Wednesday, 1st February 2023

ಈ ಮಟ್ಟಕ್ಕೆ ಬರಲು ಮಾವನೇ ಸ್ಫೂರ್ತಿ

ಅಳಿಯನಿಗೆ ಯಾವತ್ತೋ ಹಿತೋಪದೇಶ ಮಾಡಿದ್ದ ‘ಇನ್ಫಿ’ ನಾರಾಯಣಮೂರ್ತಿ

ಬೆಂಗಳೂರು: ‘ವ್ಯಾಪಾರೋದ್ದಿಮೆಗಿಂತ ರಾಜಕೀಯದ ಮೂಲಕವೇ ನೀನು ಪ್ರಪಂಚ ವನ್ನು ಪ್ರಭಾವಿಸಬಲ್ಲೆ ಎಂದು ಮಾವ ಹೇಳಿದ್ದರು’- ಹೀಗೆಂದಿರುವುದು ಪ್ರಸ್ತುತ ಬ್ರಿಟನ್ ಪ್ರಧಾನಿಯಾಗಿರುವ ಮತ್ತು ವಿಶ್ವದೆಲ್ಲೆಡೆಯ ಭಾರತೀಯರ ಹೆಮ್ಮೆ, ಸಂಭ್ರಮಕ್ಕೂ ಕಾರಣರಾಗಿರುವ ರಿಷಿ ಸುನಕ್.

ಇನ್ಫೋಸಿಸ್‌ನಂಥ ಕಂಪನಿಯನ್ನು ಹುಟ್ಟುಹಾಕಿ ‘ಬಿಲಿಯನೇರ್’ ಎನಿಸಿಕೊಂಡು ಪ್ರಸ್ತುತ ಲೋಕೋಪಕಾರದ ಚಟುವಟಿಕೆಗಳಿಗೆ ತಮ್ಮ ಬದುಕನ್ನು ಮೀಸಲಿಟ್ಟಿರುವ ಎನ್.ಆರ್.ನಾರಾಯಣ ಮೂರ್ತಿಯವರ ಕುರಿತಾಗಿ ಹೊಸದಾಗಿ ಪರಿಚಯಿಸುವ, ವಿವರಿ ಸುವ ಅಗತ್ಯವಿಲ್ಲ. ಅವರ ಮಗಳು ಅಕ್ಷತಾರನ್ನು ರಿಷಿ ಸುನಕ್ ವರಿಸಿರುವುದು ಗೊತ್ತಿರುವ ಸಂಗತಿಯೇ.

ಸ್ಟಾನ್ ಫೋರ್ಡ್ ವಿವಿಯಿಂದ ಎಂಬಿಎ ಪದವಿ ಪಡೆದು ಗೋಲ್ಡ್‌ಮನ್ ಸ್ಯಾಕ್ಸ್ ಕಂಪನಿ, ತರುವಾಯದಲ್ಲಿ ‘ಹೆಡ್ಜ್ ಫಂಡ್’ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸಿದ್ದವರು ರಿಷಿ ಸುನಕ್. ಕೈತುಂಬ ಸಂಬಳ ನೀಡುವ ಇಂಥ ಪ್ರತಿಷ್ಠಿತ ಹುದ್ದೆಗಳನ್ನು ಬದಿಗೊತ್ತಿ ರಾಜ ಕಾರಣದಂಥ ‘ವಾಗ್ವಾದದ ಪ್ರಪಂಚ’ಕ್ಕೆ ಪ್ರವೇಶಿಸಲು ರಿಷಿ ನಿರ್ಧರಿಸಿದಾಗ ಅನೇಕರಿಗೆ ಅಚ್ಚರಿಯಾಗಿದ್ದುಂಟು.

ಬ್ರಿಟನ್ ಪ್ರಧಾನಮಂತ್ರಿ ಹುದ್ದೆಗೆ ತಾವು ಸ್ಪರ್ಧಿಸಿದ್ದಕ್ಕೆ ಸಂಬಂಧಿಸಿ ಕಳೆದ ಆಗಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಭಾಷಣದ ವೇಳೆ ರಿಷಿ ಸುನಕ್, ‘ವಿಶ್ವದ ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದೆನಿಸಿಕೊಂಡ, ನೂರಾರು ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ, ಭಾರತದಂಥ ಒಂದಿಡೀ ದೇಶದ ಕುರಿತಾದ ಗ್ರಹಿಕೆಯನ್ನೇ ಅಕ್ಷರಶಃ ಬದಲಿಸಿದ ಇನೋಸಿಸ್ ಕಂಪನಿಯನ್ನು ಹುಟ್ಟುಹಾಕಿ ಅಪ್ರತಿಮ ಯಶಸ್ಸು ದಕ್ಕಿಸಿಕೊಂಡ ನನ್ನ ಮಾವ ನಾರಾಯಣ ಮೂರ್ತಿಯವರು, ವ್ಯವಹಾರ ಪ್ರಪಂಚಕ್ಕಿಂತ ನೀನು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಲ್ಲೆ, ವಿಶ್ವವನ್ನು ಪ್ರಭಾವಿಸಬಲ್ಲೆ ಎಂದು ಹೇಳಿದಾಗೆಲ್ಲ ನನಗೆ ಮನಸ್ಸಿನಲ್ಲೇನೋ ಸುರಿಸಿದಂತಾಗುತ್ತಿತ್ತು.

