Friday, 19th August 2022

ಪ್ರವಾಸದಲ್ಲೂ ಹಬ್ಬದ ಸಂಭ್ರಮ

ಮಂಜುನಾಥ್ ಡಿ.ಎಸ್

ಪ್ರತಿವರ್ಷ ಬರುವ ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೂ ಒಂದು ತಿಂಗಳಿರುವಾಗಲೇ, ಬೃಹತ್ ಕ್ರಿಸ್‌ಮಸ್ ಟ್ರೀಯನ್ನು ಅಲಂಕರಿಸಿ, ಮಾಲ್ ಮುಂದೆ ನಿಲ್ಲಿಸಿ, ಪ್ರವಾಸಿಗರನ್ನು ಆಕರ್ಷಿಸುವ ಕೌಶಲವನ್ನು ಅಮೆರಿಕದವರನ್ನು ನೋಡಿ ಕಲಿಯಬೇಕು!

ಐರೋಪ್ಯ ದೇಶಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಅಮೆರಿಕದಲ್ಲಂತೂ ಹಬ್ಬಕ್ಕೆ ಸುಮಾರು ಒಂದು ತಿಂಗಳ ಮೊದಲೇ ಕ್ರಿಸ್ಮಸ್ ಆಚರಣೆಯ ಸಂಭ್ರಮ ಆರಂಭವಾಗುತ್ತದೆ. ಮನೆಗಳಲ್ಲಿ ಕ್ರಿಸ್ಮಸ್ ಟ್ರೀ ತಂದಿರಿಸಿ ಅದನ್ನು ದೀಪಗಳಿಂದ ಅಲಂಕರಿಸುತ್ತಾರೆ. ಮನೆಗಳ ಮುಂಭಾಗ ದಲ್ಲಿಯೂ ಏಸುವಿನ ಜೀವನದ ಪ್ರಮುಖ ಪ್ರಸಂಗಗಳನ್ನು ಬಿಂಬಿಸುವ ವೈವಿಧ್ಯಮಯ ಬೊಂಬೆ ಗಳನ್ನು ಪ್ರದರ್ಶಿಸುತ್ತಾರೆ.

ಇದೊಂದು ರೀತಿಯಲ್ಲಿ ಚಳಿಗಾಲದ ಹಬ್ಬವಾಗಿದ್ದು ವಾಣಿಜ್ಯ ಕೇಂದ್ರಗಳು ಸಹ ಗ್ರಾಹಕರ ಕಣ್ಮನ ತಣಿಸಲು ಪೈಪೋಟಿ ನಡೆಸುತ್ತವೆ. ತಿಂಗಳುಗಟ್ಟಲೆ ಹಬ್ಬವನ್ನು ಆಚರಿಸುವ ಅಮೆರಿಕನ್ನರ ಉತ್ಸಾಹವು ಎಲ್ಲರಲ್ಲೂ ಉತ್ಸಾಹ ತುಂಬುತ್ತದೆ. ಕ್ಯಾಲಿಫೋರ್ನಿಯ ರಾಜ್ಯದ ಅರ್ವೈನ್ ನಗರದಲ್ಲಿನ ‘ಸ್ಪೆಕ್ಟ್ರಮ್ ಮಾಲ್ ಅಸಂಖ್ಯಾತ ವೀಕ್ಷಕರನ್ನು ಆಕರ್ಷಿಸುವ ಒಂದು ವಾಣಿಜ್ಯ ಕೇಂದ್ರ. ವಾರಾಂತ್ಯದಲ್ಲಿನ ಅಧಿಕ ಜನದಟ್ಟಣೆಯಿಂದ ದೂರವಿರುವ ಆಲೋಚನೆ ಯಿಂದ ಬುಧವಾರ ಸಂಜೆಯೇ ಅಲ್ಲಿಗೆ ಭೇಟಿ ಯಿತ್ತೆವು. ಆದರೆ ಅಲ್ಲಿನ ಜನಸಂದಣಿ ನಮ್ಮ ನಿರೀಕ್ಷೆ ಮೀರಿದ್ದನ್ನು ಕಂಡಾಗ ಎಲ್ಲರೂ ನಮ್ಮಂತೆಯೇ ಆಲೋಚಿಸಿರಬೇಕು ಎನಿಸಿತು.

