ವಾಷಿಂಗ್ಟನ್: ವಿಶ್ವ ತಾಯಂದಿರ ದಿನದ ಅಂಗವಾಗಿ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ವಿಶ್ವ ಎಲ್ಲಾ ತಾಯಂದಿರಿಗೂ ಶುಭಾಶಯ ಕೋರಿದೆ. ತಾಯಿಯ ಕಿರು ಬೆರಳನ್ನು ಮಗು ಹಿಡಿದಿರುವ ಚಿತ್ರವನ್ನು ಗೂಗಲ್ ತಾಯಂದಿರ ದಿನಕ್ಕೆ ವಿಶೇಷ ಡೂಡಲ್ ಆಗಿ ತಯಾರಿಸಿದೆ.
ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದ ತಾಯಿ ಪ್ರೀತಿ, ನಿಸ್ವಾರ್ಥ ಮನೋ ಭಾವದ ತಾಯಿಗೆ ಈ ಮೂಲಕ ಡೂಡಲ್ ಗೌರವ ಸೂಚಿಸಿದೆ.
ವಿಶ್ವ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ 2ನೇ ಭಾನುವಾರ ಆಚರಿಸಲಾಗುತ್ತದೆ. ಅನ್ನಾ ಮಾರೀ ಜಾರ್ವಿಸ್ ಎಂಬ ಮಹಿಳೆ ಅಮೇರಿಕಾದಲ್ಲಿ ತಾಯಿಗಾಗಿ ಒಂದು ದಿನ ವನ್ನು ಮೀಸಲಿಡಬೇಕೆಂದು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸಿದ ಫಲವಾಗಿ ಅಮೇರಿಕಾದ 28ನೇ ಅಧ್ಯಕ್ಷ ಥೋಮಸ್ ವುಡ್ರೂ ವಿಲ್ಸನ್ ಸರ್ಕಾರ 1914, ಮೇ 9 ರಂದು ಅಮ್ಮಂದಿರಿಗೆ ಸಾರ್ವಜನಿಕವಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸಲು ಪ್ರತೀ ವರ್ಷ ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವಾಗಿ ಘೋಷಿಸಿತು.
ತಾಯಿ ಎಂದಾಗ ಮೊದಲು ನೆನಪಾಗೋದು ಮಮತೆ, ಪ್ರೀತಿ, ವಾತ್ಸಲ್ಯ. ಆಕೆಯ ಪ್ರೀತಿಗೆ ಸರಿಸಾಟಿಯಾದ ವಿಚಾರ ಈ ಪ್ರಪಂಚ ದಲ್ಲಿಯೇ ಇರಲು ಸಾಧ್ಯವಿಲ್ಲ. ಈ ಮಮತಾಮಯಿಯ ಪ್ರೀತಿಗೆ ದಿನಾಚರಣೆಗಳು ಸರಿಹೊಂದದಿದ್ದರೂ ಸಹ, ಆಕೆಯ ಮೌಲ್ಯ, ಮಹತ್ವವನ್ನು ನೆನೆಯಲು ವಿಶೇಷ ದಿನ ಮೀಸಲಿರಿಸುವುದು ಅಗತ್ಯ ಹಾಗೂ ಕರ್ತವ್ಯ ಎನ್ನಬಹುದು.