Tuesday, 27th July 2021

ನೇತ್ರ, ತಲೆನೋವಿನ ನಡುವಿನ ಸಂಬಂಧ !

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

‘ಡಾಕ್ಟ್ರೆ ಶಾಲೆಯಿಂದ ಬಂದ ಕೂಡಲೇ ತಲೆನೋವು ಎಂದು ಮಲಗಿಬಿಡ್ತಾನೆ, ಸ್ವಲ್ಪ ಪರೀಕ್ಷಿಸಿ’ ಎಂದೋ ಅಥವಾ ಎರಡು, ಮೂರು ಪುಟ ಓದಿದಕೂಡಲೇ ಕಣ್ಣು ನೋವು, ತಲೆನೋವು ಎಂದು ಹೇಳುತ್ತಿರುತ್ತಾಳೆ ನಮ್ಮ ಹುಡುಗಿ ಎಂದೋ ಪಾಲಕರು ನೇತ್ರ ವೈದ್ಯರಲ್ಲಿ ಕರೆದುಕೊಂಡು ಬರುವುದು ಸ್ವಾಭಾವಿಕ.

ಕೆಲವೊಮ್ಮೆ ಬೇರೆ ವೈದ್ಯರು ತಲೆನೋವಿಗೆ ವಿವಿಧ ಚಿಕಿತ್ಸೆ ಮಾಡಿ ವಿಫಲರಾಗಿ ಕಣ್ಣಿನ ವೈದ್ಯರಲ್ಲಿ ಪರೀಕ್ಷೆಗೆ ಕಳಿಸಿದ ಸಂದರ್ಭಗಳೂ ಇವೆ. 20-30 ವರ್ಷಗಳ ಮನೆಯಲ್ಲಿಯೇ ಇರುವ ಮಹಿಳೆಯರು ಅಥವಾ ವಿವಿಧ ಬ್ಯಾಂಕ್, ಶಾಲೆ, ಕಾಲೇಜುಗಳಲ್ಲಿ ಕೆಲಸ ಮಾಡುವವರೂ, ವಿವಿಧ ಕಾರಣಗಳಿಂದ ಕಣ್ಣಿನ ವೈದ್ಯರಲ್ಲಿ ಪರೀಕ್ಷೆಗೆ ಬರುತ್ತಾರೆ. ಈಗಂತೂ ಲಾಕ್‌ಡೌನ್ ಮdತ್ತು ಕೋವಿಡ್ ಕಾರಣಗಳಿಂದ ಹೆಚ್ಚಿನ ಎಲ್ಲಾ ವಯಸ್ಸಿನವರು ಆನ್‌ಲೈನ್‌ನಲ್ಲಿ ತಮ್ಮ ಕೆಲಸಗಳನ್ನು ಮಾಡುತ್ತಿರುವುದರಿಂದ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಉಪಯೋಗ ಹೆಚ್ಚಾಗಿದೆ.

ಹಾಗೆಯೇ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಉಪಯೋಗವೂ ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ತುಂಬಾ ಜಾಸ್ತಿಯಾಗಿದೆ. ಹಾಗೆಯೇ ಮೊಬೈಲ್ ಫೋನ್ ಎಲ್ಲಾ ವರ್ಗದ ಎಲ್ಲಾ ಸ್ತರದ ಜನರು ಉಪಯೋಗಿಸು ತ್ತಿರುವುದರಿಂದ ಕಣ್ಣಿನಲ್ಲಿ ಹಲವು ವಿಧದ ತೊಂದರೆಗಳು ಕಾಣಿಸಿ ಕೊಳ್ಳುತ್ತವೆ. ಒಟ್ಟಿನಲ್ಲಿ ವಿವಿಧ ಕಾರಣಗಳಿಂದ ನೇತ್ರ ವೈದ್ಯರಲ್ಲಿ ಭೇಟಿ ಕೊಡುವ ರೋಗಿಗಳಲ್ಲಿ ಶೇ.40 ರಿಂದ ಶೇ.50ರಷ್ಟು ರೋಗಿಗಳು ತಲೆನೋವಿನ ಬಗೆಗಿನ ನೇತ್ರ ಪರೀಕ್ಷೆಗಾಗಿಯೇ ಬರುತ್ತಾರೆ.

