Friday, 2nd December 2022

ಬೇಕು ಪದವೀಧರರನ್ನಲ್ಲ ಪಂಡಿತರನ್ನು ಹುಟ್ಟಿಸುವ ಶಿಕ್ಷಣ

ಚಕ್ರವ್ಯೂಹ

ತೈತ್ತಿರೀಯ ಉಪನಿಷತ್ತಿನಲ್ಲಿ ಒಂದು ಮಾತು ಬರುತ್ತದೆ: ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು, ಸ್ವಾಧ್ಯಾಯವನ್ನೆಂದೂ ಕೈಬಿಡಬೇಡ. ಗುರುದಕ್ಷಿಣೆಯನ್ನು ಕೊಟ್ಟ ಮೇಲೆ ಪ್ರಜಾತಂತುವನ್ನು ಕತ್ತರಿಸಬೇಡ. ಹನ್ನೆರಡು ವರ್ಷಗಳ ಗುರುಕುಲ ಶಿಕ್ಷಣ ಮುಗಿಸಿ ಹೊರಟಿರುವ ಸ್ನಾತಕನಿಗೆ ಗುರುಗಳು ಹೇಳುವ ಮಾತಿದು. ಸರ್ಟಿಫಿಕೇಟು ಕೈಗೆ ಸಿಕ್ಕಿದೊಡನೆ ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಮರೆಯಬೇಡ.

ಅವಿಚ್ಛಿನ್ನ ಪರಂಪರೆಯ ಕೊಂಡಿಯಾಗಿ ನೀನೂ ನಿಲ್ಲು; ನಿನ್ನ ಮುಂದಿನ ತಲೆಮಾರನ್ನು ಬೆಳೆಸುವ, ಅವರಿಗೆ ಶಿಕ್ಷಣ ಕೊಡುವ ಜವಾಬ್ದಾರಿಯನ್ನು ನೀನು ವಹಿಸಿಕೋ ಎಂಬ ಗುರುವಿನ ಪ್ರಾರ್ಥನೆಯ ಬೀಜರೂಪವೇ ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ ಎಂಬ ಮಾತು. ಪ್ರಾಚೀನ ಭಾರತದಲ್ಲಿ ಗುರುಕುಲ ಪದ್ಧತಿ ಇತ್ತೆಂಬುದು ನಮಗೆ ಗೊತ್ತು. ಯಾಕೆಂದರೆ ನಮ್ಮ ಪಠ್ಯಪುಸ್ತಕಗಳಲ್ಲಿ ಅದನ್ನು ಬರೆದು ಓದಿಸಿ ಉರುಹೊಡೆಸಿದ್ದಾರೆ. ಆದರೆ ಅವು ಹೇಗಿದ್ದವು ಎಂಬ ವಿವರಣೆಯನ್ನು ಮಾತ್ರ ಪಠ್ಯಗಳಲ್ಲಿ ಕೊಟ್ಟಿಲ್ಲ.

ರಾಮಾಯಣ, ಮಹಾಭಾರತಗಳ ಮೇಲಿನ ರಮಾನಂದ ಸಾಗರರ ಸೀರಿಯಲ್‍ಗಳನ್ನು ನೋಡಿ ಗುರುಕುಲಗಳ ಬಗ್ಗೆ ನಾವು ನಮ್ಮದೇ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿz್ದÉೀವೆ ಅಷ್ಟೆ. ಕಾಡಿನ ಮಧ್ಯದಲ್ಲೊಂದು ಪುಟ್ಟ ಕುಟೀರ, ನೋಡಿದರೆ ಸಾವಿರ ವರ್ಷವಾದಂತಿರುವ ಜರಾಜೀರ್ಣ ಗುರುವರ್ಯರು, ಅಂಗಳದಲ್ಲಿ ಸಂಚರಿಸುವ ಜಿಂಕೆ – ಹಂಸಗಳು, ಯಜ್ಞಯಾಗಗಳ ಧೂಮಲೀಲೆಯ ಮಧ್ಯೆ ತಾಳೆಗರಿಗಳನ್ನು ಮುಂದಿಟ್ಟುಕೊಂಡು ಮಂತ್ರಗಳನ್ನು ಉರುಹೊಡೆಯುವ ವಿದ್ಯಾರ್ಥಿಗಳು – ಇದು ಗುರುಕುಲ, ಆಶ್ರಮಗಳ ಬಗ್ಗೆ ನಮಗಿರುವ ದಿವ್ಯ ಕಲ್ಪನೆ.

ಆದರೆ ಗುರುಕುಲಗಳಲ್ಲಿ ಏನೆಲ್ಲ ವಿದ್ಯಾಭ್ಯಾಸ ನಡೆಯುತ್ತಿತ್ತೆಂಬುದಕ್ಕೆ ವಾತ್ಸಾಯನರು ಗೀತಂ, ನೃತ್ಯಂ, ವಾದ್ಯಂ, ಲಿಪಿಜ್ಞಾನಂ, ವಚನಂ ಚೋದಾರಂ, ಚಿತ್ರವಿಧಿಃ, ಪುಸ್ತಕಕರ್ಮ, ಪತ್ರಚ್ಛೇದ್ಯಂ, ಮಾಲ್ಯವಿಧಿಃ, ಆಸ್ವಾದ್ಯವಿಧಾನಮ್, ರತ್ನಪರೀಕ್ಷಾ, ಸೀವ್ಯಮ್, ರಂಗಪರಿಜ್ಞಾನಮ್, ಉಪಕರಣಕ್ರಿಯಾ ಎನ್ನುತ್ತ 24 ವಿದ್ಯೆಗಳ ಪಟ್ಟಿಯನ್ನೇ ಕೊಟ್ಟಿದ್ದಾರೆ. ಚತುರ್ವೇದಗಳ ಜೊತೆ ಕ್ಷತ್ರವಿದ್ಯೆ, ನಕ್ಷತ್ರವಿದ್ಯೆಗಳನ್ನು ಕೂಡ ಗುರುಕುಲದಲ್ಲಿ ಕಲಿಸಲಾಗುತ್ತಿತ್ತು ಎಂಬುದಕ್ಕೆ ಛಾಂದೋಗ್ಯದ ಸನತ್ಕುಮಾರ-ನಾರದ ಸಂವಾದದಲ್ಲಿ ಸೂಚನೆ ಸಿಗುತ್ತದೆ. ಪುರಾಣನ್ಯಾಯಮೀಮಾಂಸಾ ಧರ್ಮಶಾಸ್ತ್ರಾಂಗಮಿಶ್ರಿತಾಃ | ವೇದಾಃ ಸ್ಥಾನಾನಿ ವಿದ್ಯಾನಾಂ ಧರ್ಮಸ್ಯ ಚ ಚತುರ್ದಶ || ಎಂದು ಹೇಳುವ ಯಾಜ್ಞವಲ್ಕ್ಯಸ್ಮತಿ ಪುರಾಣಕಾಲದಲ್ಲಿ 14 ವಿದ್ಯೆಗಳನ್ನು ಗುರುಕುಲದಲ್ಲಿ ಮುಖ್ಯವಾಗಿ ಕಲಿಸಲಾಗುತ್ತಿತ್ತು ಎನ್ನುತ್ತದೆ.

