Wednesday, 1st February 2023

ವ್ಯಾಯಾಮದ ಬದಲು ಗುಳಿಗೆ: ಸಾಧುವೇ ?

ವೈದ್ಯ ವೈವಿಧ್ಯ

drhsmohan@gmail.com

ದೈಹಿಕ ಚಟುವಟಿಕೆಗಳಿಂದ ಪ್ರಯೋಜನವಿರುವುದು ಗೊತ್ತಿದ್ದರೂ ನಮ್ಮ ಆಧುನಿಕ ಜೀವನ ಬಹಳಷ್ಟು ದೈಹಿಕ ಚಟುವಟಿಕೆ ಗಳಿಂದ ವಂಚಿತವಾಗಿದೆ. ನಿಯತವಾಗಿ ದೈಹಿಕ ಶ್ರಮ ಮಾಡದಿರುವುದು ಒಂದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಕಳೆದ ವಾರ ಈ ಅಂಕಣದಲ್ಲಿ ಮೂಡಿಬಂದ ‘ನಡೆಯಿರಿ, ನಡೆಯಿರಿ… 10000 ಹೆಜ್ಜೆ ನಡೆಯಿರಿ!’ ಲೇಖನಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಲೇಖನವಿದು. ಮನೆಯಲ್ಲಿಯೇ ಕುಳಿತು ವ್ಯಾಯಾಮ ಮಾಡಲು ಸಾಧ್ಯವೇ? ಅಂದರೆ ವ್ಯಾಯಾಮ ಕ್ರಿಯೆಯನ್ನು ಕುಳಿತಲ್ಲಿಯೇ, ಅದೂ ಒಂದು ಗುಳಿಗೆ ನುಂಗುವ ಮೂಲಕ ಮಾಡಲು ಸಾಧ್ಯವೇ? ವೈದ್ಯಕೀಯದಲ್ಲಿ ಏನೆಲ್ಲ ಆಧುನಿಕ ಬೆಳವಣಿಗೆಗಳು ಆಗುತ್ತವೆ ನೋಡಿ! ಅಂಥ ಒಂದು ಅಪರೂಪದ ಬೆಳವಣಿಗೆ, ಸಂಶೋಧನೆ ಇದು.

ನಾವು ದೈಹಿಕವಾಗಿ ಸಚೇತನರಾಗಿದ್ದರೆ ನಮ್ಮ ಮೂಳೆ ಮತ್ತು ಮಾಂಸಖಂಡಗಳು ಒಟ್ಟಾಗಿ ಕೆಲಸ ಮಾಡಿ ಎರಡನ್ನೂ ಇನ್ನೂ ಸದೃಢವಾಗಿಸಲು ಯತ್ನಿಸುತ್ತವೆ. ಮೂಳೆಯ ಆರೋಗ್ಯವನ್ನು ಸರಿಯಾಗಿ ಇರಿಸಿಕೊಳ್ಳಲು ಅಮೆರಿಕದ ಕ್ರೀಡಾ ವೈದ್ಯಶಾಸ್ತ್ರದ ಕಾಲೇಜು ವಾರಕ್ಕೆ 3-5 ಬಾರಿ ತೂಕ ಎತ್ತುವ ಕ್ರಿಯೆಗಳು ಹಾಗೂ 2-3 ಬಾರಿ ರೆಸಿಸ್ಟನ್ಸ್ ವ್ಯಾಯಾಮ ಗಳನ್ನು ಮಾಡಬೇಕೆಂದು ಶಿಫಾರಸು ಮಾಡುತ್ತದೆ.