ಅತಿ ಸಾಮಾನ್ಯ ರೋಗ ಲಕ್ಷಣವಾದ ತಲೆನೋವು ಒಂದಲ್ಲ ಒಂದು ಸಮಯದಲ್ಲಿ ಬೇರೆ ಬೇರೆ ಕಾರಣಗಳಿಂದ ಪ್ರತಿಯೊಬ್ಬರನ್ನೂ ಕಾಡುತ್ತದೆ. ಮೇಲ್ನೋಟಕ್ಕೆ ಇದೇನು ಮಹಾ ಎಂದು ಕಾಣಬಹುದಾದ ಈ ತಲೆನೋವು ಎಷ್ಟೋ ಬಾರಿ, ಇದರ ಮೂಲ ಕಾರಣ ಕಂಡು ಹಿಡಿಯಲು ಸಾಧ್ಯವಾಗದೇ, ವೈದ್ಯರಿಗೆ ಕೆಲವೊಮ್ಮೆ ನಿಜವಾದ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ- ತಲೆನೋವಿಗೆ ಕಾರಣವಾಗುವ ಅಂಶಗಳು ಹತ್ತು ಹಲವು. ಎಷ್ಟೋ ವೇಳೆ ದೈಹಿಕ ಮಾತ್ರವಲ್ಲದೆ ಮಾನಸಿಕವಾದ ಕಾಯಿಲೆ ಭಾವನೆಗಳೂ ಇದಕ್ಕೆ ಕಾರಣವಾಗುತ್ತವೆ

ಹಲವು ಬಾರಿ ಈ ತಲೆನೋವಿನ ನಿಜವಾದ ಕಾರಣವನ್ನು ಗೊತ್ತುಪಡಿ ಸಲು ದುಬಾರಿಯಾದ ವಿವಿಧ ಪರೀಕ್ಷೆಗಳಿಗೆ ಒಳಪಡಿಸ ಬೇಕಾದ ಅನಿವಾರ್ಯತೆಯೂ ಒದಗುತ್ತದೆ. ಉದಾಹರಣೆಗೆ ಮೆದುಳಿನಲ್ಲಿ ಗೆಡ್ಡೆಗಳು ಅಥವಾ ಬೇರೆ ತೊಂದರೆಗಳು ಇವೆಯೇ ಎಂಬುದನ್ನು ತಿಳಿಯಲು CT Scan ಅಥವಾ MRI scan ಎಂಬ
ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ತಲೆನೋವು ತಲೆಯ ಭಾಗದ ನೋವಿಗೆ ಸ್ಪಂದಿಸುವ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ 1) ತಲೆ ಬುರುಡೆಯ ಒಳಗೆ ಮತ್ತು ಹೊರಗೆ ಇರುವ ರಕ್ತ ನಾಳಗಳು. 2) ತಲೆ ಬುರುಡೆಯ ತಳ ಭಾಗದಲ್ಲಿರುವ ಮೆದುಳಿನ ಬಾಹ್ಯ ಕವಚವಾದ ಡ್ಯೂರಾ ಮ್ಯಾಟರ್, 3) ಕಪಾಲದ ನರಗಳು (Cranial nerves) 4) ತಲೆ ಬುರುಡೆಯ ಸುತ್ತಲಿರುವ ಮಾಂಸಖಂಡಗಳು. ತಲೆನೋವು ಸಾಮಾನ್ಯವಾಗಿ ತಲೆ ಬುರುಡೆಯ ಒಳಗೆ ಮತ್ತು ಹೊರಗಿರುವ ರಕ್ತ ನಾಳಗಳ ಆಕುಂಚನ, ಪ್ರಸರಣಗಳಿಂದ ಉಂಟಾಗುತ್ತದೆ. ಹಾಗೆಯೇ ಕಪಾಲದ ನರಗಳ ಅಥವಾ ಡ್ಯೂರಾ ಮ್ಯಾಟರ್‌ನ ಕೆರಳುವಿಕೆಯಿಂದ ಮತ್ತು ಮಾಂಸಗಳ ಸೆಳೆತದಿಂದ ತಲೆನೋವು ಉಂಟಾಗಬಹುದು. ಆದರೆ ಮೆದುಳು ಮಾತ್ರ ಯಾವ ನೋವಿನ ತರಂಗಗಳಿಗೂ ಸ್ಪಂದಿಸುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.

