Friday, 13th December 2024

JD Vance: ಅಮೆರಿಕದ ಉಪಾಧ್ಯಕ್ಷರಾಗಿ ಜೆ.ಡಿ.ವ್ಯಾನ್ಸ್ ಆಯ್ಕೆ; ಭಾರತಕ್ಕೂ ಇವರಿಗೂ ಇದೆ ವಿಶೇಷ ನಂಟು

JD Vance

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಉಪಾಧ್ಯಕ್ಷರನ್ನಾಗಿ 40 ವರ್ಷದ ಸೆನೆಟರ್ ಜೆ.ಡಿ. ವ್ಯಾನ್ಸ್ (JD Vance) ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಜೆ.ಡಿ. ವ್ಯಾನ್ಸ್ ಅಮೆರಿಕ ಮೂರನೇ ಕಿರಿಯ ಉಪಾಧ್ಯಕ್ಷ ಎನಿಸಿಕೊಂಡಿದ್ದಾರೆ. ಓಹಿಯೋದ ಸೆನೆಟರ್ ಆಗಿ 2023ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಿದ್ದ ಅವರು ಕೇವಲ 2 ವರ್ಷದಲ್ಲಿ ದೇಶದ 50ನೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಇವರ ಪತ್ನಿ ಉಷಾ ಚಿಲ್ಕುರಿ ವ್ಯಾನ್ಸ್ (Usha Chilukuri Vance) ಭಾರತೀಯ ಮೂಲದವರು.

ತಮ್ಮನ್ನು ಮತ್ತು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಅವರಿಗೆ ಜೆ.ಡಿ. ವ್ಯಾನ್ಸ್ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ರಿಪಬ್ಲಿಕನ್‌ ಪಕ್ಷಕ್ಕೆ ಅಚಲ ಬೆಂಬಲವನ್ನು ನೀಡಿದ್ದಕ್ಕಾಗಿ ಅವರು ಅಮೆರಿಕದ ಜನರಿಗೂ ಧನ್ಯವಾದ ಅರ್ಪಿಸಿದ್ದಾರೆ. ಜನರ ಹಕ್ಕುಗಳಿಗಾಗಿ ಹೋರಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ʼʼಇದು ಸಾಧ್ಯವಾಗಿಸಿದ್ದಕ್ಕೆ ಪತ್ನಿ ಮತ್ತು ಅವಕಾಶ ನೀಡಿದ ಅಧ್ಯಕ್ಷ ಡೊನಾಲ್ಡ್‌ ಜೆ. ಟ್ರಂಪ್‌ ಅವರಿಗೆ ಧನ್ಯವಾದ. ನಂಬಿಕೆ ಇರಿಸಿದ್ದಕ್ಕಾಗಿ ಅಮೆರಿಕದ ಜನತೆಗೂ ನಾನು ಕೃತಜ್ಞ. ನಿಮಗಾಗಿ ನಡೆಸುವ ನನ್ನ ಹೋರಾಟ ಎಂದಿಗೂ ನಿಲ್ಲುವುದಿಲ್ಲʼʼ ಎಂದು ಅವರು ಬರೆದುಕೊಂಡಿದ್ದಾರೆ.

ಫ್ಲೋರಿಡಾದ ಪಾಮ್‌ ಬೀಚ್‌ ಕೌಂಟಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌, ತಮ್ಮ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ. ವ್ಯಾನ್ಸ್‌ ಮತ್ತು ಭಾರತೀಯ-ಅಮೆರಿಕನ್‌ ಮೂಲದ ಅವರ ಪತ್ನಿ ಉಷಾ ಚಿಲ್ಕುರಿ ವ್ಯಾನ್ಸ್‌ ಅವರನ್ನು ಹೊಗಳಿದ್ದರು. ವ್ಯಾನ್ಸ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಉಷಾ ಭಾರತೀಯ ಮೂಲದ ಮೊದಲ ಅಮೆರಿಕದ ಎರಡನೇ ಮಹಿಳೆ (ಸೆಕೆಂಡ್ ಲೇಡಿ) ಎನಿಸಿಕೊಳ್ಳಲಿದ್ದಾರೆ.

ಉಷಾ ಚಿಲ್ಕುರಿ ವ್ಯಾನ್ಸ್ ಹಿನ್ನೆಲೆ

ಭಾರತೀಯ ವಲಸಿಗರ ಮಗಳಾಗಿರುವ ಉಷಾ ತಮ್ಮ ಬಾಲ್ಯವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಳೆದಿದ್ದಾರೆ. ಯಾಲೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೇಂಬ್ರಿಡ್ಜ್ ವಿವಿಯಲ್ಲಿ ಮಾಸ್ಟರ್ ಆಫ್ ಫಿಲಾಸಫಿಯನ್ನು ಪಡೆದಿದ್ದಾರೆ. 2014ರಲ್ಲಿ ವಿವಾಹಿತರಾದ ವ್ಯಾನ್ಸ್‌-ಉಷಾ ದಂಪತಿಗೆ ಇವನ್, ವಿವೇಕ್ ಹಾಗೂ ಮೀರಾಬೆಲ್ ಎನ್ನುವ ಮಕ್ಕಳಿದ್ದಾರೆ.

38 ವರ್ಷದ ಉಷಾ ವೃತ್ತಿಯಲ್ಲಿ ವಕೀಲೆ. ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ವದ್ಲೂರು ಗ್ರಾಮ. ಉಷಾ ಅವರ ಪೋಷಕರು 1970ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಉಷಾ ಅವರ ಪೋಷಕರು ಭಾರತದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಮತ್ತು ಕೃಷ್ಣ ಜಿಲ್ಲೆಗಳ ತೆಲುಗು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಉಷಾ ಅವರ ದೊಡ್ಡಮ್ಮ, 96 ವರ್ಷದ ಶಾಂತಮ್ಮ ಅವರು ಭಾರತದ ಹಿರಿಯ ಪ್ರೊಫೆಸರ್‌ ಎನಿಸಿಕೊಂಡಿದ್ದಾರೆ. ಈಗಲೂ ಅವರು ಪಾಠ ಮಾಡುತ್ತಿದ್ದಾರೆ. ಜತೆಗೆ ʼಭಗವದ್ಗೀತೆʼ ಆಧಾರದಲ್ಲಿ ಕೃತಿಯೊಂದನ್ನು ರಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kash Patel: ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ CIA ಮುಖ್ಯಸ್ಥರಾಗಿ ಭಾರತೀಯ ಮೂಲದ ಕಾಶ್ ಪಟೇಲ್‌ ಆಯ್ಕೆ? ಏನಿವರ ಹಿನ್ನೆಲೆ?