Monday, 5th December 2022

ನಕಲಿಗಳಿಂದ ಅಸಲಿಗಳಿಗೆ ಧಕ್ಕೆ

ಅಭಿಮತ

ರುದ್ರಯ್ಯ ಎಸ್.ಎಸ್

rssmath17@gmail.com

ನಕಲಿ ಪದಾರ್ಥಗಳ ಹಾವಳಿಯಿಂದಾಗಿ ಅಸಲಿ ಬ್ರ್ಯಾಂಡ್ ಗಳಿಗೆ ಯಾವ ರೀತಿ ಧಕ್ಕೆ ಉಂಟಾಗುತ್ತದೆಯೋ ಅದೇ ರೀತಿ ವಿವಿಧ ರಂಗಗಳಲ್ಲಿ ನಕಲಿ
ವೇಷ ತೊಟ್ಟು ಜನ ಸಾಮಾನ್ಯರಿಗೆ ಮೋಸ, ವಂಚನೆ, ದಗಲ್ಬಾಜಿತನ ಮಾಡುತ್ತಾ ಜೀವನ ಸಾಗಿಸುತ್ತಿರುವ ಕೆಲ ಪುಂಡರಿಂದ ಆ ರಂಗಗಳಲ್ಲಿ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಅಸಲಿ ಸೇವಾದಾರರ ವ್ಯಕ್ತಿತ್ವ ಹರಣ ಆಗುತ್ತಿದೆ.

ಹೌದು, ತೀರಾ ಇತ್ತೀಚೆಗೆ ಕೆಲ ಮಠಾಧೀಶರ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿರುವ ಜನರು ಉಳಿದ ಸ್ವಾಮೀಜಿಗಳನ್ನು ನೋಡುವ ದೃಷ್ಟಿಕೋನ ಬದಲಾಯಿ ಸುತ್ತಿದ್ದಾರೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಠ ಪರಂಪರೆಗಳ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಲ್ಲಿ ಜನರದ್ದು ತಪ್ಪಿಲ್ಲ ಎನ್ನುವುದು ಎಷ್ಟು ಸತ್ಯವೋ ನಿಸ್ವಾರ್ಥ ಕಾವಿಧಾರಿಗಳ ತಪ್ಪಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಇದೆಲ್ಲವೂ ಕೆಲ ಡಾಂಭಿಕ ಕಿಡಿಗೇಡಿಗಳಿಂದಾಗಿ ಹುಟ್ಟಿರುವ ಅಪಸ್ವರಗಳು. ಒಂದು ಸಮಾಜ ಎಂದಮೇಲೆ ಒಳ್ಳೆಯದರ ಜತೆಗೆ ಕೆಟ್ಟದ್ದು ಇದ್ದೆ ಇರುತ್ತದೆ. ವ್ಯವಸ್ಥೆಯಲ್ಲಿ ತಪ್ಪುಗಳಾದಾಗ ಅದನ್ನು ಸರಿ ಪಡಿಸಲು ಮುಂದಾಗಬೇಕೆ ವಿನಃ ಇಡೀ ವ್ಯವಸ್ಥೆಯನ್ನೇ ದೂಷಿಸಿ ಕೈ ಕಟ್ಟಿ ಕೂತರೆ ಪ್ರಯೋಜನ ವಿಲ್ಲ. ಎಲ್ಲಿಯೋ ಕೆಲವರು ಮಾಡುವ ತಪ್ಪುಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ.

