Wednesday, 11th December 2024

ಪಾಕಿಸ್ತಾನದಲ್ಲಿ 5.5 ತೀವ್ರತೆಯ ಭೂಕಂಪ

ಕರಾಚಿ: ಪಾಕಿಸ್ತಾನದಲ್ಲಿ ಮಂಗಳವಾರ 5.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಮಾಹಿತಿ ಪ್ರಕಾರ, ಭೂಕಂಪನವು 10 ಕಿ.ಮೀ (6.21 ಮೈಲಿ) ಆಳದಲ್ಲಿತ್ತು ಎಂದು ತಿಳಿಸಿದೆ.

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ಬಿಂದು ಕ್ವೆಟ್ಟಾದಿಂದ ವಾಯುವ್ಯಕ್ಕೆ 150 ಕಿಲೋಮೀಟರ್ ದೂರದಲ್ಲಿ 35 ಕಿ.ಮೀ ಆಳದಲ್ಲಿತ್ತು ಎಂದು ಹವಾಮಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಧಾನಿ ಕ್ವೆಟ್ಟಾ, ನೊಶ್ಕಿ, ಚಾಗಿ, ಚಮನ್, ಕಿಲ್ಲಾ ಅಬ್ದುಲ್ಲಾ, ದಲ್ಬಾದಿನ್, ಪಿಶಿನ್ ಮತ್ತು ಪ್ರಾಂತ್ಯದ ಇತರ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪಾಕಿಸ್ತಾನ-ಇರಾನ್ ಗಡಿ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ ಮತ್ತು ದಾಖಲಿಸಲಾಗಿದೆ ಎಂದು ಪಾಕಿಸ್ತಾನ ಹವಾಮಾನ ಕಚೇರಿ ತಿಳಿಸಿದೆ.