೧,೬೯೧ ಕೋಟಿ ರು. ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಯೋಜನೆ
ಅಪರ್ಣಾ ಎ.ಎಸ್. ಬೆಂಗಳೂರು
ವಿವಾದ, ಹೋರಾಟ, ರಾಜಕೀಯ ಕೆಸರೆರಚಾಟಗಳಿಂದಾಗಿ ಕೈಬಿಟ್ಟಿದ್ದ ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ)- ಹೆಬ್ಬಾಳ ರಸ್ತೆಯ ನಡುವೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಬಿಬಿಎಂಪಿ ಮರುಜೀವ ನೀಡುತ್ತಿದೆ.
ಚಾಲುಕ್ಯ ವೃತ್ತ, ವಿಂಡರ್ಸ್ ಮ್ಯಾನರ್ ಜಂಕ್ಷನ್, ಕಾವೇರಿ ಥಿಯೇಟರ್ ಜಂಕ್ಷನ್ ಮತ್ತು ಮೇಖ್ರಿ ವೃತ್ತದಲ್ಲಿ ಗ್ರೇಡ್ ಸಪರೇಟರ್ ಗಳನ್ನು ನಿರ್ಮಿಸಲು ವರದಿ ಹಾಗೂ ಯೋಜನಾ ವರದಿ ತಯಾರಿಸಲು ಮುಂದಾಗಿದ್ದು, ಇದಕ್ಕಾಗಿ ಅಲ್ಪಾ ವಧಿ ಟೆಂಡರ್ ಕರೆದಿದೆ. ಅಲ್ಲದೆ, ಬಸವೇಶ್ವರ ವೃತ್ತ- ಹೆಬ್ಬಾಳ ಮೇತ್ಸೇತುವೆಗೆ ಸಂಬಂಧಿಸಿದಂತೆ ಕಾರ್ಯ ಸಾಧ್ಯತಾ ವರದಿ ಹಾಗೂ ವಿಸ್ತೃತ ಯೋಜನಾ ವರದಿಗಾಗಿ (ಡಿಪಿಆರ್) ಪ್ರತ್ಯೇಕ ಟೆಂಡರ್ ಕರೆಯಲು ತೀರ್ಮಾನಿಸಿದೆ.
ಈ ಹಿಂದೆ ಮೇಲ್ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತಾದರೂ ವಿವಾದದ ಕಾರಣ ಕೈಬಿಡಲಾಗಿತ್ತು. ಆದರೆ, ದಿನಕಳೆದಂತೆ ಈ ಮಾರ್ಗದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರ ಓಡಾಟ ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ಮೇಲ್ಸೇತುವೆ ನಿರ್ಮಾಣ ಮುಂದುವರಿಸುವ ಉದ್ದೇಶ ವನ್ನು ಪಾಲಿಕೆ ಹೊಂದಿದೆ.
ಚಾಲುಕ್ಯ ವೃತ್ತ, ವಿಂಡ್ಸರ್ ಮ್ಯಾನರ್ ವೃತ್ತ, ಕಾವೇರಿ ಥಿಯೇಟರ್ ವೃತ್ತ ಹಾಗೂ ಮೇಖ್ರಿ ವೃತ್ತಗಳು ಮಧ್ಯ ಹಾಗೂ ಉತ್ತರ ಬೆಂಗಳೂರನ್ನು ಸಂಪರ್ಕಿಸುತ್ತಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸುತ್ತಿದೆ. ಈ ಮೇಲ್ಸೇತುವೆ ಯನ್ನು ಉಕ್ಕಿನಿಂದ (ಸ್ಟೀಲ್) ನಿರ್ಮಿಸಲು ನಿರ್ಧರಿಸಲಾಗಿದ್ದು, ಸುಮಾರು ೧,೬೯೧ ಕೋಟಿ ರು. ವೆಚ್ಚವಾಗ ಬಹುದು ಎಂದು ಅಂದಾಜಿಸಲಾಗಿದೆ.
