Tuesday, 31st January 2023

ಸುಲಭಕ್ಕೆ ಜಗ್ಗದ ಝುಕೋ ವ್ಯಾಲಿ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ನೀರು, ಪರ್ವತ, ಹೂವಿನ ರಾಶಿರಾಶಿ ಸಾಲು, ರಾಕ್ ಕ್ಲೈಮಿಂಗ್, ಪರ್ವತದ ಸೆರಗಿನ ಮಂಜಿನ ಕಣಿವೆಯಲ್ಲಿ ನುಸುಳುತ್ತಾ ಸಾಗುವ
ಕಾಲ್ದಾರಿಯ ಮಾರ್ಗ, ಬೆಳ್ ಬೆಳಿಗ್ಗೆನೆ ಪರ್ವತದ ತುದಿ ಏರುವ ಹುಂಬ ಸಾಹಸ ಮಾಡಿ ಅಂತಹದ್ದೊಂದನ್ನು ಅದಮ್ಯ ಅನುಭವ ವಾಗಿಸಿಕೊಳ್ಳುವ ಅನೂಹ್ಯ ಸಮಯ, ಏನೂ ಬೇಡ ತೆಪ್ಪಗೆ ಸುಮ್ಮನೆ ಹಸಿರು ಗುಡ್ಡ ಹತ್ತಿ ಟೆಂಟ್ ಹೊರಗೆ ಕಾಲು ಚಾಚಿ ಕಣಿವೆ ನೋಡುತ್ತಾ ಕೂರಬೇಕೆ? ಸಿಗ್ನಲ್ ಫ್ರೀ ಅನುಭವ, ಯಾವ ಲೆಕ್ಕಕ್ಕೂ ಮಾತುಕತೆಗೆ ಒಲ್ಲದ ಮನಸ್ಥಿತಿ, ಮೌನದ ಮತ್ತು ನಿಟ್ಟುಸಿರ ಸದ್ದಿನ ನಡುವಿನ ಸಂವಹನಕ್ಕೂ  ಒಂದು ಅಯಾಮ ಕಲ್ಪಿಸಬಹುದಾದ ಸಾಧ್ಯತೆ ಇದ್ದರೆ ಅದೂ ಇಲ್ಲಿಯೇ, ಜತೆಗೆ ಅಷ್ಟು ಎತ್ತರ ಏರಿದ ನಂತರದ ಅಯಾಸ ಮತ್ತು ಬಿಸಿ ಬಿಸಿ ದಾಲ್ಚಿನಿ ಚಹದ ಜತೆಗೆ, ಸುಟ್ಟ ಬಾಳೆಕಾಯಿ ಗಳ ಖಾರ ಒಗರು ಮಿಶ್ರಣದ ತಿಂಡಿ, ಅದಕ್ಕೂ ಹೆಚ್ಚಿನ ಶಕ್ತಿ ಬೇಕಿದ್ದರೆ ಸುಟ್ಟ ಬಟಾಟೆಯ ಮೇಲೆ ಲಭ್ಯವಿರುವ ಯಾವುದೇ ಮಸಾಲೆ ಹಾಕಿಕೊಂಡು ನಿಮ್ಮದೆ ರುಚಿಯ ರೆಸಿಪಿ ಮಾಡಿಕೊಂಡು ತಿನ್ನುತ್ತಾ, (ಅಂದ ಹಾಗೆ ಮನೆಯಲ್ಲೂ ಬಟಾಟೆಯನ್ನೊಮ್ಮೆ ಸುಟ್ಟು ನೋಡಿ. ಗ್ಯಾಸ್ ಮೇಲಲ್ಲ ಕೆಂಡದ ಮೇಲೆ ಮತ್ತು ಅದು ಬುಸಬುಸನೆ ಆವಿ ಸೂಸುವಾಗಲೇ ಅದಕ್ಕಿಷ್ಟು ಉಪ್ಪು ಖಾರದ ನಮ್ಮದೇ ಚಟ್ನಿಗಳನ್ನೂ ಸೇರಿಸಿ ಸವಿದು ನೋಡಿ.

