Tuesday, 27th July 2021

ಮೊದಲ ಪಿಹೆಚ್.ಡಿ ಪಡೆದ ಮಹಿಳಾ ವಿಜ್ಞಾನಿಯ ಸಾಹಸ ಕಥೆ

ಪ್ರಚಲಿತ

ಎಲ್‌.ಪಿ.ಕುಲಕರ್ಣಿ, ಬಾದಾಮಿ

ಮೊದಲಿನಿಂದಲೂ ಜಗತ್ತಿನ ಬಹುಪಾಲು ರಾಷ್ಟ್ರಗಳು ವಿಜ್ಞಾನ ಕಲಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ನಿಷೇಧಿಸಿದ್ದು, ಅಡೆ ತಡೆಮಾಡಿದ್ದನ್ನು ನಾವು ಇತಿಹಾಸದ ಪುಟಗಳಲ್ಲಿ ಕಾಣಬಹುದು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಪೂರ್ವದಲ್ಲಿ ಹಾಗೂ ನಂತರದ ಕೆಲವು ವರ್ಷ, ಮಹಿಳೆಯರ ಕಲಿಕೆಗೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಅದರಲ್ಲಿಯೂ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರ ಪಾಲು ಕಡಿಮೆ ಅಂತಾನೇ ಹೇಳಬಹುದು. ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ಸರಕಾರದ ಉನ್ನತ ಮಟ್ಟದ ಸಂಶೋಧನಾ ಪ್ರಯೋಗಾಲಯಗಳಲ್ಲಿ
ಮಹಿಳಾ ವಿeನಿಗಳ ಸಂಖ್ಯೆ ವಿರಳವೆಂದೇ ಹೇಳಬಹುದು.

ವಿಜ್ಞಾನದಲ್ಲಿ ತೊಡಗಿಸಿಕೊಂಡವರೇ ಕಡಿಮೆಯೆಂದ ಮೇಲೆ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆ ಕೇಳಬೇಕೆ, ಇನ್ನೂ ವಿರಳ. ಆದರೆ, ಸ್ವತಂತ್ರಪೂರ್ವದ ಒಬ್ಬ ಛಲಗಾರ್ತಿ, ನೊಬೆಲ್ ಪುರಸ್ಕೃತ ಖ್ಯಾತ ವಿಜ್ಞಾನಿ ಸಿ.ವಿ.ರಾಮನ್
ರನ್ನೇ ಎದುರು ಹಾಕಿಕೊಂಡು, ಅವರು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ಪ್ರವೇಶ ಪಡೆದು ಮುಂದೆ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಸಹ ಮಾಡುತ್ತಾಳೆಂದಳೆ ಅವಳ ಗುಂಡಿಗೆಯನ್ನು ಮೆಚ್ಚಲೇಬೇಕು. ಅವರೇ ಮಹಿಳಾ ವಿಜ್ಞಾನಿ ಕಮಲಾ ಸೊಹೊನಿ.

ರಾಮನ್ ಒಬ್ಬ ಶ್ರೇಷ್ಠ ವಿeನಿಯಾಗಿದ್ದರೂ, ಬಹಳ ಸಂಕುಚಿತ ಮನೋಭಾವದವರಾಗಿದ್ದರು. ನಾನು ಮಹಿಳೆ ಎಂಬ ಮಾತ್ರಕ್ಕೆ ನನ್ನೊಂದಿಗೆ ಅವರು ವರ್ತಿಸಿದ ರೀತಿಯನ್ನು ನಾನೆಂದಿಗೂ ಮರೆಯಲಾರೆ. ಆಗಲೂ ಸಹ, ರಾಮನ್ ನನ್ನನ್ನು ಮಾಮೂಲಿ ವಿದ್ಯಾರ್ಥಿನಿಯಾಗಿ ಸೇರಿಸಿಕೊಳ್ಳಲಿಲ್ಲ. ಇದು ನನಗೆ ಅತಿ ದೊಡ್ಡ ಅವಮಾನವಾಗಿತ್ತು. ಆ ಕಾಲದಲ್ಲಿ ಮಹಿಳೆಯರ ವಿರುದ್ಧದ
ಪಕ್ಷಪಾತ ಧೋರಣೆ ಅತಿ ಕೆಟ್ಟದಾಗಿತ್ತು. ನೊಬೆಲ್ ಪ್ರಶಸ್ತಿ ಪುರಸ್ಕೃತರೇ ಹಾಗೆ ವರ್ತಿಸಿದರೆ, ಇನ್ನೇನನ್ನು ತಾನೆ ನಿರೀಕ್ಷಿಸಬಹುದು? ಎಂದು ಗಟ್ಟಿ ಧ್ವನಿಯಲ್ಲಿ ಒಮ್ಮೆ ಮಾತನಾಡಿದ್ದರು ಕಮಲಾ ಸೊಹೊನಿ.

