Friday, 24th September 2021

ಜಗತ್ತನ್ನು ಸ್ವರ್ಗಕ್ಕಿಂತ ಸುಂದರವಾಗಿಸುವ ಶಕ್ತಿ ಕ್ಷಮೆಗಿದೆ

ಪ್ರಚಲಿತ

ವಿಜಯ್ ದರ್ಡ ಅಧ್ಯಕ್ಷರು,

ಲೋಕಮತ್ ಪತ್ರಿಕಾ ಸಮೂಹ

ನಾವು ಇತ್ತೀಚೆಗಷ್ಟೇ ಪರ್ಯೂಷಣ ಪರ್ವ ಆಚರಿಸಿ ಪರಸ್ಪರರಲ್ಲಿ ಕ್ಷಮೆ ಕೇಳಿದ್ದೇವೆ. ಒಮ್ಮೆ ಊಹಿಸಿ ನೋಡಿ, ಪ್ರತಿಯೊಬ್ಬರೂ ಇನ್ನೊಬ್ಬರನ್ನು ಕ್ಷಮಿಸುವ ಹಾಗೂ
ಮತ್ತೊಬ್ಬರಲ್ಲಿ ಕ್ಷಮೆ ಕೇಳುವ ಗುಣ ಬೆಳೆಸಿಕೊಂಡರೆ ಜಗತ್ತು ಹೇಗಿರಬಹುದು! ಬಹುಶಃ ಆಗ ನಮ್ಮ ಕಲ್ಪನೆಯ ಸ್ವರ್ಗಕ್ಕಿಂತ ಈ ಜಗತ್ತು ಸುಂದರವಾಗುತ್ತದೆ. ಅಹಿಂಸೆ ಹುಟ್ಟಿದ್ದು ಕೂಡ ಕ್ಷಮೆಯಿಂದಲೇ.

ಬಹುಶಃ ಈ ವಿಷಯದಲ್ಲಿ ನಾನು ಅದೃಷ್ಟವಂತ. ಬೇರೆ ಬೇರೆ ಧರ್ಮಗಳ ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಜತೆಗೆ ಒಡನಾಡುವ ಅವಕಾಶಗಳು ನನಗೆ ದಂಡಿಯಾಗಿ ಸಿಕ್ಕಿವೆ. ಬಾಲ್ಯದಿಂದಲೂ ನನಗೆ ವಿವಿಧ ಧರ್ಮಗಳು ಹಾಗೂ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವ, ಅವುಗಳನ್ನು ಅರ್ಥ ಮಾಡಿಕೊಳ್ಳುವ
ಕುತೂಹಲ ಹೆಚ್ಚಿತ್ತು. ಅಜ್ಜಿ, ಅಮ್ಮ ಹಾಗೂ ತಂದೆಯಿಂದ ನನ್ನೊಳಗೆ ಬಿತ್ತಲ್ಪಟ್ಟ ಆಧ್ಯಾತ್ಮಿಕ ಬೀಜವಿದು.

ನಂತರ ಇವರೆಲ್ಲರ ಜತೆಗೆ ಧರ್ಮಪತ್ನಿ ಜ್ಯೋತ್ಸ್ನಾ ಈ ವಿಷಯದಲ್ಲಿ ನನ್ನನ್ನು ಇನ್ನಷ್ಟು ಮುಂದಕ್ಕೆ ಕರೆದೊಯ್ದು ಎಲ್ಲಾ ಧರ್ಮಗಳ ಬೋಧನೆಗಳನ್ನೂ ಮುಕ್ತವಾಗಿ ಸ್ವೀಕರಿಸುವ ಗುಣ ಬೆಳೆಸಿದರು. ಅಂದಿನಿಂದ ಯಾವುದಾದರೂ ಧರ್ಮವನ್ನು ಟೀಕಿಸಬೇಕು ಎಂದು ಒಂದು ಕ್ಷಣ ಕೂಡ ನನಗೆ ಅನ್ನಿಸಿಲ್ಲ. ಯಾವ ಧರ್ಮದಲ್ಲಿ ಹಬ್ಬಗಳು ಬಂದರೂ ನನಗೆ ಎಲ್ಲಿಲ್ಲದ ಖುಷಿ. ಈ ವೈವಿಧ್ಯವೇ ಭಾರತವನ್ನು ಜಗತ್ತಿನ ಇನ್ನಿತರ ದೇಶಗಳಿಗಿಂತ ಭಿನ್ನವಾಗಿಸಿವೆ ಯಲ್ಲವೇ? ಧರ್ಮವೆಂಬುದೊಂದು ಹೊರಗವಚ ಅಲ್ಲ.