ತಲೆನೋವಿನ ಕಾರಣಗಳು: ಕಣ್ಣಿಗೆ ಸಂಬಂಧಪಟ್ಟ ಕಾರಣಗಳನ್ನು ಬಿಟ್ಟು ಉಳಿದ ಮುಖ್ಯ ಕಾರಣಗಳೆಂದರೆ: 1)ಸೈನಸ್ ಭಾಗಗಳಲ್ಲಿ ಉಂಟಾಗುವ ಸೋಂಕು, (Sinusitis). 2) ಹಲ್ಲಿಗೆ ಸಂಬಂಧಪಟ್ಟ ಕಾರಣಗಳು, 3)ಮೈಯೊಳಗಿನ ಕಾರಣಗಳು – ನಂಜಿನ ತಲೆನೋವು, ಮಲಬದ್ಧತೆ, ಆಯಾಸ, ಶ್ರಮ ಇತ್ಯಾದಿ. 4) ದೇಹದೊಳಗಿನ ಕಾಯಿಲೆಗಳು- ಯುರೀಮಿಯ, ಹೈಪೋಥೈರಾಯ್ಡಿಸಮ್, ರಕ್ತದಲ್ಲಿ ಸಕ್ಕರೆ ಕಡಿಮೆಯಾಗುವುದು, ಋತುಚಕ್ರದಲ್ಲಿ ಉಂಟಾಗುವ ಹಾರ್ಮೋನು ಗಳಿಂದಾಗುವ ಬದಲಾವಣೆಗಳು, 5) ಏರು ರಕ್ತದೊತ್ತಡ, 6) ಆತಂಕ, ಖಿನ್ನತೆ ಯಂತಹ ಮಾನಸಿಕ ರೋಗಗಳು, 7) ಮೈಗ್ರೇನ್ ತಲೆನೋವು, 8) ತಲೆಯ ಒಳಗಿನ ಕಾರಣಗಳಿಂದ ಬರುವ ತಲೆನೋವು – ಮೆನಿಂಜೈಟಿಸ್ (ಮೆದುಳಿನ ಹೊರ ಪದರದ ಸೋಂಕು), ವಿವಿಧ ಗೆಡ್ಡೆಗಳು, ಸಬ್ ಅರಕ್ನಾಯಿಡ್
ಹೆಮೊರೇಜ್ (ಮೆದುಳಿನ ಹೊರ ಭಾಗದಲ್ಲಿ ರಕ್ತಸ್ರಾವ) ಇತ್ಯಾದಿ.