ಹೀಗೆ ಹೇಳಿದ್ದು ಮಾತ್ರವಲ್ಲದೆ ಅವರು ಯಾವಾಗಲೂ ನನ್ನ ಬೆನ್ನಹಿಂದೆಯೇ ಇದ್ದು ನಿರಂತರ ಪ್ರೋತ್ಸಾಹಿಸಿಕೊಂಡೇ ಬಂದರು. ಅದರ ಫಲವಾಗಿಯೇ ನಾನೀಗ ನಿಮ್ಮ ಮುಂದೆ ನಿಂತಿರುವೆ’ ಎಂದು ಹೇಳಿದ್ದರು. ರಿಷಿ ಸುನಕ್ ಕುರಿತಾದ ನಾರಾಯಣ ಮೂರ್ತಿ ಯವರ ವಿಶ್ಲೇಷಣೆ, ದೃಷ್ಟಿಕೋನ ಮತ್ತು ಭವಿಷ್ಯ ಎಷ್ಟು ಕರಾರುವಕ್ಕಾಗಿತ್ತು ಎಂಬುದಕ್ಕೆ ಇಂದು ಜಗವೇ ಸಾಕ್ಷಿಯಾಗಿದೆ.

ಈ ಚುನಾವಣಾ ಪ್ರಚಾರ ಸಭೆಯಲ್ಲಿ ಬ್ರಿಟನ್ ಕುರಿತಾದ ತಮ್ಮ ದೃಷ್ಟಿಕೋನ ಹಾಗೂ ಮುಂಗಾಣ್ಕೆಗಳ ಕುರಿತೂ ರಿಷಿ ಸುನಕ್ ಹೇಳಿಕೊಂಡಿದ್ದು ಹೀಗೆ ಬೆಳವಣಿಗೆಯ ಚಾಲಕಶಕ್ತಿ ನಾವಾಗಬೇಕು ಎಂದಾದಲ್ಲಿ, ನಾವು ತೊಡಗಿಸಿಕೊಳ್ಳುವ ಪ್ರತಿಯೊಂದು ಬಾಬತ್ತಿನಲ್ಲೂ ನಾವೀನ್ಯಕ್ಕೆ ಆದ್ಯತೆ ಇರಬೇಕು ಮತ್ತು ಅಂಥ ಆದ್ಯತೆಯನ್ನು ಒಳಗೊಂಡ ಆರ್ಥಿಕತೆ ನಮ್ಮದಾಗಿರಬೇಕು.

ಇದು ಕೈಗೂಡಬೇಕೆಂದರೆ, ಹೊಸ ಸಂಗತಿಗಳು, ಪರಿಕಲ್ಪನೆಗಳು ಅಥವಾ ಉತ್ಪನ್ನಗಳನ್ನು ಹುಟ್ಟುಹಾಕುತ್ತಿರುವ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣಹೂಡಿಕೆ ಮಾಡುವಂಥ ಸರಕಾರ ಹಾಗೂ ಅತ್ಯುತ್ತಮವೂ ಉಜ್ವಲವೂ ಆಗಿರುವ ಪ್ರತಿಭಾವಂತರ ದಂಡನ್ನು ಆಕರ್ಷಿಸಬಲ್ಲ ಒಂದು ವೀಸಾ ವ್ಯವಸ್ಥೆ ನಮ್ಮಲ್ಲಿರಬೇಕು. ಮಾತ್ರವಲ್ಲ, ತಾವು ಕೈಗೆತ್ತಿಕೊಂಡಿರುವ ಕೆಲಸಗಳನ್ನು ವಿಭಿನ್ನವಾಗಿ ನಿರ್ವಹಿಸಲು ಯತ್ನಿಸುವ ಸಂಸ್ಕೃತಿಯುಳ್ಳ ಜನರೂ ನಮ್ಮಲ್ಲಿರಬೇಕು. ಇಂಥ ಎಲ್ಲವನ್ನೂ ಒಳಗೊಂಡ ಆರ್ಥಿಕತೆಯನ್ನು ಕಟ್ಟುವುದು ಹೇಗೆಂದು ನನಗೆ ಗೊತ್ತು.

ನಮ್ಮಲ್ಲಿನ ಬಹುತೇಕ ಸಮಸ್ಯೆಗಳನ್ನು ಶಿಕ್ಷಣವಷ್ಟೇ ಪರಿಹರಿಸಬಲ್ಲದು. ಒಂದಿಡೀ ಪ್ರಪಂಚವೇ ಅಸೂಯೆಪಡುವಂಥ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ನನ್ನ ಬಯಕೆ.

error: Content is protected !!