ಮೂರು ಅಂತಸ್ತುಗಳ ಪಾರ್ಕಿಂಗ್ ಲಾಟ್ ಇದ್ದರೂ ಕಾರು ನಿಲ್ಲಿಸಲು ಜಾಗಕ್ಕಾಗಿ ಪರದಾಡಬೇಕಾಯಿತು. ಇನ್ನೊಂದು ದಿನ ಬಂದರಾಯಿತೆಂದು ಕೊಂಡು ಮನೆಗೆ ಮರಳ ಬೇಕೆಂದಿದ್ದಾಗ ಪುಣ್ಯಾತ್ಮರೊಬ್ಬರು ತಮ್ಮ ಕಾರನ್ನು ತೆಗೆದರು. ಆ ಜಾಗ ನಮಗೆ ಸಿಕ್ಕಿದಾಗ ನಿಽ ದೊರೆತಂತೆನಿಸಿತು. ಪಾರ್ಕಿಂಗ್ ಸಂಕೀರ್ಣದ ಮೂರನೆಯ ಮಹಡಿಯಿಂದಲೇ ಟೆರ್ರ‍ೀಸ್ ವೀಲ್ ಮತ್ತು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ತಾಳೆ ಸಂಕುಲಕ್ಕೆ ಸೇರಿದ ಮರಗಳು ಗೋಚರಿಸಿದವು.

ಅ ಗಿರಗಟ್ಟೆ ಮಾಲ್ ಪ್ರವೇಶಿಸಿ ಬೆಳಕಿನ ಹಾದಿಯಲ್ಲಿ ಸಾಗಿದಾಗ ಗಿರಗಟ್ಟೆ ಇದಿರಾಯಿತು. ಈ ಕೆರುಸೆಲ್ ಅಥವಾ ರಂಕಲರಾಟೆ ರಂಗುರಂಗಿನ ಕುದುರೆಗಳು ಹಾಗು ಇತರ ಪ್ರಾಣಿಗಳಿಂದ ಕೂಡಿದ್ದು ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುತ್ತಿತ್ತು. ಇದನ್ನು ನೋಡುತ್ತಿದ್ದಂತೆ ಮನಸ್ಸು ನಾಗಾಲೋಟದಿಂದ ಬಾಲ್ಯದ ದಿನಗಳತ್ತ ಧಾವಿಸಿತು. ಸ್ಪೆಕ್ಟ್ರಮ್ ಮಾಲ್ ಗೆ ಈ ಮೆರ್ರಿ ಗೋರೌಂಡ್ ಸೇರ್ಪಡೆಯಾದದ್ದು 2001ರಲ್ಲಿ.

ಫೆರ್ರ‍ೀಸ್ ವೀಲ್
ಸ್ವಲ್ಪ ದೂರ ನಡೆದು 108 ಅಡಿ ಎತ್ತರದ ಜೈಯಂಟ್ ವೀಲ್ ಸಮೀಪಿಸಿದೆವು. ಇದರಲ್ಲಿ ಕೂರಲು ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಐವತ್ತೆರೆಡು ಸಾವಿರ ಎಲ.ಇ.ಡಿ. ದೀಪಗಳಿಂದ ಅಲಂಕೃತವಾದ ಈ ಬೃಹತ್ ಚಕ್ರದ ಗೊಂಡೋಲಗಳು (ತೂಗುತೊಟ್ಟಿಲುಗಳು) ನಯನಮನೋಹರವಾಗಿದ್ದವು. ಪ್ರತಿ ಗೊಂಡೋಲ ದಲ್ಲಿ ಆರು ಆಸನಗಳಿದ್ದವು.