ಕಮಲಾ ಸೊಹೊನಿ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ. ಗ್ರಾಮೀಣ ಪ್ರದೇಶಗಳ ಬಡವರು ಉಪಯೋಗಿಸುವ ಆಹಾರ ವಸ್ತುಗಳ ಮೂರು ಪ್ರಮುಖ ಗುಂಪುಗಳ ಮೇಲೆ ಅವರು ವಿಸ್ತಾರವಾಗಿ ಜೈವಿಕ – ರಾಸಾಯನಿಕ ಅಧ್ಯಯನಗಳನ್ನು ನಡೆಸಿ, ಅವುಗಳ ಪೌಷ್ಟಿಕ ಮೌಲ್ಯಗಳನ್ನು ಸ್ಥಿರಪಡಿಸಿದರು. ಮುಂದೆ ಭಾರತದ ಅತಿದೊಡ್ಡ ‘ಕನ್ಸೂಮರ್ ಗೈಡೆ ಸೊಸೈಟಿ ಆಫ್ ಇಂಡಿಯಾ (ಸಿಜಿಐಎಸ್)’ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಎಂಬುದಾಗಿ ಲೇಖಕ ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವು ವೈeನಿಕ ಆಟಿಕೆಗಳನ್ನು ತಯಾರಿಸಿ, ಮಕ್ಕಳ
ಮನಮುಟ್ಟುವಂತೆ ಮಾಡುತ್ತಿರುವ, ಅರವಿಂದ ಗುಪ್ತ ಅವರು, ಕಮಲಾ ಸೊಹೊನಿಯವರ ಬಗ್ಗೆ ಬರೆಯುತ್ತಾರೆ.

ಮಧ್ಯಪ್ರದೇಶದ ಇಂದೋರಿನಲ್ಲಿ 1912ರ ಜೂನ್ 18 ರಂದು ಕಮಲಾ ಸೊಹೊನಿ ಜನಿಸಿದರು. ಅವರ ತಂದೆ ನಾರಾಯಣ ರಾವ್ ಭಾಗವತ್ ಮತ್ತು ಚಿಕ್ಕಪ್ಪ ಮಾಧವರಾವ್ ಪ್ರಖ್ಯಾತ ರಾಸಾಯನಶಾಸ್ತ್ರಜ್ಞರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಪದವಿ ಗಳಿಸಿದವರ ಪೈಕಿ ಅವರು ಮೊದಲಿಗರು. ಇವರ ಮಗಳು ಕಮಲಾ, ಬಾಂಬೆ ವಿಶ್ವವಿದ್ಯಾಲಯದಿಂದ
ಭೌತಶಾಸ್ತ್ರ ಮತ್ತು ರಾಸಾಯನಶಾಸ್ತ್ರ ವಿಷಯಗಳಲ್ಲಿ ಬಿಎಸ್.ಸಿ ಪದವಿ ಪಡೆದು, ವಿಶ್ವವಿದ್ಯಾಲಯಕ್ಕೇ ಮೊದಲಿಗರಾಗಿ ತೇರ್ಗಡೆಯಾಗಿದ್ದ ಅವರು ಮುಂದಿನ ಸಂಶೋಧನಾ ಕಾರ್ಯಕ್ಕೆ ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮಗೆ ಪ್ರವೇಶ ಸಿಗುವುದು ಸುಲಭ ಎಂದು ಅಂದುಕೊಂಡಿದ್ದರು. ಆದರೆ ಅದು ನೀರು ಕುಡಿದಷ್ಟು ಸರಾಗವಾಗಿರಲಿಲ್ಲ.

