Tuesday, 7th December 2021

ಕಾಯಿದೆ ವಾಪಸು ; ನಿಜವಾಗಿ ಸೋತವ ರೈತ !

ಸಕಾಲಿಕ

ಪ್ರಕಾಶ್ ಶೇಷರಾಘವಾಚಾರ‍್

130 ಕೋಟಿ ಜನರ ದೇಶದಲ್ಲಿ ಶೇ. 50ಕ್ಕಿಂತ ಹೆಚ್ಚು ಕೃಷಿ ಅವಲಂಬಿಸಿರುವಾಗ ಕಾಲಕಾಲಕ್ಕೆ ಸುಧಾರಣೆಯಾಗದೇ ಅನ್ನದಾತ ಸಂಕಷ್ಟ ಬಗೆಹರಿಯುವುದು
ದುಸ್ತರ. ಹಿಡಿಯಷ್ಟು ಜನರ ಮತ್ತು ಅಧಿಕಾರ ವಂಚಿತರ ಸ್ವಾರ್ಥಕ್ಕೆ ರೈತನನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ನಿಜಕ್ಕೂ ಇವರು ರೈತ ವಿರೋಧಿಗಳಲ್ಲವೇ?

ಪಿ.ವಿ.ನರಸಿಂಹರಾವ್ ಅವರು 1991ರಲ್ಲಿ ಪ್ರಧಾನಿಯಾಗಿದ್ದಾಗ ಆರ್ಥಿಕ ಸುಧಾರಣೆ ಕೈಗೊಳ್ಳದಿದ್ದರೆ ಭಾರತ ಇಂದಿಗೂ ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲಿಯೇ ಇರುತ್ತಿತ್ತೇನೊ? 89ರಿಂದ ಸತತವಾದ ಅತಂತ್ರ ಸರ್ಕಾರಗಳಿಂದ ದೇಶ ನಲುಗಿ ಹೋಗಿತ್ತು. ಆರ್ಥಿಕ ಪರಿಸ್ಥಿತಿಯು ದಿವಾಳಿಯಂಚಿಗೆ ತಲುಪಿತ್ತು. Balance of
Payment ಸಮಸ್ಯೆ ಗಂಭೀರವಾಗಿತ್ತು.

ದೇಶದಲ್ಲಿ ಎರಡು ವಾರಗಳಿಗೆ ಮಾತ್ರ ಆಮದಿಗೆ ವಿದೇಶಿ ವಿನಿಮಯ ಲಭ್ಯವಿದ್ದಿದ್ದು. ಯಾವುದೇ ಅಂತಾ ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭಾರತಕ್ಕೆ ಸಾಲ ನೀಡಲು ಸಿದ್ಧವಿರಲಿಲ್ಲ. ಪರಿಸ್ಥಿತಿಯ ತುರ್ತು ನಿರ್ವಹಣೆಗೆ ದೇಶದ 67 ಟನ್ ಚಿನ್ನವನ್ನು ವಿದೇಶಿ ಬ್ಯಾಂಕ್‌ಗಳಲ್ಲಿ ಅಡವಿಡಬೇಕಾದ ಶೋಚನೀಯ ಪರಿಸ್ಥಿತಿಗೆ ಭಾರತ ತಲುಪಿತ್ತು. ಆರ್ಥಿಕ ಸಂಕಷ್ಟದಿಂದ ಪಾರಾಗಲು 1991ರಲ್ಲಿ ಪಿ.ವಿ.ನರಸಿಂಹರಾವ್, ಆರ್ಥಿಕ ಉದಾರೀ ಕರಣ ನೀತಿಯನ್ನು ದಿಟ್ಟತನದಿಂದ ಜಾರಿಗೆ ತಂದರು.

