Monday, 16th May 2022

ಚಿಕ್ಕಬಳ್ಳಾಪುರ ಡಿಸಿ ಹೆಸರಲ್ಲಿ ಫೇಕ್‌ ಫೇಸ್‌ಬುಕ್‌ ಖಾತೆ, ಹಣಕ್ಕಾಗಿ ಬೇಡಿಕೆ !

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಆನ್‌ಲೈನ್‌ ಖದೀಮರು, ಪರಿಚಿತರಿಗೆ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನೈಜ ಖಾತೆಯಲ್ಲಿನ ಪೋಟೋಗಳನ್ನು, ಪ್ರೊಫೈಲ್‌ ಫೋಟೊ ಆಗಿ ಬಳಸಿರುವ ಖದೀಮರು ನಕಲಿ ಖಾತೆ ಸೃಷ್ಟಿಸಿದ್ದಾರೆ. ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ. ಅನುಮಾನ ಬಾರದಂತೆ ಎಫ್‌ಬಿ ಮೆಸೆಂಜರ್‌ ಮೂಲಕ ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಿರುವುದು ಕಂಡುಬಂದಿದೆ.

ಈ ಕುರಿತು ಜಿಲ್ಲಾಧಿಕಾರಿ ಆರ್. ಲತಾ ಸ್ಪಷ್ಟನೆ ನೀಡಿದ್ದು, ಡಿಸಿ ಚಿಕ್ಕಬಳ್ಳಾಪುರ (DC Chikkaballpur) ಎಂಬ ಹೆಸರಿನಿಂದ ನಕಲಿ ಫೇಸ್‌ಬುಕ್‌ ಖಾತೆ ತೆರೆಯಲಾಗಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ನಂತರ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾರ್ವಜನಿಕರು ಯಾವುದೇ ಕಾರಣಕ್ಕೂ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದಂತೆ ಹಾಗೂ ಹಣ ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದಾರೆ.