Friday, 13th December 2024

ನಿಯಂತ್ರಣ ಕಳೆದುಕೊಂಡ ಟ್ರಕ್: 48 ಜನರ ಸಾವು

ನೈರೋಬಿ: ನಿಯಂತ್ರಣ ಕಳೆದುಕೊಂಡು ಟ್ರಕ್, ಇತರ ವಾಹನಗಳು ಮತ್ತು ಪಾದಚಾರಿಗಳ ಮೇಲೆ ಹರಿದ ಕಾರಣ 48 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಕೆರಿಚೋ ಮತ್ತು ನಕುರು ಪಟ್ಟಣಗಳ ನಡುವಿನ ಹೆದ್ದಾರಿಯಲ್ಲಿ ಈ ದುರಂತ ಸಂಭವಿ ಸಿದೆ. ಘಟನೆಯಲ್ಲಿ ಟ್ರಕ್​ ಅಡಿಗೆ ಸಿಲುಕಿ 30 ಕ್ಕೂ ಅಧಿಕ ಜನರು ತೀವ್ರ ಗಾಯಗೊಂಡಿ ದ್ದಾರೆ.

ಹೆದ್ದಾರಿಯಲ್ಲಿ ಟ್ರಕ್​​ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ರಸ್ತೆ ಪಕ್ಕ ಸಣ್ಣ ವ್ಯಾಪಾರಸ್ಥರು, ಅಂಗಡಿಗಳು, ಇತರ ವಾಹನಗಳ ಮೇಲೆ ಟ್ರಕ್​ ಯರ್ರಾ ಬಿರ್ರಿಯಾಗಿ ಹತ್ತಿಕೊಂಡು ಹೋಗಿದೆ. ಟ್ರಕ್​ ಚಕ್ರದಡಿ ಸಿಲುಕಿದ ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 48 ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಟ್ರಕ್​ ಚಕ್ರಕ್ಕೆ ಸಿಲುಕಿದ್ದಾರೆ. 30 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಕ್​ ಕೆರಿಚೋ ಕಡೆಗೆ ಪ್ರಯಾಣಿಸುತ್ತಿತ್ತು. ನಿಯಂತ್ರಣಕ್ಕೆ ಸಿಗದೆ 8 ವಾಹನಗಳು, ಹಲವಾರು ಮೋಟಾರು ಸೈಕಲ್‌ಗಳು, ರಸ್ತೆಬದಿ ಯಲ್ಲಿದ್ದ ಜನರು, ವ್ಯಾಪಾರಸ್ಥರು, ದಾರಿಹೋಕರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ರಿಫ್ಟ್ ವ್ಯಾಲಿಯ ಪ್ರಾದೇಶಿಕ ಪೊಲೀಸ್ ಕಮಾಂಡರ್ ಟಾಮ್ ಎಂಬೋಯಾ ಒಡೆರೊ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದುವರೆಗೆ 45 ಜನರ ಶವಗಳು ಸಿಕ್ಕಿವೆ. ತೀವ್ರ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆರಿಚೋ ಕೌಂಟಿ ಆಸ್ಪತ್ರೆಯ ಹಿರಿಯ ವೈದ್ಯ ಕಾಲಿನ್ಸ್ ಕಿಪ್‌ಕೋಚ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಆದರೆ, ಕೀನ್ಯಾದಲ್ಲಿ ಭಾರೀ ಮಳೆಯಾಗು ತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರಕ್ ಅತಿ ವೇಗದಲ್ಲಿತ್ತು. ಹಾರ್ನ್​ ಮಾಡುತ್ತಲೇ ನೇರವಾಗಿ ಮಾರುಕಟ್ಟೆಯ ಭಾಗಕ್ಕೆ ನುಗ್ಗಿ ಬಂತು. ಇದಕ್ಕೂ ಮೊದಲು ಹಲವಾರು ವಾಹನಗಳ ಮೇಲೆ ಅದು ಹರಿದಿತ್ತು. ಇದರಿಂದಾಗಿ ಹೆಚ್ಚಿನ ಜನರು ಟ್ರಕ್​ ಅಡಿ ಸಿಲುಕಿಕೊಂಡು ಸಾವನ್ನಪ್ಪಿದರು.