ಪರಿಸರದ ಕಾರಣಗಳು- ತೀವ್ರ ಪ್ರಮಾಣದ ಬಿಸಿಲು, ಉಷ್ಣತೆ, ವಿಪರೀತ ಶಬ್ದ, ಕಡುವಾಸನೆ, ಜನಸಂದಣಿ, ಆಮ್ಲಜನಕ ಕೊರತೆ, ಜಿಗುಪ್ಸೆ ಉಂಟುಮಾಡುವ ಕೊಳಕುತನ. ಕಣ್ಣಿಗೆ ಸಂಬಂಧಪಟ್ಟ ಕಾರಣಗಳು: 1) ಚಿಕಿತ್ಸೆ ಮಾಡದೆ ಇರುವ ದೃಷ್ಟಿದೋಷಗಳು, 2) ಕೋಸುಗಣ್ಣು ಅಥವಾ ಮೆಳ್ಳೆಗಣ್ಣು (Squint eyes) 3) ಕಣ್ಣಿನ ಹೊರಗಿನ ಮಾಂಸಗಳಲ್ಲಿ ಆಗುವ ಬದಲಾವಣೆಗಳು ಉದಾ: Accommodative insufficiency, Convergence insufficiency, 4) ಕಣ್ಣಿನ ನರಗಳ ಸೆಳೆತ, 5) ಕಣ್ಣಿನ ಒತ್ತಡ ಜಾಸ್ತಿ ಮಾಡುವ ಕಾಯಿಲೆ- ಗ್ಲೊಕೋಮಾ, 6) ತಾರಕೆಯ ಸೋಂಕು (Iridocyclitis), 7) ಆಪ್ಟಿಕ್ ನರದ ಸೋಂಕು (ಆಪ್ಟಿಕ್ ನ್ಯೂರೈಟಿಸ), 8) ಕಣ್ಣು ಗುಡ್ಡೆಯ ಹೊರಭಾಗದಲ್ಲಿ ಬೆಳೆಯುವ ವಿವಿಧ ಗಡ್ಡೆಗಳು.

ಕಣ್ಣಿನ ಕಾರಣದ ತಲೆನೋವಿನ ಲಕ್ಷಣಗಳು: ಈ ರೀತಿಯ ತಲೆನೋವು ಕಣ್ಣುಗುಡ್ಡೆಯ ಪಕ್ಕದಲ್ಲಿ ಅಂದರೆ ತಲೆಯ ಮುಂಭಾಗದಲ್ಲಿ ಹೆಚ್ಚು ಕಾಣಿಸಿಕೊಂಡರೂ ಕೆಲವೊಮ್ಮೆ ತಲೆಯ ಬದಿಯ ಭಾಗದಲ್ಲಿ ಹಾಗೂ ಕೆಲವೊಮ್ಮೆ ತಲೆಯ ಹಿಂಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಇದು ಒಂದೇ ತೀಕ್ಷ್ಣತೆಯಲ್ಲಿ ತೀರ ಸಣ್ಣ ಪ್ರಮಾಣದಲ್ಲಿ ಇದ್ದು ಕಣ್ಣಿನ ಉಪಯೋಗ ಹೆಚ್ಚಾದಾಗ ತಲೆನೋವು ಹೆಚ್ಚಾಗುತ್ತದೆ. ಮುಖ್ಯ ಕಾರಣ ಎಂದರೆ ಕಣ್ಣಿನ ಗುಡ್ಡೆಯ ಹೊರಗೆ ಇರುವ ಸಣ್ಣ ಸಣ್ಣ ಮಾಸಗಳಲ್ಲಿ ಆಗುವ ಬದಲಾವಣೆಗಳು.

ಕಪಾಲದ 5ನೇ ನರ (5 th cranial nerve) ಕಣ್ಣಿನ ಭಾಗಕ್ಕೆ ಬರುವುದರಿಂದ ಆ ನರದ ಮೂಲಕ ಮುಖ ಮತ್ತು ತಲೆಯ ವಿವಿಧ ಭಾಗಗಳಿಗೆ ಈ ನೋವಿನ ಅಂಶ ಪಸರಿಸುತ್ತದೆ. ಇದೇ ರೀತಿ ವಿವಿಧ ನರಗಳ ಮೂಲಕ ನೋವಿನ ಅಂಶ ಪಸರಿಸಿಯೇ ತಲೆಯ ಹಿಂಭಾಗದಲ್ಲಿ ಹಾಗೂ ಕುತ್ತಿಗೆಯ ಭಾಗದಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣಿನಿಂದ ತಲೆನೋವಿಗೆ ಕಾರಣ – ವಿವಿಧ ದೃಷ್ಟಿದೋಷಗಳು. ಹಾಗಾಗಿ ಈ ದೃಷ್ಟಿದೋಷಗಳ ಬಗ್ಗೆ ವಿವರವಾಗಿ ತಿಳಿಯುವ ಅವಶ್ಯಕತೆ ಇದೆ.

