Saturday, 14th December 2024

ಏಶಿಯನ್ನರ ಮೇಲಿನ ಹಲ್ಲೆಗೆ ವಿರೋಧ, ಪ್ರತಿಭಟನೆ

ಅಮೆರಿಕದಲ್ಲೀಗ Asian Lives Matters ಕೂಗು ಜೋರು

ಮಾಜಿ ಅಧ್ಯಕ್ಷರ ಮಾತಿನಿಂದಾಗಿ ಬೆಂಕಿ?

ಬೆಂಕಿ ಬಸಣ್ಣ, ನ್ಯೂಯಾರ್ಕ್

ಕಳೆದ ವರ್ಷ ಪೊಲೀಸರು ಕರಿಯನಾದ ಜಾರ್ಜ್ ಫ್ರೋಡ್ ನನ್ನು ಮೊಣಕಾಲು ಊರಿ ಕೊಂದ ಮೇಲೆ, Black Lives Matter ಪ್ರಾರಂಭವಾಗಿ ಅದು ಅಮೇರಿಕಾದ ಮೂಲೆಮೂಲೆಗಳಲ್ಲಿಯೂ ಹಬ್ಬಿ, ಕೋಟ್ಯಂತರ ಜನರು ಪ್ರತಿಭಟನೆಗಳಲ್ಲಿ ಭಾಗವಹಿಸಿ ದ್ದರು.

ಅದೇ ಮಾದರಿಯಲ್ಲಿ ಈಗ Asian Lives Matters ಎಂಬ ಪ್ರತಿಭಟನೆ ಅಮೆರಿಕದ ಮೂಲೆ ಮೂಲೆಗಳಲ್ಲಿಯೂ ಹರಡುವ ಎಲ್ಲ ಸಾಧ್ಯತೆಗಳೂ ಗೋಚರವಾಗುತ್ತಿವೆ. ಏಶಿಯನ್ ಜನರ ಮೇಲಿನ ಹತ್ಯೆಯನ್ನು ಪ್ರತಿಭಟಿಸಿ ಅಮೆರಿಕಾದ ವಿವಿಧ ನಗರಗಳಾದ ಅಟ್ಲಾಂಟ, ನ್ಯೂಯಾರ್ಕ್, ವಾಷಿಂಗ್ಟನ್, ಫಿಲಡೆಲ್ಫಿಯಾ, ಸಿಯಾಟಲ್, ಶಿಕಾಗೋ, ಲಾಸ್ ಎಂಜಲೀಸ್, ಆಲ್ಬನಿ ಮುಂತಾದ ನಗರಗಳಲ್ಲಿ ಬೃಹತ್ ರ್ಯಾಲಿಗಳು ನಡೆಯುತ್ತಿವೆ.

ರಾದ್ದಾಂತದ ಹಿನ್ನಲೆ: ರಾಬರ್ಟ್ ಲಾಂಗ್ ಎಂಬ 21 ವರ್ಷದ ಬಿಳಿಯ ವ್ಯಕ್ತಿ, ಮಾರ್ಚ್ 16ರಂದು ಅಮೆರಿಕಾದ ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದ ವಿವಿಧ ಮಸಾಜ್ ಪಾಲರ್ರಗಳಲ್ಲಿ ಕೆಲಸ ಮಾಡುವ 6 ಜನ ಏಷ್ಯಾ ಮೂಲದ ಹೆಂಗಸರನ್ನು ಆಯ್ದು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ್ದು, ಭಾರಿ ಆತಂಕಕ್ಕೆೆ ಕಾರಣವಾಗಿದೆ. ಈ ಆರೋಪಿಯು 1 ಗಂಟೆ ಅವಧಿಯಲ್ಲಿ 3 ಮಸಾಜ್ ಪಾಲರ್ರಗಳಲ್ಲಿ ಕೆಲಸ ಮಾಡುತ್ತಿದ್ದ ಏಷಿಯನ್ ಹೆಂಗಸರನ್ನು ಹುಡುಕಿ ಗುಂಡಿಟ್ಟು ಕೊಲೆ ಮಾಡಿದ್ದಾನೆ.

