Tuesday, 27th July 2021

ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಳ್ಳಿ

ಜಯಶ್ರೀ ಅಬ್ಬಿಗೇರಿ

ಆಲಸ್ಯವನ್ನು ರೂಢಿಸಿಕೊಂಡರೆ, ಅಮೃತವೂ ವಿಷವಾದೀತು. ಆದ್ದರಿಂದಲೇ, ಸದಾ ಕಾಲ ಉತ್ಸಾಹವನ್ನು ತುಂಬಿಕೊಳ್ಳಿ, ದಿನಚರಿಯು ಚಟುವಟಿಕೆಯಿಂದಿರಲಿ,
ಆಗ ಯಶಸ್ಸು ತಾನಾಗಿಯೇ ಒಲಿಯುತ್ತದೆ.

ಉತ್ಸಾಹ ಮಲಗಿಸಿಕೊಡುವದಿಲ್ಲ. ಆಲಸ್ಯ ಏಳಿಸಿಕೊಡುವದಿಲ್ಲ’ ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ ಎನಿಸುತ್ತದೆ. ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೋಲ್ ಇದ್ದಂತೆ. ನಂದಾ ದೀಪದಂತೆ ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವುದೇ ಆಗಿದೆ.

ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ ನಮ್ಮೆದುರಿಗೆ ನಿಲ್ಲಿಸುತ್ತದೆ ಎನ್ನುವದು ಗೊತ್ತಿದ್ದರೂ ಗಡಿಬಿಡಿಯ ಆಧುನಿಕ ಜೀವನದ ಶೈಲಿಯಲ್ಲಿ ನಿರುತ್ಸಾಹವು ನಮ್ಮಲ್ಲಿ ಮನೆಮಾಡುತ್ತಿದೆ. ಉತ್ಸಾಹವನ್ನು ಕಳೆದುಕೊಂಡರೆ ಜೀವನದ ಪಯಣವು ಮಕರಂದವನ್ನು ಕಳೆದುಕೊಂಡ ದುಂಬಿಯಂತಾಗುತ್ತದೆ.
ನಾವಿಡುವ ಪ್ರತಿಯೊಂದು ಹೆಜ್ಜೆಯೂ ಭಾರವೆನಿಸುವ ಭಾವ ಹುಟ್ಟಿಸುತ್ತದೆ. ನೀರಸತೆಗೆ ಕಾರಣವಾಗುವ ನಿರುತ್ಸಾಹವನ್ನು ತೊರೆದು ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಂಡು ಸಾಗುವದೇ ಜೀವಂತಿಕೆಯ ಲಕ್ಷಣ. ‘ಜೀವನವನ್ನು ರಸಮಯಗೊಳಿಸುವ ಮೂಲಧಾತುವೇ ಉತ್ಸಾಹ.

ಸದಾ ಕ್ರಿಯಾಶೀಲ ವಾಗಿಸುವ ಭಾವವೇ ಉತ್ಸಾಹ. ಕಂಡ ಕನಸನ್ನು ಬೆನ್ನಟ್ಟಿ ನನಸಾಗಿಸಲು ಬಿಟ್ಟು ಬಿಡದಂತೆ ಪ್ರೇರೇಪಿಸುವದೇ ಉತ್ಸಾಹ’. ಇತಿಹಾಸದ ಪುಟಗಳನ್ನು ತಿರುವಿದಾಗ ಉತ್ಸಾಹಭರಿತ ವ್ಯಕ್ತಿಗಳು ಮಾಡಿದ ಅಮೋಘ ಸಾಧನೆಗಳು ನiಗೆ ಕಾಣಸಿಗುತ್ತವೆ. ನಿರಂತರವಾಗಿ ಉಳಿಸಿಕೊಳ್ಳುವ ಆಸಕ್ತಿಯೇ
ಉತ್ಸಾಹ. ಉತ್ಸಾಹ ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುತ್ತದೆ. ಮನುಷ್ಯನ ಇಂದಿನ ಸೌಕರ್ಯಭರಿತ ಜೀವನಕ್ಕೆ ಕಾರಣ ಉತ್ಸಾಹದ ಹೊರತು ಮತ್ತೇನಿಲ್ಲ. ಉತ್ಸಾಹ ನಮ್ಮಲ್ಲಿ ಅಂತಹ ಚೈತನ್ಯವನ್ನು ತುಂಬುತ್ತದೆ.