ನಮ್ಮ ಮೂಳೆಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಜೀವನ ಪರ್ಯಂತ ವ್ಯಾಯಾಮ ಮಾಡುವುದು ತುಂಬಾ ಸೂಕ್ತ ಎಂದು ವಿವಿಧ ಸಂಶೋಧನೆಗಳು ತಿಳಿಸಿವೆ. ಇಂಥ ನಿಯತ ವ್ಯಾಯಾಮವನ್ನು ಕಡಿಮೆ ಮಾಡಿದರೆ ಮೂಳೆಯ ಪ್ರಮಾಣ ನಷ್ಟವಾಗುತ್ತದೆ ಎನ್ನಲಾಗಿದೆ. ಮಾಂಸಖಂಡ ಮತ್ತು ಮೂಳೆಗಳನ್ನು ಸದೃಢವಾಗಿಟ್ಟುಕೊಳ್ಳಲು ನಿಯತ ವಾದ ದೈಹಿಕ ಪರಿಶ್ರಮ ಅವಶ್ಯಕ ಎಂದು ಅಮೆರಿಕದ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ (ಸಿ ಡಿ ಸಿ ) ಶಿಫಾರಸು ಮಾಡುತ್ತದೆ.

ಹಾಗೆಯೇ  ಸ್ಟಿಯೋಆರ್ಥರೈಟಿಸ್ ನಂಥ ಸಂದುಕಾಯಿಲೆ ಇರುವವರಲ್ಲಿ ಮಾಂಸಖಂಡಗಳ ಶಕ್ತಿಯನ್ನು ಹೆಚ್ಚಿಸುವುದರಿಂದ ಸ್ವಲ್ಪ ಮಟ್ಟಿಗೆ ಸಂದುನೋವನ್ನು ಕಡಿಮೆ ಮಾಡಬಹುದು. ದೈಹಿಕ ಚಟುವಟಿಕೆ, ಶ್ರಮಗಳಿಂದ ನಮಗೆ ಬಹಳಷ್ಟು ಪ್ರಯೋಜನ ವಿದೆ ಎಂದು ಗೊತ್ತಿದ್ದಾಗ್ಯೂ ನಮ್ಮ ಆಧುನಿಕ ಜೀವನ ಬಹಳಷ್ಟು ದೈಹಿಕ ಚಟುವಟಿಕೆಗಳಿಂದ ವಂಚಿತವಾಗಿರು ವುದು ತಮಗೆಲ್ಲ ಗೊತ್ತೇ ಇದೆ. ನಿಯತವಾಗಿ ದೈಹಿಕ ಶ್ರಮ ಮಾಡದಿರುವುದು ಒಂದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ. ಹಾಗೆಯೇ ಜನರಲ್ಲಿ ಇದರ ಬಗ್ಗೆ ದಿವ್ಯ ನಿರ್ಲಕ್ಷವೂ ಇದೆ.

ಜಗತ್ತಿನ ಜನಸಂಖ್ಯೆಯ ಶೇ. 75 -80ರಷ್ಟು ಜನರು ಅಗತ್ಯ ದೈಹಿಕ ಚಟುವಟಿಕೆ ಕೈಗೊಳ್ಳದೆ ಸೋಮಾರಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಡುತ್ತದೆ. ಹಾಗೆಯೇ ಇಂಥ ಸೋಮಾರಿ ಜೀವನವು ಹಲವು ದೀರ್ಘಕಾಲಿಕ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ. ದೈಹಿಕ ಚಟುವಟಿಕೆ ಸರಿಯಾಗಿ ಕೈಗೊಳ್ಳದೆ ಜಗತ್ತಿನಾದ್ಯಂತ ವರ್ಷದಲ್ಲಿ ೫ ಮಿಲಿಯನ್ ಜನರು ಸಾಯುತ್ತಿದ್ದಾರೆ ಎನ್ನುತ್ತದೆ ಬ್ರಿಟಿಷ್ ಹೃದಯ ಪ್ರತಿಷ್ಠಾನ.