ಅದು ನಮ್ಮ ಆತ್ಮವನ್ನು ಎಚ್ಚರಿಸುವ ಮಾಧ್ಯಮ. ನೀವು ಯಾವುದೇ ಧರ್ಮ ಅನುಸರಿಸಿದರೂ ಅವು ನಿಮಗೆ ಸರಿಯಾದ ದಾರಿಯನ್ನೇ ತೋರಿಸುತ್ತವೆ. ಧರ್ಮದಲ್ಲಿ ಯಾವತ್ತೂ ದ್ವೇಷಕ್ಕೆ ಜಾಗವಿಲ್ಲ. ಆದರೆ ದುರದೃಷ್ಟವಶಾತ್ ಇಂದು ಧರ್ಮದ ಹೆಸರಿನಲ್ಲೇ ರಕ್ತಪಾತಗಳು ನಡೆಯುತ್ತಿವೆ. ಧರ್ಮದ ನೆಪದಲ್ಲಿ ನಡೆಯುವ ಕ್ರೌರ್ಯಗಳು ನನ್ನನ್ನು ಕಂಗೆಡಿಸುತ್ತವೆ. ಈ ದುಷ್ಟ ವಾತಾವರಣ ಯಾವಾಗ ಬದಲಾಗಬಹುದು ಎಂದು ಕಾತುರದಿಂದ ಕಾಯು ತ್ತೇನೆ. ನಿಜಕ್ಕೂ ಇದು ಯಾವತ್ತಾದರೂ ಬದಲಾಗುತ್ತ ದೆಯೇ? ಹೌದಾದರೆ, ಆ ಬದಲಾವಣೆ ಹೇಗಿರುತ್ತದೆ? ಭಗವಾನ್ ಮಹಾವೀರ ಸ್ವಾಮಿಯ ಬೋಧನೆಗಳಲ್ಲಿ ನನಗೆ ಇದರ ದಾರಿ ಕಾಣಿಸುತ್ತದೆ. ಮೊದಲೇ ಹೇಳಿ ಬಿಡುತ್ತೇನೆ, ಜೈನ ಧರ್ಮವೇ ಶ್ರೇಷ್ಠ ಎಂದು ಸಾರಿ ಹೇಳುವ ಯಾವ ಉದ್ದೇಶವೂ ನನಗಿಲ್ಲ.

ಪ್ರತಿಯೊಬ್ಬರಿಗೂ ಅವರವರ ಧರ್ಮವೇ ಶ್ರೇಷ್ಠ. ಸ್ವಧರ್ಮದಲ್ಲಿ ನಂಬಿಕೆ ಹಾಗೇ ಇರಬೇಕು ಕೂಡ. ಹಾಗಂತ, ಬೇರೆ ಧರ್ಮದಲ್ಲಿ ಅಥವಾ ನಂಬಿಕೆಯಲ್ಲಿ ನಮ್ಮ ಬದುಕನ್ನು ಇನ್ನಷ್ಟು ಸುಂದರಗೊ ಳಿಸುವ ತತ್ವಗಳಿದ್ದರೆ ಅವುಗಳನ್ನು ಸ್ವೀಕರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ನನ್ನ ವೈಯಕ್ತಿಕ ಬದುಕಿನಲ್ಲಿ ಹೀಗೆ ಬೇರೆ ಬೇರೆ
ಧರ್ಮಗಳಿಂದ ಬಹಳಷ್ಟು ಸಂಗತಿಗಳನ್ನು ಅಳವಡಿಸಿಕೊಂಡಿದ್ದೇನೆ. ಜೈನ ಧರ್ಮದ ಹೊರತಾಗಿ ಅನ್ಯ ಧರ್ಮಗಳ ಸಾಕಷ್ಟು ಬೋಧನೆಗಳನ್ನು ನಾನು ಅನು ಸರಿಸುತ್ತೇನೆ ಕೂಡ.