ಎತ್ತರ ಪ್ರದೇಶದಲ್ಲಿ ದೇಹದ ತತಕ್ಷಣದ ಶಕ್ತಿಗೆ ಬೆಲ್ಲದ ಜತೆಗೆ ಪರಿಣಾಮಕಾರಿ ಇದು.) ಹೀಗೆ ಎಲ್ಲದರ ಮಿಶ್ರಣ ಮತ್ತು ಕೊನೆಯಲ್ಲಿ ಮೋಜು, ಒನೆಂದರೂ ಇಳಿಯಲೇಬೇಕಾದ  ಅನಿವಾರ್ಯತೆ, ಮುಖ್ಯವಾಗಿ ಜಾಲ ತಾಣದ ಗುಂಪಿನಿಂದ ಎಲ್ಲ ಸಂಪರ್ಕಗಳ ಜಂಜಡ ಗಳಿಂದ ಮುಕ್ತ ಜಗತ್ತು, ಶಿಸ್ತು ಕಲಿಯಲೇ ಬೇಕಾದ ಅನಿವಾರ್ಯತೆ. ಯಾರಿಗುಂಟು ಯಾರಿಗಿಲ್ಲ. ಹತ್ತಿಹೋಗಿ ಬಿಟ್ಟರೆ ಮತ್ತೆ ಕೆಳಗಿಳಿಯುವ ಪ್ರಮೇಯವೇ ಬೇಡುವುದಿಲ್ಲ ಈ ಪರ್ವತ ಶ್ರೇಣಿ. ಇಂತಹದ್ದೊಂದು ಕೊಂಬೋ ಪ್ಯಾಕೇಜ್ ಚಾರಣ ಮತ್ತು ಪ್ರವಾಸ ಅಲೆಮಾರಿಗಳಿಗೆ ಹೇಳಿ ಮಾಡಿಸಿದ್ದು.

ಪ್ರವಾಸಿಗರಿಗೆ ಯಾವಾಗಲೂ ಪ್ರಿಯವೇ. ಹಾಗೆ ಸಕಲ ರೀತಿಯ ಅನುಭವಕ್ಕೆ ಪಕ್ಕಾಗುವವರಿಗೆ ಪ್ರಸ್ತುತ ಮನುಷ್ಯರ ಹಾವಳಿ ಗಳಿಂದ ದೂರವಿರುವ ಝುಕೋ(Dzukou) ವ್ಯಾಲಿ ಒಮ್ಮೆ ಕಾಲು ಹರಿಸಬಹುದಾದ ತಾಣವೇ. ಮಣಿಪುರ ಮತ್ತು ನಾಗಾಲ್ಯಾಂಡಿ ನ ಸರಹದ್ದುಗಳನ್ನು ಹಂಚಿಕೊಂಡು ಎರಡೂವರೆ ಸಾವಿರ ಅಡಿ ಎತ್ತರದಲ್ಲಿ ಮುಖ ಮೇಲಕ್ಕೆ ಮಾಡಿ ನಿಂತಿರುವ ಝುಕೋ ವ್ಯಾಲಿ, ಎರಡೂ ಕಡೆಯಲ್ಲಿ ಹತ್ತಾರು ಕಿ.ಮೀ. ಅಗಲಕ್ಕೂ ಚಾಚಿ ನಿಂತಿರುವ ನೈಜ ಅರ್ಥದಲ್ಲಿ ಹಸಿರು ಕಣಿವೆ ಎಂದೇ ಪ್ರಸಿದ್ಧಿ.

