| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬಕ್ಕೆ ( Ganesh Chaturthi 2024) ವೈವಿಧ್ಯಮಯ ಟ್ರೆಡಿಷನಲ್ ಆಕ್ಸೆಸರೀಸ್ ಕಾಲಿಟ್ಟಿದ್ದು, ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ವಿವಿಧ ರೀತಿಯ ಹೊಸ ವಿನ್ಯಾಸದ ಟ್ರೆಡಿಷನಲ್ ಆಭರಣಗಳು (Traditional jewellery) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವು ಮಹಿಳೆಯರ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿವೆ.
ಮನಸೆಳೆಯುತ್ತಿರುವ ಆಕ್ಸೆಸರೀಸ್
ಅಂದಹಾಗೆ, ಸಡಗರ-ಸಂಭ್ರಮದಿಂದ ಆಚರಿಸುವ ಗೌರಿ –ಗಣೇಶನ ಹಬ್ಬದಂದು ಚಿಕ್ಕ ಹೆಣ್ಣು ಮಕ್ಕಳಿಂದಿಡಿದು ವಿವಾಹಿತ ಮಹಿಳೆಯರು ಟ್ರೆಡಿಷನಲ್ ಆಗಿ ಸಿಂಗರಿಸಿಕೊಂಡು ಹಬ್ಬ ಆಚರಿಸುತ್ತಾರೆ. ಇದು ಮೊದಲಿನಿಂದಲೂ ಬೆಳೆದು ಬಂದಿದೆ. ಇನ್ನು, ಈ ಫೆಸ್ಟಿವ್ ಸೀಸನ್‌ನಲ್ಲಿ, ವೆಸ್ಟರ್ನ್ ಲುಕ್ ನೀಡುವಂತಹ ಆಭರಣಗಳು ಹಾಗೂ ಆಕ್ಸೆಸರೀಸ್ ಸೈಡಿಗೆ ಸರಿಯುತ್ತವೆ. ಹಬ್ಬದ ಆಚರಣೆಗೆ ಪೂರಕವಾಗುವಂತಹ ನಾನಾ ಡಿಸೈನ್‌ನ ಹೊಸ ವಿನ್ಯಾಸದ ಟ್ರೆಡಿಷನಲ್ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಹಬ್ಬ ಆಚರಿಸುವ ಮಹಿಳೆಯರ ಮನ ಸೆಳೆಯುತ್ತವೆ ಎನ್ನುತ್ತಾರೆ ಫ್ಯಾನ್ಸಿ ಶಾಪ್‌ವೊಂದರ ಮ್ಯಾನೇಜರ್.
ಮ್ಯಾಚಿಂಗ್ ಟ್ರೆಡಿಷನಲ್ ಆಕ್ಸೆಸರೀಸ್
ಇನ್ನು, ಆಕ್ಸೆಸರೀಸ್ ಸ್ಟೈಲಿಸ್ಟ್ ಭಾರ್ಗವಿ ಹೇಳುವಂತೆ, ಮಹಿಳೆಯರು ಹಬ್ಬಕ್ಕೆ ಧರಿಸುವ ಟ್ರೆಡಿಷನಲ್ ಉಡುಪಿಗೆ ತಕ್ಕಂತೆ ಆಕ್ಸೆಸರೀಸ್ ಮ್ಯಾಚ್ ಮಾಡುವುದರಿಂದ ಇವುಗಳಿಗೆ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಟ್ರೆಡಿಷನಲ್ ಆಕ್ಸೆಸರೀಸ್‌ಗಳು
ಬಣ್ಣ ಬಣ್ಣದ ಗಾಜಿನ ಬಳೆಗಳು, ಹನ್ನೆರಡು ಹಾಗೂ ಆರು ಬಳೆಗಳಿರುವ ಬ್ಯಾಂಗಲ್ ಸೆಟ್‌ಗಳು, ವನ್ ಗ್ರಾಮ್ ಗೋಲ್ಡ್‌ನ ಹಾರಗಳು, ನೆಕ್ಲೇಸ್, ಮಾಂಗ್‌ಟೀಕಾ, ಬಾಜುಬಂದ್ ಸೇರಿದಂತೆ ನಾನಾ ಬಗೆಯ ಆಭರಣಗಳು, ಸಾಂಪ್ರದಾಯಿಕ ಹೇರ್‌ಸ್ಟೈಲ್‌ಗೆ ಪೂರಕವಾಗುವಂತಹ ಜಡೆ ಬಂಗಾರ, ಕುಚ್ಚುಗಳು, ಹೇರ್ ಎಕ್ಸ್ಟೆನ್ಷನ್ಸ್, ಹರಳಿನ ಕ್ಲಿಪ್‌ಗಳು, ಜಡೆನಾಗರ ರೆಡಿಮೇಡ್ ಚವರಿಗಳು, ಬಗೆಬಗೆಯ ಕುಚ್ಚುಗಳು, ದುಂಡು ಮಲ್ಲಿಗೆ, ಗೋಲ್ಡನ್ ಮಲ್ಲಿಗೆ, ಕನಾಕಂಬರ ಸೇರಿದಂತೆ ನಾನಾ ಬಗೆಯ ಹೂವುಗಳ ದಿಂಡುಗಳು ಸೇರಿದಂತೆ ನಾನಾ ಬಗೆಯ ಹೇರ್ ಡಿಸೈನ್ ಮಾಡುವ ಆಕ್ಸೆಸರೀಸ್ ಗೌರಿ ಹಬ್ಬದಂದು ಹೆಣ್ಣು ಮಕ್ಕಳ ಸಂಭ್ರಮ ಹೆಚ್ಚಿಸಲು ಬಂದಿವೆ ಎನ್ನುತ್ತಾರೆ ಫ್ಯಾನ್ಸಿ ಶಾಪ್‌ವೊಂದರ ಮಾಲೀಕರು.
ಅಂದ ಹೆಚ್ಚಿಸುವ ಟ್ರೆಡಿಷನಲ್ ಆಕ್ಸೆಸರೀಸ್
- ಟ್ರೆಡಿಷನಲ್ ಆಕ್ಸೆಸರೀಸ್‌ನಲ್ಲಿ, ವನ್ ಗ್ರಾಮ್ ಗೋಲ್ಡ್‌ನ ಜ್ಯುವೆಲರಿಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಟ್ರೆಂಡಿಯಾಗಿವೆ
- ಹೇರ್‌ಸ್ಟೈಲ್‌ಗೆ ಪೂರಕವಾಗುವಂತಹ ಹೇರ್ ಆಕ್ಸೆಸರೀಸ್ ಯುವತಿಯರನ್ನು ಸೆಳೆದಿವೆ
- ಹಬ್ಬಗಳಿಗೆ ಮರು ಬಳಕೆ ಮಾಡಬಹುದಾದಂತಹ ಆಕ್ಸೆಸರೀಸ್ ಖರೀದಿಸುವುದು ಉತ್ತಮ
- ಗಾಜಿನ ಬಳೆಗಳು ಈ ಹಬ್ಬಕ್ಕೆ ಶ್ರೇಷ್ಠ ಎನ್ನುವ ಕಾರಣದಿಂದಾಗಿ ಬಾಕ್ಸ್ ಬಳೆಗಳು ಹೆಚ್ಚು ಚಾಲ್ತಿಯಲ್ಲಿವೆ
(ಲೇಖಕಿ ಫ್ಯಾಷನ್ ಪತ್ರಕರ್ತೆ)