Monday, 16th May 2022

ಭದ್ರಾವತಿಯ ಸಾಮಿಲ್’ನಲ್ಲಿ ಅಗ್ನಿ ದುರಂತ: ಬೆಂಕಿಯ ತೀವ್ರತೆಗೆ ನಾಟ ಭಸ್ಮ

ಶಿವಮೊಗ್ಗ: ಭದ್ರಾವತಿಯ ಸಾಮಿಲ್ ಒಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸತತ 8 ಗಂಟೆ ಕಾರ್ಯಾ ಚರಣೆ ನಡೆಸಿದ್ದಾರೆ.

ಬಸ್ ನಿಲ್ದಾಣ ಸಮೀಪದ ಮಂಜುನಾಥ ಸಾಮಿಲ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ.

ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸುವುದಕ್ಕೆ, 8 ಗಂಟೆ ಕಾರ್ಯಾಚರಣೆ ನಡೆಸು ವಂತಾಯಿತು. 9 ಅಗ್ನಿಶಾಮಕ ವಾಹನಗಳ ಮೂಲಕ ನಿರಂತರವಾಗಿ ನೀರು ಪೂರೈಸಲಾಯಿತು. ಆದರೂ ಬೆಂಕಿ ವ್ಯಾಪಕವಾಗಿ ಉರಿಯುತ್ತಿತ್ತು.

ಮಂಜುನಾಥ ಸಾಮಿಲ್‌ನಲ್ಲಿ ಭಾರೀ ಪ್ರಮಾಣದ ನಾಟ ಸಂಗ್ರಹಿಸಲಾಗಿತ್ತು. ಬೆಂಕಿಯ ತೀವ್ರತೆಗೆ ನಾಟ ಭಸ್ಮವಾಗುತ್ತಲೇ ಹೋದವು.

ಬೆಂಕಿ ವ್ಯಾಪಕವಾಗಿ ಹಬ್ಬುತ್ತಿದ್ದರಿಂದ ಅಕ್ಕಪಕ್ಕದ ಊರುಗಳಿಂದಲೂ ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ಯನ್ನು ಕರೆಯಿಸಲಾಯಿತು. 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ, ತರೀಕೆರೆ, ಚನ್ನಗಿರಿ, ಕಡೂರು, ಭದ್ರಾವತಿಯ ಎಂಪಿಎಂ, ವಿಐಎಸ್‌ಎಲ್ ಅಗ್ನಿಶಾಮಕ ಘಟಕ ದಿಂದಲೂ ವಾಹನಗಳು, ಸಿಬ್ಬಂದಿಯನ್ನು ಕರೆಯಿಸಿಕೊಂಡು ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.

ರಾತ್ರಿ ಇಡೀ ನಿದ್ರೆ ಬಿಟ್ಟು ಮನೆಗಳಿಂದ ಹೊರಗೆ ಉಳಿದರು. ಬೆಂಕಿ ಹೊತ್ತಿಕೊಂಡು, ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಕ್ಕಪಕ್ಕದ ಕಟ್ಟಡದ ಜನರು, ಮನೆಯಲ್ಲಿದ್ದ ಸಿಲಿಂಡರ್‌ಗಳನ್ನು ಹೊರಗೆ ತಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದರು. ಈ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನೆರವಾದರು. ಸಾಮಿಲ್ ಪಕ್ಕದಲ್ಲಿದ್ದ ಎರಡು ಅಂಗಡಿಗಳು ಸುಟ್ಟು ಕರಕಲಾಗಿದೆ. 8 ಗಂಟೆ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.

ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತುಕೊಂಡಿ ರುವ ಬಗ್ಗೆ ಶಂಕೆ ಇದೆ. ಆದರೆ ಕಿಡಿಗೇಡಿ ಕೃತ್ಯ ವನ್ನು ತಳ್ಳಿಹಾಕುವಂತಿಲ್ಲ. ರಾತ್ರಿ 10 ಗಂಟೆ ಹೊತ್ತಿಗೆ ಸಾಮಿಲ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಸಾಮಿಲ್ ಮಾಲೀಕರಿಗೆ ಮಾಹಿತಿ ತಿಳಿಸಲು ಮುಂದಾಗಿದ್ದಾರೆ.