ಉದಾಹರಣೆಗೆ ಯಾವುದೋ ಒಂದು ಊರಿನ ಶಾಲೆಯ ಶಿಕ್ಷಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದರೆ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿರುವ ಶಿಕ್ಷಕರು ಅದೇ ರೀತಿ ಇದ್ದಾರೆ ಎನ್ನುವುದು ಎಷ್ಟು ಸರಿ? ಆಡಳಿತ ವರ್ಗದಲ್ಲಿ ಭ್ರಷ್ಟಾಚಾರಿಗಳ ಕೂಟ ತುಂಬಿ ತುಳುಕುತ್ತಿರಬಹುದು ಆದರೆ ಅಲ್ಲಿ ಪ್ರಾಮಾಣಿಕರೇ ಇಲ್ಲ ಎಂದು ತೀರ್ಮಾನಿಸುವುದು ದಡ್ಡತನವಾಗಬಹುದು. ಸಮಾಜದಲ್ಲಿ ಕೆಲ ಹೆಣ್ಣುಮಕ್ಕಳು ಹಾಗೂ ಗಂಡಸರು ಮದುವೆಯ ಮುಂಚೆ ಮತ್ತು ನಂತರ ತಮ್ಮ ಸಂಗಾತಿಯನ್ನು ಬಿಟ್ಟು ಇತರರೊಡನೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದರೇ ಅವರು ಮಾತ್ರ ತಪ್ಪು ದಾರಿ ತುಳಿಯು ತ್ತಿದ್ದಾರೆ ಹೊರತು ಇದಕ್ಕೆ ಇಡೀ ಸಮಾಜವನ್ನೇ ಹೊಣೆ ಮಾಡಲು ಸಾಧ್ಯವಿಲ್ಲ.

ನಮ್ಮ ಪತ್ರಿಕಾ ರಂಗದಲ್ಲಿಯೂ ಅಷ್ಟೇ ಕೆಲವರು ನಕಲಿ Press ಐಡಿ ಕ್ರಿಯೇಟ್ ಮಾಡಿಕೊಂಡು ಪತ್ರಕರ್ತರೆಂದು ತಿರುಗುತ್ತಿದ್ದಾರೆ. ಕೆಲ ನಿಜವಾದ ಪತ್ರಕರ್ತರು ಸಹ ಬ್ಲ್ಯಾಕ್ ಮೇಲ್ ದಂದೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂಥವರಿಂದ ಬೇಸತ್ತ ಜನ ಇಡೀ ಪತ್ರಿಕೋದ್ಯಮಕ್ಕೆ ಹಿಡಿಶಾಪ ಹಾಕಿದರೆ ಸರಿಯಾಗುತ್ತದೆಯೇ? ಇದರಿಂದ ಪ್ರಾಮಾಣಿಕ ಪತ್ರಕರ್ತರ ಮನಸ್ಥಿತಿ ಹೇಗಾಗಬೇಡ ಹೇಳಿ. ಯಾರೋ ಒಂದಿಬ್ಬರು ಜ್ಯೋತಿಷಿಗಳ ವೇಷ ತೊಟ್ಟು ಜನರಿಗೆ ಮಂಕುಬೂದಿ ಎರಚಿ ಹಣ ಆಸ್ತಿ ಮಾಡಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರಿಂದ ಮೋಸಕ್ಕೆ ಒಳಗಾದ ಜನರು ಸನಾತನ ಧರ್ಮದಲ್ಲಿ ಪರಂಪರಾಗತವಾಗಿ ವೈಜ್ಞಾನಿಕವಾಗಿ ಬೆಳೆದು ಬಂದಿರುವ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಜ್ಯೋತಿಷ್ಯ ಶಾಸ್ತ್ರವನ್ನು ಹೀಗಳೆದು ಮಾತಾಡುವುದು ತಪ್ಪು.

ದಿನದಿಂದ ದಿನಕ್ಕೆ ಆಧುನಿಕವಾಗಿ ಬೆಳೆಯುತ್ತಿರುವ ಪ್ರಪಂಚ ದಲ್ಲಿ ಈಗಲೂ ಸಣ್ಣ ಹಳ್ಳಿಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಂಚಾಂಗ ಹೇಳುವ ಪದ್ಧತಿಯನ್ನು ಕೆಲ ಮನೆತನಗಳು ಚಾಲ್ತಿಯಲ್ಲಿರಿಸಿದ್ದಾರೆ. ಅಂತವರಿಗೆ ಬೆಲೆ ಕೊಟ್ಟು ಪದ್ದತಿಯನ್ನು ಬೆಳೆಸಬೇಕೆ ಹೊರತು ಭವಿಷ್ಯ ಹೇಳುವ ಪದ್ಧತಿಯನ್ನು ಅಲ್ಲಗಳೆಯಬಾರದು. ಕ್ಷಣಿಕ ಸುಖಕ್ಕಾಗಿ ಪ್ರೀತಿಯ ಹೆಸರಿನಲ್ಲಿ ಹುಡುಗ ಹುಡುಗಿಗೆ ಮತ್ತು ಹುಡುಗಿ ಹುಡುಗನಿಗೆ ಮೋಸ ಮಾಡಿದರೆ ಅದು ಅವರ ತಪ್ಪೇ ವಿನಃ ಪವಿತ್ರ ಪ್ರೀತಿಯ ತಪ್ಪಲ್ಲ.