ಒಮ್ಮೆಗೆ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಕೆಂಪುಗಂಬಳಿಯನ್ನು ಹಾಸಲಾಯಿತು. ಖಾಸಗಿ ಬಂಡ ವಾಳ ಸ್ನೇಹಿ ನೀತಿ ಬಂದಿತು. ಹಲವಾರು ಕ್ಷೇತ್ರಗಳು ಖಾಸಗಿಯವರಿಗೆ ತೆರೆದುಕೊಂಡಿತು. ಕೇಂದ್ರದ ಈ ಉದಾರೀಕರಣ ನೀತಿಯನ್ನು ಅಂದಿನ ಪ್ರತಿ ಪಕ್ಷಗಳು ತೀವ್ರ ವಿರೋಧಿಸಿದ್ದವು. ದೇಶವನ್ನು ಖಾಸಗಿ ಸಂಸ್ಥೆ ಗಳಿಗೆ ಮಾರಲಾಗುತ್ತಿದೆ, ವಿದೇಶಿ ಬಂಡವಾಳಕ್ಕೆ ಅನುಮತಿ ನೀಡಿ ಭಾರತೀಯ ಉದ್ದಿಮೆಗಳ ಚರಮಗೀತೆ  ಹಾಡಲಾಗುತ್ತಿದೆ, ಹೊಸ ರೂಪದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಹಿಂಬಾಗಿಲಿನಿಂದ ಪ್ರವೇಶಿಸುತ್ತಿದೆ ಎಂಬಿತ್ಯಾದಿ ಟೀಕೆಗಳು ಬಿಜೆಪಿ ಸೇರಿಲ್ಲರಿಂದ ವ್ಯಕ್ತವಾಗಿತ್ತು.

ಅದಾಗಿ 30 ವರ್ಷ ಕಳೆದಿವೆ. ಈ ಅವಧಿಯಲ್ಲಿ ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸಿದ್ದೇವೆ. ಭಾರತೀಯ ಉದ್ದಿಮೆಗಳು ವಿದೇಶಿ ಬಂಡವಾಳದಿಂದ ಬಲವಾದುವೇ ವಿನಹ ಬಾಗಿಲು ಹಾಕಿಲ್ಲ. ಉದಾರೀಕರಣದ ಫಲವಾಗಿ ಭಾರತೀಯ ಬಹುರಾಷ್ಟ್ರೀಯ ಕಂಪನಿಗಳು ಬೆಳೆದಿವೆ. ಹರಿದು ಬಂದ ವಿದೇಶಿ ಬಂಡವಾಳದ ಕಾರಣ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಸ್ಥಿತಿಯು ಸುಧಾರಿಸಿತು. 96ರ ನಂತರ ಬಂದ ಎಲ್ಲ ಸರಕಾರಗಳು ಆರ್ಥಿಕ ಉದಾರೀಕರಣಕ್ಕೆ ಒತ್ತು ನೀಡಿರುವುದೇ ಹೊರತು ಅದನ್ನು ಹಿಂಪಡೆಯಲಿಲ್ಲ.

ವಾಜಪೇಯಿ ಸರ್ಕಾರದಲ್ಲಿ ಬಂಡವಾಳ ಹಿಂತೆಗತಕ್ಕೆ ಪ್ರತ್ಯೇಕ ಸಚಿವಾಲಯವನ್ನೆ ತೆರೆಯಲಾಗಿತ್ತು. ತತ್ಪರಿಣಾಮ ಸರ್ಕಾರದ ಹಲವಾರು ಬಿಳಿ ಆನೆ ಉದ್ದಿಮೆ ಗಳು ಮಾರಾಟವಾಗಿ ತೆರಿಗೆ ಹಣದ ಪೋಲಿಗೆ ತಡೆಯಾಯಿತು. 1991ರ ಆರ್ಥಿಕ ಉದಾರೀಕರಣದ ಲಾಭವು ಕೇವಲ ನಗರ ಪ್ರದೇಶಗಳಿಗೆ ಸಿಮೀತವಾಗಿತ್ತು. ಗ್ರಾಮೀಣ ಭಾರತ ಇದರಿಂದ ಪ್ರಯೋಜನ ಪಡೆಯಲಿಲ್ಲ. ಕೃಷಿ ಆಧಾರಿತ ಚಟುವಟಿಕೆಯ ಕೇಂದ್ರವಾಗಿದ್ದ ಹಳ್ಳಿಗಳಿಗೆ ಉದಾರೀಕರಣದ ಲಾಭವು ತಲುಪಲಿಲ್ಲ. ಕೃಷಿ ಕ್ಷೇತ್ರವು ಸುಧಾರಣೆಯಿಲ್ಲದೆ ಸೊರಗವುದು ಮುಂದುವರಿಯಿತು.