ಇಷ್ಟಾದರೂ ಆ ವ್ಯಕ್ತಿಯ ಮೇಲೆ ಪೊಲೀಸರು ಸಿಜಂ ಹೇಟ್ ಕ್ರೈಂ (Racism Hate Crime) ಕೇಸು ದಾಖಲು ಮಾಡದೇ ಕೇವಲ ಅವನ ಹೇಳಿಕೆ ಪ್ರಕಾರ ಸೆಕ್ಸ್‌ ಆಡಿಕ್ಷನ್ (Sex Addiction) ಕೇಸ್ ಹಾಕಿದ್ದು, ಮತ್ತು ಈ ಕೇಸಿನ ಪೊಲೀಸ ಅಧಿಕಾರಿ, He just had a bad day ಎಂದು ಹೇಳಿರುವುದು ಇಲ್ಲಿರುವ ಏಷ್ಯನ್ ಜನರಲ್ಲಿ ಆಕ್ರೋಶ ಮತ್ತು ವಿರೋಧವನ್ನು ಹುಟ್ಟಿಸಿದೆ.

ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ವೈಟ್ ಹೌಸ್, ಮಿಲಿಟರಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಅಮೆರಿಕಾದ ಧ್ವಜವನ್ನು ಅರ್ಧಕ್ಕೆ ಹಾರಿಸಿ ಬಲಿಯಾದವರ ಆತ್ಮಗಳಿಗೆ ಗೌರವ ಸೂಚಿಸಲು ಆದೇಶಿಸಿದ್ದರು. ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಟ್ಲಾಂಟದಲ್ಲಿ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಮಾಡಿದ್ದರು.

ಬೃಹತ್ ಪ್ರತಿಭಟನೆ: ಘಟನೆ ಪ್ರತಿಭಟಿಸಿ ನ್ಯೂಯಾರ್ಕ್ ರಾಜಧಾನಿಯಾದ ಆಲ್ಬನಿ ನಗರದಲ್ಲಿ ಬೃಹತ್ ಪ್ರತಿಭಟನೆ ಮತ್ತು ಮೃತರ ಆತ್ಮಕ್ಕೆ ಗೌರವ ಸಲ್ಲಿಸಲು ದೀಪ ಹಚ್ಚಿ ಜ್ಯೋತಿ ಬೆಳಗುವ ಕ್ಯಾಂಡಲ್ ವಿಜಿಲ್ ಆಯೋಜಿಸಲಾಗಿತ್ತು. ಇದರಲ್ಲಿ ಚೀನಾ, ಕೋರಿಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಜನರ ಜತೆಗೆ ಸ್ಪ್ಯಾನಿಷ್ ಮತ್ತು ಕರಿಯ ಜನಾಂಗದವರೂ ಭಾಗವಹಿಸಿದ್ದರು. ಇಲ್ಲಿಯ ಸ್ಥಳೀಯ ಭಾರತ ಜನಾಂಗದ ನೇತೃತ್ವವನ್ನು, ಟ್ರಿ-ಸಿಟಿ ಇಂಡಿಯಾ ಅಸೋಶಿಯೇಶನ್ ಮಾಜಿ ಅಧ್ಯಕ್ಷನಾಗಿ ನಾನೂ ಕೂಡ ಭಾಗವಹಿಸಿದ್ದೆ. ಜತೆಗೆ ಹಿಂದೂ ದೇವಸ್ಥಾನವನ್ನು ರಾಜೇಶ್ ರಾಮಮೂರ್ತಿ ಪ್ರತಿನಿಧಿಸಿದ್ದರು.

ಪ್ರಮುಖರ ಮುಂದಾಳತ್ವ: ವಕೀಲರಾದ ರಾನ್ ಕಿಮ್, APAPA ಆಲ್ಬನಿ ಸಂಸ್ಥೆಯ ಅಧ್ಯಕ್ಷರಾದ ಎಚ್.ಪಿ.ವ್ಯಾಂಗ್, ಭಾರತೀಯ ಮೂಲದ ಅಶೋಕ ಆಡಿಕೊಪ್ಪುಲ, ಪಾಕಿಸ್ತಾನ ಮೂಲದ ಅಲಿಯಾ ಸೈಯದ್, ಬಾಂಗ್ಲಾದೇಶದ ರಿಫಾನ್ ರಾಯ್, ಅಮೆರಿಕ ಮೂಲದ ಮೈಕಲ್ ಫಾಂಡೋಕರೋ ಮುಂತಾದವರು ಪ್ರತಿಭಟನಾ ರ್ಯಾಲಿ ಆಯೋಜನೆ ಮಾಡಿದ್ದರು.

