ಹವಾನಾ: ಕ್ಯೂಬಾದಲ್ಲಿ ಆಹಾರ ಕೊರತೆ ಉಂಟಾಗಿದ್ದು, ಇದೇ ಸಂದರ್ಭದಲ್ಲಿ 133 ಟನ್ ಕೋಳಿ ಮಾಂಸ ಕದ್ದು ಬೀದಿಗಳಲ್ಲಿ ಮಾರಾಟ ಮಾಡಿದ ಆರೋಪದಡಿ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಳಿ ಮಾಂಸವನ್ನು 1,660 ಪೆಟ್ಟಿಗೆಗಳಲ್ಲಿಟ್ಟು ಸಾಗಿಸಿದ್ದರು. ಇದನ್ನು ಮಾರಾಟ ಮಾಡಿ ರೆಫ್ರಿಜರೇಟರ್, ಲ್ಯಾಪ್‌ಟಾಪ್, ಟಿ.ವಿ., ಹವಾನಿಯಂತ್ರಿತ ಸಾಧನ ಖರೀದಿಸಲು ಮುಂದಾಗಿದ್ದರು.
1959ರಲ್ಲಿ ಫಿಡೆಲ್ ಕ್ಯಾಸ್ಟ್ರೊ ಅವರ ಕ್ರಾಂತಿಕಾರಿ ಆಡಳಿತ ಅವಧಿಯಲ್ಲಿ ಕ್ಯೂಬಾ ರಾಷ್ಟ್ರವು ತನ್ನ ಪಡಿತರ ವ್ಯವಸ್ಥೆಯಲ್ಲಿ ಕೋಳಿ ಮಾಂಸವನ್ನೂ ಸೇರಿಸಿದೆ.
ಆಹಾರ ವಿತರಣೆ ವಿಭಾಗದ ನಿರ್ದೇಶಕ ರಿಗೊಬರ್ಟೊ ಮಸ್ಟಲೀರ್ ಪ್ರತಿಕ್ರಿಯಿಸಿ, ‘ಕದ್ದ ಕೋಳಿ ಮಾಂಸವು ದೇಶದ ಒಂದು ಪ್ರಾಂತ್ಯದ ಒಂದು ತಿಂಗಳ ಪಡಿತರ ವಿತರಣೆಗೆ ಸಮ’ ಎಂದಿದ್ದಾರೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಆಹಾರ, ಇಂಧನ ಮತ್ತು ಔಷಧಕ್ಕೆ ಜನರು ತತ್ತರಿಸುವಂತಾಗಿದೆ. ಅಗತ್ಯ ವಸ್ತುಗಳು ಜನರ ಕೈಸೇರಲು ವಾರ, ತಿಂಗಳುಗಳಷ್ಟು ವಿಳಂಬವಾಗುತ್ತಿದೆ.
ಕೋಳಿ ಕದ್ದ ತಂಡದಲ್ಲಿ ಆಹಾರ ಇಲಾಖೆಯ ಐಟಿ ವಿಭಾಗದ ಪಾಳಿ ಮುಖ್ಯಸ್ಥ, ಸೆಕ್ಯುರಿಟಿ ಗಾರ್ಡ್ ಕೂಡಾ ಸೇರಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ವರದಿಯಾಗಿದೆ.