Wednesday, 1st December 2021

ದಸರಾದಲ್ಲಿ ಮನಸೆಳೆದಿದ್ದ ಜಂಬೂ ಸವಾರಿ ಆನೆ ’ಗಂಗಾ’ ಸಾವು

ಶಿವಮೊಗ್ಗ: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ ಗಂಗಾ(85) ವಯೋಸಹಜ ಅನಾರೋಗ್ಯ ದಿಂದ ಮೃತಪಟ್ಟಿದೆ.

ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆಯಾದ ಇದು, ರಾಜ್ಯದ ಎಂಟು ಆನೆಬಿಡಾರಗಳಲ್ಲಿ ಹಿರಿಯಳು. 1971ರಲ್ಲಿ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದ ಗಂಗಾಳನ್ನು ನಂತರ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಬಳಸಿಕೊಳ್ಳಲಾಗುತ್ತಿತ್ತು.

ಹಲವು ವರ್ಷಗಳ ಕಾಲ ಶಿವಮೊಗ್ಗ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗಿದ್ದಳು. ಆದರೆ, ಕಳೆದ ಎರಡು ವರ್ಷಗಳಿಂದ ನಿವೃತ್ತಿ ನೀಡಲಾಗಿತ್ತು. ಗಂಗಾ ಸಾವಿನ ಬಳಿಕ ಸಕ್ರೆಬೈಲು ಆನೆಬಿಡಾರದಲ್ಲಿ ಪ್ರಸ್ತುತ 20 ಆನೆಗಳು ಉಳಿದಿವೆ. ಅದರಲ್ಲಿ 16 ಗಂಡು, 4 ಹೆಣ್ಣಾನೆಗಳು ಇವೆ.

80-85 ವರ್ಷವಾಗಿದ್ದ ಗಂಗಾಗೆ ಕಳೆದ ಎರಡು ವರ್ಷಗಳಿಂದ ಆರೋಗ್ಯ ಸಂಬಂಧಿ ನಾನಾ ಸಮಸ್ಯೆಗಳು ಕಾಡಲಾರಂಭಿಸಿವೆ. ಈ ಕಾರಣಗಳಿಂದಾಗಿ 15 ದಿನಗಳಿಂದ ಕ್ರಾಲ್ ನಲ್ಲೇ ಆರೈಕೆ ಮಾಡಲಾಗುತಿತ್ತು. ಅಲ್ಲಿಯೇ ಅಗತ್ಯ ಆಹಾರ ಪೂರೈಸಲಾಗುತಿತ್ತು.

ಸೌಮ್ಯ ಸ್ವಭಾವದ ಮಾತೃಹೃದಯದ ಗಂಗಾ ನಿಧನ ಹೊಂದಿದ್ದು, ಸಕ್ರೆಬೈಲಿನ ಕ್ರಾಲ್ ನಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.