ಸಾಮಾನ್ಯ ದೃಷ್ಟಿ ದೋಷ: ಬಹಳ ಸಾಮಾನ್ಯ ದೃಷ್ಟಿದೋಷವೆಂದರೆ 40 ವರ್ಷ ಸುಮಾರಿಗೆ ಹತ್ತಿರದ ವಸ್ತುಗಳನ್ನು ನೋಡಲು ತೊಂದರೆಯಾಗುತ್ತದೆ.
ಓದುವುದು, ಬರೆಯುವುದು ಕಷ್ಟವಾಗುತ್ತದೆ ಎಂದು ಪ್ರಾರಂಭವಾಗುವ ದೂರದೃಷ್ಟಿ. ಚಾಳೀಸಿನ ತೊಂದರೆ ಎಂದು ಕರೆಯಲ್ಪಡುವ ಈ ದೋಷದಲ್ಲಿ ಕಣ್ಣಿನ ಒಳಗಿರುವ ನೈಸರ್ಗಿಕ ಮಸೂರವು ಗಟ್ಟಿಯಾಗಿ ಕಣ್ಣಿನ ಸಣ್ಣ ಮಾಂಸಗಳಿಂದ ರೂಪಾಂತರಗೊಳ್ಳುವ ಶಕ್ತಿ ಯನ್ನು ಕಳಕೊಳ್ಳುತ್ತದೆ. ಆಗ ಸೂಕ್ತ ಪೀನಮಸೂರ ವನ್ನು ಕನ್ನಡಕದ ರೂಪದಲ್ಲಿ ಕೊಡುವುದರಿಂದ ತೊಂದರೆಯನ್ನು ನಿವಾರಿಸಬಹುದು.

ಲಕ್ಷಣಗಳಾವುವು: ವಿವಿಧ ದೃಷ್ಟಿದೋಷ ಇರುವವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ ತಲೆನೋವು, ಬಹಳ ಹೊತ್ತು ಕಣ್ಣಿಗೆ ಕೆಲಸ ಕೊಟ್ಟಾಗ ಸುಸ್ತಾಗುವುದು, ಕಣ್ಣಿನ ಒಳಭಾಗದಲ್ಲಿ ನೋವು, ಬೆಳಕನ್ನು ಹೆಚ್ಚು ಹೊತ್ತು ನೋಡಲು ತೊಂದರೆಯಾಗುವುದು ಮತ್ತು ಮುಖ್ಯವಾಗಿ ದೃಷ್ಟಿ ಕಡಿಮೆಯಾಗುವುದು. ಈ ಎಲ್ಲಾ ತೊಂದರೆಗಳ ಕಾರಣ ಎಂದರೆ – ಅಕ್ಷಿಪಟಲದ ಮೇಲೆ ಅಸ್ಪಷ್ಟ ಆಕೃತಿ ಮಾಡುವುದರಿಂದ ಕಣ್ಣಿನ ವಿವಿಧ ಸಣ್ಣ ಮಾಂಸಗಳು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಉಂಟಾಗಿರುವ ತೊಂದರೆಯನ್ನು ಸರಿಪಡಿಸಲು ಪ್ರಯತ್ನಿಸುತ್ತವೆ.

ಕೆಲವು ಬಾರಿ ದೃಷ್ಟಿದೋಷಗಳು: ಅನುವಂಶಿಕವಾಗಿರುತ್ತವೆ. ಬಹಳ ದೊಡ್ಡ ಪ್ರಮಾಣದ ದೃಷ್ಟಿದೋಷ ಇರುವವರಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣಿನಲ್ಲಿ ಬೇರೆ ಕಾಯಿಲೆಗಳಿರಬಹುದು. ಉದಾ: ರಾತ್ರಿ ದೃಷ್ಟಿ ಮಾಂದ್ಯ, ಹುಟ್ಟಿನಿಂದ ಕಣ್ಣು ಬಹಳ ಸಣ್ಣದಿರುವುದು, ಕಣ್ಣು ಯಾವಾಗಲೂ ಅದುರುತ್ತಿರುವುದು, ಅಕ್ಷಿಪಟಲ ಬೇರ್ಪಡುವಿಕೆ (Retinal detachment) ಇತ್ಯಾದಿ.