ಅಂದರೆ ಪ್ರತಿ ೯  ಜನರ ಮರಣದಲ್ಲಿ ಒಬ್ಬರದು ಈ ಕಾರಣದಿಂದ ಆಗುತ್ತದೆ ಎಂದು ಅಂದಾಜು. ದೀರ್ಘಕಾಲದ ದೈಹಿಕ ಕಾಯಿಲೆ ಗಳಿರುವಾಗ, ದೇಹಕ್ಕೆ ಹೊಡೆತ ಬಿದ್ದು ತೊಂದರೆಯಾಗಿರುವಾಗ, ವ್ಯಕ್ತಿಗೆ ಇಳಿವಯಸ್ಸಾದಾಗ ದೈಹಿಕ ಚಟುವಟಿಕೆ ಮಾಡಲು ಕಷ್ಟವಾಗುತ್ತದೆ. ಇಂಥವರಲ್ಲಿ ಮಾಂಸಖಂಡಗಳು ಶಿಥಿಲಗೊಳ್ಳುತ್ತವೆ ಮತ್ತು ಮೂಳೆಯ ಅಂಶವು ನಷ್ಟವಾಗುತ್ತದೆ (ಆಸ್ಟಿಯೋಪೊರೋಸಿಸ್).

ಇತ್ತೀಚಿನ ಒಂದು ಸಂಶೋಧನೆಯು, ದೈಹಿಕ ವ್ಯಾಯಾಮ, ಚಟುವಟಿಕೆ ಮತ್ತು ವಾಕಿಂಗ್ ಬಗೆಗೆ ಈವರೆಗೆ ನಮ್ಮಲ್ಲಿದ್ದ ಅಭಿಪ್ರಾಯವನ್ನೇ ಬದಲಿಸುತ್ತದೆ. ಒಂದು ಗುಳಿಗೆ ನುಂಗಿ ದೈಹಿಕ ಚಟುವಟಿಕೆ ರೀತಿಯ ಬದಲಾವಣೆ, ಹಾಗೆಯೇ ಮಾಂಸಖಂಡ-ಮೂಳೆಗಳಲ್ಲಿ ಅದರ ಪ್ರಭಾವ ನಿರೀಕ್ಷಿಸಲು ಸಾಧ್ಯವೇ? ಅಂಥದೊಂದು ವಿಭಿನ್ನ ಸಂಶೋಧನೆಯನ್ನು ಜಪಾನಿನ ಟೋಕಿಯೋ
ಮೆಡಿಕಲ್ ಮತ್ತು ಡೆಂಟಲ್ ವಿಶ್ವವಿದ್ಯಾಲಯದವರು ಕೈಗೊಂಡು ಹೊಸ ಔಷಧವನ್ನು ಆವಿಷ್ಕರಿಸಿದ್ದಾರೆ.

ಪ್ರೊ. ಟೊಮೊಶಿ ನಕಶಿಮಾ ಅವರು ಕೈಗೊಂಡ ಈ ಸಂಶೋಧನೆ ಇತ್ತೀಚಿನ ‘ಬೋನ್ ರೀಸರ್ಚ್’ ನಿಯತಕಾಲಿಕದಲ್ಲಿ ಪ್ರಕಟ ವಾಗಿದೆ. ಲೋಕಮಿಡಜೋಲ್ (LAMZ) ಇದು ದೈಹಿಕ ಚಟುವಟಿಕೆಯ ರೀತಿಯ ಪರಿಣಾಮ ಬೀರುವ ಹೊಸ ಔಷಧ. ಇದರ ಪರಿಣಾಮ ಪರೀಕ್ಷಿಸಲು ಸಂಶೋಧಕರು ಈ ಔಷಧವನ್ನು 10 ಮಿ.ಗ್ರಾಂ/ ಕೆ.ಜಿ. ಡೋಸ್‌ನಲ್ಲಿ ಬಾಯಿಯ ಮೂಲಕ ಇಲಿಗಳಿಗೆ ಕೊಟ್ಟರು ಅಥವಾ ಇಂಜೆಕ್ಷನ್ ರೂಪದಲ್ಲಿ 6 ಮಿ.ಗ್ರಾಂ/ಕೆ.ಜಿ. ಡೋಸ್‌ನಲ್ಲಿ ದಿನದಲ್ಲಿ 2 ಬಾರಿ ಕೊಡಲಾಯಿತು. ಹಾಗೆಯೇ ಕಂಟ್ರೋಲ್ ಔಷಧವನ್ನು ಗಂಡು ಇಲಿಗೆ 14 ದಿನ ಕೊಡಲಾಯಿತು.

