಾರೆಂಬ ವಿಶ್ವಾಸ ನನಗಿದೆ.

ಮುಗಿಸುವ ಮುನ್ನ…
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಡಾಕ್ಟರ್ ಒಬ್ಬರ ಜತೆ ಇತ್ತೀಚೆಗೆ ಮಾತನಾಡುತ್ತಿದ್ದೆ. ಅವರು ಪ್ರತಿ ಬಾರಿ ಶಸ್ತ್ರಸಚಿಕಿತ್ಸೆ ನಡೆಸುವಾಗಲೂ
ರೋಗಿಯ ಬಳಿ ನೀವು ಯಾವುದಾದರೂ ಮಾದಕ ವಸ್ತುವಿಗೆ ಅಡಿಕ್ಟ್ ಆಗಿದ್ದೀರಾ ಅಥವಾ ಯಾವುದಾದರೂ ಡ್ರಗ್ಸ್ ಸೇವಿಸುತ್ತೀರಾ ಎಂದು ಕೇಳುತ್ತಾರಂತೆ.
ಆಘಾತಕಾರಿ ಸಂಗತಿಯೆಂದರೆ, ಶೇ.50ರಷ್ಟು ಯುವಜನರು ತಾವು ಒಂದಲ್ಲಾ ಒಂದು ರೀತಿಯ ಡ್ರಗ್ಸ್ ಸೇವಿಸುವುದಾಗಿ ಹೇಳುತ್ತಾರಂತೆ! ದಯವಿಟ್ಟು
ಯೋಚಿಸಿ… ನಿಮ್ಮ ಮಗು ಕೂಡ ಆ ವ್ಯಸನಿಗಳಲ್ಲಿ ಸೇರಿದೆಯೇ?

Leave a Reply

Your email address will not be published. Required fields are marked *