Friday, 13th December 2024

ವಿಶ್ವಸಂಸ್ಥೆಯ ಸಾಮಾನ್ಯಸಭೆ: 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಹೀದ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧಿವೇಶನದ ಅಧ್ಯಕ್ಷರಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಆಯ್ಕೆಯಾಗಿದ್ದಾರೆ. 191 ಮತಗಳ ಪೈಕಿ ಅಬ್ದುಲ್ಲಾ 143 ಮತಗಳನ್ನು ಗಳಿಸಿದರು.

ಸೆಪ್ಟಂಬರ್‌ನಲ್ಲಿ ನಡೆಯುವ ಅಧಿವೇಶನದ ಅಧ್ಯಕ್ಷತೆ ವಹಿಸುವ ವ್ಯಕ್ತಿಯನ್ನು ಆಯ್ಕೆ ಮಾಡಲು 193 ಸದಸ್ಯಬಲದ ಸಾಮಾನ್ಯ ಸಭೆ ಸೋಮವಾರ ಮತದಾನ ಮಾಡಿತು. ಕಣದಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಅಫ್ಘಾನಿಸ್ತಾನದ ಮಾಜಿ ವಿದೇಶಾಂಗ ಸಚಿವ ಡಾ.ಝಲ್ಮಾಯ್ ರಸೂಲ್ 48 ಮತಗಳನ್ನು ಪಡೆದರು. “ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ಲಾ ಶಹೀದ್ ಅವರಿಗೆ ಹಾರ್ದಿಕ ಅಭಿನಂದನೆಗಳು” ಎಂದು ವಿಶ್ವಸಂಸ್ಥೆಯಲ್ಲಿನ ಖಾಯಂ ಭಾರತೀಯ ಮಿಷನ್ ಟ್ವೀಟ್ ಮಾಡಿದೆ.

75ನೇ ಅಧ್ಯಕ್ಷರಾಗಿದ್ದ ಟರ್ಕಿಯ ರಾಜತಂತ್ರಜ್ಞ ವಾಕನ್ ಬೊಝ್ಕಿರ್ ಅವರ ಹುದ್ದೆಯನ್ನು ಶಹೀದ್ ತುಂಬಲಿದ್ದಾರೆ. ರಹಸ್ಯ ಮತದಾನದ ಮೂಲಕ ಪ್ರತಿ ವರ್ಷ ಸಾಮಾನ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ.