Friday, 13th December 2024

Kiki Hakansson: ಮೊದಲ ವಿಶ್ವ ಸುಂದರಿ ಕಿಕಿ ಹಕಾನ್ಸನ್ ನಿಧನ

Kiki Hakansson

ವಾಷಿಂಗ್ಟನ್‌: ಜಗತ್ತಿನ ಮೊದಲ ವಿಶ್ವ ಸುಂದರಿ (Miss World) ಕಿಕಿ ಹಕಾನ್ಸನ್ (Kiki Hakansson) ನ. 4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ತಮ್ಮ ಸ್ವಗೃಹದಲ್ಲಿ ಮಲಗಿದ್ದ ಅವರು ಚಿರನಿದ್ರೆಗೆ ಜಾರಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮಿಸ್‌ ವರ್ಲ್ಡ್‌ ಇನ್‌ಸ್ಟಾಗ್ರಾಮ್‌ ಪೇಜ್‌ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಸ್ವೀಡನ್‌ನಲ್ಲಿ 1929ರಲ್ಲಿ ಜನಿಸಿದ ಕಿಕಿ ಹಕಾನ್ಸನ್ ಅವರು 1951ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.

1951ರ ಜುಲೈ 29ರಂದು ಇಂಗ್ಲೆಂಡ್‌ನ ಲೈಸಿಯಮ್ ಬಾಲ್ರೂಮ್‌ನಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಾಗ ಅವರಿಗೆ 23 ವರ್ಷ ವಯಸ್ಸಾಗಿತ್ತು. ಈ ಸ್ಪರ್ಧೆಯನ್ನು ಆರಂಭದಲ್ಲಿ ಫೆಸ್ಟಿವಲ್ ಆಫ್ ಬ್ರಿಟನ್‌ ಎಂದು ಗುರುತಿಸಲಾಗಿತ್ತು. ಆದಾಗ್ಯೂ ಈ ಸ್ಪರ್ಧೆ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಿಕಿ ಅವರ ಗೆಲುವು ವಿಶ್ವ ಸುಂದರಿ ಪರಂಪರೆಗೆ ನಾಂದಿ ಹಾಡಿತು. ವಿಶೇಷ ಎಂದರೆ ಅವರು ಬಿಕಿನಿ ಧರಿಸಿ ಈ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಬಿಕಿನಿಯನ್ನು ಧರಿಸಿ ಕಿರೀಟ ಅಲಂಕರಿಸಿದ ಏಕೈಕ ಸ್ಪರ್ಧಿ ಇವರು ಎನಿಸಿಕೊಂಡಿದ್ದಾರೆ.

ಬಿಕಿನಿಯನ್ನು ಜನಪ್ರಿಯಗೊಳಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಿಕಿ ಅವರು ಸ್ಪರ್ಧೆಯಲ್ಲಿ ಬಿಕಿನಿ ಧರಿಸಿದ್ದನ್ನು ಪೋಪ್ 12ನೇ ಪಿಯಸ್ ಖಂಡಿಸಿದ್ದರು. ಬಳಿಕ ಹಲವು ದೇಶಗಳು ಸ್ಪರ್ಧೆಯಲ್ಲಿ ಬಿಕಿನಿ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಪರಿಣಾಮವಾಗಿ 1952ರಲ್ಲಿ ಬಿಕಿನಿಯನ್ನು ನಿರ್ಬಂಧಿಸಲಾಯಿತು. ಬಳಿಕ ಇದರ ಜಾಗಕ್ಕೆ ಆಧುನಿಕ ಈಜುಡುಗೆಯನ್ನು ಪರಿಚಯಿಸಲಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯ ಅಧಿಕೃತ ಪುಟವು ತೀವ್ರ ದುಃಖ ವ್ಯಕ್ತಪಡಿಸಿದೆ. “ಕಿಕಿ ಅವರ ಕುಟುಂಬದ ಎಲ್ಲ ಸದಸ್ಯರಿಗೆ ನಮ್ಮ ಆಳವಾದ ಸಂತಾಪವನ್ನು ಸೂಚಿಸುತ್ತಿದ್ದೇವೆʼʼ ಎಂದು ಬರೆದುಕೊಂಡಿದೆ. ʼʼಕಿಕಿ ಹಕಾನ್ಸನ್ ಅವರ ನಿಧನ ಮಿಸ್ ವರ್ಲ್ಡ್ ಸ್ಪರ್ಧೆಯ ಯುಗವೊಂದರ ಅಂತ್ಯವನ್ನು ಸೂಚಿಸುತ್ತದೆ. ಆದರೆ ಮೊದಲ ವಿಜೇತರಾಗಿ ಅವರ ಹೆಸರು ಮುಂದಿನ ತಲೆಮಾರುಗಳವರೆಗೆ ಜೀವಂತವಾಗಿರುತ್ತದೆʼʼ ಎಂದು ಪೋಸ್ಟ್‌ ತಿಳಿಸಿದೆ.

ಕಿಕಿ ಅವರ ಪುತ್ರ ಕ್ರಿಸ್ ಆಂಡರ್ಸನ್ ತಾಯಿಗೆ ಗೌರವ ಸಲ್ಲಿಸಿದ್ದಾರೆ. ಅವರ ಆತ್ಮೀಯತೆ ಮತ್ತು ಔದಾರ್ಯವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ. ಮಿಸ್‌ ವರ್ಲ್ಡ್‌ ಅಧ್ಯಕೆ ಜೂಲಿಯಾ ಮಾರ್ಲೆ ತಮ್ಮ ಸಂತಾಪವನ್ನು ಸೂಚಿಸಿ, “ಕಿಕಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ವಿಶ್ವ ಸುಂದರಿಯಾಗಿ ಅವರ ಹೆಸರು ಚಿರ ಸ್ಥಾಯಿಯಾಗಿರಲಿದೆ. ಅವರ ಶಾಶ್ವತವಾಗಿ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ. ಅದರ ಹೆಸರನ್ನು ಮುಂದಿನ ತಲೆಮಾರಿಗೂ ದಾಟಿಸುವ ಪ್ರಯತ್ನ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sharda Sinha: ಜನಪ್ರಿಯ ಗಾಯಕಿ ಶಾರದಾ ಸಿನ್ಹಾ ನಿಧನ; ಕಳಚಿತು ಜಾನಪದ ಸಂಗೀತದ ಪ್ರಮುಖ ಕೊಂಡಿ