Wednesday, 18th September 2024

Multi-Car Crash: ಅಮೆರಿಕದಲ್ಲಿ ಸರಣಿ ಅಪಘಾತ; ಭಾರತ ಮೂಲದ ನಾಲ್ವರ ದುರ್ಮರಣ

Multi-Car Crash

ವಾಷಿಂಗ್ಟನ್‌:  ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟ ಧಾರುಣ ಘಟನೆ ಶುಕ್ರವಾರ (ಆಗಸ್ಟ್‌ 30) ನಡೆದಿದೆ. ಸುಮಾರು 5 ಕಾರುಗಳು ಪರಸ್ಪರ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ (Multi-Car Crash). ಮೃತರು ಕಾರ್ ಪೂಲಿಂಗ್ ಅಪ್ಲಿಕೇಶನ್ (Carpooling app) ಮೂಲಕ ವಾಹನ ಬುಕ್‌ ಮಾಡಿ ಅರ್ಕಾನ್ಸಾಸ್‌ನ ಬೆಂಟನ್ವಿಲ್ಲೆಗೆ (Bentonville in Arkansas) ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಇವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ದೇಹಗಳು ಸುಟ್ಟ ಕರಕಲಾಗಿವೆ. ಅವರ ಗುರುತುಗಳನ್ನು ದೃಢೀಕರಿಸಲು ಅಧಿಕಾರಿಗಳು ಡಿಎನ್ಎ ಪರೀಕ್ಷೆಯ ಮೊರೆ ಹೋಗಿದ್ದಾರೆ.

ಮೃತರನ್ನು ಆರ್ಯನ್ ರಘುನಾಥ್ ಒರಂಪತಿ, ಫಾರೂಕ್ ಶೇಖ್, ಲೋಕೇಶ್ ಪಾಲಚಾರ್ಲಾ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ರಘುನಾಥ್ ಒರಂಪತಿ ಮತ್ತು ಸ್ನೇಹಿತ ಫಾರೂಕ್ ಶೇಖ್ ಡಲ್ಲಾಸ್‌ನಲ್ಲಿರುವ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಹಿಂದಿರುಗುತ್ತಿದ್ದರು. ಲೋಕೇಶ್ ಪಾಲಚಾರ್ಲಾ ಪತ್ನಿಯನ್ನು ಭೇಟಿಯಾಗಲು ಬೆಂಟನ್ವಿಲ್ಲೆಗೆ ಪ್ರಯಾಣಿಸುತ್ತಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ದರ್ಶಿನಿ ವಾಸುದೇವನ್ ಬೆಂಟನ್ವಿಲ್ಲೆಯಲ್ಲಿರುವ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದರು. ಪರಸ್ಪರ ಅಪರಿಚಿತರಾದ ಅವರು ಕಾರ್ ಪೂಲಿಂಗ್ ಅಪ್ಲಿಕೇಶನ್ ಮೂಲಕ ಸಂಪರ್ಕ ಸಾಧಿಸಿದ್ದರು ಎಂದು ಮೂಲಗಳು ತಿಳಿಸಿವೆ.

https://x.com/VasuV1970/status/1829830395434803649

ದರ್ಶಿನಿ ವಾಸುದೇವನ್ ಅವರ ತಂದೆ ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿದ್ದರು. ಅದರಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ತಮ್ಮ ಮಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ವಿನಂತಿಸಿದ್ದರು. “ಭಾರತೀಯ ಪಾಸ್‌ಪೋರ್ಟ್‌ ಸಂಖ್ಯೆ -T6215559 ಹೊಂದಿರುವ ನನ್ನ ಮಗಳು ದರ್ಶಿನಿ ವಾಸುದೇವನ್ ಕಳೆದ 3 ವರ್ಷಗಳಿಂದ ಅಮೆರಿಕದಲ್ಲಿದ್ದಳು. 2 ವರ್ಷಗಳ ಎಂಎಸ್ ಅಧ್ಯಯನ ಮತ್ತು ಉದ್ಯೋಗದ ಕಾರಣಕ್ಕೆ ಅಮೆರಿದಲ್ಲಿ ನೆಲೆಸಿದ್ದಳುʼʼ ಎಂದು ಬರೆದುಕೊಂಡಿರುವ ಅವರು ವಿಳಾಸ ಒದಗಿಸಿದ್ದರು.

“ದರ್ಶಿನಿ ಇತರ ಮೂವರೊಂದಿಗೆ ಅಪರಾಹ್ನ 3 ಗಂಟೆಗೆ ಕಾರ್ ಪೂಲಿಂಗ್ ಅಪ್ಲೀಕೇಷನ್‌ನಲ್ಲಿ ಕಾರು ಬುಕ್‌ ಮಾಡಿದ್ದಳು. ಸಂಜೆ 4 ಗಂಟೆಯ ತನಕ ನಮ್ಮೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಳು. ನಂತರ ಹೆಚ್ಚಿನ ಸಂಪರ್ಕಗಳನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದರು.

ಆರ್ಯನ್ ರಘುನಾಥ್ ಒರಂಪತಿ ಅವರ ತಂದೆ ಸುಭಾಷ್ ಚಂದ್ರ ರೆಡ್ಡಿ ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಆರ್ಯನ್ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠಂನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. “ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವಕ್ಕಾಗಿ ಅವರ ಹೆತ್ತವರು ಮೇ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು” ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಒರಂಪತಿಯ ಸ್ನೇಹಿತ ಶೇಖ್ ಕೂಡ ಹೈದರಾಬಾದ್ ಮೂಲದವರಾಗಿದ್ದು, ಬೆಂಟನ್ವಿಲ್ಲೆಯಲ್ಲಿ ವಾಸಿಸುತ್ತಿದ್ದರು. ಅವರು ಉನ್ನತ ವಚ್ಯಾಸಂಗಕ್ಕೆ 3 ವರ್ಷಗಳ ಹಿಂದೆ ಅಮೆರಿಕಕ್ಕೆ ತೆಳಿದ್ದರು.  ತಮಿಳುನಾಡು ಮೂಲದ ದರ್ಶಿನಿ ಟೆಕ್ಸಾಸ್‌ನ ಫ್ರಿಸ್ಕೋದಲ್ಲಿ ತಂಗಿದ್ದರು. ವೇಗದಲ್ಲಿ ಬಂದ ಟ್ರಕ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Helicopter Crash: ICG ಹೆಲಿಕಾಪ್ಟರ್‌ ಎಮರ್ಜೆನ್ಸಿ ಲ್ಯಾಂಡಿಂಗ್‌; ನಾಪತ್ತೆಯಾಗಿದ್ದ ಸಿಬ್ಬಂದಿ ಶವ ಪತ್ತೆ

Leave a Reply

Your email address will not be published. Required fields are marked *