ಎರಡೂ ಕಡೆಯಲ್ಲೂ ಸಾಲು ಸಾಲು ಎತ್ತರದ ಹಸಿರು ಪರ್ವತಾಗ್ರಗಳು ಯಾವ ತುದಿಗೇರಿದರೂ ಝುಕೋ ವ್ಯಾಲಿ ನಿಮ್ಮನ್ನು ನಿರಾಸೆ ಮಾಡುವುದಿಲ್ಲ. ಅದಕ್ಕಾಗಿಯೇ ಖಾಸಗಿ ಟ್ರೆಕ್ ಮತ್ತು ತಂಡವಾಗಿ ಹೊರಡುವ ಕೆಲವು ಚಾರಣಿಗರು ಮತ್ತು ಖಾಸಗಿ
ಬದುಕಿನ ಬಗೆಗಿನ ಅವಗಾಹನೆ ಇರುವ ಪ್ರವಾಸಿಗರು ಸ್ಥಳೀಯ ಗೈಡ್ ಮತ್ತು ಆಯೋಜಕರಿಂದ ಸಹಾಯ ಪಡೆದು ತಮ್ಮದೆ ಪಥ, ಜಾಗ, ಟೆಂಟ್ ಮತ್ತು ಪ್ರವೇಸಿ ಎಲ್ಲವನ್ನೂ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಒಬ್ಬನಿಗಿಂತ ಇನ್ನೊಬ್ಬ ಹೆಚ್ಚು ಎತ್ತರ ಏರಿ ಸುತ್ತೆಲ್ಲ ಕಣ್ಣರಳಿಸಿದಾಗ ಅಂದು ಇಂದು ಟೆಂಟ್‌ಗಳು ಬಣ್ಣದ ಗಾಳಿಪಟದಂತೆ ಎಲ್ಲೂ ಕಾಣಸಿಗುತ್ತವೆ. ದೂರ ದೂರದವರೆಗೆ ಮರಿ, ಕಿರಿ ತುದಿಯ ಬೆಟ್ಟಗಳಿಂದ ತುದಿಯಲ್ಲಿ ಯಾವಾಗಲೂ ಮಂಜೇ ತುಂಬಿ ಕೊಂಡಿದ್ದು, ಎಲ್ಲಿದೆ ಅದರ ನೆತ್ತಿ ಎಂದು ಕಾಣಿಸದೆ ಇರುವಂತಹ ಎತ್ತರದವರೆಗಿನ ಪರ್ವತಗಳ ಸಮೂಹ ಈ ಕಣಿವೆ. ಕಾರಣ ಉಳಿದ ಹೊತ್ತಿನಲ್ಲಿ ಇದಕ್ಕೆ ಹಿಮಾವೃತದ ಆಸರೆ ಇದ್ದರೆ, ನಂತರದಲ್ಲಿ ಇದರ ಸೆರಗಿನಲ್ಲಿ ಹರಿಯುತ್ತಲೇ ಇರುವ ನೀರಿನ ಝರಿ ಗಳು ಇದನ್ನು ಹಸಿಯಾಗಿಯೂ ಹಸಿರಾಗಿಯೂ ಇರಿಸುತ್ತದೆ.

ಝುಕೋ ಮತ್ತು ಝಾಪು ನದಿಗಳು ನಿರಂತರ ಹರಿಯುತ್ತವೆ ಈ ಕಣಿವೆಯಲ್ಲಿ. ಹಾಗಾಗಿ ಇಲ್ಲಿ ಚಾರಣ ಮತ್ತು ಒಂದು ಹಂತದ ವರೆಗೆ ಕುಟುಂಬ ಪ್ರವಾಸ ಕೈಗೊಳ್ಳುವವರಿಗೆ ಝುಕೋ ವ್ಯಾಲಿ ಹಾಟ್ ಫೇವರಿಟ್. ನಾಗಾಲ್ಯಾಂಡ್‌ನ ಕೊಹಿಮಾದಿಂದ ಕೇವಲ 30 ಕಿ.ಮೀ ದೂರದಲ್ಲಿವೆ ವಿಸ್ವೇಮ್ ಮತ್ತು ಜಖ್ಮಾ ಎಂಬ ಹಳ್ಳಿಗಳು. ಇಂದು ಮಜವಿದೆ. ಈ ವಿಸ್ವೇಮ್ ಒಂದು ತುದಿಗಿದ್ದರೆ, ಆ ಊರು ಮುಗಿಯುವ ಇನ್ನೊಂದು ತುದಿಯೇ ಜಖ್ಮಾಹಳ್ಳಿ. ಯಾರು ಯಾವ ಊರಿನವರೋ ಅವರವರೇ ನಿರ್ಧರಿಸಿಕೊಳ್ಳ
ಬೇಕು. ಆದರೆ ವಿಸ್ವೇಮ್ ರಸ್ತೆಯ ತುದಿಗೆ ಇರುವುದರಿಂದ ಇಲ್ಲಿಗೇ ನೇರವಾದ ಬಸ್ ಸೌಕರ್ಯವಿದೆ.

