Wednesday, 11th December 2024

Hassan Nasrallah: ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಯಾರು? ಈತನ ಹಿನ್ನೆಲೆ ಏನು?

Hassan Nasrallah

ಹೆಜ್ಬುಲ್ಲಾ ನಾಯಕ (Hassan Nasrallah) ಹಸನ್ ನಸ್ರಲ್ಲಾನನ್ನು (Hassan Nasrallah) ಕೊಂದಿರುವುದಾಗಿ ಇಸ್ರೇಲ್ (Israel air strike) ಘೋಷಿಸಿದೆ. ಈತನ ಸಾವನ್ನು ಹೆಜ್ಬುಲ್ಲಾ ಒಪ್ಪಿಕೊಂಡಿದೆ. ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ (Lebanon capital Beirut) ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥನನ್ನು ಕೊಲ್ಲಲಾಗಿದೆ. ಇದು ಲೆಬನಾನಿನ ಉಗ್ರಗಾಮಿ ಸಂಘಟನೆಗೆ ಬಹುದೊಡ್ಡ ಹೊಡೆತವನ್ನು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನೆ ಮುಖ್ಯಸ್ಥ ಹರ್ಜಿ ಹಲೇವಿ, ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯು ನಮ್ಮ ಕಾರ್ಯಾಚರಣೆಯ ಅಂತ್ಯವಲ್ಲ. ಈ ಮೂಲಕ ಉಗ್ರಗಾಮಿ ಸಂಘಟನೆಗೆ ಒಂದು ಸಂದೇಶವನ್ನು ನೀಡಿದ್ದೇವೆ. ಇಸ್ರೇಲ್ ನಾಗರಿಕರಿಗೆ ಬೆದರಿಕೆ ಹಾಕುವ ಯಾರಾದರೂ ಸರಿ, ಅವರನ್ನು ಹೇಗೆ ತಲುಪಬೇಕು ಎಂಬುದು ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್-ಹೆಜ್ಬುಲ್ಲಾ ಸಂಘರ್ಷ

ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿರುವ ನಸ್ರಲ್ಲಾ ಲೆಬನಾನಿನ ಉಗ್ರಗಾಮಿ ಸಂಘಟನೆಯ ಪರಮೋಚ್ಚ ನಾಯಕನಾಗಿದ್ದ. ಶುಕ್ರವಾರ ಬೈರುತ್‌ನಲ್ಲಿ ಅವರ ಮೇಲೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾಹ್ ಅವರ ಪುತ್ರಿ ಝೈನಾಬ್ ಕೂಡ ಸಾವನ್ನಪ್ಪಿದ್ದಾಳೆ.

ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಜೊತೆಗೆ ಹಲವಾರು ಹಿರಿಯ ಹೆಜ್ಬುಲ್ಲಾ ನಾಯಕರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ.

ಬೈರುತ್‌ನ ದಕ್ಷಿಣದ ಉಪನಗರವಾದ ದಹಿಯೆಹ್‌ನಲ್ಲಿರುವ ನಸ್ರಲ್ಲಾನ ಪ್ರಧಾನ ಕಚೇರಿಯಲ್ಲಿ ಹೆಜ್ಬುಲ್ಲಾದ ಸಭೆ ನಡೆಯುತ್ತಿದ್ದಾಗಲೇ ಈ ದಾಳಿ ನಡೆಸಲಾಗಿದೆ.

ಹಸನ್ ನಸ್ರಲ್ಲಾ ಯಾರು?

ಇಸ್ರೇಲ್ ನೊಂದಿಗಿನ ಹಲವು ಸಂಘರ್ಷಗಳಲ್ಲಿ ತೊಡಗಿದ್ದ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಿರಿಯನ್ ಅಂತರ್ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಸ್ಥಾನ ಬಲಪಡಿಸಲು ಸಹಾಯ ಮಾಡಿದ್ದ ನಸ್ರಲ್ಲಾ ಇರಾನಿನ ಶಿಯಾ ನಾಯಕರು ಮತ್ತು ಹಮಾಸ್‌ನ ಉಗ್ರಗಾಮಿ ಸಂಘಟನೆಗಳ ನಡುವೆ ಬಲವಾದ ಮೈತ್ರಿ ಏರ್ಪಡುವಂತೆ ಮಾಡಿದ್ದ. ಹೆಜ್ಬುಲ್ಲಾವನ್ನು ಇಸ್ರೇಲ್‌ನ ಪ್ರಮುಖ ಎದುರಾಳಿಯಾಗಿ ರೂಪಿಸಿದ್ದ.

1960ರಲ್ಲಿ ಬೈರುತ್‌ನ ಬಡ ಶಿಯಾ ಕುಟುಂಬದಲ್ಲಿ ನಸ್ರಲ್ಲಾ ಜನಿಸಿದ್ದ. 1982ರಲ್ಲಿ ಹೆಜ್ಬುಲ್ಲಾ ಸ್ಥಾಪಿಸುವ ಮೊದಲು ಚಳವಳಿಯಲ್ಲಿ ಸೇರಿಕೊಂಡಿದ್ದ.1992ರಲ್ಲಿ ಸಯ್ಯದ್ ಅಬ್ಬಾಸ್ ಮುಸಾವಿ ಹತ್ಯೆ ಬಳಿಕ ಹೆಜ್ಬುಲ್ಲಾದ ನಾಯಕನಾದ ನಸ್ರಲ್ಲಾ.

