Friday, 13th December 2024

Benjamin Netanyahu: ಯಹ್ಯಾ ಸಿನ್ವಾರ್‌ ಹತ್ಯೆ ಬೆನ್ನಲ್ಲೇ ನೆತಹ್ಯಾಹು ನಿವಾಸದ ಮೇಲೆ ಡ್ರೋನ್‌ ದಾಳಿ!

benjamin Netanyahu

ನವದೆಹಲಿ: ಹಮಾಸ್ ನಾಯಕ ಯಾಹ್ಯಾ ಸಿನ್ವಾರ್(Yahya Sinwar) ಹತ್ಯೆಯಾದ ಕೆಲವೇ ಗಂಟೆಗಳ ನಂತರ ಶನಿವಾರ ಇಸ್ರೇಲ್‌ನ ಸಿಸೇರಿಯಾ ಪಟ್ಟಣದಲ್ಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರ ನಿವಾಸವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌, ಯಾವುದೇ ಅಪಾಯ ಸಂಭವಿಸಿಲ್ಲ.

ನೆತನ್ಯಾಹು ಅವರ ಮಾಧ್ಯಮ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಸಿಸೇರಿಯಾದಲ್ಲಿರುವ ಪ್ರಧಾನಿ ನಿವಾಸದ ಕಡೆಗೆ UAV (ಮಾನವರಹಿತ ವೈಮಾನಿಕ ವಾಹನ) ಉಡಾವಣೆ ಮಾಡಲಾಗಿತ್ತು. ಪ್ರಧಾನ ಮಂತ್ರಿ ಮತ್ತು ಅವರ ಪತ್ನಿ ಸ್ಥಳದಲ್ಲಿ ಇರಲಿಲ್ಲ ಮತ್ತು ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಲೆಬನಾನ್‌ನಿಂದ ಡ್ರೋನ್ ಅನ್ನು ಉಡಾವಣೆ ಮಾಡಲಾಗಿದ್ದು ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಈ ಹಿಂದೆ ಹೇಳಿತ್ತು. ಇಸ್ರೇಲ್ ಭೂಪ್ರದೇಶಕ್ಕೆ ದಾಟಿದ ಇನ್ನೂ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಸೇನೆ ತಿಳಿಸಿತ್ತು. ಕಳೆದ ಅಕ್ಟೋಬರ್‌ನಿಂದ ಇಸ್ರೇಲ್‌ನೊಂದಿಗೆ ಗುಂಡಿನ ದಾಳಿ ನಡೆಸುತ್ತಿರುವ ಹಿಜ್ಬುಲ್ಲಾ ಅಥವಾ ಇತರ ಯಾವುದೇ ಉಗ್ರಗಾಮಿ ಸಂಘಟನೆ ಡ್ರೋನ್ ದಾಳಿ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

2023ರಲ್ಲಿ ಇಸ್ರೇಲ್‌ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌, ಹಮಾಸ್‌ ನಾಯಕ (Hamas leader) ಯಾಹ್ಯಾ ಸಿನ್ವರ್‌ (Yahya Sinwar)ನನ್ನು ಹೊಡೆದುರುಳಿಸುವ ಮೂಲಕ ಇಸ್ರೇಲ್‌ ಸೇನೆ ಸೇಡು ತೀರಿಸಿಕೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ತಲೆಮರೆಸಿಕೊಂಡಿದ್ದ 61 ವರ್ಷದ ಯಾಹ್ಯಾ ಸಿನ್ವರ್‌ನನ್ನು ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳು ಗುರುವಾರ (ಅಕ್ಟೋಬರ್‌ 18) ಹತ್ಯೆ ಮಾಡಿವೆ. ಸಿನ್ವರ್ ಗಾಝಾಗೆ ಹಮಾಸ್‌ನ ಉನ್ನತ ನಾಯಕನಾಗಿ ಹೊರಹೊಮ್ಮುವ ಮೊದಲು ಇಸ್ರೇಲ್ ಜೈಲುಗಳಲ್ಲಿ ಎರಡು ದಶಕಗಳನ್ನು ಕಳೆದಿದ್ದ.

1,200ಕ್ಕೂ ಹೆಚ್ಚು ಇಸ್ರೇಲಿಗಳನ್ನು ಹತ್ಯೆಗೈದು 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆತಂದ ಇಸ್ರೇಲ್ ಮೇಲಿನ ಅನಿರೀಕ್ಷಿತ ದಾಳಿಯ ಮುಖ್ಯ ರೂವಾರಿಗಳಲ್ಲಿ ಒಬ್ಬನಾದ ಸಿನ್ವರ್‌ನ ಹತ್ಯೆಗೆ ಇಸ್ರೇಲ್‌ ಕೆಲವು ದಿನಗಳಿಂದ ಶ್ರಮಿಸುತ್ತಲೇ ಇತ್ತು. ಆತನ ಸುಳಿವು ನೀಡಿದವರಿಗೆ 4,00,000 ಡಾಲರ್ (3,36,24,000 ರೂ.) ಬಹುಮಾನವನ್ನು ಘೋಷಿಸಿತ್ತು. ಹಮಾಸ್ ನಾಯಕರ ಗುರಿಯಾಗಿಸಿಕೊಂಡು ಇಸ್ರೇಲ್‌ ಹಲವು ವೈಮಾನಿಕ ದಾಳಿ ನಡೆಸಿದ್ದರೂ ಸಿನ್ವರ್ ಗಾಜಾದ ಕೆಳಗಿರುವ ಸುರಂಗಗಳಲ್ಲಿ ಅವಿತು ಜೀವ ಉಳಿಸಿಕೊಂಡಿದ್ದ. ಸದ್ಯ ಆತನನ್ನು ಹೊಡೆದುರುಳಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Benjamin Netanyahu: ʻನಾಳೆಯೇ ಯುದ್ಧ ನಿಲ್ಲುತ್ತದೆ, ಆದರೆ…ʼ: ಹಮಾಸ್‌ ಉಗ್ರರಿಗೆ ನೆತನ್ಯಾಹು ಖಡಕ್‌ ವಾರ್ನಿಂಗ್‌