ಆದರೆ, ಈ ಮೇಲ್ಸೇತುವೆ ನಿರ್ಮಾಣಕ್ಕಾಗಿ ೨,೨೪೪ ಮರಗಳನ್ನು ತೆರವುಗೊಳಿಸಬೇಕಾಗಿದೆ. ಈ ಅಂಶವೇ ಪಾಲಿಕೆಗೆ ಕಬ್ಬಿಣದ ಕಡಲೆಯಾಗಿರುವುದು. ಒಂದೋ ಈ ಮರಗಳನ್ನು ಬೇರೆಡೆ ಸಾಗಿಸಿ ನೆಡಬೇಕು ಇಲ್ಲವೇ ಕಡಿಯಬೇಕು. ಈ ಹಿಂದೆ ಯೋಜನೆ ಆರಂಭಿಸಿದಾಗ ಮರದ ಕಾರಣಕ್ಕಾಗಿಯೇ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ವಿವಾದಗಳನ್ನ ಗಮನ ದಲ್ಲಿಟ್ಟು ಕೊಂಡು ಪಾಲಿಕೆ ಟೆಂಡರ್ ಕರೆಯುತ್ತಿದ್ದು, ಅ.೨೯ರಂದು ಟೆಂಡರ್ ಪ್ರಸ್ತವಾನೆ ಮಾಡಲಾಗುವುದು.
ಅತ್ಯಂತ ವಾಹನ ದಟ್ಟಣೆ ಹೊಂದಿರುವ ಈ ಪ್ರದೇಶಗಳಲ್ಲಿ ಈಗಾಗಲೇ ಸಣ್ಣ ಮೇಲ್ಸೇತುವೆ ಮತ್ತು ಎರಡು ಕೆಳಸೇತುವೆಗಳಿವೆ. ಅಲ್ಲದೆ, ಕಳೆದ ತಿಂಗಳು ಪಾಲಿಕೆ, ಮೇಖ್ರಿ ವೃತ್ತದಿಂದ ಕಾವೇರಿ ಥಿಯೇಟರ್ ನಡುವಿನ ೬೦೦ ಮೀಟರ್ ವ್ಯಾಪ್ತಿಯನ್ನುವಿಸ್ತರಣೆ ಮಾಡಲು ೫೮ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿದೆ. ಅಲ್ಲದೆ, ಪಾಲಿಕೆಯ ವೆಬ್ಸೈಟ್ನಲ್ಲಿ
ವಿಂಡರ್ಸ್ ಮ್ಯಾನರ್ ಸೇತುವೆ ಮತ್ತು ಪ್ಯಾಲೇಸ್ ಗುಟ್ಟಳ್ಳಿ ಹಾಗೂ ಮೇಖ್ರೀ ಸರ್ಕಲ್ನ ಹತ್ತಿರದ ೩೦ ಮರಗಳನ್ನು ಗುರುತಿಸ ಲಾಗಿದೆ.
*
ನಾಲ್ಕು ಗ್ರೇಡ್ ಸಪರೇಟರ್ ನಿರ್ಮಾಣ ಕುರಿತು ಯೋಜನಾ ವರದಿಗೆ ಟೆಂಡರ್
ಮೇಲ್ಸೇತುವೆಯ ಡಿಪಿಆರ್ಗೆ ಪ್ರತ್ಯೇಕ ಟೆಂಡರ್ ಕರೆಯಲು ನಿರ್ಧಾರ
*
ಎಲ್ಲಾ ನಾಲ್ಕು ಜಂಕ್ಷನ್ಗಳು ಸಂಚಾರದಟ್ಟಣೆಯಿಂದ ಯಾವಾಗಲೂ ಮುಚ್ಚಿ ಹೋಗಿರುತ್ತದೆ. ಈ ವಿಚಾರದ ಬಗ್ಗೆ ಅಧ್ಯಯನ ಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದು, ವರದಿ ಸಿದ್ಧವಾದ ಬಳಿಕ ಹಣಕ್ಕಾಗಿ ಸರಕಾರವನ್ನು ಸಂಪರ್ಕಿಸುತ್ತೇವೆ. ಉದ್ದದ ಮೇಲ್ಸೇತುವೆ ನಿರ್ಮಾಣದ ಕಾರ್ಯಸಾಧ್ಯತಾ ವರದಿಯನ್ನು ಮೊದಲು ಅಧ್ಯಯನ ಮಾಡಲಾಗುವುದು.
– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