ಅಫ಼್ಘಾನ್ : ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದ ಫಿರೋಜ್ ಕೊವಾದಲ್ಲಿನ ಪ್ರಾಂತೀಯ ಪೊಲೀಸ್ ಕಚೇರಿಯ ಹೊರಗೆ ಪ್ರಬಲ ಸ್ಫೋಟ ಸಂಭವಿಸಿ, ಕನಿಷ್ಠ 16 ಜನರು ಮೃತಪಟ್ಟು, 90 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿ ಯೊಬ್ಬರು ಖಚಿತಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರಾಂತೀಯ ಆರೋಗ್ಯ ನಿರ್ದೇಶನಾಲಯದ ಅಬ್ದುಲ್ ಲತೀಫ್ ತಿಳಿಸಿದರು. ಗಾಯಗೊಂಡ ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ವಿವರ ನೀಡಿದರು.
ಪ್ರಾಂತೀಯ ಪೊಲೀಸ್ ಇಲಾಖೆ ಮತ್ತು ಇತರ ಹಲವಾರು ಸರ್ಕಾರಿ ಕಚೇರಿಗಳಿರುವ ಪ್ರದೇಶದಲ್ಲಿ ರಸ್ತೆಯಲ್ಲಿ ಸ್ಫೋಟಕ ತುಂಬಿದ ಮಿನಿ ಬಸ್ ಬೆಳಿಗ್ಗೆ 11: 15 ಕ್ಕೆ ಸ್ಫೋಟ ಗೊಂಡಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .
ಸದ್ಯ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.