ಭರತಖಂಡದ ಭವ್ಯ ಹಿಂದೂ ಧರ್ಮದ ಆಚಾರ ವಿಚಾರಗಳಲ್ಲಿ ಉತ್ತರ ಭಾರತದಲ್ಲಿ ದೇವಾಲಯಗಳು ಹೆಚ್ಚಾಗಿ ಕಂಡು ಬಂದರೆ ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ರಾಜ್ಯಗಳಲ್ಲಿ ಮಠಗಳು-  ಆಶ್ರಮಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ವೀರಶೈವ ಲಿಂಗಾಯತ ಧರ್ಮದಲ್ಲಿಯೇ ಪಂಚಪೀಠ (ಶಿವಾಚಾರ್ಯ) ಪರಂಪರೆ, ವಿರಕ್ತ ಪರಂಪರೆಗಳಿವೆ. ಇದೇ ರೀತಿಯಾಗಿ ನಾಥ ಪರಂಪರೆ, ಶಿವಾನಂದ ಪರಂಪರೆ, ಆರೂಢ ಪರಂಪರೆ, ರಾಮಕೃಷ್ಣ ವಿವೇಕಾನಂದ ಆಶ್ರಮ ಪರಂಪರೆ, ಬ್ರಾಹ್ಮಣರಲ್ಲಿ ಅಷ್ಟ ಮಠಗಳು, ಶಂಕರಾಚಾರ್ಯರ ಪರಂಪರೆ, ಮಧ್ವಾಚಾರ್ಯರ ಪರಂಪರೆ, ಇವುಗಳಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಇಸ್ಕಾನ್ ನಂತಹ ಟ್ರಸ್ಟ್ ಗಳು ಮತ್ತು ಸ್ವಯಂ ಘೋಷಿತ ಅವಧೂತರು, ದೇವಮಾನವರು ಹೀಗೆ ಹತ್ತು ಹಲವು ರೀತಿಯಲ್ಲಿ ಅನೇಕ ಮಠ ಮಂದಿರಗಳು ಧಾರ್ಮಿಕ ಗುರುಗಳ, ಮುಖಂಡರ ಮೂಲಕ ತಮ್ಮದೇ ಆದ ಸಮಾಜ ಸೇವೆ ಸಲ್ಲಿಸುತ್ತಿವೆ.

ಉದಾಹರಣೆಗಾಗಿ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಮಠಗಳು ಸ್ಥಳೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು, ಉಚಿತ ವಸತಿ ಪ್ರಸಾದ ನಿಲಯಗಳನ್ನು ತೆರೆಯದೆ ಇದ್ದಿದ್ದರೆ ಇಂದು ಅದೆಷ್ಟೋ ಹಿಂದುಳಿದ ವರ್ಗಗಳ ಜನರು ಶಿಕ್ಷಣ ವಂಚಿತರಾಗಿ ಕೆಳಸ್ತರದಲ್ಲಿ ಜೀವನ ಸಾಗಿಸಬೇಕಿತ್ತು. ಆಶ್ರಯ ಕಲ್ಪಿಸುವುದರೊಂದಿಗೆ, ಅನ್ನದಾನ, ವಿದ್ಯಾದಾನವನ್ನು ಮಾಡುವ ಮೂಲಕ ತ್ರಿವಿಧ ದಾಸೋಹಿಗಳಾಗಿ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಅಂಧರ ಬಾಳಿನ ಆಶಾಕಿರಣ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳ ಸೇವೆ ಚಿರಸ್ಮರಣೀಯ.