ಐಐಎಸ್‌ಸಿ ಹಾಗೂ ರಾಮನ್ ರಿಸರ್ಚ್ ಇನ್ ಸ್ಟಿಟ್ಯೂಟ್‌ಗಳಿಗೆ ಗಣನೀಯ ಕೊಡುಗೆ ನೀಡಿದ ಮತ್ತು ಭಾರತದಲ್ಲಿ ವಿದ್ವತ್ಪೂರ್ಣ ವಿಷಯಗಳ ನಿಯತಕಾಲಿಕೆಗಳಿಗೆ ಭದ್ರ ಬುನಾದಿ ಹಾಕಿದ ಸುಪ್ರಸಿದ್ಧ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ.ರಾಮನ್
ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಕ್ಕೆ ಕಟ್ಟಾ ವಿರೋಧಿಯಾಗಿದ್ದರು. ಅಂತೆಯೇ, 1933ರಲ್ಲಿ ಕಮಲಾ ಅವರು ವಿಶ್ವ ವಿದ್ಯಾಲಯದ ಅರ್ಹತಾಪಟ್ಟಿಯಲ್ಲಿ ಟಾಪರ್ ಆಗಿದ್ದರೂ, ಅವರ ಅರ್ಜಿಯನ್ನು ರಾಮನ್ ಸಾರಾಸಗಟಾಗಿ ತಿರಸ್ಕರಿಸಿದರು. ಕಮಲಾ ಹಿಮ್ಮೆಟ್ಟುವ ಜಾಯಮಾನದ ಹೆಣ್ಣಾಗಿರಲಿಲ್ಲ. ಅವರು ರಾಮನ್ ಅವರನ್ನು ಎದುರಿಸಿದರು.

ಕೊನೆಗೆ ನಿರ್ದೇಶಕರ ಕಚೇರಿಯೆದುರು ಕಮಲಾ ಸತ್ಯಾಗ್ರಹ ಹೂಡಿ ಏಕೆ ಪ್ರವೇಶ ನೀಡುವುದಿಲ್ಲವೆಂದು ಲಿಖಿತವಾಗಿ ತಿಳಿಸ
ಬೇಕೆಂದು ಕೇಳಿದರು. ದಾರಿಯಿಲ್ಲದೆ ರಾಮನ್, ಕೆಲವು ನಿರ್ಬಂಧಗಳ ಮೇಲೆ ಅವರಿಗೆ, ಪ್ರವೇಶ ನೀಡಿದರು.

ರಾಮನ್, ಕಮಲಾ ಅವರಿಗೆ ವಿಧಿಸಿದ ನಿರ್ಬಂಧಗಳು:
1 ಮೊದಲ ವರ್ಷ ಪ್ರೊಬೇಷನ್‌ನಲ್ಲಿ (ರೆಗ್ಯುಲರ್ ಕ್ಯಾಂಡಿಡೇಟ್ ಆಗಿ ಅಲ್ಲ,) ಪೂರೈಸಬೇಕು.

2. ಗೈಡ್ ಹೇಳಿದಲ್ಲಿ ರಾತ್ರಿಯೂ ಕೆಲಸ ಮಾಡಬೇಕು.

3. ವಿದ್ಯಾರ್ಥಿಗಳ ಏಕತೆಗೆ ಭಂಗತರುವಂತೆ ನಡೆದುಕೊಳ್ಳಬಾರದು.

