Friday, 13th December 2024

Donald Trump: ಟ್ರಂಪ್‌ ವಿಕ್ಟರಿ, ತೈಲ ದರ ಇಳಿಕೆ!

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಜಯಭೇರಿ ಬಾರಿಸುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ 1% ಇಳಿಕೆಯಾಗಿದೆ. ಮತ್ತೊಂದು ಕಡೆ ಡಾಲರ್ ಮೌಲ್ಯ ಏರಿಕೆಯಾಗಿದೆ. ಬ್ರೆಂಟ್‌ ಮಾದರಿಯ ಕಚ್ಚಾ ತೈಲ (Brent crude oil) ದರ ಪ್ರತಿ ಬ್ಯಾರಲ್‌ಗೆ 74 ಡಾಲರ್‌ಗೆ ಇಳಿಕೆಯಾಗಿದೆ. ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದ ರಾಜ್ಯಗಳಲ್ಲಿ ಟ್ರಂಪ್‌ ಲೀಡ್‌ ಗಳಿಸುತ್ತಿದ್ದಂತೆ ತೈಲ ದರಗಳು ಇಳಿದವು. ಹಾಗಾದರೆ ಟ್ರಂಪ್‌ ಅವರು ಚುನಾವಣೆಯಲ್ಲಿ ಗೆಲ್ಲುವುದಕ್ಕೂ ತೈಲ ದರ ಇಳಿಕೆಗೂ ಸಂಬಂಧವೇನು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರು ರಷ್ಯಾದ ಕಚ್ಚಾ ತೈಲ ಆಮದಿಗೆ ವಿಧಿಸಿದ್ದ ನಿರ್ಬಂಧವನ್ನು ಟ್ರಂಪ್‌ ತೆರವುಗೊಳಿಸುವ ನಿರೀಕ್ಷೆ ಇದೆ. ಇದರಿಂದ ಅಮೆರಿಕಕ್ಕೆ ತೈಲ ಪೂರೈಕೆ ಹೆಚ್ಚಲಿದೆ. ಇದು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯನ್ನು ತಗ್ಗಿಸಲಿದ್ದು, ದರ ಇಳಿಕೆಯಾಗಬಹುದು. ಎರಡನೆಯದಾಗಿ, ಸ್ವತಃ ಅಮೆರಿಕ ಕೂಡ ತೈಲೋತ್ಪಾದನೆಯನ್ನು ಹೆಚ್ಚಿಸುವ ಮೂಲಕ ದರವನ್ನು ನಿಯಂತ್ರಿಸಬಹುದು.

ಕಚ್ಚಾ ತೈಲ ದರಗಳು ಇಳಿಕೆಯಾದರೆ ಭಾರತಕ್ಕೆ ಅನುಕೂಲವಾಗಲಿದೆ. ಏಕೆಂದರೆ ದೇಶ ತನ್ನ ಅಗತ್ಯಗಳ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಣದುಬ್ಬರ ನಿಯಂತ್ರಣಕ್ಕೂ ಇದು ಸಹಕಾರಿಯಾಗುತ್ತದೆ.

ಮತ್ತೊಂದು ಕಡೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್- ಇರಾನ್‌ ಸಂಘರ್ಷದ ಪರಿಣಾಮ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗುವ ಆತಂಕ ಉಂಟಾಗಿತ್ತು. ಇದೀಗ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಈ ಸಂಘರ್ಷದ ಬಗ್ಗೆ ಯಾವ ನಿಲುವನ್ನು ತಾಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ ಅದು ಕೂಡ ತೈಲ ದರದ ಏರಿಳಿತದ ಮೇಲೆ ಪ್ರಭಾವ ಬೀರಲಿದೆ. ಸಂಘರ್ಷವನ್ನು ಮುಕ್ತಾಯಗೊಳಿಸಲು ಟ್ರಂಪ್‌ ಮುಂದಾದರೆ ತೈಲ ದರ ನಿಯಂತ್ರಣದಲ್ಲಿ ಇರಲಿದೆ. ತಪ್ಪಿದರೆ ಪ್ರತಿ ಬ್ಯಾರೆಲ್‌ಗೆ ಮತ್ತೆ 100 ಡಾಲರ್‌ಗೆ ಏರಿದರೂ ಆಶ್ಚರ್ಯವಿಲ್ಲ. ಆದರೆ ಸದ್ಯ ಸಂಘರ್ಷವನ್ನು ಕೊನೆಗೊಳಿಸುವುದಕ್ಕೇ ಟ್ರಂಪ್‌ ಆದ್ಯತೆ ನೀಡುವ ನಿರೀಕ್ಷೆ ಇದೆ. ಯುದ್ಧವನ್ನು ಅವರು ಬಯಸಲಾರರು ಎನ್ನುತ್ತಾರೆ ವಿದೇಶಾಂಗ ತಜ್ಞರು.

ಈ ಸುದ್ದಿಯನ್ನೂ ಓದಿ: Donald Trump: ರಿಯಲ್‌ ಎಸ್ಟೇಟ್‌ ಉದ್ಯಮದಿಂದ ನಟನೆವರೆಗೆ.. ಇಲ್ಲಿವೆ ಟ್ರಂಪ್‌ ಕುರಿತ ಇಂಟ್ರೆಸ್ಟಿಂಗ್‌ ಸಂಗತಿ