ಬಾಯಿ ಹಾಗೂ ಇಂಜೆಕ್ಷನ್ ಮೂಲಕ ನೀಡಲಾದ LAMZ ಔಷಧವು ಮಾಂಸಖಂಡ ಮತ್ತು ಮೂಳೆಗಳು ಎರಡರ ಮೇಲೂ ಪರಿಣಾಮ ಬೀರಲಾರಂಭಿಸಿತು. ಹೀಗೆ ಚಿಕಿತ್ಸೆ ಮಾಡಿದ ಇಲಿಗಳಲ್ಲಿ, ಈ ಔಷಧ ಕೊಡದಿರುವ ಇಲಿಗಳಿಗಿಂತ ಮಾಂಸಖಂಡಗಳು
ವಿಸ್ತಾರಗೊಂಡವು. ಹಾಗೆಯೇ ಮಾಂಸಖಂಡಗಳ ಶಕ್ತಿಯೂ ಗಮನಾರ್ಹವಾಗಿ ಹೆಚ್ಚಾಯಿತು. ಟ್ರೆಡ್ ಮಿಲ್ ಸಾಧನ ಬಳಸಿ ದೇಹದ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ಲೋಕಮಿಡಜೋಲ್ ಔಷಧ ಕೊಟ್ಟ ಇಲಿಗಳು ಹೆಚ್ಚು ದೂರ ಕ್ರಮಿಸಿದವು ಹಾಗೂ ಸುಸ್ತಿನ ಲಕ್ಷಣಗಳು ಅವುಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಆದರೆ, ಈ ಔಷಧ ಕೊಡದಿರುವ ಗುಂಪಿನ ಇಲಿಗಳಿಗೆ ಹೆಚ್ಚು ದೂರ ಕ್ರಮಿಸಲು ಸಾಧ್ಯವಾಗಲಿಲ್ಲ, ಹಾಗೆಯೇ ಅವು ಬೇಗ ಸುಸ್ತಾದ
ಲಕ್ಷಣ ತೋರಿಸಿದವು. ಈ 2 ಭಿನ್ನ ಗುಂಪುಗಳ ಇಲಿಗಳು ಕ್ರಮಿಸಿದ ದೂರದಲ್ಲಿ ಶೇ. ೨ರಷ್ಟು ವ್ಯತ್ಯಾಸವಿದ್ದರೆ, ಮಾಂಸಖಂಡಗಳ ಶಕ್ತಿ, ಅಗಲ, ವಿಸ್ತಾರ ಇವು ಔಷದ ಸೇವನೆಯ ೧೪ ದಿನಗಳ ನಂತರ ಜಾಸ್ತಿಯಾಗಿದ್ದು ಗಮನಾರ್ಹ ಎಂದು ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾನಿಲಯದ ಡಾ. ಜೋಸೆಫ್ ವಾಟ್ಸೋ ಅಭಿಪ್ರಾಯಪಡುತ್ತಾರೆ.