ಇಂದಿಗೂ ಯಾವುದೇ ಪ್ರಚಾರದ ಹಂಗಿಗೆ ಒಳಗಾಗದೆ ಇಂತಹ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅನೇಕ ಮಠಾಧೀಶರು ನಮ್ಮ ನಾಡಿನಲ್ಲಿದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ಸಹಕಾರ ನೀಡಬೇಕಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಅದನ್ನು ಬಿಟ್ಟು ಯಾರು ಕೆಲವು ಕಾವಿಧಾರಿಗಳು ಮಾಡಿದ ಅನಾಚರವನ್ನು ವೈಭವೀಕರಿಸಿ ಇಡೀ ಮಠ ಪರಂಪರೆಯನ್ನು ಮಠಾಧೀಶರನ್ನು ಹೀಗಳೆದು ಮಾತಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸ್ವತಃ ಪ್ರಶ್ನಿಸಿಕೊಳ್ಳಬೇಕು.

ಇಲ್ಲವಾದರೆ ಭವಿಷ್ಯತ್ತಿನಲ್ಲಿ ಸನ್ಯಾಸಿ ದೀಕ್ಷೆ ಪಡೆದು ಈ ಮಠ ಪರಂಪರೆಯನ್ನು ಉಳಿಸಿ ಬೆಳೆಸಲು ಯಾವುದೇ ವಟುಗಳು (ಬಾಲಕರು) ಮುಂದೆ ಬರಲಾರರು ಜತೆಗೆ ಕುಟುಂಬದವರು ತಮ್ಮ ಮನೆತನದ ಕುಡಿಯನ್ನು ಸಾಮಾಜಿಕ ಕಾರ್ಯಕ್ಕೆ ಬಿಟ್ಟುಕೊಡಲು ಹಿಂಜರಿಯುತ್ತಾರೆ. ಟಿವಿ ಮುಂದೆ ಕುಳಿತು ಸ್ಟಾರ್ ಸ್ಪೋರ್ಟ್ಸ್ ನೋಡುತ್ತಾ ವಿರಾಟ್ ಕೊಹ್ಲಿ ಸ್ಪಿನ್ ಬಾಲನ್ನು ಹೀಗೆ ಹೊಡೆಯಬೇಕು. ಕೊನೆಯ ಓವರ್ ನಲ್ಲಿ ಆ ರೀತಿ ಆಡದೆ ಈ ರೀತಿ ಆಡಬೇಕು ಎಂದು ಹೇಳುವುದು ಸುಲಭ. ಆದರೆ ಅಲ್ಲಿಯ ಕ್ಷೇತ್ರದ ಪರಿಸ್ಥಿತಿ (Field Situation) ಅಲ್ಲಿ ಆಡುವ ಆಟಗಾರನಿಗೆ ಮಾತ್ರ ಗೊತ್ತು. ಅದೇ ರೀತಿ ಒಂದು ಮಠವನ್ನು, ಧಾರ್ಮಿಕ ಸಂಸ್ಥೆಯನ್ನು ಸಮಾಜದಲ್ಲಿನ ಸರ್ವ ಜನಾಂಗದ, ವಿವಿಧ ಜಾತಿಯ ಜನರನ್ನು ಒಟ್ಟುಗೂಡಿಸಿ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ.