ಒಂದು ವರ್ಷದ ಬಳಿಕ ಕಮಲಾ ಅವರ ಪ್ರಾಮಾಣಿಕ ಕೆಲಸದ ಬಗ್ಗೆ ಸಂತೃಪ್ತಿಯಾಗಿ, ಜೈವಿಕ ರಾಸಾಯನಶಾಸ್ತ್ರದಲ್ಲಿ ಕಾಯಂ ಸಂಶೋಧನೆ ನಡೆಸಲು ರಾಮನ್ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲ, ಅಂದಿನಿಂದ ರಾಮನ್ ಇನ್ ಸ್ಟಿಟ್ಯೂಟಿನಲ್ಲಿ ಮಹಿಳಾ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಆರಂಭಿಸಿದರು. ಕಮಲಾ ಅವರಿಗೆ ಇದೊಂದು ಮಹತ್ವದ ವಿಜಯ ವಾಗಿತ್ತು. ಅವರ ಈ ಹೋರಾಟಗಳು ವಿಜ್ಞಾನಿಗಳಾಗಲು ಹಂಬಲಿಸುತ್ತಿದ್ದ ಇತರ ಮಹಿಳೆಯರ ಹಾದಿಯನ್ನು ಸುಗಮಗೊಳಿಸಿತು.

ಐಐಎಸ್‌ಸಿಯಲ್ಲಿ ತಮ್ಮ ಗುರುಗಳಾಗಿದ್ದ ಶ್ರೀನಿವಾಸಯ್ಯನವರ ಕೆಳಗೆ ಕಮಲಾ ಕೆಲಸ ಮಾಡಿದರು. ಅವರ ಮೇಲೆ  ಶ್ರೀನಿವಾಸಯ್ಯನವರು ಮಹತ್ತರ ಪ್ರಭಾವ ಬೀರಿದ್ದರು. ಜೈವಿಕ ರಾಸಾಯನಶಾಸ್ತ್ರದ ಬಗ್ಗೆ ಮಹಾ ಮೇಧಾವಿಗಳ ಕೃತಿಗಳನ್ನು ಓದಲು ಹಾಗೂ ಅವರೊಡನೆ ಪತ್ರ ವ್ಯವಹಾರ ಮಾಡಲು ಅವರು ಕಮಲಾರನ್ನು ಪ್ರೋತ್ಸಾಹಿಸಿದರು. ಈ ರೀತಿ ದಿಗ್ಗಜರ ಪ್ರಭಾವದಿಂದ ಕಮಲಾರವರು, ಹಾಲು, ಬೇಳೆಕಾಳುಗಳು ಮತ್ತು ದ್ವಿದಳ ಧಾನ್ಯಗಳಲ್ಲಿನ ಪ್ರೊಟೀನ್ ಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುವಂತಾಯಿತು.

ಇವು ಭಾರತದ ಜನರ ಅಪೌಷ್ಟಿಕತೆಯ ಮೇಲೆ ಬೆಳಕು ಚೆಲ್ಲುವಂತಾಯಿತು. 1936ರಲ್ಲಿ ಒಬ್ಬ ಪದವಿ ವಿದ್ಯಾರ್ಥಿನಿಯಾಗಿ, ಬೇಳೆ ಕಾಳುಗಳಲ್ಲಿನ ಪ್ರೊಟೀನುಗಳ ಮೇಲೆ ಕೆಲಸ ಮಾಡುವಲ್ಲಿ ಇವರೇ ಮೊದಲಿಗರೆನಿಸಿದರು. ತಮ್ಮ ಈ ಸಂಶೋಧನೆಯನ್ನು ಅವರು ಬಾಂಬೆ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ, ಎಂ.ಎಸ್.ಸಿ ಪದವಿ ಪಡೆದರು. ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗಿ, ಪ್ರಾರಂಭದಲ್ಲಿ ಡಾ.ಡೆರಿಕ್ ರಿಕ್ಟರ್ ಅವರ ಪ್ರಯೋಗಾಲಯದಲ್ಲಿ ಕೆಲಸ ಮಾಡಿದರು.