ಹೇಗೆ ಹೋದರೂ ೪೫ ನಿಮಿಷದ ಹೊರಳು ದಾರಿ. ಇಲ್ಲಿಂದಲೇ ಪೊರ್ಟರ್, ಅಹಾರ ಇತ್ಯಾದಿ ಝುಕೋ ವ್ಯಾಲಿಗೆ ತಲುಪುವ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿಗೆ ಪ್ರವೇಶಿಸಲು ಝುಕೋ ವ್ಯಾಲಿ ಪಾಸುಗಳನ್ನು ಪಡೆಯಬೇಕು. ತೀರ ವಿಸ್ವೇಮ್‌ಗೆ ಹೋಗಿ ನನಗೂ ಪಾಸ್ ಬೇಕು ಎಂದರೆ ಯಾಮಾರಿದಿರಿ ಎಂದೇ ಅರ್ಥ. ಪ್ರತಿಯೊಬ್ಬರಿಗೆ ರು. ೩೦ ದರ ವಿಧಿಸುವ ಇದನ್ನು ಇತ್ತಲಿನ ನಗರಗಳಾದ ಕೋಹಿಮ ಬಿಡುವ ಮುನ್ನವೇ ಪಡೆಯಬೇಕು ಅಥವಾ ಕೋಲ್ಕತಾದ ನಾಗಲ್ಯಾಂಡ್ ಭವನದಲ್ಲಿ ಇರುವ ವಿಶೇಷ ಕಚೇರಿಯಿಂದಲೂ ಪಡೆಯಬಹುದು.

ರಸ್ತೆಗಿಂತಲೂ ಆದಷ್ಟು ರೈಲು ಮೂಲಕ ತಲುಪಲೆತ್ನಿಸುವುದು ಒಳ್ಳೆಯದು ಇದು ನನ್ನ ಅಡ್ವೈಸು. ಕಾರಣ ಯಾವಾಗ ಯಾವ ಹೊರಳು ರಸ್ತೆ ಯಾವ ಕಾರಣಕ್ಕೆ ನಿಲುಗಡೆ ಆಗುತ್ತದೆ ವಿವರಿಸುವುದು ಕಷ್ಟ. ಹತ್ತಿರದ ರೈಲು ನಿಲ್ದಾಣ ಧೀಮಪುರ್. ಇಲ್ಲಿಗೆ ಎಲ್ಲಾ ಕಡೆಯಿಂದಲೂ ನೇರ ಸಂಪರ್ಕವಿದ್ದು, ಧೀಮಪುರದಿಂದ ಕೋಹಿಮಾವರೆಗೆ (ಸುಮಾರು ೭೦ ಕಿ.ಮೀ) ಸಾಕಷ್ಟು ಖಾಸಗಿ ಮತ್ತು ನಾಗಾಲ್ಯಾಂಡ್ ಸರಕಾರಿ ಸಾರಿಗೆ ವಾಹನಗಳ ಸೌಕರ್ಯವಿದೆ.