ತಕ್ಷಶಿಲೆಯಲ್ಲಿ ಪ್ರಾಧ್ಯಾಪಕರೂ ಆಗಿದ್ದ ಚಾಣಕ್ಯರು ಮುಖ್ಯವಾಗಿ ನಾಲ್ಕು ಬಗೆಯ ವಿದ್ಯೆಗಳುಂಟು: ಆನ್ವೀಕ್ಷಿಕೀ (ತರ್ಕ, ನ್ಯಾಯ, ಮೀಮಾಂಸೆ ಮುಂತಾದವು), ತ್ರಯೀ (ಮೂರು ವೇದಗಳು), ವಾರ್ತಾ (ಕೃಷಿ, ವ್ಯಾಪಾರ ಮುಂತಾದ ವೃತ್ತಿಪರ ಶಿಕ್ಷಣ), ದಂಡನೀತಿ (ಅರ್ಥಶಾಸ್ತ್ರ ಮತ್ತು ಪೆÇಲಿಟಿಕಲ್ ಸೈನ್ಸ್) ಎಂದು ಸೂಚಿಸುತ್ತಾರೆ. ಇವೆಲ್ಲದರ ಒಟ್ಟರ್ಥ ಇಷ್ಟೆ: ಗುರುಕುಲ ಎಂಬುದು ಪ್ರಾಚೀನ ಭಾರತದಲ್ಲಿ, ಮನುಷ್ಯನಿಗೆ ಬೇಕಿರುವ ಎಲ್ಲ ಬಗೆಯ ವಿದ್ಯೆಗಳನ್ನೂ ಕೊಡುವ ಸ್ಥಳವಾಗಿತ್ತು.

ಗುರುಗಳೆಂಬವರು ಶಾಸ್ತ್ರಪುರಾಣಗಳ ತಾಡವೋಲೆಗಳೊಳಗೆ ಮುಳುಗಿದ ಪುಸ್ತಕದ ಹುಳು ಆಗಿರಲಿಲ್ಲ. ಹಲವು ವರ್ಷಗಳ ಕಾಲ ಕುದುರೆಗಳ ಜೊತೆಗಿದ್ದು ಅಶ್ವಶಾಸ್ತ್ರ ಬರೆದ ಶಾಲಿಹೋತ್ರ, ಆನೆಗಳ ಜೊತೆ ಹಲವು ವರ್ಷಗಳನ್ನು ಕಳೆದು ಗಜಶಾಸ್ತ್ರ ಬರೆದ ಪಾಲಕಾಪ್ಯ ಮುಂತಾದವರನ್ನು ಕೂಡ ಆ ಕಾಲದಲ್ಲಿ ಋಷಿಗಳೆಂದೇ ಕರೆಯುತ್ತಿದ್ದುದು. ವೇದವೇದಾಂಗಗಳು ಬೇರೆ, ಕಾಮಾರ್ಥಶಾಸ್ತ್ರಗಳು ಬೇರೆ ಎಂದು ಋಷಿಗಳು ಬದುಕನ್ನು ವಿವಿಧ ಕಂಪಾರ್ಟ್‍ಮೆಂಟುಗಳಾಗಿ ಕತ್ತರಿಸಿಕೊಂಡು ಬದುಕಲಿಲ್ಲ. ಬದುಕನ್ನು ಇಡಿಯಾಗಿ ಆಸ್ವಾದಿಸಿದರು. ಬದುಕಿನ ರಹಸ್ಯಗಳನ್ನು ತಾವು ಕಂಡುಂಡಂತೆ ತಮ್ಮ ಶಿಷ್ಯರಿಗೆ ಕಲಿಸಿದರು.

ಮೆಕಾಲೆಯ ಶಿಕ್ಷಣಪದ್ಧತಿ ಬಂದ ಮೇಲೆ ಬ್ರಿಟಿಷರು ಮಾಡಿದ ಮೊದಲ ಕೆಲಸ ಎಂದರೆ ದೇಶದಲ್ಲಿನ್ನೂ ಕಾರ್ಯಾಚರಿಸುತ್ತಿದ್ದ ಸಾವಿರಗಟ್ಟಲೆ ಗುರುಕುಲಗಳನ್ನು ಬಲವಂತವಾಗಿ ಮುಚ್ಚಿಸಿದ್ದು. 1830ರಿಂದ ಮುಂದಿನ ಎರಡು ದಶಕಗಳಲ್ಲಿ 15,000ಕ್ಕೂ ಹೆಚ್ಚು ದೊಡ್ಡ ಗುರುಕುಲಗಳಿಗೆ ಬೀಗ ಜಡಿಯಲಾಯಿತು. ಆ ಜಾಗಗಳಲ್ಲಿ, ಆಕಾಶಕ್ಕೆ ಏಣಿ ಹಾಕಿದಂತೆ ಕಾಣುವ ದೊಡ್ಡ ಕಟ್ಟಡಗಳನ್ನೆಬ್ಬಿಸಿ ಅಲ್ಲಿ ಛಾಸರ್, ಶೇಕ್ಸ್‍ಪಿಯರುಗಳನ್ನು ವಿದ್ಯಾರ್ಥಿಗಳಿಗೆ ಬಲವಂತವಾಗಿ ಓದಿಸಲಾಯಿತು. ಹೀಗೆ ಬಲವಂತದ ಮಾಘಸ್ನಾನದಂತೆ ಶುರುವಾದ ಶೈಕ್ಷಣಿಕ ಕ್ರಾಂತಿ ಕಾಲಕ್ರಮೇಣ ದುಷ್ಫಲ ಕೊಡದೇ ಬಿಡಲಿಲ್ಲ. 1947ರ ಹೊತ್ತಿಗೆ ಇಂಗ್ಲಿಷ್ ಶಿಕ್ಷಣ ಮತ್ತು ಶಿಕ್ಷಣಕ್ರಮಕ್ಕೆ ಜೈಕಾರ ಹಾಕುವ ದೊಡ್ಡ ಕೂಪಮಂಡೂಕಗಳ ಪಡೆಯೇ ಸಿದ್ಧವಾಯಿತು. ಪರಂಗಿಗಳು ಕೊಟ್ಟ ಆದೇಶಕ್ಕೆಲ್ಲ ಜೀ ಹುಜೂರ್ ಎನ್ನುವ ಕಾರಕೂನರ ಪಡೆಯೂ ತಯಾರಾಯಿತು. ಸಂಸ್ಕøತ ಅಟ್ಟಕ್ಕೆ ಹೋಯಿತು, ಗುರುಕುಲಪದ್ಧತಿ ಚಟ್ಟ ಹತ್ತಿತು.