ನಮ್ಮ ಮನೆಯ ದೇವರ ಕೋಣೆಯಲ್ಲಿ ಎಲ್ಲ ಧರ್ಮಗಳ ಪುಸ್ತಕ ಹಾಗೂ ಚಿಹ್ನೆಗಳಿವೆ. ನಾನಿಲ್ಲಿ ಜೈನ ಧರ್ಮದ ಕೆಲ ಸಂಗತಿಗಳನ್ನು ಪ್ರಸ್ತಾಪಿಸಬೇಕು. ಜೈನ ಪದ್ಧತಿಯಡಿಯ ಬದುಕು ಹಾಗೂ ಸಿದ್ಧಾಂತಗಳಲ್ಲಿ ನಮಗೆ ಹೊಸ ದಾರಿ ತೋರುವ ಕೆಲ ಅದ್ಭುತ ವಿಚಾರಗಳಿವೆ. ಅವುಗಳಲ್ಲಿ ಮೊದಲ ಗುಣವೆಂದರೆ ಕ್ಷಮಾ (ಕ್ಷಮಿಸುವುದು). ಕ್ಷಮೆಯೆಂಬ ಪದ ನಾವೆಲ್ಲರೂ ಕೇಳಿದ್ದೇವೆ. ಆದರೆ ನಿಜವಾಗಿಯೂ ಇನ್ನೊಬ್ಬರನ್ನು ಕ್ಷಮಿಸುವುದು ಈ ಪದವನ್ನು ಹೇಳುವಷ್ಟು ಅಥವಾ ಬರೆಯುವಷ್ಟು ಸುಲಭವಲ್ಲ. ಆದ್ದರಿಂದಲೇ ಜೈನ ಸಿದ್ಧಾಂತದಲ್ಲಿ ಕ್ಷಮಾ ವೀರಸ್ಯ ಭೂಷಣಮ್ ಎಂದು ಸರಿಯಾಗಿ ಬರೆದಿದ್ದಾನೆ. ಯಾರು ಬಹಳ ಗಟ್ಟಿಗನೋ, ಯಾರು ವೀರಾಧಿವೀರನೋ ಅವನು ಮಾತ್ರ ಕ್ಷಮಾಗುಣವನ್ನು ಕಲಿಯಬಲ್ಲ. ಬೇರೆಯವರ ಬಳಿ ಕ್ಷಮೆ ಕೇಳುವುದಕ್ಕೇ ನಮಗೆ ಸಾಕಷ್ಟು ಶಕ್ತಿ ಬೇಕು. ಹೀಗಿರು ವಾಗ ಬೇರೆಯವರನ್ನು ಕ್ಷಮಿಸುವುದಕ್ಕಂತೂ ಅದಕ್ಕಿಂತ ಹೆಚ್ಚಿನ ಶಕ್ತಿ ಬೇಕು.

ಇಲ್ಲಿ ಕ್ಷಮೆ ಎಂದು ಹೇಳುವಾಗ ನಾವು ಬೇರೆಯವರನ್ನು ಕ್ಷಮಿಸುವುದನ್ನಷ್ಟೇ ಪರಿಗಣಿಸುವುದಲ್ಲ, ಇದು ನಮ್ಮನ್ನು ನಾವು ಕ್ಷಮಿಸಿಕೊಳ್ಳುವುದು ಕೂಡ ಹೌದು.
ಹಾಗೆ ನೋಡಿದರೆ ಜೈನ ಧರ್ಮವು ಕೇವಲ ಮನುಷ್ಯರಿಂದ ಮಾತ್ರವಲ್ಲ, ವಿಶ್ವದಲ್ಲಿ ಬದುಕಿರುವ ಸಮಸ್ತ ಜೀವ ಜಂತುಗಳಿಂದಲೂ ಕ್ಷಮೆ ಕೇಳುವ ಬಗ್ಗೆ ಮಾತ ನಾಡುತ್ತದೆ.

