Thursday, 19th May 2022

ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೇ ತೀರುತ್ತೇವೆ…

ಬೆಂಗಳೂರು: ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ತರಗತಿಯ ಸಮಯದಲ್ಲಿಯೂ ಸ್ಕಾರ್ಫ್ (ಹಿಜಾಬ್) ಧರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಡಲಾಗಿದೆ. ಈಗ ಶಿಕ್ಷಣ ಸಚಿವರು ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಈ ಕುರಿತು ಬೇಡಿಕೆ ಇಟ್ಟು ಮೂರು ವಾರಗಳಿಂದ ತರಗತಿ ಯಿಂದ ಹೊರಗೆ ಉಳಿದಿದ್ದಾರೆ. ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ಕಾಲೇಜು ಗೇಟ್‌ ಬಳಿ ‘ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೇ ತೀರುತ್ತೇವೆ’ ಎಂಬ ಫಲಕಗಳೊಂದಿಗೆ ಪ್ರತಿಭಟನೆ ನಡೆಸಿದರು.

ಗುರುವಾರವೂ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದರು. ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಈ ರೀತಿ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.

“ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದೇವೆ. ಆದರೆ, ತರಗತಿಗಳಿಗೆ ಹಾಜರಾಗದಂತೆ ಮತ್ತೊಮ್ಮೆ ನಮ್ಮನ್ನು ನಿರ್ಬಂಧಿಸಲಾಗಿದೆ” ಎಂದು ವಿದ್ಯಾರ್ಥಿನಿ ಅಲಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

“ಹಿಜಾಬ್ ಧರಿಸಿದ್ದಕ್ಕಾಗಿ ನಮಗೆ 20 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ನಮಗೆ ನ್ಯಾಯ ಬೇಕು. ಸಂವಿ ಧಾನ ನಮಗೆ ಹಿಜಾಬ್ ಧರಿಸುವ ಹಕ್ಕು ನೀಡಿದೆ, ಕಾಲೇಜು ಅದನ್ನು ಏಕೆ ತಡೆಯುತ್ತಿದೆ? ಎಂದು ವಿದ್ಯಾರ್ಥಿನಿ ಮುಸ್ಕಾನ್ ಪ್ರಶ್ನಿಸಿದ್ದಾರೆ.

ಶಿಕ್ಷಣ ಸಚಿವರ ಹೇಳಿಕೆ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಮಾತನಾಡಿದ್ದು, “ಈ ಅಭ್ಯಾಸವು ಅಶಿಸ್ತು ಆಗಿದೆ ಮತ್ತು ಶಾಲೆ ಗಳು ಮತ್ತು ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ” ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಚಿವ ಬಿ. ಸಿ. ನಾಗೇಶ್, “ಕಾಲೇಜಿನಲ್ಲಿನಲ್ಲಿನ ವಸ್ತ್ರ ಸಂಹಿತೆ ನಿಯಮಗಳು 1985ರಿಂದ ಜಾರಿಯಲ್ಲಿದೆ ಮತ್ತು ಈ ಪ್ರತಿಭಟನೆಗಳು ಕೇವಲ 15-20 ದಿನಗಳ ಹಿಂದೆ ಆರಂಭವಾಗಿವೆ” ಎಂದು ಹೇಳಿದ್ದಾರೆ.