ಶಿರಸಿ: ಉತ್ತರಕನ್ನಡದ ಮೀನು ಮಾರುಕಟ್ಟೆ ಮುಂಭಾಗ ದುಷ್ಕರ್ಮಿಗಳು ಮೀನು ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿದ್ದಾರೆ.
ಇದನ್ನು ಕಂಡು ರೊಚ್ಚಿಗೆದ್ದ ಮೀನುಗಾರರು ಭಟ್ಕಳದ ಹಳೇ ಬಸ್ ಸ್ಟ್ಯಾಂಡ್ ಮೀನು ಮಾರುಕಟ್ಟೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಭಟ್ಕಳ ನಗರ ಭಾಗದ ಹಳೇ ಬಸ್ ಸ್ಟ್ಯಾಂಡ್ ನಲ್ಲಿ ಹಿಂದಿನಿಂದಲೂ ಮೀನುಗಾರರು ಮೀನು ಮಾರಾಟ ಮಾಡುತ್ತಿದ್ದರು. ಆದರೆ, ಭಟ್ಕಳ ಪುರಸಭೆ ಇತರೆಡೆ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ ಅಲ್ಲಿಗೆ ಮೀನುಗಾರರನ್ನು ಸ್ಥಳಾಂತರಿಸುವಂತೆ ಸೂಚಿಸಿತ್ತು. ಈ ನಡುವೆ ಮಾರುಕಟ್ಟೆಯ ಗುತ್ತಿಗೆಯನ್ನು ಯಾರೂ ಪಡೆಯದ ಕಾರಣ ಅಲ್ಲೂ ವ್ಯವಸ್ಥೆ ಅಸಮರ್ಪಕವಾಗಿತ್ತು. ಆದರೆ, ಮೀನುಗಾರರು ಮಾತ್ರ ತಮಗೆ ಹಳೇ ಮೀನು ಮಾರುಕಟ್ಟೆಯನ್ನೇ ಅಭಿವೃದ್ಧಿ ಮಾಡಿ ನೀಡಿ ಎಂದು ಒತ್ತಾಯಿಸುತ್ತಿದ್ದರು.
ಈ ಕಾರಣದಿಂದ ಮಾರುಕಟ್ಟೆಯನ್ನೇ ಖಾಲಿ ಮಾಡಿಸಲು ಪುರಸಭೆ ಹುನ್ನಾರ ನಡೆಸಿದ್ದಾಗಿ ಆರೋಪ ಕೇಳಿ ಬಂದಿದೆ. ಮೀನುಗಾರ ಮಹಿಳೆಯರು ಹಳೇ ಮಾರುಕಟ್ಟೆ ಬಳಸಬಾರದೆಂದು ಕಳೆದ 1 ವಾರದಿಂದ ಸ್ವಚ್ಛತೆಯನ್ನು ಕೂಡಾ ಕೈಗೊಂಡಿರಲಿಲ್ಲ. ಆದರೂ, ಮಹಿಳೆಯರು ಸ್ವತಃ ತಾವೇ ಹಣಕೊಟ್ಟು ಮೀನು ಮಾರುಕಟ್ಟೆ ಸ್ವಚ್ಛಗೊಳಿಸುತ್ತಾ ಬಂದಿದ್ದರು.
ಇಂದು ಮಾರುಕಟ್ಟೆಯಲ್ಲಿ ಯಾರೋ ಮೀನಿನ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿ ಮಲಿನಗೊಳಿಸಿದ್ದರು. ಪರಿಣಾಮ ರೊಚ್ಚಿಗೆದ್ದ ಮಹಿಳೆಯರು ಪುರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ್ದರು.
ಪುರಸಭೆಯ ಅಧಿಕಾರಿಗಳಿಗೆ ಮೀನು ಮಾರುಕಟ್ಟೆ ಸ್ವಚ್ಛ ಮಾಡುವಂತೆ ಮಹಿಳೆಯರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮರುಮಾತನಾಡದೆ ಪುರಸಭೆಯು ಮಾಲಿನ್ಯಗೊಂಡ ಮಾರುಕಟ್ಟೆಯನ್ನು ಸ್ವಚ್ಛ ಮಾಡಿಕೊಟ್ಟಿದೆ.