ಇಲ್ಲಿರುವ ಸಂದೇಶ ಸ್ಪಷ್ಟ:  ನಾವು ಈ ಭೂಮಿ, ಆಕಾಶ ಹಾಗೂ ಸಮಸ್ತ ಪರಿಸರವನ್ನು ದೇವರು ನಮಗೆ ಯಾವ ರೂಪದಲ್ಲಿ ನೀಡಿದ್ದಾನೋ ಅದೇ ರೂಪದಲ್ಲಿ ಉಳಿಸಿ ಹೋಗುವುದಕ್ಕೆ ಬದ್ಧರಾಗಿರಬೇಕು. ನನ್ನ ಪ್ರಕಾರ ಎಲ್ಲಾ ಧರ್ಮಗಳೂ ಒಂದಲ್ಲಾ ಒಂದು ರೀತಿಯಲ್ಲಿ ಇದನ್ನು ಹೇಳುತ್ತವೆ. ಈ ಕಾರಣಕ್ಕಾಗಿಯೇ
ಪ್ರತಿಯೊಬ್ಬ ವ್ಯಕ್ತಿಯೂ ಕ್ಷಮೆ ಎಂಬ ಆಭರಣವನ್ನು ಧರಿಸಬೇಕು. ಇದಕ್ಕಾಗಿ ನಾವೆಲ್ಲ ನಮ್ಮನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ಆತ್ಮ ಎಷ್ಟು ಪರಿಶುದ್ಧ ವಾಗಬೇಕು ಅಂದರೆ, ಇನ್ನೊಬ್ಬರಿಗೆ ಹಾನಿ ಉಂಟುಮಾಡಬೇಕು ಎಂಬ ಯೋಚನೆ ಕೂಡ ನಮ್ಮ ಮನಸ್ಸಿನಲ್ಲಿ ಸುಳಿಯಬಾರದು.

ಜೈನ ಸಿದ್ಧಾಂತದ ಪ್ರಕಾರ, ಬೇರೆಯವರಿಗೆ ಹಾನಿ ಉಂಟುಮಾಡುವ ಯೋಚನೆ ಕೂಡ ಹಿಂಸಾಚಾರವೇ. ಹೀಗಾಗಿ ಆಧ್ಯಾತ್ಮದ ಮಟ್ಟದಲ್ಲಿ ನಾವು ಕ್ಷಮಾಗುಣ ವನ್ನು ನಮ್ಮೊಳಗೆ ಅವಿನಾಭಾವ ರೀತಿಯಲ್ಲಿ ಅಳವಡಿಸಿ ಕೊಳ್ಳಲು ಸಾಧ್ಯವಾದರೆ ಸಹಜವಾಗಿಯೇ ನಮ್ಮಲ್ಲಿ ಸದಾ ಅಹಿಂಸೆಯ ಯೋಚನೆ ನೆಲೆಗೊಳ್ಳುತ್ತದೆ.
ಅಹಿಂಸೆಯೆಂಬುದು ಎಲ್ಲ ಗುಣಗಳಿಗಿಂತ ಶ್ರೇಷ್ಠ ಗುಣ. ಜೈನ ಧರ್ಮವು ಅಹಿಂಸೆ ಮತ್ತು ಕ್ಷಮಾಗುಣವೆಂಬ ಎರಡು ಸಿದ್ಧಾಂತದ ಮೇಲೆ ನಿಂತಿದೆ. ಬೇಸರದ
ಸಂಗತಿಯೆಂದರೆ ಇಂದು ಜಗತ್ತಿನಲ್ಲಿ ಅತಿಹೆಚ್ಚು ಹಿಂಸಾಚಾರಗಳು ನಡೆಯುತ್ತಿರುವುದು ಧರ್ಮದ ಹೆಸರಿನಲ್ಲಿ. ಧರ್ಮಕ್ಕಾಗಿಯೇ ಒಬ್ಬರು ಇನ್ನೊಬ್ಬರ ಕುತ್ತಿಗೆ ಕೊಯ್ಯುತ್ತಾರೆ. ಧರ್ಮದ ವ್ಯಾಪಾರಿಗಳು ತಮ್ಮ ಧರ್ಮದ ಹಿರಿಮೆಯನ್ನು ಸಾರುವ ಶಸಾಸಗಳನ್ನು ಝಳಪಿಸುತ್ತಾರೆ.