ಲೋಕಮಿಡಜೋಲ್ ಕಾರ್ಯವಿಧಾನ: ಲೋಕಮಿಡಜೋಲ್ ಔಷಧವು ಮಾಂಸಖಂಡ ಮತ್ತು ಮೂಳೆಗಳಲ್ಲಿನ ಜೀವಕೋಶ ಗಳ ಒಳಗಿರುವ ಮೈಟೋಕಾಂಡ್ರಿಯಾ ಸಂಖ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಜೀನ್ ವಿಶ್ಲೇಷಣೆ ವಿಧಾನದಿಂದ
ಸಂಶೋಧಕರು ಕಂಡುಕೊಂಡರು. ಜೀವಕೋಶಗಳ ಶಕ್ತಿಯ ಕಣಜವೇ ಈ ಮೈಟೋಕಾಂಡ್ರಿಯಾಗಳು. ಅವರಿಗೆ PGC-1  ಆಲಾ ಎಂಬ ಪ್ರೋಟೀನ್‌ನ ಸಂಖ್ಯೆ ವೃದ್ಧಿಯಾಗುವುದು ಕಂಡುಬಂತು. ಈ ಪ್ರೋಟೀನ್, ಮೈಟೋಕಾಂಡ್ರಿಯಾದ ಬಯೋಜೆನಸಿಸ್ ಕ್ರಿಯೆಯನ್ನು ಹೆಚ್ಚು ಮಾಡಿ ಅದರ ಸಂಖ್ಯೆ ವೃದ್ಧಿಸುವಂತೆ ಮಾಡುತ್ತದೆ. ದೈಹಿಕ ಕಸರತ್ತು ಮತ್ತು ಶ್ರಮಗಳಿಗೆ ಅನುಕೂಲ ವಾಗುವಂತೆ ಹೊಂದಿಕೊಳ್ಳುವುದೇ ಈ ಮೈಟೋಕಾಂಡ್ರಿಯಾದ ಬಯೋಜೆನಸಿಸ್ ಕ್ರಿಯೆ ಎನ್ನಲಾಗಿದೆ.

ಈ ವಿಧಾನವನ್ನು ಮರುಪರಿಶೀಲಿಸಲು ಸಂಶೋಧಕರು PGC-1 ಆಲಾವನ್ನು ತಡೆಹಿಡಿದರು. ಇಲಿಗೆ ಲೋಕಮಿಡಜೋಲ್ ಔಷಧ ಕೊಟ್ಟರು. ಆಗ ಇಲಿಯ ಮಾಂಸಖಂಡಗಳ ಶಕ್ತಿ, ಗಾತ್ರ ಯಾವುದೂ ಹೆಚ್ಚುವುದು ಕಂಡುಬರಲಿಲ್ಲ. ಮೂಳೆಯಲ್ಲಿನ ಬದಲಾವಣೆ ತಿಳಿಯಲು ಮೈಕ್ರೋ ಸಿ.ಟಿ. ಸ್ಕ್ಯಾನ್ ತಂತ್ರಜ್ಞಾನದಿಂದ 3 ಆಯಾಮದ ಚಿತ್ರಗಳನ್ನು ತೆಗೆಯಲಾಯಿತು.

ಅದರಲ್ಲಿ ಮೂಳೆಯ ಗಾತ್ರ, ಸಾಂದ್ರತೆ, ಲವಣಾಂಶಗಳು ಹೆಚ್ಚಾಗಿರುವುದು ಕಂಡುಬಂದಿತು. ಮೂಳೆಯ ಜೀವಕೋಶಗಳನ್ನು ವಿಶ್ಲೇಷಿಸಿದಾಗ ಹೆಚ್ಚಿದ ಜೀವಕೋಶಗಳ ಸಂಖ್ಯೆ ಹಾಗೂ ನಷ್ಟವಾದ ಮೂಳೆಯ ಅಂಶಗಳು ಗಮನಾರ್ಹವಾಗಿ ಕಡಿಮೆ
ಯಾಗಿರುವುದು ಕಂಡುಬಂದಿತು. ಹಾಗಾಗಿ ಲೋಕಮಿಡಜೋಲ್ ಔಷಧ ಕೊಟ್ಟ ಇಲಿಗಳಲ್ಲಿ ಮಾಂಸಖಂಡಗಳ ಎಳೆಗಳು ವಿಸ್ತಾರಗೊಂಡು ಮಾಂಸಖಂಡಗಳ ಶಕ್ತಿ ಜಾಸ್ತಿಯಾಗಿದ್ದು ಕಂಡುಬಂದಿತು.

ಮೂಳೆಯ ಬೆಳವಣಿಗೆ ಜಾಸ್ತಿಯಾಗಿರುವುದು, ಮೂಳೆ ಸವೆಯುವ ವೇಗ ಕಡಿಮೆ ಯಾಗುವುದು ಇವೆಲ್ಲ ತಮ್ಮ ಗಮನಕ್ಕೆ ಬಂದಿತು
ಎನ್ನುತ್ತಾರೆ ಈ ಅಧ್ಯಯನದ ಮತ್ತೊಬ್ಬ ವಿಜ್ಞಾನಿ ಟಕಹಿಟೋ ಓನೋ.