ಎಲ್ಲವೂ ಇಂಗ್ಲಿಷಿನಲ್ಲಿದೆ, ಇಂಗ್ಲಿಷೇ ಈ ಜಗತ್ತನ್ನಾಳುವ ಭಾಷೆ, ಇದನ್ನು ಕಲಿತರೆ ಜಗತ್ತನ್ನೇ ಗೆದ್ದಂತೆ ಎಂಬ ಭ್ರಮೆ ಹತ್ತಿಸುವ ಸಾಮೂಹಿಕ ಭಜನೆಯನ್ನು ಮಾಡಿಸಲಾಯಿತು. ಶಾಲೆಗಳಲ್ಲಿ ಧೋತರ, ಶಲ್ಯಗಳು ಕಾಣೆಯಾದವು, ಜುಟ್ಟುಗಳಿಗೆ ಕತ್ತರಿ ಬಿದ್ದವು, ಕ್ರಾಪುಕೇತನಗಳೆದ್ದವು, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮಥ್ರ್ಯ-ಸ್ವಭಾವಕ್ಕೆ ತಕ್ಕಂತೆ ಶಿಕ್ಷಣ ಕೊಡುವ ಅನನ್ಯತೆ ಮಾಯವಾಗಿ ಎಲ್ಲರಿಗೂ ಒಂದೇ ಶಿಕ್ಷಣ, ಒಂದೇ ಪರೀಕ್ಷೆ ಎಂಬ ಪದ್ಧತಿ ಜಾರಿಗೆ ಬಂತು. ಸಮಾನತೆಯ ಹೆಸರಲ್ಲಿ ಕೈಯ ಎಲ್ಲ ಬೆರಳುಗಳನ್ನೂ ಒಂದೇ ಅಳತೆಗೆ ಕತ್ತರಿಸಲಾಯಿತು.

ಇದೆಲ್ಲ ನಮಗೆ ಗೊತ್ತಿಲ್ಲz್ದÉೀನಲ್ಲ. ಇದೆಲ್ಲ ಗೊತ್ತಿದ್ದೂ ಇದನ್ನು ಬದಲಿಸಲಾಗದ ಅನಿವಾರ್ಯತೆಯಲ್ಲಿ ನಿಡುಸುಯ್ಯುತ್ತಿದ್ದಾರೆ ಹಲವರು. ಸಂಸ್ಕøತವನ್ನು ಕಳೆದುಕೊಂಡೆವು ನಿಜ, ಆದರೆ ಅದಕ್ಕೆ ಮರುಜೀವ ಕೊಡುವುದು ಹೇಗೆ? ಗುರುಕುಲ ಪದ್ಧತಿಯನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಪುನರ್ ಸೃಷ್ಟಿಸುವುದು ಹೇಗೆ? ನಮಗೆ ಗೊತ್ತಿಲ್ಲ.

ಎರಡು-ಮೂರು ಸಾವಿರ ವರ್ಷಗಳಿಂದ ಉಳಿದುಬಂದಿದ್ದ, ಮತ್ತೀಗ ಅಳಿವಿನ ಅಂಚಿಗೆ ಬಂದು ನಿಂತಿರುವ ವಿಶಿಷ್ಟ ಶಿಕ್ಷಣ ಪರಂಪರೆಯನ್ನು ಉಳಿಸಿಕೊಳ್ಳುವುದು ಹೇಗೆ? ಇಂದಿನ ಆಧುನಿಕ ಯುಗಕ್ಕೆ ಪ್ರಸ್ತುತವೆನ್ನಿಸುವಂತೆ ವೇದ-ವೇದಾಂತಗಳ ಅಧ್ಯಯನ-ಅಧ್ಯಾಪನಗಳ ಸಂಸ್ಕøತಿಯನ್ನು ಮರಳಿ ಕಟ್ಟುವುದು ಹೇಗೆ? ಅದೂ ತಿಳಿದಿಲ್ಲ. ಆಂಧ್ರಪ್ರದೇಶದ ತೆನಾಲಿ ಎಂಬ ಊರಲ್ಲಿದ್ದ ಭಾಗವತುಲ ಆಂಜನೇಯ ಶರ್ಮರಿಗೂ ಇದ್ದದ್ದು ಇದೇ ಚಿಂತೆ. ಒಂದಾನೊಂದು ಕಾಲದಲ್ಲಿ ಶಾತವಾಹನರಿಂದ ಆಳಿಸಿಕೊಂಡ, ಗೇಹೇ ಗೇಹೇ ಪಂಡಿತಾಃ ಎಂಬಂತಿದ್ದ ಊರಿನಲ್ಲಿ ಈಗ ಸಂಸ್ಕøತ ಓದಲು ಬರೆಯಲು ಬರುವುದೇ ಬೆರಳೆಣಿಕೆಯಷ್ಟು ಮಂದಿಗೆ ಎಂಬಂಥ ಸನ್ನಿವೇಶ! ವಿಜಯನಗರ ಸಾಮ್ರಾಜ್ಯದ ಉತ್ತುಂಗದ ಕಾಲದಲ್ಲಿ ರಾಜಾಶ್ರಯ ಪಡೆದಿದ್ದ ಪಟ್ಟಣವದು.

