Wednesday, 11th December 2024

Kubra Aykut: ತನ್ನನ್ನು ತಾನೇ ಮದ್ವೆಯಾಗಿದ್ದ ಸೋಶಿಯಲ್‌ ಮೀಡಿಯಾ ಸ್ಟಾರ್‌ ಸೂಸೈಡ್‌; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

social media

ನವದೆಹಲಿ: ಕೆಲವು ವರ್ಷಗಳ ಹಿಂದೆ ವರನಿಲ್ಲದೇ ಸ್ವತಃ ತನ್ನನ್ನು ತಾನೇ ವರಿಸಿಕೊಂಡು ಸುದ್ದಿಯಾಗಿದ್ದ ಟರ್ಕೀಶ್‌ ಮೂಲದ ಸೋಸಿಯಲ್‌ ಮೀಡಿಯಾ ಇನ್ಫ್ಲೂವೆನ್ಸರ್‌(Turkish TikTok influencer) ಕುಬ್ರಾ ಆಯ್ಕುಟ್‌(Kubra Aykut) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಸ್ತಾಂಬುಲ್‌ನಲ್ಲಿ ಈ ಘಟನೆ ನಡೆದಿದ್ದು, ಸುಲ್ತಾನ್‌ಬೆಯ್ಲಿ ಜಿಲ್ಲೆಯಲ್ಲಿರುವ ತನ್ನ ಐಷಾರಾಮಿ ಅಪಾರ್ಟ್‌ಮೆಂಟ್‌ನ ತನ್ನ ಐದನೇ ಮಹಡಿಯಿಂದ ಜಿಗಿದು ಆಯ್ಕುಟ್‌ ಸೂಸೈಡ್‌ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಘಟನೆಯು ಸೆಪ್ಟೆಂಬರ್ 23 ರಂದು ನಡೆದಿದ್ದು, ಅಧಿಕಾರಿಗಳು ಘಟನಾ ಸ್ಥಳದಲ್ಲಿ ಡೆತ್‌ ನೋಟ್ ಅನ್ನು ಪತ್ತೆಹಚ್ಚಿದ್ದಾರೆ. ಆಕೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಆಕೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿದ್ದಳು. ಆ ಬಗ್ಗೆ ಆಕೆಯ ಫಾಲೋವರ್ಸ್‌ ಕಳವಳ ವ್ಯಕ್ತಪಡಿಸಿದ್ದರು.

ಇನ್ನು ದಿನೇ ದಿನೇ ದೇಹದ ತೂಕ ಕುಸಿಯುತ್ತಿರುವ ಬಗ್ಗೆ ಕುಬ್ರಾ ಆಯ್ಕುಟ್‌ ಚಿಂತಾಗ್ರತಳಾಗಿದ್ದಳು. ಇದರಿದಂದಾಗಿ ತೀವ್ರ ಖಿನ್ನತೆಗೊಳಗಾಗಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬುದು ಡೆತ್‌ ನೋಟ್‌ನಲ್ಲಿ ಬಯಲಾಗಿದೆ. ನಾನು ಜನಪ್ರಿಯತೆ ಪಡೆದಿದ್ದೇನೆ. ಆದರೆ ನನ್ನಿಂದ ದೇಹದ ತೂಕವನ್ನು ಮಾತ್ರ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ. ನಾನು ಪ್ರತಿನಿತ್ಯ ಒಂದು ಕಿಲೋಗ್ರಾಂ ತೂಕ ಕಳೆದುಕೊಳ್ಳುತ್ತಿದ್ದೇನೆ. ನನಗೆ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ನಾನು ತುರ್ತಾಗಿ ತೂಕವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ತಮ್ಮ ಕೊನೆಯ ಪೋಸ್ಟ್‌ನಲ್ಲಿ ಹೇಳಿದರು.

ಇನ್ನು ಸಾವಿಗೂ ಮುನ್ನ ಕುಬ್ರಾ ತನ್ನಮನೆಯನ್ನು ಸ್ವಚ್ಛಗೊಳಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಳು. ಅದು ಆಕೆಯ ಕೊನೆಯ ವಿಡಿಯೋ ಆಗಿತ್ತು. ಕುಬ್ರಾ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಒಂದು ಮಿಲಿಯನ್ ಫಾಲೋವರ್ಸ್‌ ಮತ್ತು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2,07,000 ಫಾಲೋವರ್ಸ್‌ ಹೊಂದಿದ್ದಾಳೆ. ಕುಬ್ರಾ 2023 ರಲ್ಲಿ ಟಿಕ್‌ಟಾಕ್‌ನಲ್ಲಿ ತನ್ನ “ವೆಡ್ಡಿಂಗ್ ವಿತ್ ಎ ಗ್ರೂಮ್” ಸೀರೀಸ್‌ನೊಂದಿಗೆ ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದರು. ಸುಂದರವಾದ ಬಿಳಿ ಗೌನ್ ಮತ್ತು ಕಿರೀಟವನ್ನು ಧರಿಸಿ, “ನನಗೆ ಯೋಗ್ಯ ವರನನ್ನು ನಾನು ಹುಡುಕಲು ಸಾಧ್ಯವಿಲ್ಲ ಎಂದಿದ್ದ ಆಕೆ ತನ್ನನ್ನು ತಾನೇ ವರಿಸಿಕೊಂಡಿದ್ದಳು. ಈ ವಿಡಿಯೋ ದೇಶ ವಿದೇಶಗಳಲ್ಲಿ ಬಹಳ ಸದ್ದು ಮಾಡಿತ್ತು.

ಇನ್ನು ಟರ್ಕಿಯ ಅಧಿಕಾರಿಗಳು ಅಯ್ಕುತ್ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಆಕೆಯ ದೇಹವನ್ನು ಪ್ರಸ್ತುತ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆಕೆಯ ಅಂತ್ಯಕ್ರಿಯೆಯು ಆಕೆಯ ಪೋಷಕರು ವಾಸಿಸುವ ಆಕೆಯ ತವರೂರಿನಲ್ಲಿ ನಡೆಯಲಿದೆ. ಆಕೆಯ ಅಂತ್ಯಕ್ರಿಯೆಯಲ್ಲಿ ಆಕೆಯ ಫಾಲೋವರ್ಸ್‌ ಭಾಗವಹಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Viral Video: ಸರ್ಕಾರಿ ಶಾಲೆಯಲ್ಲಿ ನಡೆಯಿತು ಕುಡಿತ, ಕುಣಿತ; ವಿಡಿಯೊ ವೈರಲ್‌