ಇಂದಿಗೂ ಬೆಳೆ ಕೈಕೊಟ್ಟು ಬೆಳದ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಸಾಲದ ಶೂಲಕ್ಕೆ ಸಿಲುಕಿ ಲಕ್ಷಕ್ಕೆ ಶೇಕಡಾ 1.4 ರಿಂದ 1.8 ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತ ನಡೆಸುವ ಸರಕಾರಗಳಿಗೆ ಸಾಲಮನ್ನಾ ಬಡ್ಡಿ ಮನ್ನಾ, ತಾತ್ಕಾಲಿಕ ಪರಿಹಾರ ಧನ ಮತ್ತು ಬೆಂಬಲ ಬೆಲೆಗೆ ಒತ್ತಾಯಿಸುವುದು ಹೊರತು ಪಡಿಸಿ ಅವರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ಚಿಂತನೆಯೇ ಇಲ್ಲ.

ರೈತರ ಆದಾಯ ದ್ವಿಗುಣ ಮಾಡುವ ಬಿಜೆಪಿ ಸರಕಾಋದ ವಾಗ್ದಾನ ಹಾಲಿ ಪರಿಸ್ಥಿತಿಯಲ್ಲಿ ಕೈಗೊಡಲು ಆಮೂಲಾಗ್ರ ಬದಲಾವಣೆ ಬೇಕಾಗಿತ್ತು. ರೈತ ತನ್ನ ಬೆಳೆಯನ್ನು ಸ್ಪರ್ಧಾತ್ಮಕವಾಗಿ ಮಾರಾಟ ಮಾಡಲು APMC ಯಲ್ಲದೆ ನೇರವಾಗಿ ತನಗೆ ಹೆಚ್ಚಿನ ಬೆಲೆ ದೊರೆಯುವ ಕಡೆ ಮಾರಾಟ ಮಾಡುವುದಕ್ಕೆ ಅವಕಾಶ ಬೇಕಿತ್ತು. ಮಾರುಕಟ್ಟೆಯ ಅನಿಶ್ಚಿತತೆಯ ಅಪಾಯ ತಡೆಯಲು ಮಧ್ಯವರ್ತಿಗಳ ಹಾವಳಿ ಇಲ್ಲದೆ ಬಿತ್ತನೆಗೆ ಮುನ್ನವೇ ಪೂರ್ವನಿರ್ಧರಿತ ಬೆಲೆಯೊಂದಿಗೆ ಖರೀದಿ ದಾರನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ನೀಡಲು ಕೃಷಿ ತಿದ್ದಪಡಿ ಕಾಯ್ದೆ ಜಾರಿಗೆ ತರಲಾಗಿತ್ತು.

ಆದರೆ ಇದರ ವಿರುದ್ಧ ನಡೆದ ಅಪ್ರಚಾರದಿಂದ ಇದೊಂದು ರೈತ ವಿರೋಧಿ ಕಾಯಿದೆ ಎಂದು ಬಿಂಬಿಸಲಾಯಿತು. ವಿಶೇಷವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶದ ಕೆಲವು ಭಾಗದ ರೈತರು ಕಾಯಿದೆ ವಿರೋಧಿಸಿ ಪ್ರಬಲವಾದ ಪ್ರತಿಭಟನೆ ಕೈಗೊಂಡರು. ಅಂತಿಮವಾಗಿ ಕೇಂದ್ರ ಸರ್ಕಾರ ಕಾಯಿದೆಯನ್ನು
ಹಿಂಪಡೆಯ ಬೇಕಾಯಿತು. ಹಿಂಪಡೆಯುವಾಗ ರೈತರಿಗಾಗಿ ಕಾಯಿದೆ ತರಲಾಯಿತು; ದೇಶಕ್ಕಾಗಿ ಅವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮಾರ್ಮಿಕವಾಗಿ ಮೋದಿಯವರು ಹೇಳಿರುವುದು ಗಮನಾರ್ಹ.

