Wednesday, 11th December 2024

ಪ್ರೀತಿಗೆ ನಿರಾಕರಿಸಿದ ಮನೆಯವರ ವಿರುದ್ಧ ದ್ವೇಷ ಸಾಧಿಸಿದ ಯುವತಿ; ಆಹಾರದಲ್ಲಿ ವಿಷ ಬೆರೆಸಿ 13 ಮಂದಿಯ ಹತ್ಯೆ

Self Harming

ಇಸ್ಲಾಮಾಬಾದ್‌: ಪ್ರೀತಿ ಕುರುಡು ಎನ್ನುವ ಮಾತಿದೆ. ಪ್ರೀತಿಯಲ್ಲಿ ಬಿದ್ದಿದವರು ಯಾವ ಕೃತ್ಯ ಮಾಡಲೂ ಹೇಸುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು ನಡೆದಿದ್ದು,ಯುವತಿಯೊಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸಿದ ಮನೆಯವರನ್ನು ಹತ್ಯೆಗೈದಿದ್ದಾಳೆ. ಆಹಾರದಲ್ಲಿ ವಿಷ ಬೆರೆಸಿ ಬರೋಬ್ಬರಿ 13 ಮಂದಿಯನ್ನು ಸಾಯಿಸಿದ್ದಾಳೆ. ಸದ್ಯ ಈ ಕೃತ್ಯ ಎಸಗಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಸಿಂಧ್‌ ಭಾಗದಲ್ಲಿ ಈ ಘಟನೆ ನಡೆದಿದೆ (Crime News).

ಪಾಕಿಸ್ತಾನದ ಖೈರ್‌ಪುರ ಸಮೀಪದ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಆಗಸ್ಟ್ 19ರಂದು ಈ ಘಟನೆ ನಡೆದಿದೆ. ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ ಘಟನೆ ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಯುವತಿಯ ಕೃತ್ಯ ಬೆಳಕಿಗೆ ಬಂದಿದೆ. ಯುವತಿಯನ್ನು ಭಾನುವಾರ (ಅಕ್ಟೋಬರ್‌ 6) ಬಂಧಿಸಲಾಗಿದೆ.

ಏನಿದು ಪ್ರಕರಣ?

ಕೃತ್ಯ ಎಸಗಿದ ಯುವತಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಮನೆಯವರು ಈ ಪ್ರೀತಿಗೆ ಅಡ್ಡಿಯಾಗಿದ್ದರು. ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತಳಾದ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಮನೆಯವರಿಗೆ ಬುದ್ದಿ ಕಲಿಸಲು ಮುಂದಾಗಿದ್ದಳು. ಅದರಂತೆ ರೂಪುಗೊಂಡಿದ್ದೇ ಈ ಯೋಜನೆ. ಇಬ್ಬರೂ ಸೇರಿ ಮನೆಯವರನ್ನೇ ಹತ್ಯೆ ಮಾಡಲು ನಿರ್ಧರಿಸಿದ್ದರು.

ಯೋಜನೆಯಂತೆ ಯುವತಿ ರಾತ್ರಿ ಊಟದಲ್ಲಿ ವಿಷ ಸೇರಿಸಿ ಮನೆಯಲ್ಲಿದ್ದ ಎಲ್ಲರಿಗೂ ಬಡಿಸಿದ್ದಾಳೆ. ಈ ಊಟ ಸೇವಿಸಿದ ಮನೆ ಮಂದಿಯೆಲ್ಲ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ 13 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಯುವತಿಯ ತಂದೆ-ತಾಯಿ ಕೂಡ ಸೇರಿದ್ದಾರೆ. ಏಕಾಏಕಿ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ವಿಚಾರಣೆ ಆರಂಭಿಸಿದ್ದರು.

ಮರಣೋತ್ತರ ಪರೀಕ್ಷೆ ನಡೆಸಿದಾಗ ವಿಷಪೂರಿತ ಆಹಾರ ಸೇವನೆಯಿಂದ 13 ಮಂದಿ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿತ್ತು. ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಭಯಾನಕ ಸಂಗತಿ ಹೊರ ಬಂದಿದೆ. ರೊಟ್ಟಿ ಮಾಡಲು ಬಳಸುವ ಗೋಧಿಗೆ ಯುವತಿ ಮತ್ತು ಆಕೆಯ ಪ್ರಿಯಕರ ವಿಷ ಬೆರೆಸಿರುವ ವಿಚಾರ ತಿಳಿದು ಬಂದಿದೆ.

“ಆಹಾರ ಸೇವಿಸಿದ ಎಲ್ಲ 13 ಸದಸ್ಯರು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲರೂ ನಿಧನರಾದರು. ಮರಣೋತ್ತರ ಪರೀಕ್ಷೆ ವೇಳೆ ಇವರು ವಿಷಪೂರಿತ ಆಹಾರದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದುಬಂದಿತ್ತು” ಎಂದು ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ ಮಾಹಿತಿ ನೀಡಿದ್ದಾರೆ.

ʼʼಸಾಕಷ್ಟು ಪ್ರಯತ್ನದ ಹೊರತಾಗಿಯೂ ಮನೆಯವರು ಆಕೆಯ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಮನವೊಲಿಸಲು ಯತ್ನಿಸಿದರೂ ಮನೆಯವರು ಆಕೆಯ ಮದುವೆಗೆ ಒಪ್ಪಿಗೆ ಸೂಚಿಸದ ಹಿನ್ನಲೆಯಲ್ಲಿ ಕುಪಿತವಾಗಿದ್ದಳು. ಹೀಗಾಗಿ ಪ್ರಿಯಕರನ ಜತೆ ಸೇರಿ ಆಹಾರದಲ್ಲಿ ವಿಷ ಬೆರೆಸಿದ್ದಾಳೆʼʼ ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Zakir Naik: ವೇದಿಕೆಯಲ್ಲೇ ಜಾಕಿರ್‌ ನಾಯ್ಕ್‌ ಬೆವರಿಳಿಸಿದ ಯುವತಿ; ಇಲ್ಲಿದೆ ವಿಡಿಯೋ