Sunday, 13th October 2024

Israel Airstrike: ದಕ್ಷಿಣ ಲೆಬನಾನ್‌ ಮೇಲೆ ದಾಳಿ ನಡೆಸಿ ಹಮಾಸ್‌ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್‌ನನ್ನು ಹತ್ಯೆಗೈದ ಇಸ್ರೇಲ್‌

Israel Airstrike

ಬೈರುತ್‌: ಭಯೋತ್ಪಾದಕರ ವಿರುದ್ದ ಇಸ್ರೇಲ್‌ ಸಮರ ಸಾರಿದೆ. ಲೆಬನಾನ್‌ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಈಗಾಗಲೇ ಹೆಜ್ಬುಲ್ಲಾ ಮುಖಂಡ ಹಸನ್‌ ನಸ್ರಲ್ಲಾ(Hassan Nasrallah) ಸೇರಿದಂತೆ ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಇದೀಗ ಪ್ಯಾಲಸ್ತೀನ್‌ನ ಉಗ್ರಗಾಮಿ ಗುಂಪು ಹಮಾಸ್‌ ಪ್ರಕಟಣೆ ಹೊರಡಿಸಿ, ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿ (Israel Airstrike)ಯಲ್ಲಿ ತಮ್ಮ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್ (Fatah Sharif Abu al-Amine) ಸಾವನ್ನಪ್ಪಿರುವುದಾಗಿ ತಿಳಿಸಿದೆ.

“ಹಮಾಸ್‌ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್‌ ಮೃತಪಟ್ಟಿದ್ದಾರೆ. ದಕ್ಷಿಣ ಲೆಬನಾನ್‌ನ ಅಲ್-ಬಾಸ್ ಶಿಬಿರದಲ್ಲಿರುವ ಅವರ ಮನೆಯ ಮೇಲೆ ನಡೆದ ಇಸ್ರೇಲ್‌ ಸೇನೆಯ ವಾಯು ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆʼʼ ಎಂದು ಹಮಾಸ್‌ ತಿಳಿಸಿದೆ.

ಫತಾಹ್ ಶರೀಫ್ ಅಬು ಅಲ್-ಅಮೀನ್‌ ಜತೆಗೆ ಆತನ ಪತ್ನಿ, ಮಗ ಮತ್ತು ಮಗಳೊ ಮೃತಪಟ್ಟಿದ್ದಾರೆ. ಟೈರ್ ನಗರದ ಬಳಿಯ ಅಲ್-ಬಾಸ್ ಮೇಲೆ ವಾಯು ದಾಳಿ ನಡೆದಿದ್ದು, ಈ ಶಿಬಿರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲು ಎಂದು ವರದಿಯೊಂದು ಹೇಳಿದೆ. ಬೈರುತ್‌ನ ಕೋಲಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ದಾಳಿಯಲ್ಲಿ ತನ್ನ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪಾಪ್ಯುಲರ್‌ ಫ್ರಂಟ್‌ ಫಾರ್‌ ದಿ ಲಿಬರೇಷನ್‌ ಆಫ್‌ ಪ್ಯಾಲಸ್ತೀನ್‌ (Popular Front for the Liberation of Palestine) ಹೇಳಿದ ಕೆಲವೇ ಗಂಟೆಗಳ ನಂತರ ಹಮಾಸ್‌ ಈ ಹೇಳಿಕೆಯನ್ನು ಹೊರಡಿಸಿದೆ.

ಸುಮಾರು ಒಂದು ವರ್ಷದ ಹಿಂದೆಯೇ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಮಧ್ಯೆ ಯುದ್ಧ ಆರಂಭವಾಗಿದ್ದು, ಈಗಲೂ ಮುಂದುವರಿದಿದೆ. ಇಸ್ರೇಲ್ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ವರ್ಷದ ಜನವರಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್-ಅರೂರಿ ಮತ್ತು ಇತರ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು. ಇನ್ನು ಆಗಸ್ಟ್‌ನಲ್ಲಿ ದಕ್ಷಿಣ ಲೆಬನಾನ್ ನಗರ ಸಿಡೋನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿ ಹಮಾಸ್ ಕಮಾಂಡರ್ ಸಮೀರ್ ಅಲ್-ಹಜ್‌ನನ್ನು ಹತ್ಯೆಗೈದಿದೆ.

ಹೌತಿ ಉಗ್ರರ ಮೇಲೂ ದಾಳಿ ನಡೆಸಿದ ಇಸ್ರೇಲ್‌

ವಿದ್ಯುತ್ ಕೇಂದ್ರಗಳು ಮತ್ತು ಬಂದರು ಸೇರಿದಂತೆ ಯೆಮೆನ್‌ನ ಹಲವು ಹೌತಿ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ. ʼʼಇಂದು ನಡೆದ ದೊಡ್ಡ ಪ್ರಮಾಣದ ಕಾರ್ಯಾಚರಣೆಯಲ್ಲಿ ಫೈಟರ್ ಜೆಟ್‌ಗಳು, ಇಂಧನ ತುಂಬುವ ವಿಮಾನಗಳು ಮತ್ತು ಬೇಹುಗಾರಿಕೆ ವಿಮಾನಗಳು ಸೇರಿದಂತೆ ಹಲವಾರು ವಾಯುಪಡೆಯ ವಿಮಾನಗಳು ಯೆಮೆನ್‌ ರಾಸ್ ಇಸಾ ಮತ್ತು ಹೊಡೆಡಾ ಪ್ರದೇಶಗಳಲ್ಲಿನ ಹೌತಿ ಭಯೋತ್ಪಾದಕರ ನೆಲೆಯ ಮೇಲೆ ದಾಳಿ ನಡೆಸಿವೆ” ಎಂದು ಮಿಲಿಟರಿ ವಕ್ತಾರ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಹೇಳಿದ್ದರು. ಇಸ್ರೇಲ್ ರಾಜ್ಯದ ವಿರುದ್ಧ ಹೌತಿ ಆಡಳಿತವು ಇತ್ತೀಚೆಗೆ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಯನ್ನು ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ: Explained on Hezbollah: ಲೆಬನಾನ್‌‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಹುಟ್ಟಿದ್ದು ಹೇಗೆ? ಇಸ್ರೇಲ್‌‌ಗೂ ಇದಕ್ಕೂ ಏಕಿಷ್ಟು ಸಂಘರ್ಷ?