ಕೃಷಿ ಕ್ಷೇತ್ರದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಸುಧಾರಣೆಯು ಇಂದು ಸರ್ಕಾರ ಕಾರ್ಯ ರೂಪಕ್ಕೆ ತರಲು ಸಾಧ್ಯವಾಗಿಲ್ಲ. ಪಟ್ಚಭದ್ರ ಹಿತಾಸಕ್ತಿಗಳು ನಿಂತ ನೀರಾಗುವುದಕ್ಕೆ ಹಠ ಹಿಡಿದು ರೈತಾಪಿ ವರ್ಗದ ಹಿತಕ್ಕೆ ಧಕ್ಕೆ ತಂದಿದ್ದಾರೆ. ಒಂದು ವರ್ಷದಿಂದ ಸಾಗಿದ್ದ ರೈತ ಹೋರಾಟವನ್ನು ಕೊನೆಗಾಣಿಸಲು ಹಲವು ಸುತ್ತಿನ ಮಾತುಕತೆ ರೈತ ಸಂಘ ಮತ್ತು ಸರ್ಕಾರದ ನಡುವೆ ನಡೆಯಿತು. ಎಲ್ಲ ರೀತಿಯ ಉಪಯುಕ್ತತೆಯನ್ನು ತಿಳಿಸಲಾಯಿತು ಆದರೆ ಯಾವ ಸಂಧಾನ ಸಲಹೆಗೆ ಜಗ್ಗದೆ ತಮ್ಮ ಹಠ ಸಾಧಿಸಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಬಿಜೆಪಿಯ ಶಾಸಕರು ಲೋಕಸಭಾ ಸದಸ್ಯರು ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಮನವೂಲಿಸುವ ಮತ್ತು ಕೃಷಿ ಕಾಯಿದೆಯ ಲಾಭವನ್ನು ತಿಳಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ವೋಟು ಪಡೆದು ಗದ್ದುಗೆ ಹಿಡಿಯಲು ಮೋದಿಯವರ ಜಪ ಮಾಡುವವರು ಮೋದಿ ಯವರ ಈ ಸುಧಾರಣಾ ಕೆಲಸಕ್ಕೆ ಬೆಂಬಲವಾಗಿ ನಿಂತು ರೈತರಿಗೆ ಮನವರಿಕೆ ಮಾಡಿಕೊಡಲು ಆಸಕ್ತಿವಹಿಸಲಿಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ರೈತರನ್ನು ಭೇಟಿಯಾಗಿ ಅವರ ಅಹವಾಲು ಆಲಿಸಿ ಸಂದೇಹ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಗುಂಪು ಸಭೆಗಳ ಮೂಲಕ ಕಾಯಿದೆ ವಿವರ ನೀಡಬಹುದಿತ್ತು. ಆದರೆ
ಆಡಳಿತ ಪಕ್ಷದವರು ಈ ಸಕಾರಾತ್ಮಕ ಚಟುವಟಿಕೆಯ ತಂಟೆಗೆ ಹೋಗಲೇ ಇಲ್ಲ.