ನಿಧಾನವಾಗಿ ಸುತ್ತುತ್ತಾ, ಬದಲಾಗುತ್ತಿದ್ದ ಬಣ್ಣಗಳ ಆಕರ್ಷಕ ಚಿತ್ತಾರಗಳಿಂದ ಚಿತ್ತ ಸೂರೆಗೊಂಡ ಈ ಚಕ್ರವನ್ನು ವೀಕ್ಷಿಸುತ್ತಾ ನಿಂತು ಹೊತ್ತು ಹೋದದ್ದೇ ತಿಳಿಯಲಿಲ್ಲ. ಈ ಸುಂದರ ನೋಟ ಆನಂದ ದಾಯಕ ಅನುಭವ ನೀಡಿದ್ದಲ್ಲದೆ ಹಿಂದೆ ನಾನು ನೋಡಿದ್ದ, ಥೇಮ್ಸ ನದಿಯ ದಕ್ಷಿಣ ದಂಡೆಯಲ್ಲಿನ ‘ಲಂಡನ್ ಐ’ ನೆನಪಿಸಿತು.

ಅ ಕ್ರಿಸ್ಮಸ್ ಟ್ರೀ
75 ಅಡಿ ಎತ್ತರದ ಸಾಲಂಕೃತ ಕ್ರಿಸ್ಮಸ್ ಟ್ರೀ ಇಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು. ನವೆಂಬರ್ 26ರಂದು (ಹಬ್ಬಕ್ಕೆ ಒಂದು ತಿಂಗಳ ಮುಂಚೆ) ಅನಾ ವರಣಗೊಂಡ ಈ ಬೃಹತ್ ಕ್ರಿಸ್ಮಸ್ ಟ್ರೀ ಜನವರಿ ಎರಡರ ವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ. ಪ್ರತಿ ದಿನ ಸಂಜೆ ಐದು ಘಂಟೆಗೆ ಇದರ ದೀಪಗಳನ್ನು ಬೆಳಗಿಸ ಲಾಗುತ್ತದೆ. ಪ್ರತಿ ಅರ್ಧ ಘಂಟೆಮ್ಮೆ ಮೊಳಗುವ ಸಂಯೋಜಿತ ಸಂಗೀತದ ಹಿನ್ನೆಲೆಯಲ್ಲಿ ವರ್ಣರಂಜಿತವಾಗಿ ಕಂಗೊಳಿಸುತ್ತಿದ್ದ ಈ ರಚನೆಯ ಅಂದ ವನ್ನು ಅಲ್ಲಿಗೆ ಆಗಮಿಸುತ್ತಿದ್ದ ವೀಕ್ಷಕರು ಕಣ್ತುಂಬಿಸಿಕೊಳ್ಳುತ್ತಿದ್ದರು. ಸೊಬಗಿನ ಈ ಕಲಾಕೃತಿಯ ಛಾಯಾಚಿತ್ರ / ವೀಡಿಯೋ ಚಿತ್ರೀಕರಣಕ್ಕೆ ಮೊಬೈಲ್ ಸುಲಭವಾಗಿ ಒದಗಿಬರುತ್ತಿತ್ತು. ಬಹುತೇಕ ಮಂದಿ ಇದರ ಮುಂದೆ ನಿಂತು ನಾನಾ ಭಂಗಿಗಳಲ್ಲಿ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ನಾವೂ ಇದಕ್ಕೆ ಹೊರತಾಗಿರಲಿಲ್ಲ.

ಐಸ್ ಸ್ಕೇಟಿಂಗ್ ರಿಂಕ್
2003ರಲ್ಲಿ ಸೇರ್ಪಡೆಯಾದ ಐಸ್ ಸ್ಕೇಟಿಂಗ್ ರಿಂಗ್ ಚಳಿಗಾಲದಲ್ಲಿ ಐದಾರು ವಾರಗಳು ಮಾತ್ರ ಲಭ್ಯವಿರುತ್ತದೆ. ಕಿರಿಯರು ಹಿರಿಯರೆಂಬ ಭೇದವಿಲ್ಲದೆ ಎಲ್ಲ ವಯೋಮಾನದವರು ಈ ಕ್ರೀಡೆಯಲ್ಲಿ ತೊಡಗಿದ್ದರು. ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ ಮೂರರಿಂದ ಸಂಜೆ ಎಂಟೂ ವರೆಯ ತನಕ ಮತ್ತು ಉಳಿದ ಮೂರು ದಿನಗಳಲ್ಲಿ ರಾತ್ರಿ ಹತ್ತರ ತನಕ ಸ್ಕೇಟಿಂಗ್ ಮಾಡಲು ಅವಕಾಶ ವಿದೆ.