ಊರಿಗೂರೇ ಅಗ್ರಹಾರವೋ ಎಂಬಂತೆ ನಡೆಯುತ್ತಿದ್ದ ವೇದಪಾರಾಯಣ, ಶಾಸ್ತ್ರಾಧ್ಯಯನ. ರಾಮಕೃಷ್ಣನ ಹುಟ್ಟೂರೆಂದ ಮೇಲೆ ಕೇಳಬೇಕೆ! ಅಂಥ ಊರಲ್ಲಿ ದುರ್ಬೀನು ಹಿಡಿದು ಮನೆ ಮನೆಗಳನ್ನು ಹುಡುಕಿ ಬಂದ ಆಂಜನೇಯ ಶರ್ಮರಿಗೆ ಸಿಕ್ಕಿದ್ದು ಮೂರೇ ಮೂರು ಸಂಸ್ಕøತ ವಿದ್ವಾಂಸರು. ಅವರಲ್ಲೊಬ್ಬರು ಇವರೇ! ಇವರ ಹೊರತಾಗಿ ಇಡೀ ಊರಲ್ಲಿದ್ದವರು ಇಬ್ಬರು ಮಾತ್ರ. ಎಲ್ಲರಿಗೂ ವಯಸ್ಸು 70 ದಾಟಿದೆ.

ಕಲಿತ ಶಾಸ್ತ್ರವನ್ನು ಉಚಿತವಾಗಿ ಧಾರೆಯೆರೆಯುತ್ತೇವೆಂದರೂ ಪಡೆಯುವವರಿಲ್ಲ. ಮನೆಗಳು ಭಣಭಣ. ಗೂಡು ಬಿಟ್ಟ ಹಕ್ಕಿಗಳೆಲ್ಲ ದೂರದೂರುಗಳನ್ನು ಸೇರಿವೆ. ಹೆಚ್ಚಿನವು ಐಟಿ ಉದ್ಯಾನದಲ್ಲಿ ಸೇಬು, ಚೆರ್ರಿ-ಬೆರ್ರಿಗಳನ್ನು ತಿನ್ನುತ್ತಿವೆ. ಸಂಸ್ಕøತದಲ್ಲಿರುವ ಅನಘ್ರ್ಯ ಸಾಹಿತ್ಯರಾಶಿಯನ್ನು ಇಲ್ಲಿ ಕೀಲುಮುರಿದ ಕಪಾಟುಗಳಲ್ಲಿ ಪುಸ್ತಕದ ಹುಳುಗಳು, ಗೆದ್ದಲುಗಳು ತಿಂದು ತೇಗುತ್ತಿವೆ. ಇದು ತೆನಾಲಿಯೊಂದರ ಕತೆಯಲ್ಲ, ದೇಶದ ಉದ್ದಗಲಕ್ಕೂ ಇದೇ ಕತೆ-ವ್ಯಥೆ. ಪಂಡಿತ ಪರಂಪರೆ ನಶಿಸುತ್ತಿದೆ. ಸಂಸ್ಕøತ ವಿದ್ವಾಂಸರ ಸಂಖ್ಯೆ ಬೆರಳೆಣಿಕೆಗೆ ಇಳಿಯುತ್ತಿದೆ. ಈ ಪರಿಸ್ಥಿತಿಯನ್ನು ಕಿಂಚಿತ್ತಾದರೂ ಬದಲಿಸುವುದು ಹೇಗೆ ಎಂಬ ಚಿಂತೆ ಆಂಜನೇಯ ಶರ್ಮರಿಗೆ ಗುಂಗಿಹುಳದಂತೆ ಕೊರೆಯತೊಡಗಿತು.

ಬಹುಶಃ ಅವರಿಗೆ ಶೃಂಗೇರಿಯಲ್ಲಿ ನಡೆಯುತ್ತಿದ್ದ ಶ್ರೀ ಮಹಾಗಣಪತಿ ವಾಕ್ಯಾರ್ಥ ವಿದ್ವತ್ಸಭೆಯ ಬಗ್ಗೆ ತಿಳಿದಿತ್ತೇನೋ. ಪ್ರತಿ ವರ್ಷದ ಭಾದ್ರಪದ ಮಾಸದ ಗಣೇಶ ಚತುರ್ಥಿಯಿಂದ ಮುಂದಿನ ಹುಣ್ಣಿಮೆಯವರೆಗೆ 12 ದಿನ ನಡೆಯುವ ಈ ವಾಕ್ಯಾರ್ಥ ಸಭೆಗೆ ದೇಶದ ನಾನಾ ಮೂಲೆಗಳಿಂದ ಸಂಸ್ಕøತ ವಿದ್ವಾಂಸರು ಬರುವುದು ಕ್ರಮ. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀತೀರ್ಥರಿಂದ ಪ್ರಾರಂಭವಾದ ಈ ವಾಕ್ಯಾರ್ಥ ಸಭೆ ಅಂದಿನಿಂದ ಇಂದಿನವರೆಗೆ ಆನೂಚಾನವಾಗಿ ನಡೆದುಬಂದಿದೆ. ಹನ್ನೆರಡು ದಿನಗಳ ಪರ್ಯಂತ, ಪ್ರತಿ ದಿನವೂ ಮೂರ್ನಾಲ್ಕು ತಾಸಿನಂತೆ ಇಲ್ಲಿ ಸಂಸ್ಕøತ ಗ್ರಂಥಗಳ ವಿಶ್ಲೇಷಣೆ, ಶಾಸ್ತ್ರಾರ್ಥವಿಷಯಕ ಉದ್ಬೋಧಕ ಚರ್ಚೆ-ಸಂವಾದ ನಡೆಯುತ್ತದೆ.

