Friday, 18th June 2021

ಸಂಕಷ್ಟದಲ್ಲಿ ಎಂಡೋ ಸಲ್ಫಾನ್‌ ಪೀಡಿತರು

ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ

ಸ್ಕಾಡ್ ವೇಸ್‌ನೊಂದಿಗೆ ಎಂಡೋಸಲ್ಫಾನ್‌ ಪೀಡಿತರಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯ ಒಪ್ಪಂದ ಅಂತ್ಯ

ಹಲವು ವರ್ಷಗಳ ಹಿಂದೆ ಮಾಡಲಾದ ಒಂದು ತಪ್ಪಿನಿಂದಾಗಿ ಇಂದು ಕೂಡಾ ಅದೆಷ್ಟೋ ಜನ ನರಳಾಡುತ್ತಿದ್ದಾರೆ. ಬದುಕಿನ ಕೊನೇ ಕ್ಷಣ ಆದಷ್ಟು ಬೇಗ ಬರಲಿ ಎಂದು ಬಯಸುತ್ತಿದ್ದಾರೆ. ಈ ನರಕದಿಂದ ನಮ್ಮನ್ನು ಪಾರು ಮಾಡು ದೇವರೇ ಎಂದೋ ದಿನವೂ ಬೇಡಿಕೊಳ್ಳುತ್ತಿದ್ದಾರೆ. ಅಂದಾದ ತಪ್ಪಿಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಶಾಶ್ವತ ಪರಿಹಾರ ಕೂಡಾ.

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿಗೂ ಎಂಡೋಸಲ್ಫಾನ್ ಪೀಡೆಗೆ ಒಳಗಾಗಿದ್ದಾರೆ. ಇಂದಿಗೂ ಮುಗ್ಧ ಜನರು ಕೆಲವರಿಗೆ ಅಂಗ ವೈಕಲ್ಯತೆಯಿಂದ ನರಳಿದರೆ, ಇನ್ನು ಹಲವರು ಅಂಗನ್ಯೂನತೆಯೊಂದಿಗೆ ಈ ಲೋಕದ ಪರಿಜ್ಞಾನವೇ ಇಲ್ಲದೇ ಮಲಗಿದ್ದಲ್ಲೇ ಮಲಗಿ ಜೀವಂತ ಶವವಾಗಿದ್ದಾರೆ. ಊಟ, ಬಟ್ಟೆ, ನಡೆದಾಟ, ಶೌಚ ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಅವಲಂಬಿತರನ್ನಾಗುವ ಸ್ಥಿತಿ ಅವರದ್ದು. ಸರಕಾರವಂತೂ ಇತ್ತೀಚೆಗೆ ಇವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇವರಿಗೆ ಔಷಧ, ಚಿಕಿತ್ಸೆ ದೊರಕ ದಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಎಂಡೋಸಲಾನ್ ಪೀಡಿತರಿಗೆ ದೊರೆಯುತ್ತಿಲ್ಲ ಚಿಕಿತ್ಸೆ: ಇಲ್ಲಿನ ಎಂಡೋ ಸಲ್ಫಾನ್ ಪೀಡಿತರು ಎರಡು
ತಿಂಗಳಿನಿಂದ ಚಿಕಿತ್ಸೆಯಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ತಜ್ಞರ ಅಭಿಪ್ರಾಯದಂತೆ ಹಣ ಉಳಿಸೋ ಪ್ಲ್ಯಾನ್ ಮಾಡಲು ಹೋಗಿ, ಎಂಡೋಸಲ್ಫಾನ್ ಪೀಡಿತರನ್ನು ಸಂಕಷ್ಟಕ್ಕೆ ದೂಡಿದೆ ಸರಕಾರ ಎಂದು ಹೇಳಿದ್ದಾರೆ.

ಎಂಡೋ ಸಲ್ಫಾನ್ ಪೀಡಿತರಿಗೆ ಆಹಾರ, ಬಟ್ಟೆ, ಔಷಧ, ಶೌಚ ಸೇರಿದಂತೆ ಹಲವು ವಿಚಾರಕ್ಕೆ ಇನ್ನೊಬ್ಬರನ್ನು ಅವಲಂಬಿಸ ಬೇಕಾಗಿರುವ ಇವರ ಬಗ್ಗೆ ಸರಕಾರ ನಿರ್ಲಕ್ಣ್ಯ ವಹಿಸಿದೆ. ಎಂಡೋಸಲ್ಫಾನ್ ಬಾಧಿತ ಜಿಲ್ಲೆಗಳಲ್ಲಿ ಉತ್ತರಕನ್ನಡ ಕೂಡಾ ಒಂದಾಗಿದ್ದು, ಜಿಲ್ಲೆಯಾದ್ಯಂತ ಸುಮಾರು ಎರಡು ಸಾವಿರ ಪೀಡಿತರು ಇದ್ದಾರೆ. ಆದರೆ, ಕಳೆದ ಎರಡು ತಿಂಗಳಿನಿಂದ ಈ ಪೀಡಿತರಿಗೆ ಚಿಕಿತ್ಸೆಯೂ ಇಲ್ಲ, ಔಷಧವೂ ಇಲ್ಲ.