ಆದರೆ ಹೆಚ್ಚಾಗಿ ಸುಮೋ ಮಾತ್ರವೇ ಕಾಣಸಿಗುತ್ತವೆ. ಧೀಮ್ ಪುರದಲ್ಲಿಯೇ ಏರ್‌ಪೋರ್ಟಿದ್ದು ದೇಶದ ಎಲ್ಲಾ ಕಡೆಯಿಂದ ಅದಕ್ಕೆ ಸಂಪರ್ಕವಿದೆ. ನಿಲ್ದಾಣದ ಹೊರಗೆ ನೇರವಾಗಿ ಕೋಹಿಮಾವರೆಗೆ ಟ್ಯಾಕ್ಸಿ ಸರ್ವೀಸುಗಳಿವೆ. ಬೇಸ್ ಕ್ಯಾಂಪ್ ಲೆಕ್ಕದಲ್ಲಿರುವ ಸುತ್ತಲಿನ ಯಾವ ಹಳ್ಳಿಗಳಲ್ಲೂ ತುಂಬಾ ಸೌಲಭ್ಯಗಳೇನಿಲ್ಲ. ಪೇಯಿಂಗ್ ಗೆಸ್ಟ್ ಅಥವಾ ಇನ್ನಿತರ ವ್ಯವಸ್ಥೆ ಬಗ್ಗೆ ನಾನು ಹೋದಾಗ ಅಂಥಾ ಆಸ್ಥೆ ಅಥವಾ ಯೋಜನೆಗಳಿರಲಿಲ್ಲ. ಈಗ ಬಹುಶಃ ಇನ್ನಿಷ್ಟು ಬೆಳವಣಿಗೆ ಆಗಿರಬಹುದು. ಆದರೂ ಪ್ರವಾಸಿ ಗರು ಆದಷ್ಟೂ ಕೊಹಿಮಾದಿಂದ ಬೇಕಾದ್ದೆಲ್ಲ ತುಂಬಿಸಿಕೊಂಡು ಬಂದಲ್ಲಿ ಒಳ್ಳೆಯದು. ಕೊನೆಯ ಒಂದು ಹಂತದಲ್ಲಿ ಅಹಾರ ನೀರು ಸೇರಿದಂತೆ ಯಾವ ಪದಾರ್ಥವನ್ನೂ ಮೇಲೆ ಬಿಡುವುದಿಲ್ಲ.

ಏನೇ ಬಾಯಾರಿದರೂ ಮೇಲ್ತುದಿ ತಲುಪಿ ವಾಪಸ್ಸು ಬಂದ ಮೇಲೆ ಇಲ್ಲ ಇಲ್ಲೇ ಕೂತಿದ್ದು ಕೆಳಕ್ಕೆ ನಡೆಯಿರಿ ಎನ್ನುತ್ತದೆ ಸ್ಥಳೀಯ
ವ್ಯವಸ್ಥೆ. ಹಾಗಾಗಿ ಝುಕೋ ಯಾವಾಗಲೂ ಸ್ವಚ್ಛ ಭಾರತವೇ. ಅರ್ಧ ಎತ್ತರ ಮತ್ತು ಅನುಮತಿಯ ಹಂತದ ಉಳಿದುಕೊಳ್ಳಲು ಕೆಲವು ಸಾಧಾರಣ ಗೆಸ್ಟ್‌ಹೌಸ್ ಸೌಲಭ್ಯ ಇದ್ದು ಅದನ್ನೂ ಕೋಹಿಮಾದಿಂದ ಮೊದಲೇ ನಿರ್ಧರಿಸಿಕೊಂಡು ಹೋದಲ್ಲಿ ಬಹಳ ಒಳ್ಳೆಯದು. ಮರುದಿನದ ಸೂರ್ಯೋದಯ ಮತ್ತು ಮುಂಜಾನೆಯ ಟ್ರೆಕ್ ಇಲ್ಲಿನ ಆಕರ್ಷಣೆ ಆಗಿದ್ದರಿಂದ ಝುಕೋ ವ್ಯಾಲಿಯ ಎತ್ತರ ಪ್ರದೇಶದ ಭಾಗದ ಯೋಜನೆ ರೂಪಿಸುತ್ತಾರೆ. ಇಲ್ಲಿಂದ ಸರಾಸರಿ 15 ಕಿ.ಮೀ. ನಡೆಯುವ ದಾರಿ ಇದ್ದು ನಿಮ್ಮ ಕೆಪಾಸಿಟಿಗೆ
ತಕ್ಕಂತೆ ಎಷ್ಟೂ ದೂರ ಬೇಕಿದ್ದರೂ ಯಾವ ದಿಕ್ಕಿಗೂ, ಯಾವ ಬೆಟ್ಟದ ನೆತ್ತಿಗೂ ಹತ್ತಿ ಕೂರುವುದು ನಿಮಗೆ ಬಿಟ್ಟಿದ್ದು. ಒಂದೆರಡು ಪರ್ವತಗಳ ಕೊನೆಯಲ್ಲಿ ೨ ಕಿ.ಮೀ. ಕಡಿದಾದ ದಾರಿ ಇದ್ದು ಚಾರಣಿಗರು ಮಾತ್ರವೇ ಅಲ್ಲಿಯವರೆಗೂ ಹತ್ತಿ ಹೋಗುತ್ತಾರೆ.

