Wednesday, 9th October 2024

Israel Strikes Lebanon: ಲೆಬನಾನ್ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌-‌ ಹೆಜ್ಬುಲ್ಲಾಗಳ 100 ರಾಕೆಟ್ ಲಾಂಚರ್‌ಗಳು ಧ್ವಂಸ

lebanun airstrike

ಬೈರುತ್‌: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ನಲ್ಲಿ ಪೇಜರ್‌ ಮತ್ತು ವಾಕಿಟಾಕಿಗಳನ್ನು ಸ್ಫೋಟಿಸಿರುವ ಬೆನ್ನಲ್ಲೇ ಇಸ್ರೇಲ್‌ ಇದೀಗ ವೈಮಾನಿಕ ದಾಳಿ(Israel Strikes Lebanon) ನಡೆಸಿದ್ದು, ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದುರುಳಿಸಿದೆ. ಆ ಮೂಲಕ ಹೆಜ್ಬುಲ್ಲಾ ಉಗ್ರರಿಗೆ ಏಟಿನ ಮೇಲೆ ಏಟು ನೀಡಿ ಮಟ್ಟ ಹಾಕಲು ಇಸ್ರೇಲ್‌ ಯತ್ನಿಸುತ್ತಿದೆ.

ಪೇಜರ್‌ ಮತ್ತು ವಾಕಿಟಾಕಿ ಸ್ಫೋಟದ ಬೆನ್ನಲ್ಲೇ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರುಲ್ಲಾ ಇಸ್ರೇಲ್‌ಗೆ ಪ್ರತಿಕಾರದ ವಾರ್ನಿಂಗ್‌ ಕೊಟ್ಟಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ ಈ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ ಸೇನೆ (ಐಡಿಎಫ್) ಮಧ್ಯಾಹ್ನದಿಂದ, ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದುರುಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇತ್ತೀಚೆಗೆ ನಡೆದ ಪೇಜರ್ ಮತ್ತು ವಾಕಿಟಾಕಿ ದಾಳಿಗಳನ್ನು ಖಂಡಿಸಿ ಹಿಜ್ಬುಲ್ಲಾ ಮುಖ್ಯಸ್ಥ ದೂರದರ್ಶನದ ಮೂಲಕ ಭಾಷಣ ಮಾಡುತ್ತಿದ್ದಂತೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ದಾಳಿಯನ್ನು ಪ್ರಾರಂಭಿಸಿತು.

“ಐಡಿಎಫ್ ಪ್ರಸ್ತುತ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಗುರಿಗಳ ಮೇಲೆ ದಾಳಿ ನಡೆಸಿ ಹಿಜ್ಬುಲ್ಲಾದ ಭಯೋತ್ಪಾದಕ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ಕುಗ್ಗಿಸುತ್ತಿದೆ. ದಶಕಗಳಿಂದ, ಹಿಜ್ಬುಲ್ಲಾ ಜನರ ಮನೆಗಳನ್ನೇ ಶಸ್ತ್ರಸಜ್ಜಿತಗೊಳಿಸಿಕೊಂಡಿದೆ. ಅವುಗಳ ಕೆಳಗೆ ಸುರಂಗಗಳನ್ನು ಅಗೆದಿದೆ ಮತ್ತು ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ. ಅಂತೆಯೇ ದಕ್ಷಿಣ ಲೆಬನಾನ್ ಅನ್ನು ಯುದ್ಧ ವಲಯವಾಗಿ ಪರಿವರ್ತಿಸಿಕೊಂಡಿದೆ ಎಂದು ಐಡಿಎಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಯಾವುದೇ ಉಲ್ಬಣಗೊಳ್ಳುವಿಕೆಯ ವಿರುದ್ಧ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಎಚ್ಚರಿಕೆ ನೀಡಿದ್ದಾರೆ. “ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಂಯಮಕ್ಕೆ ಕರೆ ನೀಡುವಲ್ಲಿ ಒಗ್ಗಟ್ಟಾಗಿ ನಿಲ್ಲುತ್ತವೆ ಮತ್ತು ಯುದ್ಧ ಪೀಡಿತ ದೇಶಗಳು ಶಾಂತಿ ಕಾಪಾಡುವತ್ತ ಗಮನ ಹರಿಸಬೇಕೆಂದು ಮನವಿ ಮಾಡಿವೆ. ಬುಧವಾರ, ಇಸ್ರೇಲಿ ರಕ್ಷಣಾ ಸಚಿವ ಯೊವ್ ಗ್ಯಾಲಂಟ್ ಅವರು ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸಿದ ಪೇಜರ್‌ಗಳು ಸ್ಫೋಟಗೊಂಡು ಕನಿಷ್ಠ 12 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಯುದ್ಧದ ಹೊಸ ಹಂತ ಕ್ಕೆ ಪ್ರವೇಶಿಸುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Lebanon Pager Explosions: ಪೇಜರ್‌, ವಾಕಿಟಾಕಿ ಸ್ಫೋಟ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; ಶೀಘ್ರವೇ ಇಸ್ರೇಲ್‌ -ಲೆಬನಾನ್‌ ಯುದ್ಧ?