ಡಾ.ರಿಕ್ಟರ್, ಕಮಲಾ ಅವರಿಗೆ ಹಗಲು ಹೊತ್ತಿನಲ್ಲಿ ಕೆಲಸ ಮಾಡಲು ತಮ್ಮಲ್ಲಿದ್ದ ಒಂದು ಹೆಚ್ಚುವರಿ ಮೇಜನ್ನು ಬಿಟ್ಟುಕೊಟ್ಟರು. ಅದೇ ಮೇಜಿನ ಮೇಲೆ ಡಾ.ರಿಕ್ಟರ್ ರಾತ್ರಿ ವೇಳೆ ಮಲಗುತ್ತಿದ್ದರು. ಡಾ.ರಿಕ್ಟರ್ ಬೇರೆ ಕಡೆ ಕೆಲಸಕ್ಕೆ ಹೋದಾಗ, ಕಮಲಾ ಅವರು ಡಾ.ರಾಬಿನ್ ಹಿಲ್ ಅವರ ಕೈಕೆಳಗೆ, ಸಸ್ಯ ಅಂಗಾಂಶಗಳ ಬಗ್ಗೆ ತಮ್ಮ ಕೆಲಸ ಮಾಡುತ್ತಿದ್ದರು.

ಆಲೂಗಡ್ಡೆಯ ಮೇಲೆ ಸಂಶೋಧನೆ ಮಾಡುತ್ತಿದ್ದಾಗ, ಸಸ್ಯ ಅಂಗಾಂಶದ ಪ್ರತಿಯೊಂದು ಜೀವಕೋಶವು ‘ಸೈಟೋಕ್ರೋಮ್ ಸಿ’ ಎಂಬ ಕಿಣ್ವವನ್ನು ಹೊಂದಿರುತ್ತದೆ ಎಂಬುದನ್ನು ಕಂಡುಕೊಂಡರು. ಈ ಕಿಣ್ವವು ಸಸ್ಯ ಜೀವಕೋಶಗಳು ಆಕ್ಸಿಜನ್‌ನೊಡನೆ ಸೇರಿ ಆಕ್ಸೈಡಿಗೆ ಪರಿವರ್ತನೆಯಾಗುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತದೆ. ಇದು ಇಡೀ ಸಸ್ಯಸಾಮ್ರಾಜ್ಯಕ್ಕೆ ಅನ್ವಯವಾದ ಮೂಲ.

ನೀರಾ, ಸಿಹಿ ಹೆಂಡ ಅಥವಾ ತಾಳೆ ಜೇನು ಎಂದು ಕರೆಯಲ್ಪಡುವ ಈ ದ್ರವವನ್ನು ಸಾಮಾನ್ಯವಾಗಿ ನಮ್ಮ ಹಳ್ಳಿಗರು, ಈಚಲು ಗಿಡದ ಹೂಗೊಂಚಲುಗಳಿಂದ ಪಡೆದುಕೊಳ್ಳುತ್ತಾರೆ. ಅಲ್ಲದೇ ಅದನ್ನು ಸೇವಿಸುತ್ತಾರೆ ಕೂಡ. ಇದೊಂದು ಪೌಷ್ಟಿಕ ಪೇಯ ಎಂದು ಕಮಲಾ ಸೊಹೊನಿ ಹೇಳಿದ್ದರು. ಕಮಲಾ ಅವರಿಗೆ ಎರಡು ಸ್ಕಾಲರ್‌ಶಿಪ್ ದೊರೆತವು. ಹೀಗಾಗಿ, ಅವರು, ನೊಬೆಲ್
ಪುರಸ್ಕೃತ ವಿಜ್ಞಾನಿ ಪ್ರೊ. ಫ್ರೆಡ್ರಿಕ್ ಹಾಪ್ಕಿ ಅವರೊಂದಿಗೆ ಅಧ್ಯಯನ ಮಾಡಲು ಒಂದು ಸ್ಕಾಲರ್ ಶಿಪ್ ನೆರವಾದರೆ, ಎರಡನೆಯ ಸ್ಕಾಲರ್‌ಶಿಪ್- ಕಮಲಾ ಅವರು ಯುರೋಪಿನಲ್ಲಿನ ಪ್ರಖ್ಯಾತ ವಿಜ್ಞಾನಿಗಳನ್ನು ಭೇಟಿ ಮಾಡಲು ಅನುವುಮಾಡಿಕೊಟ್ಟ ಅಮೆರಿಕನ್ ಪ್ರವಾಸದ ಫೆಲೋಶಿಪ್.