ದೈಹಿಕ ಚಟುವಟಿಕೆ ಅಥವಾ ಗುಳಿಗೆ?
ಲೋಕಮಿಡಜೋಲ್ ಔಷಧವು ಮೂಳೆ-ಮಾಂಸಖಂಡಗಳ ಶಕ್ತಿಯನ್ನು ವೃದ್ಧಿಸಬಲ್ಲದು ಎಂಬುದನ್ನು ಮೇಲಿನ ಅಧ್ಯಯನವು ಸಾಬೀತುಪಡಿಸುತ್ತದೆ. ಮತ್ತೊಂದು ವಿಚಾರವೆಂದರೆ ಈ ಔಷಧದಿಂದ ಪಾರ್ಶ್ವ ಪರಿಣಾಮಗಳಿಲ್ಲ; ಹಾಗಾಗಿ ದೈಹಿಕ ಕಸರತ್ತು ಅಥವಾ ವ್ಯಾಯಾಮ ನಮಗೆ ದೊರಕಿಸುವ ಎಲ್ಲಾ ಧನಾತ್ಮಕ ಅಂಶಗಳನ್ನೂ ದೊರಕಿಸುತ್ತದೆ ಎನ್ನಲಾಗಿದೆ. ಇದು ಇಲಿಯಂಥ ಪ್ರಯೋಗದ ಪ್ರಾಣಿಗಳಲ್ಲಿ ಕಂಡುಬಂದ ಪರಿಣಾಮಗಳಾದರೆ, ಮನುಷ್ಯನಲ್ಲಿ ನಾವು ಪ್ರಯತ್ನಿಸುವಾಗ ನಮ್ಮ ದೇಹ ಇದಕ್ಕೆ ಹೇಗೆ ಸ್ಪಂದಿಸುತ್ತದೆ ಎಂದು ಹೇಳುವುದು ಕಷ್ಟ. ಪ್ರಾಣಿಗಳಲ್ಲಿ ಕಂಡುಬಂದ ಹಾಗೆಯೇ ಮನುಷ್ಯರಲ್ಲಿಯೂ ಪಾರ್ಶ್ವ ಪರಿಣಾಮಗಳು
ಕಂಡುಬರಲಿಕ್ಕಿಲ್ಲ ಎಂದು ಡಾ.ವಾಟ್ಸೋ ಅಭಿಪ್ರಾಯಪಡುತ್ತಾರೆ.

ಹಾಗಂತ, ನಿಯತವಾದ ದೈಹಿಕ ಕಸರತ್ತು, ಚಟುವಟಿಕೆ, ವಾಕಿಂಗ್ ಇವನ್ನೆಲ್ಲ ಬದಿಗೊತ್ತಿ ಇಂಥ ಒಂದು ಗುಳಿಗೆ ಸೇವಿಸುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ ಎಂಬುದು ಅವರ ಅನಿಸಿಕೆ. ಇದು ನನ್ನ ಮತ್ತು ನಿಮ್ಮ ಅಭಿಪ್ರಾಯವೂ ಹೌದಲ್ಲವೇ? ದೈಹಿಕ ಚಟುವಟಿಕೆ ಸಾಧ್ಯವಿಲ್ಲದ ವ್ಯಕ್ತಿಗಳಲ್ಲಿ, ವಿರಳಾತಿವಿರಳ ಸಂದರ್ಭಗಳಲ್ಲಿ ಇಂಥ ಗುಳಿಗೆ ಉಪಯೋಗಿಸಬಹುದು. ದೈಹಿಕ
ಚಟುವಟಿಕೆ ಸಾಧ್ಯವಿದ್ದವರಲ್ಲಿ ವ್ಯಾಯಾಮ, ನಡಿಗೆ, ಓಡುವಿಕೆ ಇವೇ ಆದ್ಯತೆಯಾಗಬೇಕು.