ಭಯೋತ್ಪಾದನೆಯ ಅಮಾನುಷ ಕೈಗಳು ಇಡೀ ಮಾನವ ಕುಲವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿವೆ. ಆದರೆ, ಭಯೋತ್ಪಾದನೆಯ ಕಬಂಧ ಬಾಹು
ಗಳನ್ನು ಕೂಡ ಕಟ್ಟಿಹಾಕುವ ಶಕ್ತಿ ಅಹಿಂಸೆಗಿದೆ ಎಂದು ನಾನು ನಂಬಿದ್ದೇನೆ. ಇದನ್ನು ಯಾವುದೋ ತತ್ವ ಅಥವಾ ಸಿದ್ಧಾಂತದ ಮೇಲೆ ಹೇಳುತ್ತಿಲ್ಲ. ನಮ್ಮ
ದೇಶದ ಸ್ವಾತಂತ್ರ್ಯ ಹೋರಾಟವೇ ಇದಕ್ಕೆ ಪ್ರಾಯೋಗಿಕ ಉದಾಹರಣೆ. ಅಹಿಂಸೆಗಿರುವ ಶಕ್ತಿ ಎಂಥದ್ದು ಎಂಬುದನ್ನು ಭಾರತದ ಸ್ವಾತಂತ್ರ್ಯ ಚಳವಳಿ ತೋರಿಸಿ ಕೊಟ್ಟಿದೆ. ಸೂರ್ಯ ಮುಳುಗದ ಬಲಿಷ್ಠ ಸಾಮ್ರಾಜ್ಯದ ಆಳ್ವಿಕೆಯನ್ನು ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಶಕ್ತಿಯಿಂದಲೇ ಕೊನೆಗೊಳಿಸಿ ದರು. ಕಳೆದ ಸಾವಿರಾರು ವರ್ಷಗಳಿಂದ ಜೈನ ಸಿದ್ಧಾಂತವು ನಮಗೆ ಇದೇ ಸತ್ಯ ಮತ್ತು ಅಹಿಂಸೆಯ ಪಾಠ ಹೇಳಿಕೊಡುತ್ತಾ ಬಂದಿದೆ.

ಕ್ಷಮೆ, ಸತ್ಯ ಹಾಗೂ ಅಹಿಂಸೆಯ ಗುಣಗಳು ನಮ್ಮ ಬದುಕಿನಲ್ಲಿದ್ದರೆ ತ್ಯಾಗ ಅಥವಾ ವೈರಾಗ್ಯ ಕೂಡ ಸಹಜವಾಗಿಯೇ ಈ ಬದುಕಿನ ಅಂಗವಾಗಿಬಿಡುತ್ತದೆ.
ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಯಸುವ ಗುಣವನ್ನು ರೂಢಿಸಿಕೊಂಡರೆ ದುರಾಸೆಯೆಂಬುದು ನಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಆಗ
ಸರಿ ಯಾದ ಸಿದ್ಧಾಂತ (ಸಮ್ಯಕ್ ದರ್ಶನ), ಸರಿಯಾದ ಜ್ಞಾನ (ಸಮ್ಯಕ್ ಜ್ಞಾನ) ಹಾಗೂ ಸರಿಯಾದ ನಡತೆ (ಸಮ್ಯಕ್ ಚರಿತ್ರ) ಎಂಬ ಉದಾತ್ತ ಸಂಗತಿಗಳು ನಮ್ಮ ಬದುಕಿನ ಭಾಗವಾಗುತ್ತವೆ.