ಸಸ್ಯ ಅಂಗಾಂಶದ ಉಸಿರಾಟದ ಕ್ರಿಯೆಯಲ್ಲಿ ‘ಸೈಟೊಕ್ರೋಮ್ ಸಿ’ಯ ಇರುವಿಕೆಯನ್ನು ಪತ್ತೆಮಾಡಿದ್ದನ್ನು ವಿವರಿಸಿ, ಒಂದು ಪುಟ್ಟ ಪ್ರಬಂಧವನ್ನು ಕಮಲಾ ತಮ್ಮ ಪಿಎಚ್.ಡಿ ಪದವಿಗಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಅವರ ಈ ಟೈಪ್
ಮಾಡಲಾದ ಪ್ರಬಂಧ ಒಟ್ಟು 49 ಪುಟಗಳಿಂದ ಕೂಡಿತ್ತು. ವಿವಿಗೆ ಪಿಎಚ್.ಡಿ ಪ್ರಬಂಧ ಸಲ್ಲಿಸಿದ ಕೇವಲ 14ತಿಂಗಳಲ್ಲಿ ಕಮಲಾ ಅವರಿಗೆ ಪದವಿ ದೊರೆಯಿತು. ಕಮಲಾ, ವಿಜ್ಞಾನದ ವಿಷಯದಲ್ಲಿ ಪಿಎಚ್.ಡಿ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು!

1939ರಲ್ಲಿ ಅಧ್ಯಯನ ಮುಗಿಸಿ ಭಾರತಕ್ಕೆ ಮರಳಿದ ಕಮಲಾ ಸೊಹೊನಿ ನವದೆಹಲಿಯ ಲೇಡಿ ಹಾರ್ಡಿಂಜ್ ಕಾಲೇಜಿನಲ್ಲಿ ಆಗತಾನೇ ಆರಂಭವಾದ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆಯಗಾಗಿ ಕಾರ್ಯನಿರ್ವಹಿಸಿದರು. ನಂತರ, ಕೂನೂರಿನ ನ್ಯೂಟ್ರಿಷನ್ ರಿಸರ್ಚ್ ಲ್ಯಾಬೋರೇಟರಿಯ ಸಹಾಯಕ ನಿರ್ದೇಶಕರಾಗಿ ನಿಯುಕ್ತರಾದರು. ಅಲ್ಲಿ ಅವರು ವಿಟಮಿನ್‌ಗಳ
ಪರಿಣಾಮಗಳ ಬಗ್ಗೆ ಸಂಶೋಧನೆ ಕೈಗೊಂಡರು.