ಅನೇಕ ರಾಜ್ಯ ಸರ್ಕಾರಗಳು ಈಗಾಗಲೇ APMC ಕಾಯಿದೆ ತಿದ್ದುಪಡಿಯನ್ನು ತಂದು ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿವೆ. ತತ್ಪರಿಣಾಮ ನಮ್ಮ ರಾಜ್ಯದಲ್ಲಿಯೇ ಹತ್ತಾರು APMC ಖಾಲಿ ಕೂತಿವೆ. APMC ಯಲ್ಲಿ ಮಾರಾಟ ಮಾಡಿದರೆ ಸೆಸ್ ನೀಡಬೇಕು
ಮಧ್ಯವರ್ತಿ ಗಳ ಕಾಟ ಇದರಿಂದ ಬೆಸತ್ತಿದ್ದ ರೈತ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿ ಅದನ್ನು ಉಳಿಸುತ್ತಿದ್ದಾರೆ. ಈಗಾಗಲೇ ಇದರ ಲಾಭವನ್ನು ಪಡೆದಿರುವ ರೈತರ ಮೂಲಕ ಪ್ರಚಾರ ಕೈಗೊಳ್ಳಬೇಕಾಗಿತ್ತು. ಅವರ ಅನುಭವ ಇತರರಿಗೆ ತಲುಪುವಂತೆ ಮಾಡಬೇಕಿತ್ತು. ಆದರೆ ಪಕ್ಷ ಮತ್ತು ಜನಪ್ರತಿನಿಽಗಳು ಸೋತರು. APMC ವ್ಯವಸ್ಥೆಯು ಅತ್ಯಂತ ಭ್ರಷ್ಟವಾಗಿದೆ.

ದಳ್ಳಿಗಳು ಶೋಷಣೆ ಮಾಡುತ್ತಾರೆ ಎಂದು ರೈತರೆ ದೂರುತ್ತಾರೆ. APMC ಅಧ್ಯಕ್ಷರ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಲಾಭವಿಲ್ಲದೆ ಲಕ್ಷಗಟ್ಟಲೆ ಹಣ ವೆಚ್ಚ ಮಾಡುತ್ತಾರಾ? ಗೆದ್ದಮೇಲೆ ಲಾಭ ಪಡೆಯುವುದು ರೈತರನ್ನು ಏಮಾರಿಸಿಯೇ. ಈ ಎಲ್ಲ ಅನಿಶ್ಚಿತತೆ ಕೊನೆಗಾಣಿಸಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ದರ ದೊರೆಯುವ ಪರ್ಯಾಯ ಮಾರ್ಗವನ್ನು ಇಂದು ರಾಜಕೀಯ ಕಾರಣಗಳಿಗೆ ರದ್ದಾಗುವಂತೆ ಮಾಡಿರುವುದು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ.

ಕಾಯಿದೆಯಲ್ಲಿನ ದೋಷಗಳನ್ನು ಮತ್ತು ಬೇಕಾದ ತಿದ್ದುಪಡಿಯ ಕುರಿತು ಮಾತುಕತೆ ಮಾಡದೆ ಕಾಯಿದೆ ರದ್ದು ಪಡಿಸಿ ಎಂದು ಬೋರ್ಡ್ ಹಿಡಿದುಕೊಂಡು ಕೂತರೆ ಇವರ ಉದ್ದೇಶ ರೈತರ ಹಿತ ಕಾಪಾಡುವುದಾ ಎಂಬ ಅನುಮಾನ ಬಾರದಿರಲಿಲ್ಲ. ಕಾಯಿದೆಯು ಹಿಂಪಡೆದಿರುವುದು ಖಂಡಿತವಾಗಿ ಮೋದಿ ಸರ್ಕಾರದ ಸೋಲಲ್ಲ ಬದಲಿಗೆ ಪ್ರಾಮಾಣಿಕ ರೈತರ ಸೋಲಾಗಿದೆ ಅವರ ಬದುಕು ಹಸನಾಗುವ ಬದಲಾವಣೆಗೆ ತಡೆಯೊಡ್ಡಿ ಅವರ ಆದಾಯಕ್ಕೆ ಹೊಡತ ನೀಡಿದ್ದಾರೆ. ಇದರಿಂದ ರೈತರ ಸಂಕಷ್ಟಕ್ಕೆ ಪರಿಹಾರ ಮತ್ತೆ ಮರೀಚಿಕೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಹೇಗೆ ರೈತರ ಬದುಕು ಹಸನುಗೊಳಿಸುತ್ತಾರೆ ಎಂಬುದಕ್ಕೆ ರೈತ ನಾಯಕರ ಬಳಿ ಉತ್ತರವಿಲ್ಲ. ಹಾಗೆ ನೋಡಿದರೆ ಇವರ ಬಳಿ ಯಾವುದೆ ಪರ್ಯಾಯವಾದ ಪರಿಹಾರ ಇರುವಂತೆ ಕಂಡುಬಂದಿಲ್ಲ ಇದ್ದಿದ್ದರೆ ಸಲಹಾತ್ಮಕ ರೂಪದಲ್ಲಿ ಸರ್ಕಾರಕ್ಕೆ ನೀಡಿ ರೈತರ ಬಗ್ಗೆ ತಮಗಿರುವ ಪ್ರಾಮಾಣಿಕ ಕಾಳಜಿಯನ್ನು ತೋರಬೇಕಿತ್ತು.