ಜೈನ ಸಿದ್ಧಾಂತವು ನಮಗೆ ಬಹುತ್ವದ ಮಹತ್ವವನ್ನು ಹೇಳುತ್ತದೆ. ಇದು, ಬೇರೆಯವರನ್ನು ಅರ್ಥ ಮಾಡಿಕೊಳ್ಳುವ ಗುಣ. ಇಂದು ಎಲ್ಲರೂ ತಾವೇ ಸರಿ ಎಂಬ
ನಂಬಿಕೆಗೆ ಜೋತುಬಿದ್ದಿದ್ದಾರೆ. ವಾಸ್ತವವಾಗಿ ನಾವು ಬೇರೆಯವರ ದೃಷ್ಟಿಕೋನವನ್ನು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ
ನಮ್ಮ ನಂಬಿಕೆ ಸರಿಯೋ ತಪ್ರೋ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಗ್ರಾಹಕರು ಹೇಗೆ ಯೋಚಿಸುತ್ತಾರೆಂಬುದನ್ನು ತಿಳಿದುಕೊಳ್ಳದೆ ಒಬ್ಬ ಉದ್ಯಮಿ ತನ್ನ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಸಾಧ್ಯವೇ? ಇಲ್ಲ.

ಹಾಗೆಯೇ, ಪ್ರತಿಯೊಬ್ಬರೂ ಮತ್ತೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದರೆ ಜಗತ್ತಿನಲ್ಲಿ ಸಂಘರ್ಷವೇ ಇರುವುದಿಲ್ಲ. ಸಂಘರ್ಷ ಇಲ್ಲದಿದ್ದರೆ ಯುದ್ಧ ಇರುವುದಿಲ್ಲ. ಆಗ ಸಮಸ್ತ ಮಾನವ ಕುಲ ಶಾಂತಿ ಹಾಗೂ ಸೌಹಾರ್ದ ತೆಯಿಂದ ಬದುಕಬಹುದು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿ ಸುವ ಅಗತ್ಯವೇ ಇಲ್ಲದ ಜಗತ್ತೊಂದನ್ನು ಆಗ ನಾವು ಸೃಷ್ಟಿಸುತ್ತೇವೆ. ಹೀಗಾಗಿ ಶಸ್ತ್ರಾಸ್ತ್ರಗಳಿಗೆ ಖರ್ಚು ಮಾಡುತ್ತಿರುವ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡಬಹುದು.

ಇದೆಲ್ಲ ಈಗ ಆಗ-ಹೋಗದ ಮಾತು ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಮನುಷ್ಯನ ವಿಕಾಸದ ಯಾತ್ರೆ ಮುನ್ನಡೆದು ಬರುವಾಗ ತಾನೇನು ಮಾಡ ಬೇಕಿತ್ತೋ ಅದನ್ನು ಮಾಡುತ್ತಲೇ ಬಂದಿದೆ. ಮನುಷ್ಯ ಚಂದ್ರನನ್ನು ತಲುಪಿದ್ದಾನೆ. ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಇವೆಲ್ಲದರ ಜೊತೆಗೆ ನಾವೆಲ್ಲ ಕ್ಷಮಾಗುಣ ವನ್ನು ಆಭರಣದಂತೆ ಧರಿಸಿದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಆಗ ನಾವೆಲ್ಲ ನಿಜವಾದ ಅರ್ಥದಲ್ಲಿ ವಸುಧೈವ ಕುಟುಂಬಕಮ್ (ಜಗತ್ತೇ ಒಂದು ಕುಟುಂಬ) ಎಂಬ ಮಾತಿನಂತೆ ಬದುಕಬಹುದು.

Leave a Reply

Your email address will not be published. Required fields are marked *