ಶೃಂಗೇರಿಯ ಸ್ವಾಮಿಗಳz್ದÉೀ ಅಧ್ಯಕ್ಷತೆ. ಪಂಡಿತರಿಗೆ ಬಗೆಹರಿಯದ ಶಾಸ್ತ್ರಸಮಸ್ಯೆಗಳು ಉದ್ಭವಿಸಿದಾಗ ಅದಕ್ಕೆ ಸ್ವಾಮೀಜಿಗಳz್ದÉೀ ಪರಿಹಾರ. ಸಂಸ್ಕøತ ಮೃತಭಾಷೆ ಎಂದು ಹೇಳುವವರು ಈ ಸಭೆಯಲ್ಲಿ ಒಮ್ಮೆ ಅಡ್ಡಾಡಿ ಪಾಂಡಿತ್ಯದ ಗಂಧವನ್ನು ಆಘ್ರಾಣಿಸಿದರೂ ಸಾಕು, ವಿನಯ ವಿಧೇಯತೆಗಳಿಂದ ಬಾಗಿ ತಮ್ಮ ಪೂರ್ವಗ್ರಹದ ಮಾತನ್ನು ವಾಪಸು ತೆಗೆದುಕೊಳ್ಳಬಹುದು! ಇಂಥ ಸಭೆಯೊಂದು ಪ್ರತಿ ವರ್ಷ ನಡೆಯುವುದರ ಬಗ್ಗೆ ಚೆನ್ನಾಗಿಯೇ ತಿಳಿದಿದ್ದ ಆಂಜನೇಯ ಶರ್ಮರಿಗೆ ಈ ಬಗೆಯ ವಿದ್ವತ್ಸಭೆಯಲ್ಲಿ ಭಾಗವಹಿಸಬಲ್ಲ ಯುವಕರನ್ನು ತಯಾರು ಮಾಡುವ ಶಿಕ್ಷಣವನ್ನು ತಾನು ಕೊಡಬೇಕೆಂದು ಅನ್ನಿಸಿದ್ದಿರಬೇಕು.

ಅದನ್ನು ಗುರುಕುಲ ಮಾದರಿಯಲ್ಲಿ ಕೊಡಬೇಕು, ಕೊಟ್ಟ ಮೇಲೆ ವಿದ್ಯಾರ್ಥಿಗಳು ಎಷ್ಟನ್ನು ತಮ್ಮೊಳಗೆ ಇಳಿಸಿಕೊಂಡಿದ್ದಾರೆಂಬುದರ ಪರೀಕ್ಷೆಯೂ ಆಗಬೇಕು. ಆದರೆ ಕೃತ-ತ್ರೇತಾ ಯುಗಗಳಂತೆ ಈಗ ಕಾಡಿನ ಮಧ್ಯದಲ್ಲಿ ಕುಟೀರ ಕಟ್ಟಿ ಗುರುಕುಲ ಶಿಕ್ಷಣ ಕೊಡುತ್ತೇನೆಂದರೆ ಯಾರು ಬರುತ್ತಾರೆ? ಕಲಿವವರಿಗಾದರೂ ಕಲಿತ ಮೇಲೆ ಮುಂದೇನು ಎಂಬ ಅನಿಶ್ಚಿತತೆ ಉಳಿದರೆ ಕಲಿತದ್ದರ ಸಾರ್ಥಕತೆ ಏನು?

ಆಂಜನೇಯ ಶರ್ಮರು ಯೋಚಿಸಿದರು. ಕೊನೆಗೊಂದು ವಿಶಿಷ್ಟ ಮಾದರಿಯನ್ನು ತಾವೇ ಕಟ್ಟಿದರು. ಅದರಂತೆ ತೆನಾಲಿ ಪರೀಕ್ಷೆಗಳು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತು. ದೇಶದ ಅಲ್ಲಲ್ಲಿ ಚದುರಿಹೋಗಿರುವ ಹತ್ತಾರು ಸಂಸ್ಕøತ ವೇದ-ವೇದಾಂತ ವಿದ್ವಾಂಸರನ್ನು ಆರಿಸಲಾಯಿತು. ಅವರು ಪ್ರತಿಯೊಬ್ಬರೂ ತಮ್ಮ ಬಳಿ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಗುರುಕುಲ ಮಾದರಿಯಲ್ಲಿ ಶಿಕ್ಷಣ ಕೊಟ್ಟು ತಯಾರು ಮಾಡಬೇಕೆಂದು ಪ್ರಾರ್ಥಿಸಲಾಯಿತು. ಗುರುವಿಗೂ ಶಿಷ್ಯನಿಗೂ ಕೊಡುಗೈದಾನಿಗಳಿಂದ ಮಾಸಿಕ ವೇತನದ ಏರ್ಪಾಟಾಯಿತು.

ಈ ಗುರುಶಿಷ್ಯರು ವರ್ಷದಲ್ಲೆರಡು ಸಲ ನಿರ್ದಿಷ್ಟ ದಿನಗಳಂದು ತೆನಾಲಿಗೆ, ಆಂಜನೇಯ ಶರ್ಮರ ಮನೆಗೆ ಬರಬೇಕು. ಅಲ್ಲಿ ವಿದ್ಯಾರ್ಥಿಗಳು ಅದುವರೆಗೆ ಕಲಿತದ್ದರ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಗಳಿಗೆ ಇಂಥಾz್ದÉೀ ಚೌಕಟ್ಟೆಂಬ ರೂಪುರೇಷೆಯೇನೂ ಇಲ್ಲ. ಕೆಲವು ಮೌಖಿಕ, ಕೆಲವು ಲಿಖಿತ. ಶ್ರೌತದಂಥ ವಿಭಾಗದಲ್ಲಿ ಕೆಲವು ಪರೀಕ್ಷೆಗಳು ಪ್ರಾಕ್ಟಿಕಲ್ ಮಾದರಿಯವು. ಒಟ್ಟಲ್ಲಿ ವಿದ್ಯಾರ್ಥಿಯ ಅದುವರೆಗಿನ ಸಂಚಿತ ಜ್ಞಾನವನ್ನೆಲ್ಲ ಒರೆಗೆ ಹಚ್ಚಿ, ತಿಕ್ಕಿ ತಿಕ್ಕಿ ಚಿನ್ನವನ್ನು ಹೊಳೆಯಿಸುವ ಕೆಲಸವದು. ಹೀಗೆ ಏಳು ವರ್ಷ ಪರ್ಯಂತ, ಒಟ್ಟು 14 ಸೆಮಿಸ್ಟರ್‍ಗಳನ್ನು ಯಶಸ್ವಿಯಾಗಿ ಮುಗಿಸಿದವರಿಗೆ ಪದವಿ. ಪದವಿ ಮುಗಿಸಿದ ವಿದ್ಯಾರ್ಥಿಗೂ ಶಿಕ್ಷಕರಿಗೂ ವಿಶೇಷ ಸಂಭಾವನೆ. ಆ ಶಿಷ್ಯ ಮುಂದೆ ತಾನೂ ಮತ್ತಷ್ಟು ವಿದ್ಯಾರ್ಥಿಗಳನ್ನು ತಯಾರು ಮಾಡಬಲ್ಲ ಅರ್ಹತೆ ಪಡೆದನೆಂದು ಲೆಕ್ಕ. ಹೀಗೆ, ನದಿಯಲ್ಲಿ ನೀರು ನಿರಂತರ ಹರಿಯುತ್ತಿದ್ದರೆ ಕ್ಷಾಮ ಬಾರದೆಂಬ ದೂರದ ಲೆಕ್ಕಾಚಾರ.

