ಕೊನಾಕ್ರಿ (ಗಿನಿಯಾ): ಆಫ್ರಿಕಾ ಖಂಡದ ದೇಶ ಗಿನಿಯಾದ ರಾಜಧಾನಿ ಕೊನಾಕ್ರಿಯಲ್ಲಿ ಬೃಹತ್ ತೈಲ ಟರ್ಮಿನಲ್ನಲ್ಲಿ ಸ್ಫೋಟ ಸಂಭವಿಸಿ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದು, 178 ಮಂದಿ ಗಾಯಗೊಂಡಿದ್ದಾರೆ.
ಈ ದುರಂತದ ಹಿನ್ನೆಲೆ ಪಶ್ಚಿಮ ಆಫ್ರಿಕಾದ ದೇಶಕ್ಕೆ ಇತರ ರಾಷ್ಟ್ರಗಳು ನೆರವಿನ ಹಸ್ತಚಾಚಿವೆ.
ಸ್ಫೋಟದಿಂದ ಕಲೂಮ್ ಜಿಲ್ಲೆಯ ಹೃದಯಭಾಗದಲ್ಲಿ ತುಂಬಾ ಹಾನಿ ಉಂಟಾಗಿದೆ. ಈ ಭಾಗದಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿವೆ. ಗಾಯಗೊಂಡ 178 ಜನರಲ್ಲಿ ಕನಿಷ್ಠ 89 ಜನರು ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಹತ್ಯೆಗೀಡಾದ 13 ಜನರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶವು ಆಮದು ಮಾಡಿಕೊಳ್ಳುವ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಈ ಟರ್ಮಿನಲ್ನಿಂದ ತೈಲ ಪೂರೈಕೆಗೆ ಅಡ್ಡಿ ಯಾಗುವ ಸಾಧ್ಯತೆಯಿದೆ.
”ಈ ಬೆಂಕಿ ಅವಘಡದಲ್ಲಿ ನನ್ನ ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ನನ್ನಂತೆ ಕೆಲವರು ಕಾರ್ಮಿಕರು, ಇನ್ನು ಕೆಲವರು ತಂತ್ರಜ್ಞರು ಹಾಗೂ ಎಲ್ಲಾ ಕಚೇರಿಗಳು, ಉಪಕರಣಗಳು ನಾಶವಾಗಿವೆ” ಎಂದು ಕಾರ್ಮಿಕ ಅಹ್ಮದ್ ಕಾಂಡೆ ಹೇಳಿದ್ದಾರೆ.
ಬೆಂಕಿಯಿಂದ ಹಲವಾರು ಕಚೇರಿಗಳು ಮತ್ತು ಕಟ್ಟಡಗಳನ್ನು ಸುಟ್ಟುಹೋಗಿವೆ. ದಟ್ಟ ಹೊಗೆ ಹರಡಿದ್ದರಿಂದ ಹಲವು ನಿವಾಸಿಗಳು ಮನೆ ತೊರೆದು ಓಡಿ ಹೋದರು. ನಾನು ನಿದ್ರಿಸುತ್ತಿದ್ದ ಸಮಯಲ್ಲಿ ತುಂಬಾ ಜೋರಾದ ಸ್ಫೋಟದ ಶಬ್ಧ ಕೇಳಿದೆ ಎಂದು ನಿವಾಸಿ ಮೌನಟೌ ಬಾಲ್ಡೆ ತಿಳಿಸಿದರು.
ಸೆನೆಗಲ್ ಮತ್ತು ಮಾಲಿ ಸೇರಿದಂತೆ ಕೆಲವು ದೇಶಗಳು ವೈದ್ಯಕೀಯ ಮತ್ತು ಸುರಕ್ಷತಾ ತಂಡಗಳನ್ನು ಕಳುಹಿಸುತ್ತಿವೆ. ಪ್ರಸ್ತುತ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಭದ್ರತಾ ಸಚಿವ ಬಚಿರ್ ಡಿಯಲ್ಲೊ ಹೇಳಿದರು.