ದೃಷ್ಟಿದೋಷದ ಪ್ರಬೇಧಗಳು: ಮುಖ್ಯವಾದ ದೃಷ್ಟಿ ದೋಷಗಳೆಂದರೆ ಸಮೀಪ ದೃಷ್ಟಿ (Myopia), ದೂರದೃಷ್ಟಿ (Hypermetropia), ಅಸಮನಿಟ್ಟು (Astigmatism). ಈ ಎಲ್ಲಾ ದೃಷ್ಟಿದೋಷಗಳಲ್ಲಿ ಇರುವ ಮುಖ್ಯ ದೋಷ ಎಂದರೆ ಸಾಮಾನ್ಯ ಎಲ್ಲರಲ್ಲಿರುವಂತೆ ಬೆಳಕಿನ ಕಿರಣಗಳು ಬೆಳಕನ್ನು ಗ್ರಹಿಸುವ ಅಕ್ಷಿಪಟಲದ ಮೇಲೆ ಕೇಂದ್ರೀಕರಣಗೊಳ್ಳುವುದಿಲ್ಲ. ಇದಕ್ಕೆ ಕಾರಣ ಕೆಳಗಿನ ಯಾವ ಒಂದು ಅಂಶವೂ ಆಗಿರಬಹುದು. 1) ಕಣ್ಣು ಗುಡ್ಡೆ ತೀರಾ ಸಣ್ಣದಿರಬಹುದು ಅಥವಾ ತೀರಾ ಸಣ್ಣದಿರಬಹುದು. 2) ಕಾರ್ನಿಯಾ (ಕಣ್ಣೆದುರಿನ ಕಪ್ಪು ಭಾಗ- ಪಾರದರ್ಶಕ ಪಟಲ) ಮತ್ತು ಮಸೂರಗಳ (ಕಣ್ಣೊಳಗಿನ ನೈಸರ್ಗಿಕ ಮಸೂರ- Lens) ಕಿರಣಗಳನ್ನು ವಕ್ರೀಭವಿಸುವ ಭಾಗಗಳು ಅಸಾಮಾನ್ಯವಾಗಿ ಡೊಂಕಾಗಿರಬಹುದು. 3) ಕಿರಣಗಳ ವಕ್ರೀಭವಿಸುವ ಭಾಗಗಳ- ವಕ್ರೀಭವನ  ಸೂಚಕವು ವ್ಯತ್ಯಾಸವಾಗಿರಬಹುದು. ೪.ಮಸೂರವು ತನ್ನ ಸಾಮಾನ್ಯ ಜಾಗದಲ್ಲಿ ಇಲ್ಲದೆ ಇರುವುದು.

