Sunday, 10th November 2024

ಭಾರತೀಯ ಆರ್ಥಿಕತೆ ಮತ್ತೆ ಪುಟಿದೇಳಲು ಸಿದ್ಧವಾಗಿದೆ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,

ಭಾರತೀಯ ಆರ್ಥಿಕತೆಯ ತಾತ್ಕಾಲಿಕವಾಗಿ ಹಿನ್ನೆಡೆ ಕಂಡಿದ್ದರೂ, ಮರು ಪುಟಿದೇಳಲು ಸಿದ್ಧವಾಗಿದೆ ಮತ್ತು ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಸಮಯವಿರಲಾರದು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

41 ಕಲ್ಲಿದ್ದಲು ಗಣಿಯನ್ನು ವಾಣಿಜ್ಯ ಗಣಿಗಾರಿಕೆಗೆ ಅನುವು ಮಾಡುವ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಮೋದಿ, “ಎಲ್ಲಾ ಸೂಚಕಗಳು ಭಾರತೀಯ ಆರ್ಥಿಕತೆ ಚೇತರಿಸಿಕೊಂಡು ತ್ವರಿತವಾಗಿ ಪುಟಿದೇಳಲಿದೆ ಮತ್ತು ಮುಂದುವರಿಯಲಿದೆ ಎಂಬುದನ್ನು ಸೂಚಿಸುತ್ತಿವೆ. ಬಳಕೆ ಮತ್ತು ಬೇಡಿಕೆಗಳು ತ್ವರಿತವಾಗಿ ಪೂರ್ವ ಕೋವಿಡ್ ಪರಿಸ್ಥಿತಿಗೆ ತಲುಪುತ್ತಿವೆ. ಇಂತಹ ಸನ್ನಿವೇಶದಲ್ಲಿ, ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಸಮಯವಿರಲಾರದು” ಎಂದಿದ್ದಾರೆ.

ವಿದ್ಯುತ್, ಉಕ್ಕು, ಅಲ್ಯುಮಿನಿಯಂ ಮತ್ತು ಸ್ಪಾಂಜ್ ಉಕ್ಕು ಸೇರಿದಂತೆ ವಿವಿಧ ಮೂಲ ಕೈಗಾರಿಗಳ ಒಳಹರಿವಿಗೆ ಮುಖ್ಯ ಮೂಲವಾಗಿರುವ ಗಣಿಗಾರಿಕೆ ವಲಯದಲ್ಲಿ ದೇಶ ‘ಆತ್ಮನಿರ್ಭರ್’ (ಸ್ವಾವಲಂಬನೆ) ಸಾಧಿಸುವ ದೃಷ್ಟಿಕೋನವನ್ನು ಬಿಡಿಸಿಟ್ಟ ಮೋದಿ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಪ್ರತಿಕ್ರಿಯೆ ಪ್ರತಿ ಪಾಲುದಾರರಿಗೆ ಗೆಲುವಿನ ಸನ್ನಿವೇಶವಾಗಿದೆ. “ನಾವು ಕೇವಲ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಮಾತ್ರವಲ್ಲ, ಈ ಮೂಲಕ ನಾವು ಕಲ್ಲಿದ್ದಲು ವಲಯವನ್ನು ದಶಕಗಳ ಲಾಕ್ ಡೌನ್ ನಿಂದ ಹೊರಗೆಳೆಯುತ್ತಿದ್ದೇವೆ” ಎಂದರು.

ಈ ಸುಧಾರಣೆಯಿಂದ, ಕಲ್ಲಿದ್ದಲು ಉತ್ಪಾದನೆ ಮತ್ತು ಸಂಪೂರ್ಣ ಕಲ್ಲಿದ್ದಲು ವಲಯ ಸ್ವಾವಲಂಬಿಯಾಗಲಿದೆ. ಸದೃಢ ಗಣಿಗಾರಿಕೆ ಮತ್ತು ಖನಿಜ ವಲಯಗಳಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ. ಏಕೆಂದರೆ ಖನಿಜಗಳು ಮತ್ತು ಗಣಿಗಾರಿಕೆ ಆರ್ಥಿಕತೆಯ ಪ್ರಮುಖ ಸ್ತಂಭವಾಗಿವೆ. ಈ ಸುಧಾರಣೆಯ ನಂತರ ಹೊಸ ಕಲ್ಲಿದ್ದಲು ಉತ್ಪಾದನೆ, ಸಂಪೂರ್ಣ ಕಲ್ಲಿದ್ದಲು ವಲಯ ಸ್ವಾವಲಂಬಿಯಾಗಲಿದೆ ಎಂದರು.

ಭಾರತ ಕಲ್ಲಿದ್ದಲು ಸಂಗ್ರಹದಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ, ದೇಶದ ಎರಡನೇ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ರಫ್ತು ವಲಯದಲ್ಲಿ ಹೆಚ್ಚಿನ ಸಾಧನೆ ಮಾಡಿಲ್ಲ ಎಂದು ಹೇಳಿದರು.
ಸರ್ಕಾರದ ಈ ಹೊಸ ನಿರ್ಧಾರ ಮುಂದಿ 5-7 ವರ್ಷಗಳಲ್ಲಿ ದೇಶದಲ್ಲಿ ಸುಮಾರು 33 ಸಾವಿರ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎಂದರು. ಈ ಗಣಿಗಳು ದೇಶದ ಆರ್ಥಿಕತೆಗೆ ಒಟ್ಟು 20 ಸಾವಿರ ಕೋಟಿ ರೂ. ಆದಾಯ ನೀಡುತ್ತಿವೆ.