ಮನುಷ್ಯನಲ್ಲಿ ಇದರ ಪರಿಣಾಮಗಳ ಬಗ್ಗೆ ಪ್ರಯೋಗಗಳು ಸದ್ಯದ ಆರಂಭವಾಗಲಿವೆ. ಈ ಲೋಕಮಿಡಜೋಲ್ ಔಷಧದ
ಪೂರ್ವಭಾವಿ ಸಂಶೋಧನೆಯ ಬಗೆಗಿನ ಪ್ರಸ್ತಾಪ ಇಲ್ಲಿ ಅಗತ್ಯ. ವ್ಯಾಯಾಮ ಮಾಡಿದಾಗ ರಕ್ತದಲ್ಲಿ ಉತ್ಪಾದನೆಯಾಗುವ ಒಂದು ರಾಸಾಯನಿಕ ವಸ್ತುವನ್ನು ಅಮೆರಿಕದ ಬೇಲಾರ್ ವೈದ್ಯಕೀಯ ಕಾಲೇಜು ಮತ್ತು ಸ್ಟಾನ್ ಫೋರ್ಡ್ ವೈದ್ಯಕೀಯ ಸಂಸ್ಥೆಯ ಸಂಶೋಧಕರು ಮೊಟ್ಟಮೊದಲ ಬಾರಿಗೆ ಕೆಲವು ತಿಂಗಳುಗಳ ಮೊದಲು ಗುರುತಿಸಿದರು. ಈ ವಸ್ತುವು ಇಲಿಗಳಲ್ಲಿ ಆಹಾರ ತೆಗೆದು ಕೊಳ್ಳುವ ಇಚ್ಛೆಯನ್ನು ತಗ್ಗಿಸುತ್ತದೆ, ಸ್ಥೂಲಕಾಯವನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ, ದೈಹಿಕ ಪರಿಶ್ರಮದ ಧನಾತ್ಮಕ ಅಂಶಗಳಿಗೆ ಕಾರಣೀಭೂತವಾಗುವ ಮೂಲವಸ್ತುವನ್ನು ಶೋಧಿಸುವುದೇ ಈ
ಸಂಶೋಧನೆಯ ಉದ್ದೇಶ. ಇದನ್ನು ಕಂಡುಹಿಡಿಯಲು ಅವರು ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವ ಇಲಿಗಳಿಂದ ರಕ್ತವನ್ನು ತೆಗೆದು ವಿಶ್ಲೇಷಿಸಿದರು. ಆಗ ಅವರಿಗೆ ಲ್ಯಾಕ್-ಫೇ (Lac-Phe) ಎಂಬ ಅಮೈನೋಆಮ್ಲ ತುಂಬಾ ಜಾಸ್ತಿ ಪ್ರಮಾಣದಲ್ಲಿ ಉತ್ಪಾದನೆಯಾಗು ತ್ತಿರುವುದು ಗಮನಕ್ಕೆ ಬಂದಿತು.

ವ್ಯಾಯಾಮದಲ್ಲಿ ಉತ್ಪನ್ನಗೊಳ್ಳುವ ಲ್ಯಾಕ್ಟಿಕ್ ಆಮ್ಲ ಮತ್ತು ಫೀನೈಲಲನಿನ್ ಇವೆರೆಡರ ಸಂಯೋಗವೇ ಲ್ಯಾಕ್-ಫೇ. ಫೀನೈಲಲನಿನ್ ಇದು ಪ್ರೋಟೀನ್‌ನ ಆರಂಭಿಕ ವಸ್ತು. ಈ ಲ್ಯಾಕ್-ಫೇ ಯನ್ನು ಇಲಿಗಳಿಗೆ 10 ದಿನ ಕೊಟ್ಟಾಗ ಅವು ಆಹಾರ ತೆಗೆದುಕೊಳ್ಳುವಿಕೆ ಕಡಿಮೆಯಾಯಿತು, ದೇಹದಲ್ಲಿನ ಕೊಬ್ಬಿನಂಶ ಗಮನಾರ್ಹವಾಗಿ ಕುಂದಿತು, ಗ್ಲುಕೋಸ್ ಟಾಲರೆನ್ಸ್
ಜಾಸ್ತಿಯಾಯಿತು. ಇದೇ ವೇಳೆ ರೇಸ್ ಕುದುರೆ ಮತ್ತು ಮನುಷ್ಯರಲ್ಲೂ ದೈಹಿಕ ಪರಿಶ್ರಮದ ನಂತರ ಲ್ಯಾಕ್-ಫೇ ಮಟ್ಟ ಗಮನಾರ್ಹ ವಾಗಿ ಹೆಚ್ಚಾಗಿರುವುದನ್ನು ಕಂಡುಕೊಂಡರು.