ಇರುವೆಗಳ ಶಿಸ್ತು ಮಾದರಿಯಾಗಲಿ
ಕಡುಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ್ದ ಜೇಮ್ಸ್ ಎ ಗಾರ್‌ಫೀಲ್ಡ್ ಎಂಬ ಬಾಲಕನೊಬ್ಬ ಜಗತ್ತಿನ ಹಿರಿಯಣ್ಣನೆಂದು ಕರೆಯಿಸಿಕೊಳ್ಳುವ ಅಮೆಕದ ಸುಪ್ರಸಿದ್ಧ ಅಧ್ಯಕ್ಷನಾಗಲು ಪ್ರಮುಖ ಕಾರಣ ಅವನಲ್ಲಿದ್ದ ಅದಮ್ಯ ಉತ್ಸಾಹ. ಸಣ್ಣ ಸಣ್ಣ ಇರುವೆಗಳು ಸಂಘಟಿತವಾಗಿ ಶಿಸ್ತಿನಿಂದ ತಮ್ಮ ವಾಸಕ್ಕೆ ಹುತ್ತಗಳನ್ನು ಕಟ್ಟಿಕೊಳ್ಳುತ್ತವೆ. ತಮಗೆ ಬೇಕೆನಿಸದ ಆಹಾರವನ್ನು ಹೊತ್ತು ತರುತ್ತವೆ. ತಮಗಿಂದ ಹೆಚ್ಚು ತೂಕದ ವಸ್ತುಗಳನ್ನು ಸಂಘಟಿತ ಶಕ್ತಿಯಿಂದ ಸಾಗಿಸುತ್ತವೆ.

ಸಣ್ಣ ವಿಫಲತೆ ಎದುರಾದರೂ, ಎದೆಗುಂದದೇ ಹಿಡಿದ ಕೆಲಸವನ್ನು ಮುಗಿಸುತ್ತವೆ. ಅವುಗಳ ಹಿಂದಿರುವ ದೊಡ್ಡ ಬಲ ಉತ್ಸಾಹ. ಉತ್ಸಾಹ ಬಲವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ಸಾಹಕ್ಕಿಂತ ಮಿಗಿಲಾದ ಬಲ ಇನ್ನೊಂದಿಲ್ಲವೆಂದರೂ ತಪ್ಪಿಲ್ಲ. ಅಗಾಧ ಶಕ್ತಿ ಹೊಂದಿರುವ ಯುವ ಪೀಳಿಗೆ ಕ್ರಿಯಾಶೀಲರಾಗುವದಕ್ಕೆ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಕಾರಣ ನಿರುತ್ಸಾಹ ಮತ್ತು ಕೆಲಯುವಕರು ಶೀಘ್ರದಲ್ಲಿಯೇ ಯಶಸ್ಸು ಗಳಿಸಬೇಕೆನ್ನುವ ಹಂಬಲದಲ್ಲಿರುವ ಅವರಿಗೆ ಅಪಜಯ ಕಟ್ಟಿಟ್ಟ ಬುತ್ತಿ. ವೈಫಲ್ಯಗಳು ಅವರಲ್ಲಿ ನಿರುತ್ಸಾಹವನ್ನುಂಟು ಮಾಡಿವೆ. ಅಡ್ಡ ಮಾರ್ಗದ ಯಶಸ್ಸಿಗೆ ಕೈ ಹಾಕದೆ ಉತ್ಸಾಹದಿಂದ ಪ್ರಾಮಾಣಿಕ ಪ್ರಯತ್ನ ಮಾಡುವಂತಹ ಮನಸ್ಥಿತಿ ಬೆಳಸಿಕೊಂಡರೆ ಯಶಸ್ಸು ಖಚಿತ ಎನ್ನುವದಕ್ಕೆ ಕ್ರಿಕೆಟ್ ದೇವರೆಂದು ಹೆಸರಾದ ಸಚಿನ್ ತೆಂಡೂಲ್ಕರ್. ಜಗತ್ತು ಕಂಡ ದೈತ್ಯ ಬಾಕ್ಸರ್ ಮಹಮ್ಮದ್ ಅಲಿ, ಮೇರಿಕೋಮ್, ಮಿಲ್ಕಾ ಸಿಂಗ್ ಸಾನಿಯಾ ಮಿರ್ಜಾ ಕಿರಣ್ ಬೇಡಿ ಇಂಥ ಅನೇಕ ಸಾಧಕರ ಪಟ್ಟಿಗಳೇ ಸಾಕ್ಷಿ.