ಸ್ಪೆಕ್ಟ್ರಮ್ ಕ್ಲೈಂಬರ್
ಇದು ಹದಿನೆಂಟು ಅಡಿ ಎತ್ತರದ ಮೂರು ಆಯಾಮಗಳ ರಚನೆ. 49 ಅಡಿ ಅಗಲದ ಈ ರಚನೆ 75 ಅಟ್ಟಣಿಗೆಗಳನ್ನು ಹೊಂದಿದೆ. ಒಂದು ಅಟ್ಟಣಿಗೆ ಯಿಂದ ಮತ್ತೊಂದಕ್ಕೆ ಜಿಗಿಯುತ್ತಾ ಏರಿಳಿಯುವ ಈ ಆಟ ಮಕ್ಕಳಿಗೆ ಮನರಂಜನೆ ಒದಗಿಸುವುದರೊಡನೆ ಅವರ ದೈಹಿಕ ಹಾಗು ಬೌದ್ಧಿಕ ಬೆಳವಣಿಗೆಗೂ
ನೆರವಾಗುತ್ತದೆ.

ಎಸ್ಕೇಪ್ ಗೇಮ್
ಸುಳಿವುಗಳು, ಗುಪ್ತಸಂಕೇತಗಳು, ಇತ್ಯಾದಿಗಳ ನೆರವಿನಿಂದ ಅರವತ್ತು ನಿಮಿಷಗಳ ಅವಽಯಲ್ಲಿ ತಂಡ ತನ್ನ ನಿಗದಿತ ಗುರಿ ತಲುಪಬೇಕಾದ ಕ್ರೀಡೆ ಇದು. ಬಾಹ್ಯಾಕಾಶ ಅನ್ವೇಷಣೆ, ಸೆರೆಮನೆಯಿಂದ ತಪ್ಪಿಸಿಕೊಳ್ಳುವುದು, ಮುಂತಾದವುಗಳಿಂದ ಇಷ್ಟದ ವಿಷಯವನ್ನು ತಂಡ ಆಯ್ದುಕೊಳ್ಳಬಹುದು.

ನಾವೇ ತಯಾರಿಸುವ ಕೇಕ್!
ಅಗತ್ಯ ಸಾಮಗ್ರಿಗಳನ್ನು ಒದಗಿಸಿ, ಮಾರ್ಗದರ್ಶನ ಮಾಡುವ ಮೂಲಕ ಪಾಕಶಾಸದಲ್ಲಿ ಆಸಕ್ತಿಯುಳ್ಳವರು ತಮ್ಮ ನೆಚ್ಚಿನ ಕೇಕ್ ತಯಾರಿಸಲು ಈ ಮಳಿಗೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನೀವೇ ಮಾಡಿದರೆ ತೃಪ್ತಿ ಸಿಗುತ್ತದೆಂಬ ಮೂಲಮಂತ್ರ ಆಧರಿಸಿದ ಮಾರಾಟ ತಂತ್ರವನ್ನು ಈ ಮಳಿಗೆ ಯಶಸ್ವಿ ಯಾಗಿ ಬಳಸಿಕೊಂಡಿದೆ.

ಇಷ್ಟೇ ಅಲ್ಲದೆ ಕಾರಂಜಿಗಳು, ಉಪಾಹಾರ ಮಂದಿರಗಳು, ಭೋಜನಾಲಯಗಳು, ಪಾನಗೃಹಗಳು, ಹಾಗು ನಾನಾ ನಮೂನೆಯ ವಸ್ತುಗಳನ್ನು ವಿಕ್ರಯಿ ಸುವ ನೂರಾರು ಮಳಿಗೆಗಳು ಇಲ್ಲಿವೆ. ಪ್ರತಿವರ್ಷ ಬರುವ ಹಬ್ಬವೊಂದರ ಈ ರೀತಿ ಎಲ್ಲರೂ ಸಂಭ್ರಮಿಸುವ ಸನ್ನಿವೇಶವನ್ನಾಗಿ ಪರಿವರ್ತಿಸುವ ಕಲೆ ಯನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕು, ಅಲ್ಲವೆ!