ರೈತಸಂಘದವರು ಈಗ ತಮ್ಮ ಹೋರಾಟ ಕೊನೆಗಾಣಿಸಲು ಮತ್ತೆ 6 ಶರತ್ತುಗಳನ್ನು ಇಟ್ಟಿದ್ದಾರೆ ಆದರೆ ಒಂದಾದರು ರೈತರ ಹಿತ ಕಾಪಾಡುವ ಬೇಡಿಕೆಯೇ ಅಲ್ಲ. ರಾಜಕೀಯ ಪ್ರೇರಿತ ಮತ್ತು ಕಾರ್ಯಸಾಧುವಲ್ಲದ ಬೇಡಿಕೆ ಮೂಲಕ ಸರ್ಕಾರವನ್ನು ಮಣಿಸಬಹುದು ಎಂದು ಮತ್ತೊಂದು ಸಂಘರ್ಷಕ್ಕೆ ಸಿದ್ಧವಾಗಿದ್ದಾರೆ.
91ರಲ್ಲಿ ಜಾರಿಗೆ ಬಂದ ಆರ್ಥಿಕ ಉದಾರೀಕರಣ ನೀತಿಯನ್ನು ವಿರೋಧದ ಕಾರಣ ಹಿಂಪಡೆದಿದ್ದರೆ ಇಂದು ದೇಶ ಇಷ್ಟು ಪ್ರಗತಿಯಾಗಲು ಸಾಧ್ಯವಾಗುತ್ತಿತ್ತಾ? ತದ ನಂತರ ಬಂದ ಸರ್ಕಾರಗಳು ಉದಾರೀಕರಣ ನೀತಿಯನ್ನು ಬೆಂಬಲಿಸಿದ ಕಾರಣ ಭಾರತ ತಡವಾಗಿಯಾದರು ನಿಶ್ಚಿತವಾಗಿ ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ.

ಆಡಳಿತ ನಡೆಸುವವರು ಜನರ ಹಿತಕ್ಕಾಗಿ ಸುಧಾರಣೆ ತಂದಾಗ ಅದರಿಂದ ತಮಗೆ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದಾಗ ತಮ್ಮ ಉಳಿವಿಗಾಗಿ ಮತ್ತೆಂದು ಸುಧಾರಣೆ ತರಲು ಮುಂದಾಗುವುದಿಲ್ಲ ಇದರಿಂದ ನಷ್ಟವಾಗುವುದು ಜನರಿಗೆ. ಒಂದಂತೂ ನಿಶ್ಚಿತ ಬಹುಬೇಗ ರೈತರಿಗೆ ಈ ಸತ್ಯ ಅರಿವಾಗುವುದರಲ್ಲಿ ಯಾವ ಸಂದೇಹವಿಲ್ಲ.