ಇಸ್ರೇಲ್ ಆಕ್ರಮಣವನ್ನು ವಿರೋಧಿಸಲು ಲೆಬನಾನ್‌ಗೆ ಬಂದ ಇರಾನಿನ ರೆವಲ್ಯೂಷನರಿ ಗಾರ್ಡ್‌ನ ಸದಸ್ಯರು ಹೆಜ್ಬುಲ್ಲಾ ಅನ್ನು ಸ್ಥಾಪಿಸಿದರು. ಇದು ಇರಾನ್‌ನಿಂದ ಬೆಂಬಲಿತವಾದ ಮೊದಲ ಉಗ್ರ ಸಂಸ್ಥೆಯಾಗಿದೆ.

2000ರಲ್ಲಿ ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ತನ್ನ ಅಧಿಕಾರವನ್ನು ಹಿಂಪಡೆದ ಬಳಿಕ ನಸ್ರಲ್ಲಾ ಲೆಬನಾನ್‌ ಮತ್ತು ಅರಬ್ ರಾಷ್ಟ್ರದಲ್ಲಿ ಸಾಂಪ್ರದಾಯಿಕ ಸ್ಥಾನಮಾನ ಪಡೆದ. ಆತನ ಸಂದೇಶಗಳನ್ನು ಹೆಜ್ಬುಲ್ಲಾ ರೇಡಿಯೋ ಮತ್ತು ಉಪಗ್ರಹ ಟಿವಿ ಸ್ಟೇಷನ್ ಮೂಲಕ ಪ್ರಸಾರ ಮಾಡಲಾಗುತ್ತಿತ್ತು.

2006ರಲ್ಲಿ ಇಸ್ರೇಲ್‌ನೊಂದಿಗೆ ನಡೆದ ನಡೆದ 34 ದಿನಗಳ ಸಂಘರ್ಷದ ಸಮಯದಲ್ಲಿ ಇದನ್ನು ನಿರ್ವಹಿಸುವಲ್ಲಿ ಹೆಜ್ಬುಲ್ಲಾ ಪ್ರಮುಖ ಪಾತ್ರವಹಿಸಿದ್ದರಿಂದ ಅದರ ಸ್ಥಾನಮಾನ ಹೆಚ್ಚಾಯಿತು.

2011ರಲ್ಲಿ ಸಿರಿಯನ್ ಅಂತರ್ಯುದ್ಧ ಪ್ರಾರಂಭವಾದಾಗ ಅರಬ್ ನಲ್ಲಿ ಅಸ್ಸಾದ್ ಅವರಿಗೆ ತೀವ್ರ ಹಿನ್ನಡೆ ಅನುಭವಿಸಿದಾಗ ಹೆಜ್ಬುಲ್ಲಾ ಜನಪ್ರಿಯತೆ ಕುಸಿಯಲಾರಂಭಿಸಿತು. ಆಗ ಹೆಜ್ಬುಲ್ಲಾ ಹೋರಾಟಗಾರರು ಬಶರ್ ಅಸ್ಸಾದ್ ಅವರ ಪಡೆಗಳೊಂದಿಗೆ ಸೇರಿಕೊಂಡರು.

ಅಸ್ಸಾದ್‌ ಅವರಿಗೆ ನಸ್ರಲ್ಲಾ ಅವರ ಬೆಂಬಲವು ಅನೇಕ ಅರಬ್ ರಾಷ್ಟ್ರಗಳಲ್ಲಿ ಹೆಜ್ಬುಲ್ಲಾದ ಖ್ಯಾತಿಯನ್ನು ಕಡಿಮೆಗೊಳಿಸಿತು. ಆದರೆ ಇರಾನ್ ನೊಳಗೆ ಮಾತ್ರ ಅವರ ಕಾರ್ಯತಂತ್ರ ಹೆಚ್ಚು ಬಲವಾಯಿತು.

ಅಕ್ಟೋಬರ್ 7ರಂದು ಇಸ್ರೇಲ್- ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಹೆಜ್ಬುಲ್ಲಾ ಇಸ್ರೇಲ್ ಮಿಲಿಟರಿ ಸ್ಥಾನಗಳ ಮೇಲೆ ದಾಳಿಗಳನ್ನು ಪ್ರಾರಂಭಿಸಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಪ್ರತಿ ದಾಳಿ ನಡೆಸಿತು. ಇಸ್ರೇಲ್ ಗೆ ನಿರಂತರ ಬೆದರಿಕೆ ಒಡ್ಡುತ್ತಿದ್ದ ನಸ್ರಲ್ಲಾನನ್ನು ಇದೀಗ ಮುಗಿಸಿ ಹಾಕಿದೆ.

Lebanon-Israel war: ಹಸನ್ ನಸ್ರಲ್ಲಾ ಹತ್ಯೆಗೆ ಇಸ್ರೇಲ್‌ ನಡೆಸಿದ ʻಆಪರೇಷನ್‌ ನ್ಯೂ ಆರ್ಡರ್‌ʼ ಹೇಗಿತ್ತು? ಇಲ್ಲಿದೆ ವಿಡಿಯೋ

ನಸ್ರಲ್ಲಾ ಇಸ್ರೇಲ್‌ಗೆ ನಿರಂತರ ಬೆದರಿಕೆಗಳನ್ನು ಒಡ್ಡುತ್ತಿದ್ದ. ಗಾಜಾದಲ್ಲಿ ಕದನ ವಿರಾಮವನ್ನು ಸ್ಥಾಪಿಸುವವರೆಗೆ ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ತನ್ನ ದಾಳಿಯಲ್ಲಿ ಮುಂದುವರಿಸುವುದಾಗಿ ಘೋಷಿಸಿದ್ದ. ಆದರೆ ಈಗ ತಾನೇ ಹೀನಾಯವಾಗಿ ಸಾವು ಕಂಡಿದ್ದಾನೆ.