ವ್ಯಕ್ತಿ ವೇಗವಾಗಿ ಓಡಿದಾಗ ಈ ವಸ್ತು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗೆಯೇ ರೆಸಿಸ್ಟನ್ಸ್ ತರಬೇತಿ ಮತ್ತು ಮತ್ತಿತರ ಕಠಿಣ ತಮ ದೈಹಿಕ ಚಟುವಟಿಕೆಗಳಲ್ಲೂ ಇದು ಮನುಷ್ಯರಲ್ಲಿ ಜಾಸ್ತಿಯಾಗುತ್ತದೆ. ಈ ಲ್ಯಾಕ್-ಫೇ ಮಾನವದೇಹದ ವಿವಿಧ ಅಂಗಗಳ ಮೇಲೆ ಅದರಲ್ಲೂ ಮಿದುಳಿನ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳಲು ಸಂಶೋಧಕರು ಉತ್ಸುಕರಾಗಿದ್ದಾರೆ. ಆ ದಿಸೆಯಲ್ಲಿಯೇ ಸಂಶೋಧನೆ ಮುಂದುವರಿಸುತ್ತಿದ್ದಾರೆ.

ಈ ವಸ್ತುವಿನ ಶೋಧದ ಮೊದಲೂ ಈ ಬಗೆಗೆ ಚಿಂತನೆ, ಸಂಶೋಧನೆ ನಡೆದಿತ್ತು. 2008ರಲ್ಲಿ ವ್ಯಾಯಾಮ ಗುಳಿಗೆ ಎಂದು ಕರೆಯುತ್ತಿದ್ದ ವಸ್ತು- 516 ಎಂಬ ಔಷಧವನ್ನು ಕಂಡುಹಿಡಿಯಲಾಗಿತ್ತು. ಹಾಗೆಯೇ ಇತ್ತೀಚೆಗೆ ಸೆಸ್ಟ್ರಿನ್ ಎಂಬ ಮತ್ತೊಂದು
ಪ್ರೋಟೀನ್- ಮೇಲಿನ ರೀತಿಯ ಪರಿಣಾಮ ಬೀರುವ ಮತ್ತೊಂದು ಔಷಧ ಕಂಡು ಹಿಡಿಯಲಾಗಿತ್ತು.

ಈ ಎಲ್ಲ ಮೇಲಿನ ಔಷಧಗಳ ಬಗ್ಗೆ ಸಂಶೋಧನೆ ಕೈಗೊಂಡಿರುವ ಉದ್ದೇಶ ವಯಸ್ಸಾಗಿ ದೈಹಿಕ ಶ್ರಮ ಮಾಡಲು ಸಾಧ್ಯ ವಾಗದವರಲ್ಲಿ ಮೂಳೆ ಸವೆಯುವ ಕಾಯಿಲೆ, ಹೃದಯದ ಕಾಯಿಲೆಯಂಥ ಸಮಸ್ಯೆಗಳು ಬರದಿರುವಂತೆ ಮಾಡುವುದು ಹಾಗೂ
ವ್ಯಾಯಾಮದ ಧನಾತ್ಮಕ ಅಂಶಗಳನ್ನು ಅವರಿಗೆ ಲಭ್ಯವಾಗುವಂತೆ ಮಾಡುವುದು.

error: Content is protected !!