Friday, 19th August 2022

ಶಾಸಕರ ನೆರವಿನಿಂದ ಮಲ್ಲಾಪುರ ಗ್ರಾಮಕ್ಕೆ ಬಸ್ ಸೌಕರ್ಯ, ಗ್ರಾಮದಲ್ಲಿ ಹಬ್ಬದ ವಾತಾವರಣ

ದೇವದುರ್ಗ: ಹಲವು ವರ್ಷಗಳಿಂದ ಕೆಂಪು ಬಸ್ ಕಾಣದ ಊರಿಗೆ ಶಾಸಕರ ಕೆ.ಶಿವನಗೌಡ ನಾಯಕ ಅವರ ನೆರವಿನಿಂದ ಈ ಗ್ರಾಮಕ್ಕೆ ಇದೀಗ ಬಸ್ ಬಿಡುಗಡೆ ಮಾಡಲಾಗಿದೆ.

ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದೆ. ಇಲ್ಲಿನ ಗ್ರಾಮಸ್ಥರು ಬಸ್ ಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಹಲವು ವರ್ಷ ಕಳೆದರೂ ತಾಲೂಕಿನ ಮಲ್ಲಾಪುರ ಗ್ರಾಮಕ್ಕೆ ಬಸ್ ಬಂದಿರಲಿಲ್ಲ. ದೇವದುರ್ಗ ಪಟ್ಟಣದಿಂದ ಅರಕೇರಾ ಮಾರ್ಗವಾಗಿ ಮಲ್ಲಾಪುರ ಗ್ರಾಮಕ್ಕೆ ಬಸ್ ಬಿಡಲಾಗಿದೆ.

ಇದುವರೆಗೂ ಬಸ್ ಸಂಚಾರವನ್ನೇ ಕಾಣದ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್ ಬಂದು ನಿಂತಾಗ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ವಾಗಿತ್ತು. ಗ್ರಾಮಸ್ಥರೆಲ್ಲರೂ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದಗಳನ್ನು ಸಲ್ಲಿಸಿದರು.

ಇದೇ ವೇಳೆ ಮಲ್ಲಾಪುರ ಗ್ರಾಮದ ವತಿಯಿಂದ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ದಲ್ಲಿ ಊರಿನ ಮುಖಂಡರು, ಗ್ರಾ.ಪಂ.ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.