ವಿವೇಕಾನಂದರಿಂದ ಸ್ಫೂರ್ತಿ
ರಾಕ್  ಫೆಲ್ಲರ್ ಎನ್ನುವ ಅಮೆರಿಕದ ಯುವಕ ತಾನು ಶ್ರೀಮಂತ ಎಂದು ಹೆಮ್ಮೆಯಿಂದ ಮೆರೆಯುತ್ತಿದ್ದ ತನ್ನಲ್ಲಿದ್ದ ಹಣವನ್ನು ಸಮಾಜದ ಸದ್ಬಳಕೆಗೆ ವಿನಿಯೋಗಿಸು ವಲ್ಲಿ ಉತ್ಸಾಹ ತೋರಿರಲಿಲ್ಲ. ಸ್ವಾಮಿ ವಿವೇಕಾನಂದರು ‘ನೀನು ಶ್ರೀಮಂತನಲ್ಲ. ದೇವರ ಏಜೆಂಟ್ ಮಾತ್ರ. ನಿನ್ನಲ್ಲಿರುವ ಹಣ ಆ ದೇವನದ್ದು. ನೀನು ಅದನ್ನು ಜನಹಿತಕ್ಕಾಗಿ ಬಳಸಬೇಕು.’ ಎಂಬ ಕಿವಿಮಾತನ್ನು ಹೇಳಿದ ಮೇಲೆ ರಾಕ್ ಫೆಲ್ಲರ್ ಅತ್ಯುತ್ಸಾಹದಿಂದ ತನ್ನ ಹೆಸರಿನಲ್ಲಿ ದೊಡ್ಡ ಫೌಂಡೇಶನ್ ಬೆಳೆಸಿದ. ಪರೋಪಕಾರಕ್ಕಾಗಿ, ವಿವಿಧ ಸಂಶೋಧನೆಗಳಿಗಾಗಿ ಆ ಫೌಂಡೇಶನ್ ಕೆಲಸ ಮಾಡಿತು. ಅದು ಫೌಂಡೇಶನ್ ಸಹಾಯಮಾಡುತ್ತಿದೆ. ಅಂತರಂಗದ ಭಾವವಾಗಿ ರುವ ಉತ್ಸಾಹವಿರದಿದ್ದರೆ ಯಾವ ಕಾರ್ಯವೂ ಯಶ ಕಾಣದು. ಬರೀ ಕನಸು ಕಂಡರೆ ಮನಸ್ಸಿನಲ್ಲಿ ಮಂಡಿಗೆ ತಿಂದಂತಾಗುತ್ತದೆ. ಉತ್ಸಾಹದ ಒರತೆ ಸದಾ ಜಿನುಗುವಂತೆ ನೋಡಿಕೊಂಡರೆ ಕನಸುಗಳೆಲ್ಲ ನನಸಾಗುತ್ತವೆ. ಹಾಗಾದರೆ ತಡವೇಕೆ? ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಳ್ಳಿ , ಯಶಸ್ಸಿನ ಜೇನು ತುಂಬಿದ ಜೀವನವನ್ನು ನಿಮ್ಮ ದಾಗಿಸಿಕೊಳ್ಳಿ.

Leave a Reply

Your email address will not be published. Required fields are marked *