ಶ್ರೀವತ್ಸ ಜೋಶಿ ವಾಷಿಂಗ್ಟನ್ ಡಿಸಿ
ಸರಳ, ಸಜ್ಜನ, ಸಹೃದಯಿ ಮುಂತಾದ ಗುಣವಿಶೇಷಣಗಳು ಅಕ್ಷರಶಃ ಹೊಂದುವ ವ್ಯಕ್ತಿಯಾಗಿದ್ದವರು ಹಾಲ್ದೊಡ್ಡೇರಿ ಸುಧೀಂದ್ರ. ಕನ್ನಡ ಪತ್ರಿಕೆಗಳಲ್ಲಿ, ನಿಯತ ಕಾಲಿಕಗಳಲ್ಲಿ ಅವರ ಲೇಖನಗಳನ್ನು ಬಾಲ್ಯದಿಂದಲೂ ಓದುತ್ತ ಬಂದಿರುವ ನನಗೆ ೨೦೦೧ನೆಯ ಇಸವಿಯಲ್ಲಿ ಮೊತ್ತಮೊದಲಿಗೆ ಅವರೊಡನೆ ಇಮೇಲ್
ವಿನಿಮಯದ ಸಂದರ್ಭ ಒದಗಿತು.
ಆಮೇಲೆ ಅದೇ ವರ್ಷ ನಾನೊಮ್ಮೆ ಬೆಂಗಳೂರಿಗೆ ಹೋಗಿದ್ದಾಗ ಮೊದಲು ದೂರವಾಣಿಯಲ್ಲಿ ಮಾತನಾಡಿ ಆಮೇಲೆ ಪ್ರತ್ಯಕ್ಷ ಭೇಟಿಯಾಗುವ ಅವಕಾಶವೂ ಸಿಕ್ಕಿತು. ನನಗೆ ನೆನಪಿದೆ, ಆ ದೂರವಾಣಿ ಸಂಭಾಷಣೆಯಲ್ಲಿ ಅವರು ‘ಇನ್ನೊಂದು ಕರೆ ಬರುತ್ತ ಇದೆ, ಒಂದು ನಿಮಿಷ ತಾಳಿ, ಮತ್ತೆ ಮಾತಾಡುತ್ತೇನೆ’ ಎಂದು
ಅಚ್ಚಕನ್ನಡದಲ್ಲಿ ಮಾತನಾಡಿದ್ದರು! ಆಮೇಲೂ ನಾನು ಗಮನಿಸಿದ ಹಾಗೆ, ಬೆಂಗಳೂರಿಗರಾದರೂ ಸುಽಂದ್ರರದು ಅಪ್ಪಟ ಕನ್ನಡ ಮಾತು ಮತ್ತು ಮನಸ್ಸು. ಅವರ ಸದ್ಗುಣಗಳು ಸ್ನೇಹಕ್ಕೆ ಸೋಪಾನ.
ಅದರಿಂದಾಗಿಯೇ ನನಗೆ ಅವರೊಡನೆ ಬಹಳ ಆತ್ಮೀಯತೆ, ಸ್ನೇಹಮಯ ಸಲುಗೆ ಬೆಳೆಯಿತು. ಪ್ರತಿಸಲ ಬೆಂಗಳೂರಿಗೆ ಹೋದಾಗ ನಾನು ಅವರನ್ನು
ಭೇಟಿ ಯಾಗುತ್ತಿದ್ದೆ. ಅದೂ ಸಕುಟುಂಬ ಭೇಟಿ. ಆದ್ದರಿಂದ, ಸುಧೀಂದ್ರರ ಅಗಲುವಿಕೆಯ ಸುದ್ದಿ ನನಗೆ ತಂದಷ್ಟೇ ದುಃಖವನ್ನು ನನ್ನ ಮಡದಿಗೂ ಮಗನಿಗೂ ತಂದಿದೆ. ವಿಜಯಕರ್ನಾಟಕ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾಗ ನಾನು ಮತ್ತು ಸುಧೀಂದ್ರ ಸಹಅಂಕಣಕಾರರಾಗಿದ್ದೆವು. ಹಾಗೆ ನೋಡಿದರೆ ‘ಪತ್ರಿಕೆಗಳಿಗೆ ಬರೆಯುವ ಕಲೆ’ ವಿಚಾರದಲ್ಲಿ ಅವರು ನನ್ನೊಬ್ಬ ಮಾನಸ-ಗುರು ಕೂಡ.
ವಿಜ್ಞಾನ ವಿಷಯವನ್ನೂ ಸರಳವಾಗಿ ಪ್ರಸ್ತುತಪಡಿಸುವುದು, ಯಾವೊಂದು ಒಳ ಉದ್ದೇಶವಿಟ್ಟುಕೊಳ್ಳದೆ ನೇರವಾಗಿ ಸ್ಪಷ್ಟವಾಗಿ ಬರೆಯುವುದು, ಇದನ್ನೆಲ್ಲ
ಅವರ ಬರವಣಿಗೆಯಿಂದ ಕಲಿತುಕೊಳ್ಳಬೇಕು. ಸುಧೀಂದ್ರರ ಮಾತು ಸಹ ಅಷ್ಟೇ, ಹಿತಮಿತ ಸುಸಂಸ್ಕೃತ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ನಿದರ್ಶನ. ಹಾಗಂತ, ಆರೋಗ್ಯಕರ ಹಾಸ್ಯಪ್ರಜ್ಞೆಯೂ ಅವರಲ್ಲಿ ಪುಷ್ಕಳವಾಗಿ ಇತ್ತು.
ನಾವೊಂದಿಷ್ಟು ಸ್ನೇಹಿತರು- ವಿಶ್ವೇಶ್ವರ ಭಟ್, ಶ್ಯಾಮಸುಂದರ್, ಜನಾರ್ದನ ಸ್ವಾಮಿ ಮತ್ತು ನಾನು. ಹೀಗೆ ಸಮಾನಮನಸ್ಕರು ಸೇರಿ ಸುಧೀಂದ್ರರೊಡನೆ ಸ್ವಾರಸ್ಯಕರ ಹರಟೆ ಕ್ಷಣಗಳನ್ನು ಕಳೆದದ್ದಿದೆ. ಲೋಕಾಭಿರಾಮದ ಎಲ್ಲ ವಿಚಾರಗಳೂ ಅದರಲ್ಲಿ ಬರುತ್ತಿದ್ದವು. ಕೆಲವೊಮ್ಮೆ ಅವರ ಮನೆಯಲ್ಲೇ ಅಥವಾ ಯಾವು ದಾದರೂ ರೆಸ್ಟೊರೆಂಟ್‌ನಲ್ಲಿ ಊಟ-ಉಪಚಾರ ಸಹಿತ. ಅವೆಲ್ಲ ಮರೆಯಲಾಗದ ಕ್ಷಣಗಳು.
ನನಗೆ ಈಗಲೂ, ೨೦ ವರ್ಷಗಳ ಹಿಂದೆ ದೂರವಾಣಿ ಸಂಭಾಷಣೆಯಲ್ಲಿ ಅವರು ‘ಇನ್ನೊಂದು ಕರೆ ಬರುತ್ತ ಇದೆ, ಒಂದು ನಿಮಿಷ ತಾಳಿ, ಮತ್ತೆ ಮಾತಾಡುತ್ತೇನೆ’ ಎಂದದ್ದು ಕಿವಿಯಲ್ಲಿ ರಿಂಗಣಿಸುತ್ತಿದೆ. ಈ ಬಾರಿ ಸುಽಂದ್ರರಿಗೆ ಬಂದದ್ದು ಕಾಲನ ಕರೆ. ಅದು ಬರಬಾರದಿತ್ತು. ನಮ್ಮೆಲ್ಲರನ್ನೂ ಗೆ ದುಃಖಸಾಗರದಲ್ಲಿ ಮುಳುಗಿಸಿ ಅವರು ಹೋಗಬಾರದಿತ್ತು. ಆದರೆ ದೈವೇಚ್ಛೆಯ ಮುಂದೆ ನಮ್ಮದೇನಿದೆ? ಅವರಿಗೆ ಸದ್ಗತಿ ದೊರಕುವಂತೆ, ಮತ್ತು ಬಂಧುಮಿತ್ರರೆಲ್ಲರಿಗೆ ದುಃಖ ಭರಿಸುವ ಶಕ್ತಿ
ಕೊಡುವಂತೆ, ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.