ಮೊದಲ ಕೆಲ ವರ್ಷಗಳೇನೋ ದಾನಿಗಳು ಸಿಕ್ಕರು. ಆಚಾರ್ಯರನ್ನೂ ಅವರಿಗೆ ತಕ್ಕ ಶಿಷ್ಯರನ್ನೂ ಹೊಂದಿಸಿಕೊಂಡದ್ದಾಯಿತು. ಆದರೆ 2006ರಲ್ಲಿ ಅಂಥ ದೇಣಿಗೆಯ ಕೈ ಹಿಂದಕ್ಕೆ ಹೋಯಿತು. ಶಿಷ್ಯವೇತನ, ಶಿಕ್ಷಕವೇತನಗಳಿಲ್ಲದೆ ಇಡೀ ಯೋಜನೆಯೇ ಅರ್ಧಕ್ಕೆ ನಿಲ್ಲುವಂಥ ದುರ್ಭರ ಪರಿಸ್ಥಿತಿ ಒದಗಿಬಂತು. ಆಗ ಕಂಚಿಯ ಕಾಮಕೋಟಿ ಪೀಠದ ಸ್ವಾಮಿ ಜಯೇಂದ್ರ ಸರಸ್ವತಿಗಳು ಮುಂದೆ ಬಂದರು.

ಕುಸಿಯುವ ಮನೆಯಗಳ ಹಿಡಿದುನಿಲ್ಲಿಸಿ, ಆಗಲಿದ್ದ ಅನಾಹುತ ತಪ್ಪಿಸಿದರು. ತಾವೇ ಮುಂದಿನ ಎಲ್ಲ ಶಿಷ್ಯ-ಶಿಕ್ಷಕರ ವೇತನದ ಜವಾಬ್ದಾರಿ ಹೊರುತ್ತೇನೆಂಬ ಭರವಸೆ ಕೊಟ್ಟರು. ನಡುದಾರಿಯಲ್ಲಿ ಬಿರುಗಾಳಿಗೆ ಸಿಕ್ಕಿ ಅತ್ತಿತ್ತ ಓಲಾಡುತ್ತಿದ್ದ ದೋಣಿ ಮತ್ತೆ ತನ್ನ ಸಮತೋಲನ ವಾಪಸು ಪಡೆದಂತಾಯಿತು. ಅಂದಿನಿಂದ ತೆನಾಲಿ ಪರೀಕ್ಷೆಗಳಿಗೆ `ಶ್ರೀ ಕಂಚಿ ವೇದವೇದಾಂತಶಾಸ್ತ್ರಸಭಾ’ ಎಂಬ ಹೆಸರು ಬಿತ್ತು. ಏಳು ವರ್ಷಗಳ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಕಂಚಿಯ ಮಠದಲ್ಲಿ ಮಹಾಪರೀಕ್ಷೆ ನಡೆಸಿ ಕೊನೆಗೆ ಉತ್ತೀರ್ಣರಾದವರಿಗೆ ಮಠದಿಂದಲೇ ಪದವಿಪತ್ರಗಳನ್ನು ವಿತರಿಸುವ ವ್ಯವಸ್ಥೆಯಾಯಿತು.

ಆಂಜನೇಯ ಶರ್ಮರ ಮನೆಯಲ್ಲಿ ತೆನಾಲಿ ಪರೀಕ್ಷೆಗಳ ಕಲ್ಪನೆಗೆ ಕಾರ್ಯರೂಪ ಸಿಕ್ಕಿದ್ದು 1994ರ ಏಪ್ರಿಲ್ 1ರಂದು. ತರ್ಕ, ಮೀಮಾಂಸ, ವೇದಾಂತ, ವ್ಯಾಕರಣ, ಪಾಣಿನಿಯ ಅಷ್ಟಾಧ್ಯಾಯಿ, ಅದ್ವೈತ ಸಿದ್ಧಿ… ಹೀಗೆ ವಿಷಯಗಳ ಹಂಚಿಕೆ. ಒಂದೊಂದು ವಿಭಾಗದಲ್ಲಿ ಓದಿ ಪ್ರವೀಣನಾಗಬೇಕಾದರೂ ಕನಿಷ್ಠ ಏಳು ವರ್ಷಗಳ ಕಠಿಣ ಶಿಕ್ಷಣ ಅತ್ಯವಶ್ಯ. ಪರೀಕ್ಷೆಯ ನಿಬಂಧನೆಗಳು ಕಠಿಣ. ಮೌಖಿಕ, ಲಿಖಿತ ಎರಡರಲ್ಲೂ ಕನಿಷ್ಠ ಶೇಕಡಾ 50 ಅಂಕಗಳನ್ನು ಪಡೆಯಲೇಬೇಕೆಂಬ ಷರತ್ತು.

ಅದಕ್ಕಿಂತ ಕಡಿಮೆ ಅಂಕಗಳು ಬಂದರೆ, ಪರೀಕ್ಷೆಯನ್ನು ಮತ್ತೊಮ್ಮೆ ಎದುರಿಸಬೇಕು. ಒಂದರಲ್ಲಿ ಹೆಚ್ಚು ಬಂದು, ಇನ್ನೊಂದರಲ್ಲಿ ಅಂಕ ಕಳೆದುಕೊಂಡರೆ ಅಲ್ಲಿಂದಿಲ್ಲಿಗೆ ಅಂಕಗಳನ್ನು ಹಾರಿಸಿ ಸರಾಸರಿ ತೆಗೆದು ಪಾಸು ಮಾಡುವ ಕ್ರಮ ಇಲ್ಲ! ಅನುಕ್ರಮವಾಗಿ ಎರಡು ಪರೀಕ್ಷೆಗಳಿಗೆ ಗೈರಾದರೆ ಆ ವಿದ್ಯಾರ್ಥಿಗಳನ್ನು ಮುಂದಿನ ಎಲ್ಲ ಪರೀಕ್ಷೆಗಳಿಂದ ಹೊರಗಿಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸರಿಯಾಗಿ ತಯಾರು ಮಾಡದ ಶಿಕ್ಷಕರ ಮೇಲೇನೂ ಮೃದುಧೋರಣೆ ಇಲ್ಲ. ವಿದ್ಯಾರ್ಥಿಗಳಿಗೆ ಕೊಡುವ ಶಿಕ್ಷೆಗಳು ಸಣ್ಣ ಬಾರುಕೋಲಿನವಾದರೆ ಶಿಕ್ಷಕರಿಗೆ ದೊಡ್ಡ ಬಾರುಕೋಲಿನ ಪೆಟ್ಟು! ಪರಂಪರೆ ಎಂಬುದು ತನ್ನಷ್ಟಕ್ಕೆ ತಾನೇ ರೂಪಿಸಲ್ಪಡುವುದಿಲ್ಲ; ಅದನ್ನು ನಾವು ಸಂಯಮ, ಶ್ರದ್ಧೆಯಿಂದ ರೂಪಿಸಬೇಕಾಗುತ್ತದೆ ಎಂಬುದೇ ಇಲ್ಲಿಯ ಪಾಠ.

ತೆನಾಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವ್ಯಾಕರಣರತ್ನ, ವೇದಾಂತರತ್ನ, ತರ್ಕರತ್ನ ಎಂಬೆಲ್ಲ ಬಿರುದು ಪಡೆದು ಹೊರಹೋದವರಿಗೆ ಹೊರಗಿನ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬೇಡಿಕೆ ಹುಟ್ಟಿದೆ. ಬ್ರಿಟಿಷರು ಕೊರೆದಿಟ್ಟ ಶಾಲೆ-ಕಾಲೇಜು-ಎಕ್ಸಾಮು ಎಂಬ ಮಾದರಿಯಲ್ಲಿ ಕಲಿತುಬಂದವರಿಗಿಂತ ಈ ಹುಡುಗರು (ಅರ್ಥಾತ್ ಯುವಕರು. ಕೆಲವರು ನಡುವಯಸ್ಕರು) ಹೆಚ್ಚು ಅರ್ಹರು, ಹೆಚ್ಚು ಶಿಕ್ಷಿತರು ಎಂಬುದು ಶಿಕ್ಷಣ ಸಂಸ್ಥೆಗಳಿಗೆ ಗೊತ್ತಾಗಿದೆ.

ಭಾರತದದ್ದಷ್ಟೇ ಅಲ್ಲ, ಹೊರಗಿನ ಶಿಕ್ಷಣ ಸಂಸ್ಥೆಗಳು ಕೂಡ ತೆನಾಲಿ ಪರೀಕ್ಷೆಯ ಪದವಿ ಪಡೆದವರನ್ನು ನೇರವಾಗಿ ತಮ್ಮಲ್ಲಿ ಅಧ್ಯಾಪನಕ್ಕೆ ಆಮಂತ್ರಿಸುತ್ತಿವೆ. ಹೀಗೆ ಕಲಿತವರು ಕೇವಲ ಸಂಸ್ಕøತ ಸಂಸ್ಥೆಗಳಲ್ಲಿ ಮಾತ್ರ ಭರ್ತಿಯಾಗುತ್ತಾರೆಂದು ಭಾವಿಸಬೇಕಿಲ್ಲ. ಇವರಲ್ಲಿ ಹಲವರು ಕಾನೂನು, ವೈದ್ಯ, ವಿಜ್ಞಾನ, ತಂತ್ರಜ್ಞಾನ ಎನ್ನುತ್ತ ವಿಭಿನ್ನ ಕ್ಷೇತ್ರಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಐಐಟಿಯಲ್ಲಿ ಪ್ರಾಧ್ಯಾಪಕರಾದವರೂ ಇದ್ದಾರೆ! ಹಾಗೆ ಪದವಿ ಪಡೆದು ಹೊರಹೋದವರು ಮತ್ತೆ ಶಿಷ್ಯರನ್ನು ಸ್ವೀಕರಿಸಿ ಗುರುಕುಲ ಪದ್ಧತಿಯ ರೀತಿಯಲ್ಲೇ ಶಿಕ್ಷಣ ಧಾರೆ ಎರೆಯುವ ಸಂಕಲ್ಪ ತೊಡುತ್ತಿದ್ದಾರೆ. ವರ್ಷಕ್ಕೆರಡು ಬಾರಿ ಆಂಜನೇಯ ಶರ್ಮರ ಮನೆಗೆ ತೆನಾಲಿ ಪರೀಕ್ಷೆಗಳಿಗೆ ಅವರು ಶಿಕ್ಷಕರಾಗಿಯೂ ಬರುತ್ತಾರೆ.

ಸಂಸ್ಕøತದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿಕೊಂಡು ನಂತರ ಶಾಸ್ತ್ರಾಧ್ಯಯನಕ್ಕೆ ತೆರೆದುಕೊಳ್ಳುವ ಮೂಲಕ ವಿದ್ವತ್ ಪರೀಕ್ಷೆ ಎದುರಿಸಬೇಕಾದ ಈ ಶಿಕ್ಷಣಕ್ರಮದಲ್ಲಿ ಅಂತಿಮವಾಗಿ ಪದವಿ ಕೈಗೆಟುಕಿಸಿಕೊಳ್ಳುವ ಹೊತ್ತಿಗೆ 20-25ರ ವಯಸ್ಸಾದರೂ ಆಗೇ ಆಗುತ್ತದೆ. ಆದರೆ ಈ ವರ್ಷ ಪ್ರಿಯವ್ರತ ಪಾಟೀಲ ಎಂಬ ಹುಡುಗ, ಇನ್ನೂ ಹದಿನಾರರ ಎಳವೆಯಲ್ಲಿರುವಾಗಲೇ ತೆನಾಲಿ ಪರೀಕ್ಷೆ ಗೆದ್ದು, ಕಾಂಚಿ ಮಠದ ಮಹಾಪರೀಕ್ಷೆಯನ್ನೂ ಬರೆದು ಸೈ ಎನ್ನಿಸಿಕೊಂಡಿದ್ದಾನೆ! ಸಂಸ್ಕøತ ಪಂಡಿತರಾದ ತನ್ನ ತಂದೆಯಿಂದಲೇ ವೇದ, ನ್ಯಾಯಗಳ ಪಾಠ ಹೇಳಿಸಿಕೊಂಡು ನಂತರ ಮೋಹನ ಶರ್ಮ ಎಂಬವರ ಬಳಿ ಗುರುಕುಲವಾಸ ಮಾಡಿ ವ್ಯಾಕರಣದ ಮಹಾಗ್ರಂಥಗಳ ಅಧ್ಯಯನವನ್ನು ಶಾಸ್ತ್ರೀಯವಾಗಿ ಪೂರೈಸಿ ಈ ಹುಡುಗ ಕೊಟ್ಟಕೊನೆಗೆ ತೆನಾಲಿ ಪರೀಕ್ಷೆಯ ಎಲ್ಲ ಹಂತಗಳನ್ನು ದಾಟಿ ವ್ಯಾಕರಣರತ್ನನೆನಿಸಿದ್ದಾನೆ. ಅಂದರೆ ಆಂಜನೇಯ ಶರ್ಮರು ಹುಟ್ಟುಹಾಕಿದ ಶಿಕ್ಷಣ ಪದ್ಧತಿಯಲ್ಲಿ 16-17ರ ಹರೆಯದ ಹುಡುಗರೂ ವಿದ್ವಾಂಸರೆನ್ನಿಸಿಕೊಂಡು ಹೊರಜಗತ್ತಿಗೆ ಕಾಲಿಡಲು ಸಾಧ್ಯ ಎಂಬುದು ಪ್ರಿಯವ್ರತನ ಮೂಲಕ ಇದೀಗ ಸಾಬೀತಾಗಿದೆ.

