Friday, 13th December 2024

Israel Airstrike: ಇರಾನ್‌ ಕ್ಷಿಪಣಿ ದಾಳಿಗೆ ತಿರುಗೇಟು- ಹೆಜ್ಬುಲ್ಲಾ ನೆಲೆಗಳನ್ನು ಪುಡಿಗಟ್ಟಿದ ಇಸ್ರೇಲ್‌

Israel strikes

ಟೆಹ್ರಾನ್‌: ನಿನ್ನೆ ತಡರಾತ್ರಿ ಕ್ಷಿಪಣಿ ದಾಳಿ ನಡೆಸಿದ ಇರಾನ್‌(Iran Attacks Israel)ಗೆ ತಿರುಗೇಟು ನೀಡುವ ಪಣತೊಟ್ಟಿರುವ ಇಸ್ರೇಲ್‌ಕ್ಷಿಪಣಿ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಹೆಜ್ಬುಲ್ಲಾ(Hezbollah)ಗಳ ನೆಲೆಗಳನ್ನು ಗುರಿಯಾಗಿಸಿ ಮತ್ತೆ ವೈಮಾನಿಕ ದಾಳಿ(Israel Airstrike) ನಡೆಸಿದೆ. ಇರಾನ್‌ನ ಬೃಹತ್ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸಿದ ಕೆಲವೇ ಗಂಟೆಗಳ ನಂತರ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಬುಧವಾರ ಇಸ್ರೇಲ್ ಹೆಜ್ಬೊಲ್ಲಾಗಳ ವಿರುದ್ಧ ಹೊಸ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು.

ಶಿಯಾ ಉಗ್ರಗಾಮಿ ಸಂಘಟನೆ ಮತ್ತು ಇರಾನ್‌ ಮಿತ್ರ ಪಕ್ಷವಾದ ಹೆಜ್ಬುಲ್ಲಾವನ್ನು ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಮಂಗಳವಾರ ಇಸ್ರೇಲ್‌ ಮೇಲೆ 200 ಕ್ಷಿಪಣಿಗಳ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಇಸ್ರೇಲ್‌, ಈ ಉದ್ಧಟತನಕ್ಕೆ ಇರಾನ್‌ ಬೆಲೆ ತೆರಲೇಬೇಕು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಹೆಜ್ಬುಲ್ಲಾ ನೆಲೆಗಳನ್ನು ಧ್ವಂಸಗೊಳಿಸಿದೆ.

ಇಸ್ರೇಲಿ ಸೇನೆ ಮುಂಬರುವ ದಿನಗಳಲ್ಲಿ ಇರಾನ್‌ನ ಕ್ಷಿಪಣಿ ದಾಳಿಯ ವಿರುದ್ಧ ಭೀಕರ ಪ್ರತೀಕಾರದ ದಾಳಿಯನ್ನು ಯೋಜಿಸುತ್ತಿದೆ. ಇಸ್ರೇಲ್, ಹೆಜ್ಬುಲ್ಲಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಗಳು ತೀವ್ರಗೊಳ್ಳುತ್ತಿರುವಂತೆ ಈ ಉಲ್ಬಣವು ಸಂಪೂರ್ಣ ಪ್ರಾದೇಶಿಕ ಯುದ್ಧದ ಭಯವನ್ನು ಹುಟ್ಟುಹಾಕಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನ್‌ನ ಕ್ಷಿಪಣಿ ದಾಳಿ ಬೆನ್ನಲ್ಲೇ ರಾತ್ರೋರಾತ್ರಿ ಭದ್ರತಾ ಸಚಿವಾಲಯದ ಸಭೆ ಕರೆದಿದ್ದು, ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇರಾನ್‌ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಶಿಕ್ಷೆ ಸಿಕ್ಕೇ ಸಿಗುತ್ತದೆ. ಬಹುದೊಡ್ಡಮಟ್ಟದಲ್ಲಿ ಇರಾನ್‌ ಈ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಇರಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇರಾನ್‌ನ ಕ್ಷಿಪಣಿ ದಾಳಿಯು ವಿಫಲವಾಗಿದೆ. ಗಾಜಾ, ಲೆಬನಾನ್ ಮತ್ತು ಇತರ ಸ್ಥಳಗಳಲ್ಲಿ ತನ್ನ ಶತ್ರುಗಳು ಕಲಿತಂತೆ ಇರಾನ್ ಶೀಘ್ರದಲ್ಲೇ ತಕ್ಕ ಪಾಠವನ್ನು ಕಲಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂದರು.

ಇರಾನ್ ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಹಗರಿ ದೇಶದ ವಾಯು ರಕ್ಷಣಾ ವಿಭಾಗವು ಒಳಬರುವ ಹಲವು ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದರು. ಅದಾಗ್ಯೂ ಜೆರಿಕೊದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ವ್ಯಕ್ತಿಯೊಬ್ಬ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕಳೆದ ವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಹಮಾಸ್ ನಾಯಕನ ಹತ್ಯೆಗೆ ಪ್ರತಿಕ್ರಿಯೆಯಾಗಿ ನಿನ್ನೆಯ ದಾಳಿ ನಡೆದಿದೆ ಎಂದು ಇರಾನ್‌ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಇರಾನ್ನಿಂದ ಉಡಾಯಿಸಲಾದ ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ತಡೆಯಲು ಇಸ್ರೇಲ್‌ ಅಸಾಧಾರಣ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ದೇಶಾದ್ಯಂತ ವಾಯು ದಾಳಿಯ ಸೈರನ್ ಗಳು ಪ್ರತಿಧ್ವನಿಸಿದ ನಂತರ ರಾತ್ರಿ ಆಕಾಶವು ಸ್ಫೋಟಗಳಿಂದ ಬೆಳಗುತ್ತಿದ್ದವು. ಕ್ಷಿಪಣಿಗಳು ಜೋರ್ಡಾನ್ ವಾಯುಪ್ರದೇಶದ ಮೇಲೆ ಪತ್ತೆಯಾಗಿವೆ.

ಕ್ಷಿಪಣಿಗಳು ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದವು. ಇಸ್ರೇಲ್‌ನ ಐರನ್ ಡೋಮ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ತಡೆಯುತ್ತಿದ್ದವು. ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದ ತಕ್ಷಣ ಅವುಗಳನ್ನು ತಡೆಯುವ ವಿಡಿಯೊಗಳು ಕೂಡ ವೈರಲ್‌ ಆದವು.

ಈ ಸುದ್ದಿಯನ್ನೂ ಓದಿ: Iran Attacks Israel : ಇರಾನ್‌ ದಾಳಿ ಮುಗಿದಿದೆ, ಬಾಂಬ್‌ ಶೆಲ್ಟರ್‌ನಿಂದ ಹೊರಬನ್ನಿ ಎಂದು ಪ್ರಜೆಗಳಿಗೆ ಕರೆ ಕೊಟ್ಟ ಇಸ್ರೇಲ್‌