ಪ್ರತಿಭಟನಾ ರ್ಯಾಲಿಯಲ್ಲಿ ಕೇಂದ್ರ ಮತ್ತು ರಾಜ್ಯದ ಅನೇಕ ಚುನಾಯಿತ ಸದಸ್ಯರು, ಸೆನೆಟರ್ ಗಳು, ಮೇಯರ್‌ಗಳು ಹಾಗೂ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಾಯಕರು ಭಾಗವಹಿಸಿ ಏಶಿಯನ್ ಮೂಲದ ಜನತೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ತಮ್ಮ ಮೇಲೆ ನಡೆದ ಹಲ್ಲೆಗಳ, ಶೋಷಣೆಗಳ, ಘಟನೆಗಳ ಬಗ್ಗೆ ಏಶಿಯನ್ ಮೂಲದ ಜನರು ಹಂಚಿ ಕೊಂಡರು.

ಅಮೆರಿಕದ ಪ್ರಖ್ಯಾತ ಯುನಿವರ್ಸಿಟಿಗಳಲ್ಲಿ ತಮ್ಮ ಅಪಾರ ಪ್ರತಿಭೆ ಮತ್ತು ಪರಿಶ್ರಮದಿಂದ, ಬಹಳಷ್ಟು ಪ್ರಮಾಣದ ಮೆರಿಟ್ ಸೀಟ್ ಪಡೆಯುತ್ತಿರುವ ಭಾರತ ಮತ್ತು ಚೀನಾ ಮೂಲದ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಪ್ರತಿಭಟನಾಕಾರರು ವಿರೋಧಿಸಿದರು. ಆಲ್ಬನಿಯ ರ್ಯಾಲಿಯಲ್ಲಿ ನೂರಾರು ಜನರು ಕ್ಯಾಂಡಲ್ ಲೈಟ್ ಬೆಳಗುವ ಮೂಲಕ ಮೃತರಿಗೆ ಗೌರವ ಸೂಚಿಸಿದರು.

ನ್ಯೂಯಾರ್ಕ್ ರಾಜ್ಯದ ಗವರ್ನರ್‌ ಆಂಡ್ರೂ ಕೋಮೊ ಈ Stop Asian Hate ರ‍್ಯಾಲಿಯಲ್ಲಿ ತಾವು ಭಾಗವಹಿಸುವ ಆಶಯವನ್ನು ವ್ಯಕ್ತಪಡಿಸಿದರು. ಆದರೆ ಅವರ ಮೇಲೆ ಈಗ ಕೆಲವು ಹೆಂಗಸರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿರುವುದರಿಂದ, ರಾಲಿಯ ಆಯೋಜಕರು ಗವನರ್ರ ಕೋಮೊ ರನ್ನು ಆಮಂತ್ರಿಸಿರಲಿಲ್ಲ.

ನನ್ನ ಮಾತು: 9/11 ಘಟನೆ ನಂತರ ಉದ್ದನೆಯ ಗಡ್ಡ ಬಿಟ್ಟ ಭಾರತ ದೇಶದ ಸಿಖ್ ಜನಾಂಗದವರನ್ನು ಮುಸ್ಲಿಮರೆಂದು ತಪ್ಪಾಗಿ ತಿಳಿದು ಗುಂಡಿಕ್ಕಿ ಕೊಲ್ಲಲಾಗಿತ್ತು. ಏಷ್ಯಾ ಮೂಲದ ಎಲ್ಲಾ ಜನರು ಒಂದಾಗಿ ನಮ್ಮ ಹಕ್ಕು, ಸಮಾನತೆಗಾಗಿ ಹೋರಾಡಬೇಕಿದೆ.

ಟ್ರಂಪ್ ಮಾತಿನ ಕಿಡಿ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೋನ ವೈರಸ್‌ಗೆ ಪದೇಪದೆ ಚೈನೀಸ್ ವೈರಸ್ ಎಂದು ಕರೆದಿದ್ದರ ಪರಿಣಾಮವಾಗಿ ಅಮೆರಿಕಾದಲ್ಲಿ ಚೀನೀಯರ ಮೇಲೆ ಹಲ್ಲೆಗಳು ಹೆಚ್ಚಲು ಕಾರಣವಾಯಿತು. ಅದು ಕ್ರಮೇಣ ಏಷಿಯಾದ ಜನರತ್ತ ಕೂಡ ತಿರುಗಿತು.