Sunday, 25th September 2022

ಹಾವೇರಿಯಲ್ಲಿ ರೈತಪರ ಸಂಘಟನೆಗಳ ವಿನೂತನ ಪ್ರತಿಭಟನೆ

ಹಾವೇರಿ: ಕರ್ನಾಟಕ ಬಂದ್ ಹಿನ್ನೆಲೆ ಹಾವೇರಿಯಲ್ಲಿ ರೈತಪರ ಸಂಘಟನೆಗಳು ವಿನೂತನ ರೀತಿಯ ಪ್ರತಿಭಟನೆ ನಡೆಸಿದವು.

ಹಾವೇರಿಯ ಸಿದ್ದಪ್ಪ ಸರ್ಕಲ್‌ನಲ್ಲಿ ಅರೆಬೆತ್ತಲಾಗಿ, ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಂಡು ರೈತರ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಬಾಯಿ ಬಾಯಿ ಬಡ್ಕೊಂಡು, ಹೊಯ್ಕಳ್ಳೋ ಮೂಲಕ ಧರಣಿ ನಡೆಸಲಾಗುತ್ತಿದೆ. ರಾಜ್ಯ ಬಂದ್ ಹಿನ್ನೆಲೆ ತೆರೆದಿರುವ ಅಂಗಡಿ, ಹೋಟೆಲ್ ಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಲು ಪ್ರತಿಭಟನಾ ಕಾರರು ಮುಂದಾಗಿದ್ದು, ಹೀಗೆ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದರು.

ಚಿಕ್ಕಬಳ್ಳಾಪುರ: ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ ಬೆಂಬಲಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ರಾಜ್ಯ ರೈತ ಸಂಘದ ವಿವಿಧ ಬಣಗಳು, ಕೇಂದ್ರಿಯ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ ( ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್), ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ವೇದಿಕೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಕನ್ನಡಪರ ಸಂಘಟನೆಗಳು ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಂಡಿವೆ.

ನಗರದಲ್ಲಿ ಸೋಮವಾರ ಬೆಳಿಗ್ಗೆ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿದರು.

ಕಲಬುರ್ಗಿ: ಕೃಷಿಗೆ ಸಂಬಂಧಿತ ಕಾಯ್ದೆಗಳ ಜಾರಿ ವಿರೋಧಿಸಿ ವಿವಿಧ ರೈತ ಹಾಗೂ ಕನ್ನಡಪರ ‌ಸಂಘಟನೆಗಳು ನಗರದಲ್ಲಿ ಬೆಳಿಗ್ಗೆಯಿಂದ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ‌ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ‌.