ಹಾಗಂತ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲವೂ ಸರಿ ಇದೆಯಂತಲ್ಲ. ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯಕ್ಕೆ ಒಳಗಾಗಿ ರಾಜಕಾರಣಿಗಳ ಕಪಿಮುಷ್ಟಿಯಿಂದ ಹೊರಬಂದು ಒಂದು ಧಾರ್ಮಿಕ ಸಂಸ್ಥೆಯನ್ನು ಮುನ್ನಡೆಸಿ ಉನ್ನತ ಹಂತಕ್ಕೆ ಕೊಂಡೊಯ್ಯುತ್ತೇವೆ ಎನ್ನುವುದು ಸರಳವಲ್ಲ. ಇಂತಹದರ ನಡುವೆಯೂ ಯಾರದೇ ಹಿಡಿತಕ್ಕೆ ಒಳಗಾಗದೆ ರಾಜಕಾರಣ ಮಾಡದೆ ಸರ್ವತಂತ್ರ ಸ್ವತಂತ್ರವಾಗಿ ಯಾರ ಹಂಗಿಲ್ಲದೆ ಯಾವ ಸ್ವಾಮೀಜಿಗಳು ಮಠವನ್ನು ಸೇವಾ ಕಾರ್ಯಗಳ ಮೂಲಕ ಅಭಿವೃದ್ಧಿ ಮಾಡುತ್ತಿದ್ದಾರೋ ಅವರು ಯಾರ ಹೆದರಿಕೆ ಬೆದರಿಕೆಗಳಿಗೆ ಜಗ್ಗಬೇಕಿಲ್ಲ. ಮಠಗಳು ಹಾಗೂ ಸ್ವಾಮೀಜಿ ಈ ರೀತಿಯಾಗಿ ನಡೆದುಕೊಳ್ಳಲು ಪ್ರಮುಖವಾಗಿ ಬೇಕಾಗಿರುವುದು ಭಕ್ತರ ಸರ್ವ ರೀತಿಯ ಸಹಕಾರ (ತನು
ಮನ ಧನ ಸೇವೆ) ಹಾಗೂ ಧಾರ್ಮಿಕ ಸಂಸ್ಥೆಗಳ ಉನ್ನತ ಸ್ಥಾನದಲ್ಲಿ ಕುಳಿತವರು ಆ ಪೀಠಕ್ಕೆ ಗೌರವ ಸಲ್ಲಿಸಿ ಪದ್ಧತಿಗೆ ಅನುಗುಣವಾಗಿ ನಡೆದುಕೊಂಡರೆ ಸಾಕು.

ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಮುಂತಾದ ಸಾಮಾಜಿಕ ಪಿಡುಗುಗಳು ಪ್ರತಿಯೊಂದು ಧರ್ಮದಲ್ಲೂ ಕಂಡುಬರುತ್ತವೆ. ಕೆಲವರ ತಪ್ಪುಗಳು ತಿದ್ದಿ ತೀಡಿ ಮುನ್ನಡೆಯುತ್ತಾರೆ. ಇನ್ನೂ ಕೆಲವರ ತಪ್ಪು ಹೆಜ್ಜೆಗಳನ್ನು ಗುರುತಿಸಿ ಹೆಕ್ಕಿ ತೆಗೆದು ವೈಭವೀಕರಿಸುತ್ತಾರೆ. ಇದರಲ್ಲಿ ಅನ್ಯ ಕೋಮಿನವರ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ಹಿಂದೂ ಸಮಾಜ ಇತರ ಕೋಮುಗಳಂತೆ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳದೆ ಕಾಲಕ್ಕೆ ತಕ್ಕಂತೆ ತನ್ನ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಜನರ ವೈಯಕ್ತಿಕ ಬೆಳವಣಿಗೆ ಜತೆ ಜತೆಗೆ ಧರ್ಮವನ್ನು ಉನ್ನತ ಸ್ಥಾನದಲ್ಲಿರಿಸಿದೆ.

ಅದೇ ರೀತಿಯಲ್ಲಿ ಮಠಗಳ ಸ್ವಾಮೀಜಿಗಳ ವಿಷಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆ ವಿನಃ ದಿನ ಬೆಳಗಾದರೆ ಆದ ತಪ್ಪನ್ನೇ ಪುನರಾವರ್ತಿಸುವುದು ಸೂಕ್ತವಲ್ಲ. ಹಾಗಂತ ತಪ್ಪಿತಸ್ಥರಿಗೆ ಶಿಕ್ಷೆಯಾಗಬಾರದು ಅಂತಲ್ಲ.
ಕಾನೂನು ಉಲ್ಲಂಸಿದವರು ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆಯಾಗಲಿ ಜತೆಗೆ ಮಠ ಸಂಸ್ಕೃತಿ ಉಳಿದು ಹಿಂದೂ ಧರ್ಮ ಅಜರಾಮರವಾಗಿರಲಿ ಎಂಬುದೇ ನಮ್ಮೆಲ್ಲರ ಆಶಯ.