ಚಿಕ್ಕನಾಯಕನಹಳ್ಳಿ : ಅಗ್ನಿ ಅವಘಡ ಸಂಭವಿಸಿದಾಗ ಬೇರೆಯವರನ್ನು ರಕ್ಷಿಸುವುದಲ್ಲದೆ ಸ್ವರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಪಟ್ಟಣದ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಶಾಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಗ್ನಿ ಅವಘಡಗಳ ವಿವಿಧ ದೃಶ್ಯಾವಳಿಗಳನ್ನು ತೋರಿಸಿ, ಇಂತಹ ಸಂದರ್ಭದಲ್ಲಿ ವಹಿಸ ಬೇಕಾದ ಎಚ್ಚರಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನೀರಿನಲ್ಲಿ ಬಿದ್ದವರನ್ನು ಹೇಗೆ ರಕ್ಷಿಸಬೇಕು, ಈ ಸಂದರ್ಭದಲ್ಲಿ ನಿಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮನವರಿಕೆ ಮಾಡಿದರು.
ಮನೆಗಳಲ್ಲಿ ಬೆಂಕಿ ಹತ್ತಿದಾಗ, ಗ್ಯಾಸ್ ಹತ್ತಿಕೊಂಡು ಉರಿದಾಗ ಏನು ಮಾಡಬೇಕು. ವಾಹನ ಅಪಘಾತವಾದಾಗ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು. ಇಂತಹ ಸಂದರ್ಭಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ನಡೆಸಿದ ಸಾಹಸ ದೃಶ್ಯಗಳನ್ನು ಕಂಡು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.