ಸಮೀಪದೃಷ್ಟಿ : ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗಲು ಆರಂಭಿಸುವಾಗ ಬೋರ್ಡ್‌ನಲ್ಲಿ ಬರೆದದ್ದು ಕಾಣುವು ದಿಲ್ಲ ಎನ್ನುವಾಗ, ಈ ರೀತಿಯ ದೃಷ್ಟಿದೋಷ ಗೊತ್ತಾಗುತ್ತದೆ. ಇದರಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಮುಂಭಾಗದಲ್ಲಿ ಕೇಂದ್ರೀಕರಣ ಗೊಳ್ಳುತ್ತವೆ. ಕೆಲವು ಮಕ್ಕಳಿಗೆ ಹುಟ್ಟುವಾಗಲೇ ಈ ರೀತಿಯ ದೃಷ್ಟಿದೋಷ ಇರುತ್ತದೆ. ಕೆಲವರಿಗೆ ಈ ದೃಷ್ಟಿದೋಷ ಬಹಳ ಬೇಗ ಹೆಚ್ಚಾಗುತ್ತಾ ಹೋಗುತ್ತದೆ. ಇಂತಹವರಲ್ಲಿ ಅಕ್ಷಿಪಟಲ ಕ್ಷೀಣವಾಗುವ ಚಿಹ್ನೆಗಳು ಕಾಣಿಸಿ ಕೊಂಡು, ದೃಷ್ಟಿಯೂ ಪತನವಾಗುತ್ತಾ ಹೋಗುತ್ತದೆ. ಸಮೀಪ ದೃಷ್ಟಿಯ ಮುಖ್ಯ ಕಾರಣ ಗಳೆಂದರೆ- ಕಣ್ಣಿನ ಬೆಳವಣಿಗೆಯನ್ನು ನಿಯಂತ್ರಿಸುವ ತಳಿಶಾಸದ ಕಾರಣಗಳು (Genetic factors), ಆಹಾರದಲ್ಲಿ ಸತ್ವಹೀನತೆ, ನಿಶ್ಯಕ್ತಿ ಮಾಡುವ ರೋಗ ಗಳು, ದೇಹದಲ್ಲಿನ Endocrine glands ಗಳ ವ್ಯತ್ಯಾಸಗಳು ಇತ್ಯಾದಿ.  ಜನ ಸಾಮಾನ್ಯರು ತಿಳಿದಂತೆ ಹೆಚ್ಚು ಹತ್ತಿರದ ಕೆಲಸ ಮಾಡಿದರೆ ಈ ರೀತಿಯ ದೃಷ್ಟಿದೋಷ ಬರುತ್ತದೆ ಎಂಬ ಭಾವನೆ ತಪ್ಪು. ಈ ದೃಷ್ಟಿ ದೋಷದ ಇನ್ನೊಂದು ಮುಖ್ಯ ಅಂಶವೆಂದರೆ ಬೇರೆ ಎಲ್ಲರಿಗಿಂತ ಈ ರೀತಿಯ ದೃಷ್ಟಿದೋಷ ಇರುವವರಲ್ಲಿ ಭವಿಷ್ಯದಲ್ಲಿ ತೀವ್ರ ರೀತಿಯ ತೊಡಕಿನ ಕಾಯಿಲೆಗಳು ಕಾಣಿಸಿ ಕೊಳ್ಳಬಹುದು. ಉದಾ: ಕಣ್ಣಿನ ಅಕ್ಷಿಪಟಲ ಬೇರ್ಪಡುವಿಕೆ, ತೆರದ ಕೋನದ ಗ್ಲೊಕೊಮಾ.

ಚಿಕಿತ್ಸೆ: ದೋಷ ಗೊತ್ತಾದ ಕೂಡಲೇ ಸೂಕ್ತ ಕನ್ನಡಕ ತೊಟ್ಟು ದೋಷವನ್ನು ನಿವಾರಿಸಬಹುದು. ದೋಷ ಬಹಳ ಹೆಚ್ಚಿದ್ದರೆ ಸ್ಪರ್ಷ ಮಸೂರ (Contact
lens)ಗಳನ್ನು ಉಪಯೋಗಿಸಬಹುದು. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಲ್ಯಾಸಿಕ್ ಚಿಕಿತ್ಸೆ ಅಥವಾ ಸರ್ಜರಿ ಯನ್ನು ಸಹಿತ ಮಾಡಿಸಿಕೊಳ್ಳಬಹುದು.