1947ರಲ್ಲಿ ವೃತ್ತಿಯಲ್ಲಿ ವಿಮೆಯ ದರಗಳ ತಜ್ಞ (ಆಕ್ಚುಯರಿ) ಆಗಿದ್ದ ಎಂ.ವಿ.ಸೊಹೊನಿಯವರನ್ನು ವಿವಾಹವಾಗಿ ಮುಂಬೈಗೆ ತೆರಳಿದರು. ಮುಂಬೈನಲ್ಲಿ ದಿ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನಲ್ಲಿ ಆಗತಾನೆ ಆರಂಭವಾಗಿದ್ದ ಬಯೋಕೆಮಿಸ್ಟ್ರಿ ವಿಭಾಗವನ್ನು ಸೇರಿಕೊಂಡರು. ಅಲ್ಲಿಯೂ ತಮ್ಮ ಸಂಶೋಧನೆ ಮುಂದುವರೆಸುತ್ತಾ, ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳಿಗೆ ನೆಚ್ಚಿನ ಪ್ರೊಫೆಸರ್, ಉತ್ತಮ ಮಾರ್ಗದರ್ಶಿ ಎನಿಸಿಕೊಂಡರು. ಅಲ್ಲಿ, ಭಾರತೀಯ ದ್ವಿದಳ ಧಾನ್ಯಗಳು, ನೀರಾ, ತಾಳೆ ಬೆಲ್ಲ ಮತ್ತು ತಾಳೆ ಕಾಕಂಬಿ ಮತ್ತು ಅಕ್ಕಿಯನ್ನು ಗಿರಣಿ ಮತ್ತು ಹೊಳಪು ಮಾಡಿಸುವಾಗ ಬರುವ ‘ಧನತ ‘ ಭತ್ತದ ಹಿಟ್ಟುಗಳ ಪಚನೀಯತೆ ಯನ್ನು ಕಡಿಮೆ ಮಾಡುವ ದ್ವಿದಳ ಧಾನ್ಯಗಳಲ್ಲಿರುವ ಪ್ರೊಟೀನುಗಳು, ಟ್ರಿಪ್ಸಿನ್ (ಮೇದೋಜೀರಕ ರಸದ ಕಿಣ್ವ) ಅಡತಡೆಗಳು ಮತ್ತು ಇತರ ಸಂಯುಕ್ತ ಧಾತುಗಳ ಮೇಲೆ ಉನ್ನತ ಅಧ್ಯಯನ ಕೈಗೊಂಡರು.

ಈಚಲು ಮರದ ನೀರಾ, ಉತ್ತಮ ಪೌಷ್ಟಿಕ ಆಹಾರವಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗಗಳ ಹದಿವಯಸ್ಸಿನ ಮಕ್ಕಳು ಮತ್ತು ಗರ್ಭಿಣಿಯರ ಆಹಾರ ಕ್ರಮದಲ್ಲಿ ನೀರಾವನ್ನು ಪರಿಚಯಿಸಿದ್ದರಿಂದ ಅವರ ಒಟ್ಟಾರೆ ಆರೋಗ್ಯ ದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ನೀರಾದ ಪೌಷ್ಟಿಕ ಮೌಲ್ಯದ ಬಗ್ಗೆ ಕಮಲಾ ಸೊಹೊನಿಯವರು ಮಾಡಿದ ಈ ಮಹತ್ತರ ಕೆಲಸಕ್ಕಾಗಿ ಅವರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಲಭಿಸಿತು.

1982-83ನೇ ಸಾಲಿನಲ್ಲಿ ಕನ್ಸೂಮರ್ ಗೈಡೆ ಸೊಸೈಟಿ ಆಫ್ ಇಂಡಿಯಾ (ಸಿಜಿಐಎಸ್)ದ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೇ, ಸಿಜಿಐಎಸ್ ಹೊರತರುತ್ತಿದ್ದ ನಿಯತಕಾಲಿಕೆ ‘ಕೀಮತ್’ನಲ್ಲಿ ಗ್ರಾಹಕರ ಸುರಕ್ಷತೆಯ ಬಗ್ಗೆ ಹಲವಾರು ಲೇಖನಗಳನ್ನೂ ಸಹ ಕಮಲಾ ಬರೆದರು. ಇಷ್ಟೆ ಸಾಧನೆ ಮಾಡಿದ ಕಮಲಾ ಸೊಹೊನಿ 1998ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಬಾರದ ಲೋಕಕ್ಕೆ ಹೋದರು. ಭಾರತದಲ್ಲಿ, ಅದೂ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸೇರಿ, ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಸದಾ ಹೇಳುತ್ತಿದ್ದ ಕಮಲಾ ಸೊಹೊನಿ, ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಅವರೊಂದು ಮಹಿಳಾ ಧ್ರುವ ನಕ್ಷತ್ರವೇ ಸರಿ. ಅವರ ದಿಟ್ಟತನ, ಅಧ್ಯಯನಶೀಲತೆ ಮುಂತಾದ ಗುಣಗಳು ಇಂದಿನ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿವೆ.

Leave a Reply

Your email address will not be published. Required fields are marked *