ಇಂಥ ಬುದ್ಧಿಮತ್ತೆಯ ಪ್ರಸಂಗಗಳನ್ನು ಶ್ವೇತಕೇತು, ಪ್ರಲ್ಹಾದ, ನಚಿಕೇತ ಮುಂತಾದವರ ಉದಾಹರಣೆಗಳ ಮೂಲಕ ಉಪನಿಷತ್ ಮತ್ತು ಪುರಾಣಗಳ ಕತೆಗಳಲ್ಲಿ ಓದಿz್ದÉೀವೆ. ಅಂಥ ಪರಂಪರೆ ಈಗ ಈ ಹುಡುಗನ ಮೂಲಕ ನವೀಕರಣಗೊಂಡಂತಾಗಿದೆ. ಭೌತವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರರು ನ್ಯೂಟನ್, ಶೇಕ್ಸ್‍ಪಿಯರ್ ಮತ್ತು ಬಿಥೋವನ್ ಎಂಬ ಮೂರು ಪ್ರತಿಭೆಗಳನ್ನು ಹೋಲಿಸುತ್ತ, ಪ್ರತಿಭೆ ಎಂಬುದು ಶಾಸ್ತ್ರ, ಜ್ಞಾನ, ಕಲೆ, ಕಾವ್ಯ, ಸಂಗೀತಗಳನ್ನು ಮೀರಿದ ಸಂಗತಿ; ಮೂವರಲ್ಲಿದ್ದ ಪ್ರತಿಭೆಯ ಪ್ರಭೆಯೂ ಒಂದೇ – ಎಂಬ ಮಾತು ಹೇಳಿದ್ದರು.

ವೇದ, ವೇದಾಂತ, ವ್ಯಾಕರಣ, ನ್ಯಾಯಶಾಸ್ತ್ರಗಳಲ್ಲಿ ವಿದ್ವತ್ ಪದವಿ ಗಳಿಸಿರುವ ಪ್ರಿಯವ್ರತ ಮತ್ತು ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಅಥವಾ ಕಾನೂನು ಪದವಿಯಲ್ಲಿ ಚಿನ್ನದ ಪದಕ ಗಳಿಸುವ ಪ್ರತಿಭಾವಂತರು – ಇವರೆಲ್ಲರ ಬೌದ್ಧಿಕ ಮಟ್ಟ ಹೆಚ್ಚುಕಡಿಮೆ ಒಂದೇ ತೂಕದಲ್ಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಕನಿಷ್ಠ ಆ ಪರಿಜ್ಞಾನ ನಮ್ಮ ಪ್ರಧಾನಿಗಳಿಗಿದೆ ಎಂಬುದು ಹೆಮ್ಮೆಯ ವಿಷಯ. ಯಾಕೆಂದರೆ ಪ್ರಿಯವ್ರತನ ಸಾಧನೆಯನ್ನು ಮೆಚ್ಚಿ ಪ್ರಧಾನಿಗಳೇ ಟ್ವೀಟ್ ಮಾಡಿದ್ದಾರೆ.

ಆ ಮೂಲಕ ಇಷ್ಟು ದಿನ ಟೊಫೆಲ್, ಜಿಮ್ಯಾಟ್, ಗಾವೊಕಾವೋ ಮುಂತಾದ ಪರದೇಶೀ ಪರೀಕ್ಷೆಗಳ ಬಗ್ಗೆಯಷ್ಟೇ ಮಾತಾಡುತ್ತಿದ್ದ ಮಾಧ್ಯಮಗಳು ಈಗ ತೆನಾಲಿ ಪರೀಕ್ಷೆಯ ಬಗ್ಗೆಯೂ ನಾಲ್ಕು ಸಾಲು ಬರೆಯುವಂತೆ ಮಾಡಿದ್ದಾರೆ ಪ್ರಧಾನಿಗಳು! ಫ್ಯಾಕ್ಟರಿಯ ಬೆಂಕಿಪೆÇಟ್ಟಣಗಳಂತೆ ಪದವೀಧರರನ್ನು ತಯಾರಿಸಿ ಹೊರಬಿಡುತ್ತಿರುವ ಸಂಸ್ಥೆಗಳ ಹೊರತಾಗಿ ನಮಗೀಗ ಬೇಕಿರುವುದು ಪಂಡಿತರನ್ನು ನಿರ್ಮಿಸಿ ಸಮಾಜಕ್ಕೆ ಕೊಡುವ ಆಂಜನೇಯ ಶರ್ಮರಂಥ ಜಕಣಾಚಾರಿಗಳು. ಶರ್ಮರ ತೆನಾಲಿ ಪದ್ಧತಿಗೆ ಈ ವರ್ಷ ಬೆಳ್ಳಿಹಬ್ಬ. ಶಿಕ್ಷಣ ಕ್ಷೇತ್ರದಲ್ಲಿ ಕವಿದಿರುವ ಕಾರ್ಮೋಡಲ್ಲಿ ತೆನಾಲಿ ಒಂದು ಸಿಲ್ವರ್ ಲೈನ್ ಅಂತೂ ಹೌದು.