ದೂರದೃಷ್ಟಿ: ಇದರಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಹಿಂಭಾಗದಲ್ಲಿ ಕೇಂದ್ರೀಕರಣಗೊಳ್ಳುತ್ತವೆ. ಹೆಚ್ಚು ಓದಿದರೆ ಕಣ್ಣುಗುಡ್ಡೆಯ ನೋವು ಕಾಣಿಸಿಕೊಳ್ಳ ಬಹುದು. ಸಣ್ಣ ಮಕ್ಕಳಲ್ಲಿ ಒಂದು ಕಣ್ಣು ಒಳಗೆ ಬರುವ ಮೆಳ್ಳೆಗಣ್ಣು (Convergent Squint) ದೋಷ ಇರುವ ಮಕ್ಕಳಲ್ಲಿ ಸಹಿತ ಈ ರೀತಿಯ ದೃಷ್ಟಿದೋಷ ಇರಬಹುದು. ಚಾಳೀಸಿನ ದೋಷ ಮತ್ತು ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ಮಾಡಿ ಕಣ್ಣಿನೊಳಗೆ ಲೆ ಹಾಕದೆ ಇರುವಾಗ ಬರುವ ದೋಷ ಇದೇ ಗುಂಪಿಗೆ ಸೇರುತ್ತದೆ. (+ನಂಬರಿನ ಕನ್ನಡಕಗಳು ).

ಚಿಕಿತ್ಸೆ : ಸೂಕ್ತ ಕನ್ನಡಕ ಅಥವಾ ಸರ್ಷ ಮಸೂರ.

ಅಸಮದೃಷ್ಟಿ: ಸಾಮಾನ್ಯವಾಗಿ 15 ರಿಂದ 30 ವರ್ಷದವರಲ್ಲಿ, ಎಲ್ಲಾ ದೃಷ್ಟಿದೋಷಗಳಿಗಿಂತ ಹೆಚ್ಚು ಕಾಣಿಸಿಕೊಳ್ಳುವ ಈ ದೋಷದಲ್ಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಒಂದೇ ಕೇಂದ್ರದ ಮೇಲೆ ಕೇಂದ್ರೀಕರಣ ಗೊಳ್ಳದೆ, ವ್ಯಕ್ತಿಗೆ ಮುಖ್ಯವಾಗಿ ತಲೆನೋವು ಮತ್ತು ತೀವ್ರ ಪ್ರಮಾಣದ ಕಣ್ಣಿನ ನೋವನ್ನು ಕೊಡುತ್ತದೆ.

ಚಿಕಿತ್ಸೆ: ಸೂಕ್ತವಾಗಿ ಪರೀಕ್ಷಿಸಿ ಕನ್ನಡಕ ಕೊಡುವುದು. ಕನ್ನಡಕಗಳನ್ನು ಮಾತ್ರ ಸೂಕ್ತ ನೇತ್ರ ವೈದ್ಯರಲ್ಲಿಯೇ ಪರೀಕ್ಷಿಸಿಕೊಂಡು ಅವರ ಸಲಹೆಯಂತೆ ತೆಗೆದುಕೊಳ್ಳ ಬೇಕು. ಜನಪ್ರಿಯ ಅಂಗಡಿ ಅಥವಾ ಬ್ರಾಂಡ್ ಎಂದು ಕನ್ನಡಕದ ಅಂಗಡಿಯಲ್ಲಿ ಟೆಕ್ನಿಷಿಯನ್ ಪರೀಕ್ಷಿಸಿ ಕೊಟ್ಟ ಕನ್ನಡಕ ಧರಿಸಬಾರದು. ಒಬ್ಬರ ಕನ್ನಡಕ ಬೇರೊಬ್ಬರು ಉಪಯೋಗಿಸಬಾರದು.

ದೃಷ್ಟಿದೋಷ ವಿರುವವರು ನಿಯಮಿತವಾಗಿ ಸೂಕ್ತ ನೇತ್ರ ವೈದ್ಯರಲ್ಲಿ ಆಗಾಗ ಪರೀಕ್ಷಿಸಿಕೊಳ್ಳಬೇಕು. ನಿಮ್ಮ ಮುಖಕ್ಕೆ ಸರಿ ಯಾಗಿ ಹೊಂದಿಕೊಳ್ಳುವ ಹಗುರವಾದ ಕನಡಕ ಬಳಸಿ.

Leave a Reply

Your email address will not be published. Required fields are marked *