ಇದು ಸುತ್ತ ಮುತ್ತಲಿನ ಸಂಪೂರ್ಣ ಝುಕೋ ವ್ಯಾಲಿಯ ದರ್ಶನ ಕೊಡುವ ಅತಿ ಎತ್ತರದ ಮಾರ್ಗವಾಗಿದ್ದು ಸಾಮಾನ್ಯ ಪ್ರವಾಸಿ ಗರಿಗೆ ಕೊಂಚ ಕಷ್ಟವೇ ಇದು. ನವಂಬರ್‌ನಿಂದ -ಬ್ರುವರಿವರೆಗೆ ಒಂದು ಸೀಜನ್ ಆದರೆ ಜೂನ್‌ನಿಂದ ಸೆಪ್ಟಂಬರ್ ಇನ್ನೊಂದು ಕಾಲ. ಇವೆರಡೂ ವಿಭಿನ್ನ ರೀತಿಯ ಅನುಭವಕ್ಕೀಡು ಮಾಡುತ್ತವೆ. ಚಳಿಗಾಲದಲ್ಲಿ ಮಂಜಿನ ಕಣಿವೆಯಾಗಿ ಮಾರ್ಪಡುವ ಝುಕೋ ವ್ಯಾಲಿ ಜೂನ್ ನಂತರ ಹಿತವಾದ ಬಿಸಿಲಿನಲ್ಲಿ ಹಸಿರಾಗಿ ಕಂಗೊಳಿಸುತ್ತದೆ. ಅಲ್ಲಲ್ಲಿ ಕೆಲವು ಪರ್ವತಗಳು ಪೂರ್ತಿ ಸಣ್ಣ ಸಣ್ಣ ಹೂವಿನಿಂದ ಆವೃತವಾಗಿದ್ದು ಅದ್ಭುತವಾಗಿರುತ್ತದೆ.

ನಿರಂತರ ಹಸಿರು ಪರ್ವತ ಪ್ರದೇಶಗಳು ಮಧ್ಯೆ ಹುಲ್ಲುಗಾವಲಿನಂತಹ ಅಗಾಧ ಮೈದಾನ ಪ್ರದೇಶಗಳು, ಎರಡೂ ಅಂಚಿಗೆ  ಸಂದಿ ನಲ್ಲಿ ಹರಿಯುತ್ತಲೇ ಇರುವ ನದಿಯ ಸೆಲೆಗಳು ಶೋಲಾದಂತಹ ಹುಲ್ಲಿನ ಹಸಿರು ಜತೆಗೆ ಎತ್ತರೆತ್ತರದ ಕಲ್ಲಿನ ಪರ್ವತ ಶಿಖರಗಳು ರಾಕ್ ಕ್ಲೈಮಿಂಗ್‌ಗೆ ಆಹ್ವಾನಿಸುತ್ತವೆ. ಸ್ಥಳೀಯರ ಆಸ್ಥೆ ಮತ್ತು ಆಡಳಿತ ವೈಖರಿಯಿಂದಾಗಿ ಸ್ವಚ್ಛತೆಯನ್ನು ಕಾಯ್ದುಕೊಂಡಿ ರುವ ಇದನ್ನು ಈಶಾನ್ಯ ರಾಜ್ಯಗಳ ಹೂವಿನ ಕಣಿವೆ ಅಥವಾ ಹಸಿರು ಕಣಿವೆ ಎಂಬ ಉಪನಾಮದಿಂದಲೂ ಕರೆಯುತ್ತಾರೆ. ಝುಕೋ ವ್ಯಾಲಿ ಪ್ರಯಾಸವಲ್ಲದ ಪ್ರವಾಸದ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಸ್ವಲ್ಪ ಬಗ್ಗುತ್ತಿರಾದರೆ ಝುಕೋ ಕೈಗೆಟುಕುವುದರಲ್ಲಿ ಸಂದೇಹವಿಲ್ಲ. ತಿರುಗಲಿಕ್ಕೇ ಹೋದ ಮೇಲೆ ಅಲೆಮಾರಿಗೆ ಅದೊಂದು ದೊಡ್ಡ ಈಡೇ?

error: Content is protected !!