ಎಂಡೋ ಸಲ್ಫಾನ್ ಪೀಡಿತರಿಗೆ ಅಗತ್ಯ ಚಿಕಿತ್ಸೆಯನ್ನು ಮನೆಬಾಗಿಲಲ್ಲೇ ಒದಗಿಸಬೇಕು ಎನ್ನುವ ಉದ್ದೇಶದಿಂದ ೨೦೧೮ರಲ್ಲಿ ಖಾಸಗಿ ಸಂಸ್ಥೆ ಸ್ಕಾಡ್ ವೇಸ್ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಾಧಿತರಿಗಾಗಿ ಒಟ್ಟು ಅಂಬ್ಯುಲೆನ್ಸ್ ಗಳು ಆರೋಗ್ಯ
ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

ಇದರಿಂದಾಗಿ ಸಾಕಷ್ಟು ಅನುಕೂಲವೂ ಆಗಿತ್ತು. ಆದರೆ, ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದಿದ್ದು, ಅಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ಧಾಪುರ ಸೇರಿ ಒಟ್ಟು ೧,೯೭೨ ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ. ಆಯಾ ತಾಲ್ಲೂಕಗಳಿಗೆ ನಿಗದಿಯಾಗಿದ್ದ
ಅಂಬ್ಯುಲೆನ್ಸ್ ಸಿಬ್ಬಂದಿ ತಿಂಗಳಿಗೆ ಒಂದು ಬಾರಿಯಂತೆ ಪ್ರತಿಯೊಬ್ಬ ಎಂಡೋಸಲ್ಫಾನ್ ಬಾಧಿತರ ಮನೆಗೂ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನು ಒದಗಿಸುತ್ತಿದ್ದರು.

ಇದರಿಂದಾಗಿ ಸಾಕಷ್ಟು ಸಹಾಯಕವಾಗಿದ್ದು, ಹಲವರಲ್ಲಿ ಚೇತರಿಕೆ ಸಹ ಕಂಡುಬಂದಿತ್ತು. ಆದರೆ ಕಳೆದೆರಡು ತಿಂಗಳಿನಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಕರೋನಾ, ಲಾಕ್ ಡೌನ್ ಜಾರಿಯಾಗಿರುವ ಈ ಸಂದರ್ಭದಲ್ಲಿ ಪೀಡಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇವರ ಗೋಳು ಕೇಳುವ ಕಿವಿಗಳೇ ಇಲ್ಲದಂತಾಗಿದೆ.

***

ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಸೇವೆಯ ಒಂದು ಅಂಬ್ಯುಲೆನ್ಸ್ ಗೆ ಸುಮಾರು ೩.೨೫ ಲಕ್ಷ ರುಪಾಯಿಗಳಂತೆ ತಿಂಗಳಿಗೆ ೧೨ ಲಕ್ಷ ರುಪಾಯಿಗಳನ್ನು ವ್ಯಯಿಸಲಾಗುತ್ತಿತ್ತು. ಅದನ್ನು ಲಕ್ಷಕ್ಕೆ ಇಳಿಸಬೇಕು ಎನ್ನುವುದು ಸರಕಾರದ ನಿರ್ದೇಶನವಾಗಿದ್ದು, ನಮ್ಮ ಜಿಲ್ಲೆಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಸಂಚಾರಿ ಸೇವೆಯನ್ನೇ ಪುನರಾರಂಭಿಸುವಂತೆ ಸರಕಾರದ ಗಮನಕ್ಕೆ
ತರಲಾಗಿದೆ.
-ಮುಲೈ ಮುಹಿಲನ್ ಜಿಲ್ಲಾಧಿಕಾರಿ

ನನ್ನ ಮಗಳು ೧೦ ವರ್ಷದವಳು. ಮಾತಿಲ್ಲ. ಕೈ ಕಾಲೂ ಇಲ್ಲ ಏನೂ ಬರುತ್ತಿಲ್ಲ. ಸ್ಕಾಡ್ ವೇಸ್‌ನವ್ರು ಮೆಡಿಸಿನ್ ಕೊಡುತ್ತಿದ್ದರು. ಈವಾಗ ಎರಡು ತಿಂಗಳಿನಿಂದ ಯಾವ ಔಷಧವೂ ಇಲ್ಲ. ತಿಂಗಳಿಗೆ ಒಂದೂವರೆ ಸಾವಿರ ಬರುತ್ತಿದ್ದು ಈವಾಗಲೂ ಅಷ್ಟೆ
ಇದೆ. ನಾನು ಆಟೋರಿಕ್ಷಾ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಾವು ದುಡಿದಿದ್ದು ದಿನವೂ ಅವಳ ಔಷಧ, ಮೆಡಿಸಿನ್ ಖರ್ಚಿಗೇ ಸಾಲುತ್ತಿಲ್ಲ. ಸರಕಾರ ಇತ್ತ ಗಮನಹರಿಸಿ ನಮ್ಮ ಗೋಳು ಕೇಳಬೇಕು.
-ದಯಾನಂದ ನಾಯ್ಕ ಎಂಡೋ ಸಲ್ಫಾನ್
ಪೀಡಿತ ಮಗಳ ತಂದೆ ಶಿರಾಲಿ

Leave a Reply

Your email address will not be published. Required fields are marked *